ರೈತಪರ ಸರ್ಕಾರ, ಕೃಷಿ ಕಾಯ್ದೆಯೂ ರೈತ ಸ್ನೇಹಿ; ಅನ್ನದಾತರಿಗೆ ಬೇಡ ಭಯ

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ-2020 ಜಾರಿಗೆ ತಂದು ರೈತರ ಪರವಾಗಿ ನಿಂತಿದೆ. 

new Farm Bills 2020 Explained hls

ಬೆಂಗಳೂರು (ಡಿ. 14): ನಾನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ನಮ್ಮದು ರೈತಪರ ಸರ್ಕಾರ. ನಾವು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದರಲ್ಲಿ ರೈತರ ಹಿತ ಅಡಗಿರುತ್ತದೆ. ಇದರಲ್ಲಿ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಮತ್ತು ಕೇಂದ್ರ ಸರ್ಕಾರ ಎಪಿಎಂಸಿಗೆ ಸಂಬಂಧಿಸಿದಂತೆ ನೂತನವಾಗಿ ಜಾರಿಗೆ ತಂದಿರುವ ಕಾಯ್ದೆಗಳು ಸಹ ಹೊರತಾಗಿಲ್ಲ. ಈ ಕಾಯ್ದೆಗಳು ರೈತರ ಹಿತವನ್ನು ಕಾಪಾಡುವುದಲ್ಲದೆ, ಅವರ ಸ್ವಾಭಿಮಾನವನ್ನು ಎತ್ತಿ ಹಿಡಿಯುತ್ತವೆ. ನನ್ನ ಬೆಳೆ, ನನ್ನ ಹಕ್ಕು ಎಂದು ನಮ್ಮ ಅನ್ನದಾತ ಹೆಮ್ಮೆಯಿಂದ ಹೇಳಿಕೊಳ್ಳಲು ಸಹಕಾರಿಯಾಗಿದೆ. ಇದನ್ನು ಮುಂದುವರೆಸಿದಲ್ಲಿ ನನ್ನ ಬೆಳೆ, ನನ್ನ ಬೆಲೆ ಎಂಬ ಅಧಿಕಾರ ಸಹ ರೈತನಿಗೆ ಬರಲಿದೆ.

ವ್ಯವಸ್ಥೆಯಲ್ಲಿನ ಲೋಪ

ಹೌದು. ಈ ಹಿಂದಿನಿಂದಲೂ ರೈತ ಅನ್ಯಾಯಕ್ಕೆ ಒಳಗಾಗುತ್ತಲೇ ಬಂದಿದ್ದಾನೆ. ಮಳೆ ಬರಲಿ, ಬಾರದಿರಲಿ, ಉತ್ಪಾದನೆ ಹೆಚ್ಚಿರಲಿ, ಕಡಿಮೆ ಇರಲಿ ಹೊಲದಲ್ಲಿ ಕಷ್ಟಪಟ್ಟು ಉತ್ತಿಬಿತ್ತಿದ ಬೆಳೆಗೆ ನೈಜ ಬೆಲೆ ಸಿಗುತ್ತಲೇ ಇಲ್ಲ ಎಂಬ ಕೊರಗು ನಮ್ಮ ಅನ್ನದಾತರನ್ನು ಕಾಡುತ್ತಲೇ ಇದೆ. ಇದಕ್ಕೆ ಬಹುಮುಖ್ಯವಾದ ಕಾರಣ, ನಮ್ಮ ವ್ಯವಸ್ಥೆಯಲ್ಲಿರುವ ಲೋಪ ಎಂದೇ ಹೇಳಬಹುದು. ಕಷ್ಟಪಟ್ಟು ಬೆಳೆ ಬೆಳೆಯುವ ರೈತ, ಬೆಳೆಗಳನ್ನು ಕೊಯ್ದು, ಸಂಸ್ಕರಿಸಿ, ಚೀಲಕ್ಕೆ ತುಂಬಿ, ವಾಹನಗಳಲ್ಲಿ ಅವುಗಳನ್ನು ಹೇರಿಕೊಂಡು ಎಪಿಎಂಸಿಗಳಿಗೆ ಬಂದರೆ ಆತನಿಗೆ ದಕ್ಕುವುದು ಏನು? ಈ ಪ್ರಶ್ನೆಯನ್ನು ರೈತ ಒಬ್ಬನೇ ಏಕೆ ಸಮಾಜದ ಪ್ರತಿಯೊಬ್ಬರೂ ಹಾಕಿಕೊಳ್ಳಬೇಕಿದೆ. ಇದು ನಮ್ಮ ಕರ್ತವ್ಯ ಕೂಡ. ರೈತನ ಬಳಿ ಭಾರೀ ಕಡಿಮೆ ದರಕ್ಕೆ ಖರೀದಿ ಮಾಡುವ ದಲ್ಲಾಳಿ/ವ್ಯಾಪಾರಿ ಆತನ ಕಣ್ಣ ಮುಂದೆಯೇ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಾನೆ.

ರೈತರ ಶ್ರೀಮಂತ ಮಾಡಲು ಕೃಷಿ ಕಾಯ್ದೆ ತಂದಿದ್ದು, ಆದಾಯ ಹೆಚ್ಚುತ್ತದೆ: ಮೋದಿ

ಹಾಗಾದರೆ ಇದು ವ್ಯವಸ್ಥೆಯಲ್ಲಿನ ಲೋಪವಲ್ಲದೆ ಮತ್ತಿನ್ನೇನು ಎಂದು ನಾನು ಈ ಸಂದರ್ಭದಲ್ಲಿ ಬಹಿರಂಗವಾಗಿ ಕೇಳಲು ಇಚ್ಚಿಸುತ್ತೇನೆ. ಹೌದು. ಗ್ರಾಹಕ ಉಪಯೋಗಿ ಉತ್ಪನ್ನಗಳನ್ನು ಮಾರುವ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಎಂಆರ್‌ಪಿಯನ್ನು ನಿಗದಿ ಮಾಡಿಕೊಳ್ಳಲು ನಾವು ಅವಕಾಶವನ್ನು ಕೊಡುತ್ತೇವೆ. ಅದೇ ನಾಡಿನ ಜನತೆಯ ಹೊಟ್ಟೆಗೆ ಅನ್ನ ಹಾಕುವ ಅನ್ನದಾತನಿಗೆ ಆ ಹಕ್ಕನ್ನು ಕೊಡವುದಿಲ್ಲವೇ? ಇದೆಂಥಾ ನ್ಯಾಯ ಎಂದು ಇದರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳ ನಾಯಕರನ್ನು ಕೇಳಲು ಇಚ್ಛೆಪಡುತ್ತೇನೆ.

ರೈತನೂ ಬೆಲೆ ನಿರ್ಧರಿಸಲಿ

ಒಂದು ಬಹುರಾಷ್ಟ್ರೀಯ ಕಂಪನಿಯು ತನ್ನ ಉತ್ಪನ್ನಕ್ಕೆ ದರ ನಿಗದಿಪಡಿಸಿದಂತೆ ಬೆಳೆದ ಬೆಳೆಗೆ ತಾನೇ ಬೆಲೆ ನಿರ್ಧರಿಸುವ ಹಕ್ಕು ರೈತನದ್ದಾಗಬೇಕು. ರೈತ ಸ್ವತಂತ್ರ ಜೀವಿಯಾಗಬೇಕು. ನನ್ನ ಬೆಳೆ, ನನ್ನ ಹಕ್ಕು ಎಂಬ ಘೋಷವಾಕ್ಯ ಪ್ರತಿಯೊಬ್ಬ ರೈತನದ್ದಾಗಿರಬೇಕು. ಕೇಂದ್ರ ಸರ್ಕಾರದ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಕೃಷಿ ಉತ್ನನ್ನ ಮತ್ತು ಪಶುಸಂಪತ್ತು ಮಾರುಕಟ್ಟೆ(ಪ್ರಚಾರ ಮತ್ತು ಸೌಲಭ್ಯ)ಕಾಯ್ದೆ-2017 ಮಾದರಿ ಕಾಯ್ದೆಯ ಶಿಫಾರಸುಗಳನ್ವಯ ರಾಜ್ಯದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇದರನ್ವಯ ಕಲಂ 8(2) ಮತ್ತು ಕಲಂ 117ಕ್ಕೆ ತಿದ್ದುಪಡಿ ಮಾಡಲಾಗಿದೆ. ಕಲಂ 8(3)ನ್ನು ಕೈಬಿಡಲಾಗಿದೆ.

ಕಲಂ 8(2) ರಡಿ ಇದುವರೆಗೆ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣದಲ್ಲೇ ಮಾರಾಟ ಮಾಡಬೇಕೆಂಬ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಎಪಿಎಂಸಿ ಸಮಿತಿಯ ನಿಯಂತ್ರಣವನ್ನು ಪ್ರಾಂಗಣಕ್ಕೆ ಸೀಮಿತಗೊಳಿಸಿದೆ. ಕಲಂ 8(2)ರ ಉಲ್ಲಂಘನೆಗೆ ದಂಡ ಮತ್ತು ಸಜೆ ಶಿಕ್ಷೆಯನ್ನು ವಿಧಿಸುತ್ತಿದ್ದ ಕಲಂ 117 ಕೈಬಿಡಲಾಗಿದೆ. ಈ ತಿದ್ದುಪಡಿಯಿಂದ ರೈತ ತಾನು ಬೆಳೆದ ಬೆಳೆಯನ್ನು ತನ್ನ ಇಚ್ಛೆಯಂತೆ ಹೊಲ/ಫಾರಂ ಗೇಟ್‌ ಅಥವಾ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯ ಹೊಂದಿದ್ದಾನೆ.

ರೈತರಿಗೆ ಅಂಬಾನಿ- ಜಿಯೋ ಮೇಲೆ ಸಿಟ್ಯಾಕೆ? ಕೃಷಿಕಾಯ್ದೆಗಿಂತ ಬಾಯ್ಕಾಟ್ ಅಭಿಯಾನ ಬಲು ಜೋರು!

ನಮ್ಮ ಸರ್ಕಾರ ತಿದ್ದುಪಡಿ ತಂದ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ-2020 ಜಾರಿಗೆ ತಂದು ರೈತರ ಪರವಾಗಿ ನಿಂತಿದೆ. ಆದರೆ, ಕೆಲವು ಹಿತಾಸಕ್ತಿಗಳು ಇದನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಆದರೆ ವಾಸ್ತವ ಸತ್ಯ ಎಂದಿದ್ದರೂ ಒಂದೇ. ಈ ಬಗ್ಗೆ ಎಲ್ಲರಿಗೂ ಶೀಘ್ರದಲ್ಲಿಯೇ ಮನದಟ್ಟಾಗಲಿದೆ.

ಕಾಯ್ದೆಗೆ ವಿರೋಧ ಏಕೆ?

ನಾನು ಕೋವಿಡ್‌-19 ಲಾಕ್ಡೌನ್‌ ಮತ್ತು ನಂತರದ ಸಂದರ್ಭಗಳಲ್ಲಿ 27 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಆಗ ಎಲ್ಲ ಜಿಲ್ಲೆಗಳ ಎಪಿಎಂಸಿಗಳಿಗೂ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದೇನೆ. ಎಲ್ಲ ರೈತರಿಂದಲೂ ಒಂದೇ ದೂರೆಂದರೆ ನಮ್ಮ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂಬುದಾಗಿತ್ತು. ಆಗ ಈ ನೂತನ ಎಪಿಎಂಸಿ ಕಾಯ್ದೆ ಬಗ್ಗೆ ಅವರಲ್ಲಿ ನಾನು ಖುದ್ದು ಕೇಳಿದಾಗ ಎಲ್ಲರೂ ಸಂತಸವನ್ನು ವ್ಯಕ್ತಪಡಿಸಿದ್ದಾರೇ ವಿನಃ ಅದರ ಬಗ್ಗೆ ಎದುರು ಮಾತನಾಡಿಲ್ಲ. ಇನ್ನು ವಿರೋಧ ಮಾಡುವ ಬಹುತೇಕರಿಗೆ ಆ ಕಾಯ್ದೆಯಲ್ಲೇನಿದೆ ಎಂಬುದೇ ಗೊತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ಒಮ್ಮೆ ಸರಿಯಾದ ದೃಷ್ಟಿಯಿಂದ ಎಲ್ಲರೂ ನೋಡಬೇಕೆಂದು ನಾನು ಈ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ. ವಿರೋಧಿಸುವವರು ಸರಿಯಾದ ಅಧಾರವನ್ನಿಟ್ಟುಕೊಳ್ಳಬೇಕು. ಇದುವರೆಗೂ ವಿರೋಧ ಮಾಡುತ್ತಿರುವವರು ಕಾಯ್ದೆ ಜಾರಿ ಬೇಡ ಎನ್ನುತ್ತಿದ್ದಾರೆಯೇ ವಿನಃ ಆ ಕಾಯ್ದೆಯನ್ನು ಏಕೆ ಜಾರಿಗೆ ತರಬಾರದು, ತಂದರೆ ಏನಾಗುತ್ತದೆ ಎಂಬ ಬಗ್ಗೆ ಯಾವೊಬ್ಬರೂ ಮಾತನಾಡುತ್ತಿಲ್ಲ. ಅವರ ವಿರೋಧದ ಬಗ್ಗೆ ಅರ್ಥ ಮಾಡಿಕೊಳ್ಳಲು ಇಷ್ಟೇ ಸಾಕಲ್ಲವೇ?

ಹಳೆಯ ಕಾಯ್ದೆಯಲ್ಲೇನಿತ್ತು?

ಇಲ್ಲಿ ನಾನು ಕೆಲವೊಂದು ಅಂಶಗಳನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಎಪಿಎಂಸಿ ಕಾಯ್ದೆ ಹೇಗೆ ರೈತರಿಗೆ ಉಪಕಾರಿ. ಈ ಮೊದಲಿನ ಕಾಯ್ದೆಯಲ್ಲಿ ಏನು ಸಮಸ್ಯೆ ಇತ್ತು ಎಂಬ ಬಗ್ಗೆ ವಿವರವಾಗಿ ಹೇಳುತ್ತೇನೆ.

ದಂಡ ಹಾಗೂ ಶಿಕ್ಷೆ ಇಲ್ಲ

ಕೇಂದ್ರ ಸರ್ಕಾರದ ಕಾಯ್ದೆ ಪೂರ್ವದಲ್ಲಿ ಇದ್ದ ರಾಜ್ಯ ಸರ್ಕಾರದ ಎಪಿಎಂಸಿ ಕಾಯ್ದೆಯಡಿ ಉತ್ಪನ್ನಗಳ ವ್ಯಾಪಾರ ನಿಯಂತ್ರಣ ರಾಜ್ಯ ವ್ಯಾಪ್ತಿ ಇತ್ತು. ಅದರನ್ವಯ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣದಲ್ಲಿಯೇ ಮಾರುವುದು ಅನಿವಾರ್ಯವಿತ್ತು. ಪ್ರಾಂಗಣದ ಹೊರಗೆ ಯಾವುದೇ ವ್ಯಾಪಾರಿ ಖರೀದಿಸಿದಲ್ಲಿ ದಂಡ ಮತ್ತು ಕಾರಾಗೃಹ ವಾಸದ ಶಿಕ್ಷೆಗೆ ಗುರಿಯಾಗಬೇಕಿತ್ತು. ಪ್ರಸ್ತುತ ತಿದ್ದುಪಡಿಯಲ್ಲಿ ದಂಡ ಮತ್ತು ಶಿಕ್ಷೆ ವಿಧಿಸುವುದನ್ನು ಕೈಬಿಟ್ಟಿರುವುದರಿಂದ ವ್ಯಾಪಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ರಾಜ್ಯ/ಅಂತಾರಾಜ್ಯದಲ್ಲೂ ಮಾರಾಟಕ್ಕೆ ಅವಕಾಶ

ತಿದ್ದುಪಡಿ ನಂತರದಲ್ಲಿ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಪ್ರಾಂಗಣದಲ್ಲಿ ಅಥವಾ ರಾಜ್ಯದ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಮಾರಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಅಂತರ್‌ ಜಿಲ್ಲೆ ಮತ್ತು ರಾಜ್ಯಗಳಲ್ಲಿ ರೈತರು ನಿರ್ಧರಿಸಿದ ಬೆಲೆಗೆ ಮಾರಾಟ ಮಾಡಲು ಅವಕಾಶವನ್ನು ಮಾಡಿಕೊಡಲಾಗಿದೆ.

700 ರೈತ ಸಭೆ, 100 ಸುದ್ದಿಗೋಷ್ಟಿ: ಕೃಷಿ ಕಾಯ್ದೆ ಪ್ರಚಾರಕ್ಕೆ ಬಿಜೆಪಿ ಬೃಹತ್ ಅಭಿಯಾನ!

ಇದ್ದಲ್ಲಿಗೇ ಬಂದು ಖರೀದಿ

ರೈತ ಬಾಂಧವರು ಯಾವುದೇ ವ್ಯಾಪಾರಿಗಳಿಗೆ, ಯಾವುದೇ ಮಾರುಕಟ್ಟೆಗಳಲ್ಲಿ ಬೆಳೆಯನ್ನು ಮಾರಾಟ ಮಾಡಬಹುದು. ಇದಲ್ಲದೆ, ಬೇರೆ ರಾಜ್ಯಗಳಿಗೂ ತೆರಳಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶವನ್ನು ಈಗ ಕಲ್ಪಿಸಲಾಗಿದೆ. ಇಲ್ಲವೇ ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಇಲ್ಲವೇ ಹೊಲಗಳಿಗೇ ಬಂದು ಬೆಳೆಗಳನ್ನು ಖರೀದಿ ಮಾಡಬಹುದು.

ಹೆಚ್ಚಲಿದೆ ಸ್ಪರ್ಧೆ, ಬೆಲೆ ಏರಲಿದೆ

ಯಾರಿಗೆ ಬೇಕಾದರೂ ಎಲ್ಲಿ ಬೇಕಾದರೂ ಬೆಳೆಯನ್ನು ಮಾರಾಟ ಮಾಡುವ ಹಕ್ಕನ್ನು ರೈತರಿಗೆ ನೀಡಿರುವ ಪರಿಣಾಮ ರೈತನಿಗೆ ಹೆಚ್ಚಿನ ಅವಕಾಶಗಳು ಸಿಗುವುದರೊಂದಿಗೆ ವ್ಯಾಪಾರಿಗಳ ಮಧ್ಯೆ ಸ್ಪರ್ಧೆ ಏರ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಒಬ್ಬರಿಗೇ ಮಾರಾಟ ಮಾಡಬೇಕೆಂಬ ನಿಬಂಧನೆಗಳಿಲ್ಲದೆ, ಹೆಚ್ಚು ಬೆಲೆ ಕೊಟ್ಟು ಕೊಂಡುಕೊಳ್ಳುವವರಿಗೆ ಮಾರಾಟ ಮಾಡಿ ರೈತರು ಅಧಿಕ ಲಾಭವನ್ನು ಗಳಿಸಬಹುದು.

ಮುಕ್ತ ಮಾರುಕಟ್ಟೆ ಅವಕಾಶ

ರೈತ-ಮಾರಾಟಗಾರರಿಗೆ ಈಗಾಗಲೇ ಇರುವ ವಿವಿಧ ಮಾರುಕಟ್ಟೆಚಾನಲ್‌ಗಳಾದ ಮಾರುಕಟ್ಟೆಪ್ರಾಂಗಣ, ನೇರ ಖರೀದಿ ಕೇಂದ್ರ, ಖಾಸಗಿ ಮಾರುಕಟ್ಟೆಪ್ರಾಂಗಣ, ರೈತ-ಗ್ರಾಹಕ ಮಾರುಕಟ್ಟೆಪ್ರಾಂಗಣ ವೇರ್‌ಹೌಸ್‌ ಇತ್ಯಾದಿಗಳೊಂದಿಗೆ ಈಗ ಮತ್ತೊಂದು ಉತ್ತಮ ಬದಲಿ ಸೌಕರ್ಯ ಲಭ್ಯವಿರುವಂತಾಗಿದ್ದು, ಮುಕ್ತ ಮಾರುಕಟ್ಟೆದೊರೆತಂತಾಗಿದೆ.

ಕೃಷಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವುದು ಯಾರ ಕೆಲಸ? ರೈತರಿಗೆ ಮಾಹಿತಿ ಕೊರತೆಯಾ?

ತಪ್ಪಲಿದೆ ಮಧ್ಯವರ್ತಿಗಳ ಹಾವಳಿ

ರೈತರು ಈ ಹಿಂದೆ ತಮ್ಮ ಉತ್ಪನ್ನಗಳನ್ನು ತಮ್ಮದಲ್ಲದ ಸ್ಥಳಗಳಿಗೆ ಒಯ್ದು ಮಾರಾಟ ಮಾಡಲು ಅಧಿಕೃತ ದಾಖಲೆಗಳಾದ ಪಹಣಿ ಅಥವಾ ಸ್ಥಳೀಯ ರೆವಿನ್ಯೂ ಅಧಿಕಾರಿಗಳು ನೀಡುವ ದೃಢೀಕರಣದೊಂದಿಗೆ ಆವಕಾಶ ಕಲ್ಪಿಸಲಾಗಿತ್ತು. ಪ್ರಸ್ತುತ ತಿದ್ದುಪಡಿಯಿಂಧಾಗಿ ಯಾವುದೇ ದಾಖಲಾತಿಗಳಿಲ್ಲದೆ ತಮ್ಮ ಉತ್ಪನ್ನಗಳನ್ನು ಸಾಗಾಟ ಮಾಡಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ರಾಜ್ಯ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸಲು ಮತ್ತು ರೈತರ ಸಾಗಾಣಿಕಾ ವೆಚ್ಚ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ಕ್ರಮ ವಹಿಸಿದೆ. ಇದರಿಂದ ರೈತರು ಆರ್ಥಿಕ ಶಕ್ತಿವಂತರಾಗುತ್ತಾರೆ.

ಎಪಿಎಂಸಿ ಮುಚ್ಚಲ್ಲ

ನೂತನ ಎಪಿಎಂಸಿ ಕಾಯ್ದೆಯಿಂದ ಯಾರೂ ಆತಂಕ ಪಡಬೇಕಿಲ್ಲ. ಇದರಿಂದ ಈ ಹಿಂದಿನ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗಿಲ್ಲ. ಅಲ್ಲದೆ, ಎಪಿಎಂಸಿಯನ್ನು ಮುಚ್ಚುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದೆ ಇಲ್ಲ.

ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ

ಎಪಿಎಂಸಿ ಕಾಯ್ದೆ ಜಾರಿಯಿಂದ ಈ ಹಿಂದಿನ ಸೌಲಭ್ಯಗಳು ಇರುವುದಿಲ್ಲವೆಂಬ ಆತಂಕ ಯಾರಿಗೂ ಬೇಡ. ಯಾವುದೇ ಕೃಷಿ ಉತ್ಪನ್ನಗಳ ಬೆಲೆ ಕುಸಿತ ಉಂಟಾದಾಗ ಎಂದಿನಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ನಡೆಯುತ್ತದೆ. ಈ ಬಗ್ಗೆ ಸರ್ಕಾರ ಅಭಯ ನೀಡುತ್ತದೆ.

ರೈತರಿಗೆ ತೊಂದರೆಯಾಗಲ್ಲ

ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ಮಾಡುವ ಜೊತೆಯಲ್ಲಿಯೇ 2007ರಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಎಪಿಎಂಸಿ ಪ್ರಾಂಗಣದ ಹೊರಗೆ ರೈತರಿಂದ ನೇರ ಖರೀದಿಗೆ ಅವಕಾಶ ಕಲ್ಪಿಸಿ ನೇರ ಖರೀದಿ ಕೇಂದ್ರಗಳಿಗೆ ಲೈಸೆನ್ಸ್‌ ನೀಡಲಾಗಿದೆ. ಇದುವರೆವಿಗೂ 62 ಕಂಪನಿಗಳು ನೇರ ಖರೀದಿ ಲೈಸೆನ್ಸ್‌ ಪಡೆದು ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಹಲವು ವರ್ಷಗಳಿಂದ ದೊಡ್ಡ ದೊಡ್ಡ ಕಂಪನಿಗಳು ಅಧಿಸೂಚಿತ ಕೃಷಿ ಉತ್ಪನ್ನಗಳಲ್ಲಿ ವ್ಯಾಪಾರ ಮಾಡುತ್ತಿದೆ. ತಿದ್ದುಪಡಿ ಏನೂ ಹೊಸತಲ್ಲ. 2014ರಿಂದ ಆನ್‌ಲೈನ್‌ ಟ್ರೇಡಿಂಗ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಹಿಂದೆ ಆಗದ ತೊಂದರೆ ಈಗ ಹೇಗೆ ಆಗಲು ಸಾಧ್ಯೆ ಎಂಬುದು ನನ್ನ ಪ್ರಶ್ನೆಯಾಗಿದೆ.

ಇದು ರೈತ ಸ್ನೇಹಿ ಕಾಯ್ದೆ

ಇನ್ನು ನಾನು ಕೊನೆಯದಾಗಿ ಹೇಳಬಯಸುವುದೇನೆಂದರೆ, ಇಂತಹ ಒಂದು ಐತಿಹಾಸಿಕ ಕೃಷಿ ಕಾಯ್ದೆಯನ್ನು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಾರಿಗೊಳಿಸಿದ್ದಾರೆ. ಇದೊಂದು ರೈತಸ್ನೇಹಿ ಕಾಯ್ದೆಯಾಗಿದೆ.

- ಎಸ್‌ಟಿ ಸೋಮಶೇಖರ್‌, ಸಹಕಾರ ಸಚಿವರು

Latest Videos
Follow Us:
Download App:
  • android
  • ios