ನವದೆಹಲಿ(ಡಿ.13): ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಸುತ್ತ ರೈತರು ನಡೆಸುತ್ತಿರುವ ಪ್ರತಿಭಟನೆ 17 ದಿನಗಳನ್ನು ಪೂರೈಸಿರುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಈ ಕಾಯ್ದೆಗಳನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ರೈತರ ಆದಾಯ ಹೆಚ್ಚಿಸಿ ಅವರನ್ನು ಶ್ರೀಮಂತರನ್ನಾಗಿ ಮಾಡಲೆಂದೇ ಈ ಕಾಯ್ದೆಗಳನ್ನು ತರಲಾಗಿದೆ ಎಂದೂ ಹೇಳಿದ್ದಾರೆ.

ನಮ್ಮ ಸರ್ಕಾರ ಕೃಷಿಕರ ಕಲ್ಯಾಣಕ್ಕೆ ಬದ್ಧವಾಗಿದೆ. ಪರ್ಯಾಯ ಮಾರುಕಟ್ಟೆಗೆ ಪ್ರೋತ್ಸಾಹ ನೀಡುವ ಮೂಲಕ ಕೃಷಿಕರ ಆದಾಯ ಹೆಚ್ಚಿಸುವುದಕ್ಕೆಂದು ಈ ಕಾಯ್ದೆಗಳನ್ನು ತರಲಾಗಿದೆ. ಕೃಷಿ ಕ್ಷೇತ್ರದ ಬೆಳವಣಿಗೆಗೆ ಇದ್ದ ಅಡ್ಡಿಗಳನ್ನು ಇವು ನಿವಾರಿಸಲಿವೆ. ಜೊತೆಗೆ ಕೃಷಿ ಕ್ಷೇತ್ರಕ್ಕೆ ಹೊಸ ತಂತ್ರಜ್ಞಾನ ಮತ್ತು ಬಂಡವಾಳವನ್ನು ಆಕರ್ಷಿಸಲಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಔದ್ಯೋಗಿಕ ಒಕ್ಕೂಟ ಫಿಕ್ಕಿಯ ವಾರ್ಷಿಕ ಸಮಾವೇಶದಲ್ಲಿ ಶನಿವಾರ ಮಾತನಾಡಿದ ಪ್ರಧಾನಿ ರೈತರ ಪ್ರತಿಭಟನೆಯನ್ನು ನೇರವಾಗಿ ಉಲ್ಲೇಖಿಸದೆ ಕೃಷಿ ಕ್ಷೇತ್ರದಲ್ಲಿ ತಂದ ಆರ್ಥಿಕ ಸುಧಾರಣಾ ಕ್ರಮಗಳನ್ನು ಸಮರ್ಥಿಸಿಕೊಂಡರು.

ಪೈಪೋಟಿಯಿಂದ ಬೆಳೆಗಳ ಬೆಲೆ ಹೆಚ್ಚಳ:

ಹೊಸ ಕಾಯ್ದೆಗಳಿಂದ ರೈತರಿಗೆ ಎಪಿಎಂಸಿಗಳ ಜೊತೆಗೆ ಹೊಸ ಮಾರುಕಟ್ಟೆಗಳೂ ಸಿಗುತ್ತವೆ. ಅಲ್ಲಿ ಖಾಸಗಿ ಖರೀದಿದಾರರು ಬರುವುದರಿಂದ ಪೈಪೋಟಿ ಹೆಚ್ಚುವ ಮೂಲಕ ರೈತರ ಉತ್ಪನ್ನಗಳಿಗೆ ಹೆಚ್ಚು ಬೆಲೆ ಸಿಗುತ್ತದೆ. ಅದೇ ವೇಳೆ, ಎಪಿಎಂಸಿಗಳನ್ನೂ ಆಧುನೀಕರಣಗೊಳಿಸಲಾಗುತ್ತಿದ್ದು, ರೈತರು ಎಪಿಎಂಸಿಗಳಿಗೆ ಹೋಗದೆ ಆನ್‌ಲೈನ್‌ನಲ್ಲೇ ಬೆಳೆಗಳನ್ನು ಮಾರಲು ಕೂಡ ವೇದಿಕೆ ಕಲ್ಪಿಸಲಾಗಿದೆ. ಇವೆಲ್ಲವೂ ರೈತರ ಆದಾಯ ಹೆಚ್ಚಿಸಿ ಅವರನ್ನು ಶ್ರೀಮಂತರನ್ನಾಗಿ ಮಾಡಲು ತಂದ ಸುಧಾರಣೆಗಳು. ರೈತರು ಶ್ರೀಮಂತರಾದರೆ ದೇಶವೂ ಶ್ರೀಮಂತವಾಗುತ್ತದೆ ಎಂದು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿ:

ಕೃಷಿ ಸುಧಾರಣೆಗಳಿಂದ ದೇಶದ ಶೈತ್ಯಾಗಾರ ಮೂಲಸೌಕರ್ಯಗಳು ಆಧುನಿಕಗೊಳ್ಳುತ್ತವೆ. ಕೃಷಿ ಕ್ಷೇತ್ರಕ್ಕೆ ತಂತ್ರಜ್ಞಾನಗಳು ಬರುತ್ತವೆ. ಅದರಿಂದ ಕೃಷಿಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗುತ್ತದೆ. ಇವೆಲ್ಲವುಗಳ ಲಾಭ ಹೆಚ್ಚಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೃಷಿಕರಿಗೆ ಸಿಗುತ್ತದೆ. ಸದ್ಯ ಭಾರತದ ಉದ್ಯಮಿಗಳು ಕೃಷಿ ಕ್ಷೇತ್ರದಲ್ಲಿ ಪಾಲ್ಗೊಳ್ಳುತ್ತಿರುವುದು ಯಾತಕ್ಕೂ ಸಾಲದು. ಕೃಷಿ ಕ್ಷೇತ್ರದಲ್ಲಿ ಖಾಸಗಿ ಉದ್ಯಮಿಗಳು ಹೆಚ್ಚೆಚ್ಚು ಬಂಡವಾಳ ಹೂಡಿಕೆ ಮಾಡಬೇಕು ಎಂದು ಕರೆ ನೀಡಿದರು.

ನಗರಕ್ಕಿಂತ ಹಳ್ಳಿಗಳ ಬೆಳವಣಿಗೆ ವೇಗ ಹೆಚ್ಚು:

ಇಂದು ನಮ್ಮ ದೇಶದ ನಗರಗಳಿಗಿಂತ ಗ್ರಾಮೀಣ ಭಾರತವೇ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಈಗ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ ಹೆಚ್ಚಿದೆ. ದೇಶದಲ್ಲಿರುವ ಶೇ.50ಕ್ಕಿಂತ ಹೆಚ್ಚು ಸ್ಟಾರ್ಟಪ್‌ಗಳು 2 ಮತ್ತು 3ನೇ ಹಂತದ ನಗರಗಳಲ್ಲಿವೆ. ಶೇ.98ರಷ್ಟುಹಳ್ಳಿಗಳಿಗೆ ಇಂದು ರಸ್ತೆಗಳಿವೆ. ಹೀಗಾಗಿ ಗ್ರಾಮೀಣ ಮಾರುಕಟ್ಟೆಗಳಲ್ಲಿ ಬಂಡವಾಳ ಹೂಡಿಕೆಗೆ ಬಹುದೊಡ್ಡ ಅವಕಾಶಗಳಿವೆ ಎಂದು ಪ್ರಧಾನಿ ಹೇಳಿದರು.