ನವದೆಹಲಿ(ಡಿ.12): ಕೇಂದ್ರ ಸರ್ಕಾರ ಅಂಗೀಕರಿಸಿರುವ 3 ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 3ನೇ ವಾರಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆ ಕುರಿತ ರೈತರ ಅನುಮಾನ ನಿವಾರಿಸಲು ಮತ್ತು ಕಾಯ್ದೆಯನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ದೇಶದ 700 ಜಿಲ್ಲೆಗಳಲ್ಲಿ 100 ಪತ್ರಿಕಾಗೋಷ್ಠಿ ಹಾಗೂ 700 ರೈತ ಸಂಪರ್ಕ ಸಭೆ ನಡೆಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.

ಕೇಂದ್ರದ ವಿರುದ್ಧ ನಾಡಿದ್ದಿನಿಂದ ಉಗ್ರ ಹೋರಾಟ: ರೈತರ ನಿರ್ಧಾರ!

ಮುಂದಿನ ಕೆಲ ದಿನಗಳಲ್ಲೇ ಆರಂಭವಾಗಲಿರುವ ಈ ದೇಶವ್ಯಾಪಿ ಆಂದೋಲನದಲ್ಲಿ ಬಹುತೇಕ ಎಲ್ಲಾ ಕೇಂದ್ರ ಸಚಿವರು ಮತ್ತು ಹಿರಿಯ ನಾಯಕರು ಭಾಗಿಯಾಗಲಿದ್ದಾರೆ. ಪತ್ರಿಕಾಗೋಷ್ಠಿಗಳಲ್ಲಿ ಕಾಯ್ದೆಯ ಕುರಿತ ಅನುಮಾನಗಳನ್ನು ಬಗೆಹರಿಸುವ ಕೆಲಸ ನಡೆಯಲಿದ್ದರೆ, ರೈತ ಸಂಪರ್ಕ ಸಭೆಗಳಲ್ಲಿ ಹಿಂದಿನ ಕಾಯ್ದೆಯಲ್ಲಿನ ಅಂಶಗಳು, ಹೊಸ ಕಾಯ್ದೆಯಲ್ಲಿ ಮಾಡಿರುವ ಬದಲಾವಣೆ, ಬದಲಾವಣೆಯಿಂದ ರೈತರಿಗೆ ಆಗುವ ಲಾಭಗಳನ್ನು ಮನವರಿಕೆ ಮಾಡಿಕೊಡುವ ಯತ್ನ ಮಾಡಲಾಗುವುದು. ಅಲ್ಲದೆ ಕೃಷಿ ಮಸೂದೆ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ವಿಪಕ್ಷಗಳ ಬಣ್ಣ ಬಯಲು ಮಾಡುವ ಯತ್ನವನ್ನೂ ಪಕ್ಷದ ನಾಯಕರು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿದ ಕೃಷಿ ಕಾಯ್ದೆಗಳು ಉದ್ಯಮಿಗಳ ಪರವಾಗಿವೆ ಎಂದು ರೈತ ಸಂಘಟನೆಗಳು ಆರೋಪಿಸಿಕೊಂಡು ಬಂದಿವೆ. ಇದೇ ಹಿನ್ನೆಲೆಯಲ್ಲಿ ಪಂಜಾಬ್‌, ಹರಾರ‍ಯಣ, ಉತ್ತರಪ್ರದೇಶದ ಸಾವಿರಾರು ರೈತರು ಕಳೆದ 16 ದಿನಗಳಿಂದ ದೆಹಲಿ ಹೊರವಲಯದ ಗಡಿ ಪ್ರದೇಶದಲ್ಲಿ ಬೀಡು ಬಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವಿಷಯವಾಗಿ ಡಿ.8ರಂದು ಭಾರತ್‌ ಬಂದ್‌ ಕೂಡ ನಡೆಸಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರ ರೈತ ಸಂಘಟನೆಗಳ ಜೊತೆ 5 ಸುತ್ತಿನ ಮಾತುಕತೆ ನಡೆಸಿ, ಬಳಿಕ ರೈತರ ಕಳವಳಕ್ಕೆ ಕಾರಣವಾಗಿರುವ ಅಂಶಗಳ ತಿದ್ದುಪಡಿಗೆ ಲಿಖಿತ ಭರವಸೆ ನೀಡಿದರೂ, ಕಾಯ್ದೆ ಹಿಂದಕ್ಕೆ ಪಡೆಯಲೇಬೇಕೆಂಬ ಪಟ್ಟಿಗೆ ರೈತ ಸಂಘಟನೆಗಳು ಅಂಟಿಕೊಂಡಿವೆ.

ಭಾರತ್ ಬಂದ್ ನಡುವೆ ಸಂಜೆ 7 ಗಂಟೆಗೆ ರೈತ ನಾಯಕರ ಸಭೆ ಕರೆದ ಅಮಿತ್ ಶಾ!

ಇದೆಲ್ಲದರ ನಡುವೆ ಈ ಹಿಂದೆ ಆಡಳಿತ ನಡೆಸುವಾಗ ಮಸೂದೆ ಪರವಾಗಿ ಮಾತನಾಡಿದ್ದ ಕಾಂಗ್ರೆಸ್‌, ಎನ್‌ಸಿಪಿ ನಾಯಕರು ಇದೀಗ ರೈತ ಹೋರಾಟ ಬೆಂಬಲಿಸುವ ಮೂಲಕ ಸರ್ಕಾರವನ್ನು ಬಿಕ್ಕಟ್ಟಿಗೆ ಸಿಲುಕಿಸುವ ಯತ್ನ ಮಾಡುತ್ತಿವೆ. ಹೀಗಾಗಿ ಸರ್ಕಾರವನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಬಿಜೆಪಿ ಮುಂದಾಗಿದೆ.