ಚೋಳರ ಕಾಲದ 'ಆನೈಮಂಗಲಂ ತಾಮ್ರಶಾಸನಗಳು' ಒಂದು ಶತಮಾನದ ನಂತರ ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ಅಧಿಕೃತವಾಗಿ ಮರಳಿವೆ. ರಾಜರಾಜ ಚೋಳ I ರ ಕಾಲದ ಈ ಶಾಸನಗಳು, ನಾಗಪಟ್ಟಣಂನ ಬೌದ್ಧ ವಿಹಾರಕ್ಕೆ ನೀಡಿದ ದಾನವನ್ನು ದಾಖಲಿಸಿದೆ.

ನವದೆಹಲಿ (ಮೇ.16): ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಬರೆಯಲಾಗಿದೆ. ಚೋಳರ ಕಾಲದ ಅತ್ಯಂತ ಮಹತ್ವದ ಐತಿಹಾಸಿಕ ದಾಖಲೆಗಳಲ್ಲೊಂದಾದ, ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲ ನೆದರ್‌ಲ್ಯಾಂಡ್ಸ್ ವಶದಲ್ಲಿದ್ದ 'ಆನೈಮಂಗಲಂ ತಾಮ್ರಶಾಸನಗಳು' ಕೊನೆಗೂ ಭಾರತಕ್ಕೆ ಅಧಿಕೃತವಾಗಿ ಮರಳಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಐದು ದೇಶಗಳ ಪ್ರವಾಸದ ಭಾಗವಾಗಿ ನೆದರ್‌ಲ್ಯಾಂಡ್ಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಐತಿಹಾಸಿಕ ಹಸ್ತಾಂತರ ಪ್ರಕ್ರಿಯೆ ನೆರವೇರಿದೆ.

Add Asianetnews Kannada as a Preferred SourcegooglePreferred

ನೆದರ್‌ಲ್ಯಾಂಡ್ಸ್‌ನಲ್ಲಿ 'ಲೈಡನ್ ಪ್ಲೇಟ್ಸ್' (Leiden Plates) ಎಂದೇ ಪ್ರಸಿದ್ಧವಾಗಿದ್ದ ಈ ಶಾಸನಗಳನ್ನು ದಶಕಗಳಿಂದ ಅಲ್ಲಿನ ಲೈಡನ್ ವಿಶ್ವವಿದ್ಯಾಲಯದಲ್ಲಿ ಸಂರಕ್ಷಿಸಿಡಲಾಗಿತ್ತು. ಭಾರತ ಸರ್ಕಾರ, ಡಚ್ ಅಧಿಕಾರಿಗಳು ಮತ್ತು ಲೈಡನ್ ವಿಶ್ವವಿದ್ಯಾಲಯದ ನಡುವೆ ನಡೆದ ದೀರ್ಘಾವಧಿಯ ರಾಜತಾಂತ್ರಿಕ ಮಾತುಕತೆಗಳ ಫಲವಾಗಿ ಈ ಅಮೂಲ್ಯ ಪರಂಪರೆ ಈಗ ತಾಯ್ನಾಡಿಗೆ ಮರಳಿದೆ.

ಚೋಳರ ಕಾಲದ ಭವ್ಯ ಇತಿಹಾಸದ ದಾಖಲೆ

ಕ್ರಿ.ಶ. 985 ರಿಂದ 1014ರ ಅವಧಿಯಲ್ಲಿ ಆಳ್ವಿಕೆ ನಡೆಸಿದ್ದ ಮಹಾನ್ ಚಕ್ರವರ್ತಿ ರಾಜರಾಜ ಚೋಳ I ರ ಕಾಲಕ್ಕೆ ಸೇರಿದ ಈ ತಾಮ್ರಶಾಸನಗಳನ್ನು ಇತಿಹಾಸಕಾರರು ತಮಿಳು ಪರಂಪರೆಯ ಅತ್ಯಮೂಲ್ಯ ರತ್ನ ಹಾಗೂ ಭಾರತದ ಹೊರಗೆ ಸಂರಕ್ಷಿಸಲ್ಪಟ್ಟಿದ್ದ ಚೋಳರ ಕಾಲದ ಶಾಸನ ಕಲೆಗೆ ಅತ್ಯುತ್ತಮ ಉದಾಹರಣೆ ಎಂದು ಬಣ್ಣಿಸಿದ್ದಾರೆ.

ಸ್ಮಾರಕ ಸ್ವರೂಪದ ಶಾಸನಗಳು: ಈ ಆನೈಮಂಗಲಂ ಶಾಸನಗಳು ಒಟ್ಟು 21 ದೊಡ್ಡ ಮತ್ತು 3 ಸಣ್ಣ ತಾಮ್ರದ ಪತ್ರಗಳನ್ನು ಹೊಂದಿದ್ದು, ಬರೋಬ್ಬರಿ 30 ಕೆಜಿ ತೂಕವಿವೆ! ಇವೆಲ್ಲವನ್ನೂ ಚೋಳ ರಾಜವಂಶದ ರಾಜಮುದ್ರೆಯನ್ನು ಹೊಂದಿರುವ ವೃತ್ತಾಕಾರದ ತಾಮ್ರದ ಬಳೆಯೊಂದರ ಮೂಲಕ ಒಟ್ಟಿಗೆ ಜೋಡಿಸಲಾಗಿದೆ. ಈ ಶಾಸನದ ಮೂಲ ದಾನವನ್ನು ರಾಜರಾಜ ಚೋಳನ ಕಾಲದಲ್ಲಿ ನೀಡಲಾಗಿದ್ದರೂ, ಆತನ ಮಗ ರಾಜೇಂದ್ರ ಚೋಳ I ನು ನಂತರದ ದಿನಗಳಲ್ಲಿ ಇದನ್ನು ತಾಮ್ರದ ಪತ್ರಗಳ ಮೇಲೆ ಕಾಯಂ ಆಗಿ ಕೆತ್ತಿಸಿದನು ಎಂದು ಇತಿಹಾಸ ಹೇಳುತ್ತದೆ.

ವ್ಯಾಪಾರ, ಧರ್ಮ ಮತ್ತು ರಾಜತಾಂತ್ರಿಕತೆಯ ಸಾಕ್ಷಿ

ಈ ಶಾಸನಗಳು ಕೇವಲ ಆಡಳಿತಾತ್ಮಕ ದಾಖಲೆಗಳಲ್ಲ, ಬದಲಿಗೆ ಮಧ್ಯಕಾಲೀನ ದಕ್ಷಿಣ ಭಾರತದ ಜಾಗತಿಕ ಸಂಪರ್ಕವನ್ನು ಇವು ಅನಾವರಣಗೊಳಿಸುತ್ತವೆ.

ಬೌದ್ಧ ವಿಹಾರಕ್ಕೆ ಭೂದಾನ: ನಾಗಪಟ್ಟಣಂನಲ್ಲಿರುವ 'ಚೂಡಾಮಣಿ ವಿಹಾರ' ಎಂಬ ಬೌದ್ಧ ಮಠಕ್ಕೆ ಭೂಕಂದಾಯ ಮತ್ತು ತೆರಿಗೆಗಳನ್ನು ದಾನವಾಗಿ ನೀಡಿದ್ದರ ಕುರಿತು ಈ ಶಾಸನಗಳಲ್ಲಿ ಉಲ್ಲೇಖವಿದೆ. ಪ್ರಸ್ತುತ ಇಂಡೋನೇಷ್ಯಾದ ಭಾಗವಾಗಿರುವ ಅಂದಿನ ಶ್ರೀವಿಜಯ ಸಾಮ್ರಾಜ್ಯದ ದೊರೆ ಶ್ರೀ ಮಾರ ವಿಜಯೋತುಂಗ ವರ್ಮನು ತನ್ನ ತಂದೆ ಶ್ರೀ ಚೂಡಾಮಣಿ ವರ್ಮನ ನೆನಪಿಗಾಗಿ ಈ ವಿಹಾರವನ್ನು ನಿರ್ಮಿಸಿದ್ದನು.

ಧಾರ್ಮಿಕ ಸಹಿಷ್ಣುತೆ: ಹಿಂದೂ ರಾಜರಾಗಿದ್ದ ಚೋಳರು ಬೌದ್ಧ ಸಂಸ್ಥೆಗಳಿಗೂ ರಾಜಾಶ್ರಯ ನೀಡಿದ್ದರು ಎಂಬುದಕ್ಕೆ ಈ ಶಾಸನಗಳೇ ಪ್ರತ್ಯಕ್ಷ ಸಾಕ್ಷಿ. ಇದು ದಕ್ಷಿಣ ಭಾರತ ಮತ್ತು ಆಗ್ನೇಯ ಏಷ್ಯಾ (Southeast Asia) ನಡುವಿನ ಕಡಲ ವ್ಯಾಪಾರ, ಸಾಂಸ್ಕೃತಿಕ ವಿನಿಮಯ ಮತ್ತು ಧಾರ್ಮಿಕ ಸಹಬಾಳ್ವೆಯನ್ನು ಸಾಬೀತುಪಡಿಸುತ್ತದೆ.

ದ್ವಿಭಾಷಾ ಶಾಸನ: ಸಂಸ್ಕೃತ ಮತ್ತು ತಮಿಳು ಎರಡೂ ಭಾಷೆಗಳಲ್ಲಿರುವ ಈ ಶಾಸನದ ಸಂಸ್ಕೃತ ಭಾಗದಲ್ಲಿ ರಾಜವಂಶದ ವಂಶಾವಳಿ ಇದ್ದರೆ, ತಮಿಳು ಭಾಗದಲ್ಲಿ ಆಡಳಿತಾತ್ಮಕ ವಿವರಗಳಿವೆ.

ಮದ್ರಾಸ್ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಪಿಐಎಲ್ (PIL)

2019ರ ಏಪ್ರಿಲ್‌ನಲ್ಲಿ ನ್ಯಾಯವಾದಿ ಬಿ. ಜಗನ್ನಾಥ್ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಅದರಲ್ಲಿ, ಆರನೇ ಶತಮಾನದಲ್ಲಿ ಕಾಸಿಬ ಥೇರ ಎಂಬ ಬೌದ್ಧ ಸನ್ಯಾಸಿಯು ನಾಗನಾಡು (ನಾಗಪಟ್ಟಣಂ) ಸನ್ಯಾಸಿಗಳ ನೆರವಿನಿಂದ ಈ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಿದ್ದನ್ನು ಆನೈಮಂಗಲಂ ಶಾಸನಗಳು ಉಲ್ಲೇಖಿಸುತ್ತವೆ ಎಂದು ತಿಳಿಸಲಾಗಿತ್ತು. ಅಲ್ಲದೆ, ಪಲ್ಲವ ರಾಜ ರಾಜಸಿಂಹ (690-728) ಚೀನಾ ರಾಜನಿಗೆ ನಾಗಪಟ್ಟಣಂನಲ್ಲಿ ಬೌದ್ಧ ವಿಹಾರ ನಿರ್ಮಿಸಲು ಅನುಮತಿ ನೀಡಿದ್ದನ್ನು ಮತ್ತು ನಂತರ ಚೋಳರ ಕಾಲದಲ್ಲಿ ಶ್ರೀ ಮಾರ ವಿಜಯೋತುಂಗ ವರ್ಮನು ರಾಜರಾಜ ಚೋಳನ ಬೆಂಬಲದೊಂದಿಗೆ ವಿಹಾರ ನಿರ್ಮಿಸಿದ್ದನ್ನು ಇದು ದೃಢೀಕರಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ವಿದೇಶಿ ವಸ್ತುಸಂಗ್ರಹಾಲಯಗಳಲ್ಲಿ ಪ್ರದರ್ಶನಕ್ಕಿಡಲಾಗಿರುವ ಕಳುವಾದ ಭಾರತೀಯ ವಿಗ್ರಹಗಳು ಮತ್ತು ರಾಷ್ಟ್ರೀಯ ಸಂಪತ್ತನ್ನು ನೆದರ್‌ಲ್ಯಾಂಡ್ಸ್ ಮತ್ತು ಬೆಲ್ಜಿಯಂನಿಂದ ಮರಳಿ ಪಡೆಯಲು ತಜ್ಞರ ಸಮಿತಿ ರಚಿಸಬೇಕೆಂದು ಆ ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.

ನೆದರ್‌ಲ್ಯಾಂಡ್ಸ್ ತಲುಪಿದ್ದು ಹೇಗೆ?

18ನೇ ಶತಮಾನದಲ್ಲಿ ಕೋರಮಂಡಲ ಕರಾವಳಿಯು ಡಚ್ ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟಿದ್ದಾಗ ಈ ಶಾಸನಗಳನ್ನು ನೆದರ್‌ಲ್ಯಾಂಡ್ಸ್‌ಗೆ ಸಾಗಿಸಲಾಗಿತ್ತು ಎಂದು ಇತಿಹಾಸಕಾರರು ನಂಬುತ್ತಾರೆ. ನಾಗಪಟ್ಟಣಂ ಡಚ್ ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿದ್ದಾಗ (1690ರಲ್ಲಿ ಡಚ್ ಕಂಪನಿಯು ತನ್ನ ಪ್ರಧಾನ ಕಚೇರಿಯನ್ನು ಪುಲಿಕಾಟ್‌ನಿಂದ ನಾಗಪಟ್ಟಣಂಗೆ ಸ್ಥಳಾಂತರಿಸಿತ್ತು), ಕ್ರಿಶ್ಚಿಯನ್ ಮಿಷನರಿಯೊಂದರ ಮೂಲಕ ಡಚ್ ಅಧಿಕಾರಿ ಫ್ಲೋರೆಂಟಿಯಸ್ ಕ್ಯಾಂಪರ್ ಎಂಬಾತ 1703-1712ರ ಅವಧಿಯಲ್ಲಿ ಈ ಶಾಸನಗಳನ್ನು ವಶಪಡಿಸಿಕೊಂಡಿದ್ದ. ನಂತರ 1862ರಲ್ಲಿ ಪ್ರೊಫೆಸರ್ ಹೆಂಡ್ರಿಕ್ ಅರೆಂಟ್ ಹ್ಯಾಮಕರ್ ಅವರ ಆಸ್ತಿಯ ಮೂಲಕ ಇವು ಲೈಡನ್ ವಿಶ್ವವಿದ್ಯಾಲಯದ ಏಷ್ಯನ್ ಕಲೆಕ್ಷನ್ ಗ್ರಂಥಾಲಯವನ್ನು ಸೇರಿದವು. ಅಲ್ಲಿಂದೀಚೆಗೆ ಸಂಶೋಧಕರಿಗೆ ಮಾತ್ರ ಕಠಿಣ ನಿಬಂಧನೆಗಳೊಂದಿಗೆ ಇದರ ವೀಕ್ಷಣೆಗೆ ಅವಕಾಶವಿತ್ತು.

ಮರುಸ್ಥಾಪನೆಗೆ ನಡೆದ ದೀರ್ಘ ಹೋರಾಟ

ಕಳೆದ ಹಲವು ವರ್ಷಗಳಿಂದ ಭಾರತ ಸರ್ಕಾರವು ಈ ಶಾಸನಗಳ ವಾಪಸಾತಿಗಾಗಿ ನಿರಂತರ ಪ್ರಯತ್ನ ನಡೆಸಿತ್ತು. 2022ರಲ್ಲಿ ನೆದರ್‌ಲ್ಯಾಂಡ್ಸ್ ಸರ್ಕಾರವು ವಸಾಹತುಶಾಹಿ ಕಾಲದ ಪುರಾತನ ವಸ್ತುಗಳನ್ನು ಮೂಲ ದೇಶಗಳಿಗೆ ಮರಳಿ ನೀಡುವ ನೀತಿಯನ್ನು (Restitution Policy) ಜಾರಿಗೆ ತಂದ ಬಳಿಕ ಈ ಪ್ರಕ್ರಿಯೆಗೆ ವೇಗ ಸಿಕ್ಕಿತು.

ತಮಿಳುನಾಡಿನ ರಾಜಕೀಯ ನಾಯಕರು ಸಹ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದರು. ಡಿಎಂಕೆ ನಾಯಕ ತಂಗಂ ತೇನ್ನರಸು ಮತ್ತು ಮಾಜಿ ಸಚಿವ ಮಾ ಫೋಯ್ ಕೆ. ಪಾಂಡ್ಯರಾಜನ್ ಅವರು ಈ ಹಿಂದೆ 'ದಿ ಹಿಂದೂ' ಪತ್ರಿಕೆಯೊಂದಿಗೆ ಮಾತನಾಡುವಾಗ, ಆನೈಮಂಗಲಂ ಶಾಸನಗಳೊಂದಿಗೆ ಚೋಳರ ಇತಿಹಾಸದ ಮತ್ತೊಂದು ಪ್ರಮುಖ ದಾಖಲೆಯಾದ, ಪ್ರಸ್ತುತ ಎಲ್ಲಿದೆ ಎಂದೇ ತಿಳಿಯದ 'ಅನ್ಬಿಲ್ ಶಾಸನಗಳನ್ನು' (Anbil Plates) ಪತ್ತೆಹಚ್ಚಿ ಮರಳಿ ದೇಶಕ್ಕೆ ತರಬೇಕು ಎಂದು ಒತ್ತಾಯಿಸಿದ್ದರು. 'ಇಂಡಿಯಾ ಪ್ರೈಡ್ ಪ್ರಾಜೆಕ್ಟ್'ನ ಸಹ-ಸ್ಥಾಪಕ ಎಸ್. ವಿಜಯ್ ಕುಮಾರ್ ಮತ್ತು ನಿವೃತ್ತ ಪುರಾತತ್ವ ಅಧಿಕಾರಿ ಸಿ. ಸಂತಲಿಂಗಂ ಅವರಂತಹ ತಜ್ಞರು ಕೂಡ ಈ ಶಾಸನಗಳನ್ನು ಗಂಗೈಕೊಂಡ ಚೋಳಪುರಂ ದೇವಸ್ಥಾನದಲ್ಲಿ ಮರುಸ್ಥಾಪಿಸಬೇಕು ಎಂದು ಆಶಿಸಿದ್ದರು. ಕೊನೆಗೂ ಆ ಕನಸು ಈಗ ನನಸಾಗಿದೆ.