ಸಚಿವ ಜಮೀರ್ ಅಹ್ಮದ್ ಖಾನ್ 'ಕರಿಯ' ಹೇಳಿಕೆ, ಅಪ್ತರೆಲ್ಲಾ ದೂರ... ದೂರ..
ಸಚಿವ ಜಮೀರ್ ಅಹ್ಮದ್ ಖಾನ್ ಅವರ 'ಕರಿಯ' ಹೇಳಿಕೆ ಕಾಂಗ್ರೆಸ್‌ನಲ್ಲಿ ಕೋಲಾಹಲ ಸೃಷ್ಟಿಸಿದೆ. ಈ ಹೇಳಿಕೆಯಿಂದಾಗಿ ಪಕ್ಷದ ನಾಯಕರು ದೂರ ಸರಿದಿದ್ದಾರೆ ಮತ್ತು ಜಮೀರ್ ಮೇಲೆ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ. ಈ ಹೇಳಿಕೆ ಚನ್ನಪಟ್ಟಣ ಚುನಾವಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ 'ಕರಿಯ' ಎಂದ ಸಚಿವ ಜಮೀರ್ ಅಹಮದ್ ಖಾನ್ ಸುತ್ತಲೂ ಕಾರ್ಮೋಡ ಆವರಿಸಿದೆ. ಕರಿಯ ಹೇಳಿಕೆಯಿಂದ ದೂರ ದೂರ ಸರಿದ ಕೈ ನಾಯಕರು. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬಂತೆ ಕಾಂಗ್ರೆಸ್ ಸ್ಥಿತಿಯಾಗಿದೆ. ಚನ್ನಪಟ್ಟಣದಲ್ಲಿ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಜಮೀರ್ ಅವರೇ ಟ್ರಬಲ್ ಆಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಉಚ ಚುನಾವಣೆಯಲ್ಲಿ ಎಲ್ಲವೂ ಸರಾಗವಾಗಿ ನಡೆದುಕೊಂಡು ಹೋಗುತ್ತಿದೆ ಎನ್ನುವಾಗ ಟಗರು ಸಿಎಂ ಸಿದ್ದರಾಮಯ್ಯ ಗುಟುರು ಹಾಕಿದ್ದಾರೆ. ಜೊತೆಗೆ, ಸಚಿವ ಜಮೀರ್ ವ್ಯಕ್ತಿ ನಿಂದನೆ ಮಾಡಿದ್ದಾರೆ. ಹೀಗಾಗಿ, ಜಮೀರ್ ಮೇಲೆ ಶಿಸ್ತು ಸಮಿತಿಯ ತೂಗುಗತ್ತಿ ತೂಗುತ್ತಿದೆ. ಆದ್ದರಿಂದ, ಗೃಹ ಸಚಿವ ಪರಮೇಶ್ವರ್ ಅವರು ತನಿಖೆಯ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಜಮೀರ್ ಅವರಿಂದ ಲಾಭವಿಲ್ಲ ಬರೀ ನಷ್ಟ ಅಂತ ಕೆಪಿಸಿಸಿ ಉಪಾಧ್ಯಕ್ಷರು ಕೂಡ ಗುಡುಗಿದ್ದು, ಈ ಆರೋಪಕ್ಕೆ ಇತರೆ ನಾಯಕರು ಕೂಡ ಸಾಥ್ ನೀಡಿದ್ದಾರೆ.
ಜಮೀರ್ ಅವರಾಡಿದ ಒಂದು ಪದ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ ಅಂದ್ರೆ, ಜಮೀರ್ ಆಡೋ ಪ್ರತಿಯೊಂದು ಮಾತಿಗೂ ಸಾಕಷ್ಟು ಮಹತ್ವ ಇರುತ್ತೆ ಎಂದರ್ಥ. ಹಾಗಿದ್ರೆ ಜಮೀರ್ಗೆ ಇಷ್ಟೊಂದು ಮಹತ್ವ ಯಾಕೆ..? ಆ ಮಹತ್ವವನ್ನ ಮರೆತು ಜಮೀರ್ ಮಾಡಿಕೊಂಡ ಇನ್ನೊಂದಿಷ್ಟು ಎಡವಟ್ಟುಗಳು ಏನು ಅನ್ನೋದನ್ನ ತೋರಿಸ್ತೀವಿ. ಕುಮಾರಸ್ವಾಮಿ ಅವರನ್ನು ಕರಿಯ ಎಂದು ಕರೆದ ಜಮೀರ್ ಹೊಸ ಕಿಚ್ಚು ಹಚ್ಚಿದ್ದಾರೆ. ಆ ಕಿಚ್ಚೀಗ ಕೈ ಪಕ್ಷದೊಳಗೆ ಉರಿಯೋಕೆ ಶುರುವಾಗಿದೆ. ಅದ್ರ ಬಿಸಿ ಜಮೀರ್ ಅವರಿಗೇನೆ ಸುಡ್ತಿದೆ. ಸಚಿವರು ಆಡಿರೋ ಒಂದು ಮಾತು ಇಷೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ ಅಂದ್ರೆ, ಜಮೀರ್ ಬಾಯಿಂದ ಬರೋ ಮಾತಿಗೆ ಮಹತ್ವವಿದೆ ಅಂತಲೇ ಅರ್ಥ.. ಆದ್ರೆ ಆಗಾಗ ಆ ಮಹತ್ವವನ್ನ ಮರೆಯೋ ಜಮೀರ್ ವಿವಾದವನ್ನು ತಮ್ಮ ಮೈ ಮೇಲೆ ಎಳೆದುಕೊಳ್ತಾರೆ.
ಚನ್ನಪಟ್ಟಣದಲ್ಲಿ ಜಮೀರ್ ಕೊಟ್ಟ ಹೇಳಿಕೆ ವರ ಅಥವಾ ಶಾಪ ಎರಡೂ ಆಗೋ ಸಾಧ್ಯತೆಗಳಿವೆ. ಚನ್ನಪಟ್ಟಣ ಚುನಾವಣಾ ಸಂಗ್ರಾಮದಲ್ಲಿ ಎಚ್ಡಿಕೆ ವಿರುದ್ಧ ಜಮೀರ್ ಕೊಟ್ಟ ಹೇಳಿಕೆಯಿಂದ ಕೈ ಪಕ್ಷಕ್ಕೆ ನೆಗಿಟಿವ್ ಆಗೋ ಸಾಧ್ಯತೆಯೇ ಹೆಚ್ಚು.. ಹೀಗಂತ ಕೈ ನಾಯಕರೇ ಹೇಳಿಕೊಳ್ತಿದ್ದಾರೆ..ಇದ್ರ ಮಧ್ಯೆ ಜಮೀರ್ ಬಾಯಿಂದ ಜಾರಿದ ಮಾತು ಕಾಂಗ್ರೆಸ್ಗೆ ಪ್ಲಸ್ ಆಗಿದ್ರೂ ಆಗಿರಬಹುದು ಅನ್ನೋ ಚರ್ಚೆ ಆರಂಭವಾಗಿದೆ.