ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ, ಪತಿಯೇ ಪತ್ನಿಯನ್ನು ಕೊಂದು ಶವವನ್ನು ತೋಟದ ಕೊಳವೆ ಬಾವಿಯಲ್ಲಿ ಹೂತುಹಾಕಿದ್ದಾನೆ. ನಂತರ ಪತ್ನಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿ ನಾಟಕವಾಡಿದ್ದು, ಒಂದೂವರೆ ತಿಂಗಳ ತನಿಖೆಯ ನಂತರ ಪೊಲೀಸರು ಆರೋಪಿ ಪತಿ ಹಾಗೂ ಆತನ ಪೋಷಕರನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರು (ಅ.14): ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ಪತಿಯೇ ತನ್ನ ಪತ್ನಿಯನ್ನು ಕೊಂದು, ಮೃತದೇಹವನ್ನು ತೋಟದ ಕೊಳವೆ ಬಾವಿಯಲ್ಲಿ ಹೂತು ಹಾಕಿ, ನಂತರ ಪತ್ನಿ ನಾಪತ್ತೆಯಾಗಿದ್ದಾಳೆಂದು ನಾಟಕೀಯವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಘಟನೆ ವರದಿಯಾಗಿದೆ. ಸುಮಾರು ಒಂದೂವರೆ ತಿಂಗಳ ಕಾಲ ಪೊಲೀಸರು ನಡೆಸಿದ ತೀವ್ರ ತನಿಖೆಯಲ್ಲಿ ಗಂಡನೇ ಹಂತಕನೆಂಬ ಭಯಾನಕ ಸತ್ಯ ಬಯಲಾಗಿದೆ.

ಏನಿದು ಘಟನೆ?

ಕಡೂರು ತಾಲೂಕಿನ ಆಲಘಟ್ಟ ಗ್ರಾಮದ ವಿಜಯ್ ಎಂಬಾತ ತನ್ನ ಪತ್ನಿ ಭಾರತಿ (28) ಅವರನ್ನು ಸುಮಾರು ಒಂದೂವರೆ ತಿಂಗಳ ಹಿಂದೆ ಕೊಂದಿದ್ದಾನೆ. ಘಟನೆ ನಡೆದ ದಿನ ಭಾರತಿ ತನ್ನ ತವರು ಮನೆಗೆ ಹೋಗುವುದಾಗಿ ಹೇಳಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ಪತಿ ವಿಜಯ್ ಮತ್ತು ಪತ್ನಿ ಭಾರತಿ ನಡುವೆ ಜಗಳವಾಗಿದ್ದು, ಕೋಪಗೊಂಡ ವಿಜಯ್ ತನ್ನ ಪತ್ನಿಯ ಕೆನ್ನೆಗೆ ಜೋರಾಗಿ ಬಾರಿಸಿದ್ದಾನೆ. ಪತಿಯ ಹೊಡೆತ ತೀವ್ರವಾಗಿದ್ದರಿಂದ ಭಾರತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.

ಪತ್ನಿ ಸಾವನ್ನಪ್ಪಿದ್ದರಿಂದ ಆತಂಕಗೊಂಡ ವಿಜಯ್, ತಾನು ಬಂಧನಕ್ಕೊಳಗಾಗುತ್ತೇನೆ ಎಂಬ ಭಯದಿಂದ ಮೃತದೇಹವನ್ನು ವಿಲೇವಾರಿ ಮಾಡಲು ನಿರ್ಧರಿಸಿದ್ದಾನೆ. ಯಾವುದೇ ಸಾಕ್ಷಿ ಸಿಗದಂತೆ ಮಾಡಲು ತನ್ನದೇ ತೋಟದಲ್ಲಿದ್ದ ನಿರುಪಯೋಗಿ ಕೊಳವೆ ಬಾವಿಯೊಂದರಲ್ಲಿ ಪತ್ನಿ ಭಾರತಿಯ ಮೃತದೇಹವನ್ನು ಹೂತು ಹಾಕಿದ್ದಾನೆ. ಪತ್ನಿಯ ಕಗ್ಗೊಲೆಯ ಬಳಿಕ ವಿಜಯ್ ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದಾನೆ. ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ನೀಡಿದ್ದಾನೆ. ಪೊಲೀಸರು ದೂರು ದಾಖಲಿಸಿಕೊಂಡು ಭಾರತಿ ನಾಪತ್ತೆ ಪ್ರಕರಣದ ತನಿಖೆ ಆರಂಭಿಸಿದ್ದರು.

ಪೊಲೀಸ್ ತನಿಖೆಯಲ್ಲಿ ಬಯಲಾದ ಸತ್ಯ:

ಕಡೂರು ಪೊಲೀಸರು ನಾಪತ್ತೆ ಪ್ರಕರಣದ ತನಿಖೆಯನ್ನು ಗಂಭೀರವಾಗಿ ತೆಗೆದುಕೊಂಡು, ಅನುಮಾನದ ಮೇಲೆ ಪತಿ ವಿಜಯ್‌ನ ಚಲನವಲನ ಮತ್ತು ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಸುಮಾರು ಒಂದೂವರೆ ತಿಂಗಳ ಕಾಲ ನಡೆಸಿದ ವೈಜ್ಞಾನಿಕ ಮತ್ತು ತಾಂತ್ರಿಕ ತನಿಖೆಯ ನಂತರ, ಪೊಲೀಸರಿಗೆ ವಿಜಯ್‌ನ ನಡವಳಿಕೆ ಮೇಲೆ ಬಲವಾದ ಅನುಮಾನ ಬಂದಿದೆ. ತೀವ್ರ ವಿಚಾರಣೆಗೊಳಪಡಿಸಿದಾಗ, ವಿಜಯ್ ಕೊನೆಗೂ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ತಾನೇ ಭಾರತಿಯನ್ನು ಕೊಂದು, ಕೊಳವೆ ಬಾವಿಯಲ್ಲಿ ಹೂತಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ವಿಜಯ್ ನೀಡಿದ ಮಾಹಿತಿಯ ಮೇರೆಗೆ, ಆಲಘಟ್ಟ ಗ್ರಾಮದಲ್ಲಿರುವ ವಿಜಯ್ ತೋಟದಲ್ಲಿ ಕೊಳವೆ ಬಾವಿಯಿಂದ ಭಾರತಿಯ ಮೃತದೇಹವನ್ನು ಹೊರ ತೆಗೆದಿದ್ದಾರೆ.

ಪತಿ ಸೇರಿ ಮೂವರ ಬಂಧನ:

ಪೊಲೀಸರ ತನಿಖೆಯಲ್ಲಿ ಪತಿ ವಿಜಯ್ ಮುಖ್ಯ ಹಂತಕನೆಂಬುದು ಸಾಬೀತಾಗಿದ್ದು, ಈ ಕೃತ್ಯದಲ್ಲಿ ಪತಿಗೆ ಸಹಾಯ ಮಾಡಿದ ಆರೋಪದ ಮೇಲೆ ಅತ್ತೆ ತಾಯಮ್ಮ ಮತ್ತು ಮಾವ ಗೋವಿಂದಪ್ಪ ಅವರನ್ನು ಸಹ ಕಡೂರು ಪೊಲೀಸರು ಬಂಧಿಸಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಸಾಕ್ಷ್ಯನಾಶ ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಈ ಘಟನೆ ಸಾರ್ವಜನಿಕರಲ್ಲಿ ಆಘಾತವನ್ನು ಮೂಡಿಸಿದೆ.