Subhash Chandra Bose Jayanti 2022: ಅಪ್ಪಟ ಸ್ವಾಭಿಮಾನಿ, ದೇಶಪ್ರೇಮಿ ಸಮರವೀರ ನೇತಾಜಿ!
*ಭಾರತದ ಸ್ವಾತಂತ್ರ್ಯವೊಂದೇ ಗುರಿ ಎನ್ನುತ್ತಿದ್ದ ಕ್ರಾಂತಿಕಾರಿ
*ಕೊನೆಯುಸಿರಿರುವವರೆಗೂ ಹೋರಾಟವೇ ಬದುಕು?
*ಅಪ್ಪಟ ಸ್ವಾಭಿಮಾನಿ, ದೇಶಪ್ರೇಮಿ ಸಮರವೀರ ನೇತಾಜಿ!
Subhash Chandra Bose Jayanti 2022: ತಿಲಕರ, ಸಾರ್ವಕರರ, ಅರವಿಂದರ ಚಟುವಟಿಕೆಗಳ ನಂತರ ಸಮಗ್ರ ಭಾರತೀಯರಲ್ಲಿ ಸ್ವಾತಂತ್ರ್ಯದ ಕನಸುಗಳು ಮತ್ತೆ ಮೊಳೆಯುವಂತೆ ಮಾಡಿದ್ದು ಸುಭಾಷ್‌ಚಂದ್ರ ಬೋಸರ ಪ್ರಯತ್ನಗಳೇ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಕೂಡ ಹೆದರಿತ್ತು. ಮಹಾತ್ಮ ಗಾಂಧೀಜಿ ಆತುರಾತುರವಾಗಿ ಕ್ವಿಟ್ ಇಂಡಿಯಾ ಚಳವಳಿಯನ್ನು ಆರಂಭಿಸಿದಾಗ, ಇಷ್ಟು ತರಾತುರಿ ಏಕೆ ಎಂದು ಕೇಳಿದ್ದಕ್ಕೆ, ‘ಹೋಗಿ ಬೋಸರನ್ನು ಕೇಳಿ’ ಎಂದು ಹೇಳಿದ್ದರಲ್ಲ, ಅದರ ಹಿಂದೆಯೂ ಬೋಸರ ದಣಿವರಿಯದ ಹೋರಾಟವೇ ಇತ್ತು.
ಹಿಟ್ಲರ್ ಸ್ನೇಹ ಬಯಸಿದ್ದೇಕೆ?: ೧೯೪೦ರ ಡಿಸೆಂಬರ್ ವೇಳೆಗಾಗಲೇ ಜಪಾನ್ ದೇಶ ಇಂಗ್ಲೆಂಡಿನ ವಿರುದ್ಧ ಸೆಣಸುತ್ತಿತ್ತು. ಈ ಹೊತ್ತಿನಲ್ಲೇ ಮಲಯ, ಸಿಂಗಾಪುರ, ಬರ್ಮಾ ಮುಂತಾದೆಡೆ ನೆಲೆಸಿರುವ ಭಾರತೀಯರನ್ನು ಮತ್ತು ಬ್ರಿಟಿಷರು ಬಿಟ್ಟು ಓಡಿಹೋಗಿರುವ ಭಾರತೀಯ ಯುದ್ಧ ಕೈದಿಗಳನ್ನು ಒಂದೆಡೆ ಸೇರಿಸಿ, ಬ್ರಿಟಿಷರ ವಿರುದ್ಧ ಹೋರಾಟ ಸಂಘಟಿಸುವುದು ಸಾಧ್ಯವಾದರೆ ಅದು ಪರಿಣಾಮಕಾರಿಯಾಗಬಲ್ಲದು ಎಂದು ಸುಭಾಷರು ನಿರ್ಧರಿಸಿದ್ದರು. ಅವರ ಆಲೋಚನೆಗಳ ಸಾಮರ್ಥ್ಯವೇ ಹಾಗಿತ್ತು. ಭಾರತದಲ್ಲಿ ಗೃಹಬಂಧನದಿಂದ ಪರಾರಿಯಾದ ಸುಭಾಷರು ಜರ್ಮನಿಗೆ ಹೋಗಿ ಹರಸಾಹಸ ಮಾಡಿ ಹಿಟ್ಲರ್‌ನನ್ನು ಭೇಟಿಯಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುವುದೊಳಿತು.
ಭಾರತೀಯರೆಂದರೆ ಬ್ರಿಟಿಷರ ದಾಸ್ಯದಲ್ಲಿರುವ ಮಂದಿ ಎಂದು ತುಚ್ಛವಾಗಿ ಕಾಣುತ್ತಿದ್ದ ಹಿಟ್ಲರ್, ಸುಭಾಷರ ವ್ಯಕ್ತಿತ್ವದಿಂದ ಬಲುವಾಗಿ ಪ್ರಭಾವಿತನಾಗಿದ್ದ. ಆದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಪಾತ್ರ ಕಡಿಮೆ ಎಂಬುದು ಅವನಿಗೆ ಗೊತ್ತಿತ್ತು. ಜರ್ಮನಿಯಲ್ಲಿರುವ ಭಾರತೀಯ ಯುದ್ಧಕೈದಿಗಳನ್ನು ಬ್ರಿಟಿಷರೊಂದಿಗೆ ಸೆಣಸಾಡಲು ಭಾರತಕ್ಕೆ ಕಳಿಸುವುದು ಹೆಚ್ಚು ಕಡಿಮೆ ಅಸಾಧ್ಯವೇ ಆಗಿತ್ತು. ಹಾಗಂತ ಇದರ ಅರಿವು ಸುಭಾಷರಿಗಿರಲಿಲ್ಲವೆಂದೇನೂ ಅಲ್ಲ. ಹಿಟ್ಲರ್‌ನ ಬೆಂಬಲ ಇದೆ ಎಂದು ಗೊತ್ತಾದರೆ ಇಂಗ್ಲೆಂಡಿನ ವಿರೋಧಿ ರಾಷ್ಟ್ರಗಳೆಲ್ಲವೂ ತಮ್ಮ ಬೆಂಬಲಕ್ಕೆ ನಿಲ್ಲಬಹುದೆಂಬ ದೃಢವಾದ ವಿಶ್ವಾಸ ಅವರದ್ದು. ಹಾಗೆಂದೇ ಅವರು ಹಿಟ್ಲರ್‌ನಿಂದ ನೈತಿಕ ಬೆಂಬಲವನ್ನು ಪಡೆದು ಒಂದು ಹಂತದವರೆಗೂ ತಮ್ಮ ಯೋಜನೆಯನ್ನು ಯಶಸ್ವಿಯಾಗಿಸಿಕೊಂಡಿದ್ದರು.
ಇದನ್ನೂ ಓದಿ: ನೇತಾಜಿ ಸ್ತಬ್ಧಚಿತ್ರ, ಕೇರಳ ಬಳಿಕ ಈಗ ಬಂಗಾಳ ಟ್ಯಾಬ್ಲೋ ತಿರಸ್ಕಾರ: ವಿವಾದ!
ಆದರೆ ನಿಜವಾದ ಪ್ರಶ್ನೆ ಇದ್ದದ್ದು ಪ್ರತ್ಯಕ್ಷ ಕದನಭೂಮಿಯಲ್ಲಿ ಹೋರಾಡಬಲ್ಲ ಸೈನಿಕರ ಸಂಘಟನೆ. ಅದಕ್ಕೆ ಸೂಕ್ತವಾದ ಭೂಮಿ ಭಾರತಕ್ಕೆ ಹೊಂದಿಕೊಂಡ ರಾಷ್ಟ್ರಗಳೇ ಆಗಿರಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹಾಗೆಂದೇ ಅವರು ಜಪಾನ್, ಬರ್ಮಾಗಳ ಸಹಕಾರ ಪಡೆದು ಒಂದು ಭಾರತ ವಿಮೋಚನಾ ಸೇನೆಯನ್ನು ಒಟ್ಟುಹಾಕಿ ಬ್ರಿಟಿಷರ ಮೇಲೆರಗುವಂತೆ ಮಾಡಬೇಕೆಂದು ನಿಶ್ಚಯಿಸಿದರು. ಬರ್ಮಾಕ್ಕೆ ಹೊಂದಿಕೊಂಡ ಭಾರತದ ಗಡಿಯಲ್ಲಿ ಸ್ವಲ್ಪಮಟ್ಟಿಗೆ ಬ್ರಿಟಿಷರನ್ನು ಅಲುಗಾಡಿಸುವುದು ಸಾಧ್ಯವಾದರೂ ಭಾರತವಾಸಿಗಳಲ್ಲಿ ಮಹಾ ಸಂಚಲನವನ್ನೇ ಉಂಟು ಮಾಡಬಹುದೆಂದು ಅವರು ಅರ್ಥೈಸಿಕೊಂಡಿದ್ದರು. ಇದಕ್ಕೆ ಪೂರಕವಾಗಿ ಯುದ್ಧದ ನಡುವೆಯೇ ಸಿಂಗಾಪುರ ಬ್ರಿಟಿಷರ ತೆಕ್ಕೆಯಿಂದ ಜಪಾನಿನ ವಶವಾಯ್ತು.
"
ಭಾರತದಿಂದ ಯುದ್ಧಕ್ಕೆಂದು ಒಯ್ದಿದ್ದ ಸೈನಿಕರನ್ನು ಸಿಂಗಾಪುರ, ಮಲಯಗಳಲ್ಲಿ ಬಿಟ್ಟು ಬ್ರಿಟಿಷ್ ಪಡೆ ಓಡಿ ಹೋಗಿತ್ತು. ಈ ಯುದ್ಧ ಕೈದಿಗಳನ್ನು ಸಂಘಟಿಸಿದರೆ ಭಾರತವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸುವುದು ಅಸಾಧ್ಯವೇನಲ್ಲ ಎಂಬುದು ನೇತಾಜಿಯವರ ಕನಸು. ಚುರುಕುಮತಿ ನೇತಾಜಿ ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಬೋಸ್ ಅವರ ಬುದ್ಧಿ ಚುರುಕಾಗಿ ಕೆಲಸ ಮಾಡುತ್ತಿತ್ತು. ಒಂದೆಡೆ ಜರ್ಮನಿ, ಜಪಾನ್, ಇಟಲಿ ಸರ್ಕಾರಗಳ ಬೆಂಬಲ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ವೇಳೆಗೆ ಅವರು ಸೇನೆಯ ನಿರ್ಮಾಣದಲ್ಲಿ ನಿರಂತರವಾಗಿ ದುಡಿಯುತ್ತಿದ್ದರು. ಅಷ್ಟೇ ಅಲ್ಲ, ಯುದ್ಧಕ್ಕೆ ಪೂರಕವಾದ ವಾತಾವರಣವನ್ನು ಭಾರತದಲ್ಲಿ ನಿರ್ಮಾಣ ಮಾಡಲು ಅವರು ಸಾಕಷ್ಟು ಶ್ರಮಿಸುತ್ತಿದ್ದರು. ಯಾವ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಬಲ್ಲದೆಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು.
ಇದನ್ನೂ ಓದಿ: Netaji statue ಸುಭಾಷ್ ಚಂದ್ರಬೋಸ್ ಹಾಲೋಗ್ರಾಂ ಪುತ್ಥಳಿ ಸಂಜೆ 6ಕ್ಕೆ ಅನಾವರಣ, ಐತಿಹಾಸಿಕ, ಪಾರಂಪರಿಕ ಸ್ಥಳದಲ್ಲಿ ಪ್ರತಿಮೆ!
ಯುದ್ಧದ ಹೊತ್ತಿನಲ್ಲಿ ಬ್ರಿಟಿಷರಿಗೆ ಮುಜುಗರ ಉಂಟುಮಾಡಬಲ್ಲಂತಹ ಹೇಳಿಕೆಗಳನ್ನು ಕೊಡುತ್ತಿದ್ದ ಸುಭಾಷರು, ಮತ್ತೊಂದೆಡೆ ಭಾರತೀಯ ಸೈನಿಕ-ಪೊಲೀಸರಿಗೆ ಭಾರತದ ಮುಕ್ತಿಗೆ ನೀವು ಸಹಕರಿಸದೇ ಹೋದಲ್ಲಿ ಭಾರತ ಸ್ವತಂತ್ರಗೊಂಡೊಡನೆ ಬ್ರಿಟಿಷ್ ಸರ್ಕಾರಕ್ಕೆ ನೆರವಿತ್ತ ಕಾರಣಕ್ಕೆ ನೀವು ಜನರಿಗೆ ಉತ್ತರಿಸಬೇಕಾದೀತು ಎಚ್ಚರ ಎಂದೂ ಹೇಳುತ್ತಿದ್ದರು. ಅವರ ಚಟುವಟಿಕೆಗಳು ಏಕಕಾಲಕ್ಕೆ ಹತ್ತಾರು ದಿಕ್ಕಿನಲ್ಲಿ ನಡೆಯುತ್ತಿದ್ದುದರಿಂದ ಅವರನ್ನು ಅರ್ಥೈಸಿಕೊಳ್ಳುವುದಾಗಲೀ, ಚಿಂತನೆಗಳನ್ನು ಜೀರ್ಣಿಸಿಕೊಳ್ಳುವುದಾಗಲೀ ಸುಲಭವಿರಲಿಲ್ಲ.
ಸುದೀರ್ಘ ಕಾಲ ಬ್ರಿಟಿಷರ ಸೇವೆಯಲ್ಲಿದ್ದ ಭಾರತೀಯ ಸೈನಿಕರ ಗುಲಾಮಿ ಮಾನಸಿಕತೆಗೆ ಬೆಂಕಿ ಹಚ್ಚಲು ಸಾಧಾರಣವಾದವರಿಂದ ಸಾಧ್ಯವಾಗುತ್ತಿರಲಿಲ್ಲ. ಸುಭಾಷರು ತಮ್ಮ ಪ್ರಖರ ವ್ಯಕ್ತಿತ್ವದಿಂದ ಆ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದರು. ಸತ್ತುಬಿದ್ದ ಹಾವನ್ನು ಕಂಡಾಗಲೂ ಹೆದರಿಕೆಯಾಗುತ್ತದೆ. ಆದರೆ ಆ ಹಾವು ಏನೂ ಮಾಡಲಾರದು. ಇಂಗ್ಲೆಂಡ್ ಈಗ ಸತ್ತು ಬಿದ್ದಿರುವ ಹಾವಷ್ಟೇ. ನಿಮ್ಮ ದೇಶವನ್ನು ಕೈಗೆತ್ತಿಕೊಳ್ಳುವ ಹೊಣೆ ಇನ್ನು ನಿಮ್ಮದೇ ಎಂಬ ಸುಭಾಷರ ಮಾತು ಸಾಮಾನ್ಯ ಸೈನಿಕನಲ್ಲೂ ಹೋರಾಟದ ಕಿಚ್ಚು ತುಂಬಿ ಬಿಡುತ್ತಿತ್ತು.
ಹಂಗಾಮಿ ಸರ್ಕಾರ ರಚನೆ: ಸಿಂಗಾಪುರದಲ್ಲಿ ೧೯೪೩ರ ಅಕ್ಟೋಬರ್ ೨೧ರಂದು ಸುಭಾಷ್‌ಚಂದ್ರ ಬೋಸರು ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ ಅರ್ಜಿ ಹುಕುಮತ್- ಎ-ಆಜಾದ್ ಹಿಂದ್ ಸ್ಥಾಪಿಸಿ ತಾವೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದಿನ ಕಾರ್ಯಕ್ರಮ ಪರಮಾದ್ಭುತ. ಸಿಂಗಾಪುರದ ಕ್ಯಾಥೆ ಸಿನಿಮಾಂಗಣದಲ್ಲಿ ನಡೆದ ಆ ಸಮಾರಂಭ ಭವ್ಯವಾಗಿತ್ತು. ಮಧ್ಯಾಹ್ನ ಸುಮಾರು ಮೂರು ಮುಕ್ಕಾಲಿಗೆ ಕಾರಿನಲ್ಲಿ ಸೈನಿಕ ವೇಷದ ನೇತಾಜಿ ಸಿನಿಮಾ ಮಂದಿರದ ಮುಂದೆಯೇ ಕೆಳಗಿಳಿದರು. ಅವರ ಅಕ್ಕ-ಪಕ್ಕದಲ್ಲಿ ಸಂಪುಟದ ಇತರೆ ಸದಸ್ಯರು, ಆಚೀಚೆ ಅಂಗರಕ್ಷಕರು. ನಾಲ್ಕು ಗಂಟೆಗೆ ವೇದಿಕೆ ಏರಿದ ನೇತಾಜಿ ಪ್ರಮಾಣ ವಚನ ಸ್ವೀಕರಿಸಿ ಮಂತ್ರಿಮಂಡಲದ ಇತರ ಸದಸ್ಯರಿಗೂ ಪ್ರಮಾಣ ವಚನ ಬೋಧಿಸಿದರು. ಪ್ರತಿಜ್ಞೆ ಸ್ವೀಕರಿಸಿದ ನೇತಾಜಿ, ‘ನಾನು ಸುಭಾಷ್‌ಚಂದ್ರ ಬೋಸ್. ಹಿಂದುಸ್ತಾನದ ಜನತೆಯ ಸ್ವಾತಂತ್ರ್ಯಕ್ಕಾಗಿ ಪ್ರತಿಜ್ಞೆ ಮಾಡುವುದೇನೆಂದರೆ ನನ್ನ ಕೊನೆಯುಸಿರಿ ನವರೆಗೂ ಸ್ವಾತಂತ್ರ್ಯ ಸಂಗ್ರಾಮದ ಯಜ್ಞವನ್ನು ನಡೆಸುತ್ತಲೇ ಇರುತ್ತೇನೆ’ ಎಂದಿದ್ದರು.
ಇದನ್ನೂ ಓದಿ: Republic Day: ಬ್ರಿಟಿಷರ ಕಾಲದ ಹಾಡಿಗೆ ಕೊಕ್, 2 ಹೊಸ ಹಾಡಿಗೆ ಮಣೆ!
ಕೈಗೊಂಬೆಯಾಗಲಿಲ್ಲ: ಸುಭಾಷರು ಎಲ್ಲಿಯೂ ಜಪಾನಿ ಸರ್ಕಾರದ ಕೈಗೊಂಬೆಯಾಗುವ ಲಕ್ಷಣವನ್ನೇ ತೋರಲಿಲ್ಲ. ಅವರ ಸ್ವತಂತ್ರ ಮನೋವೃತ್ತಿ ಅನೇಕ ಬಾರಿ ಜಪಾನಿನ ಪ್ರಮುಖರಿಗೂ ಕಿರಿಕಿರಿ ಉಂಟು ಮಾಡುತ್ತಿತ್ತು. ಆದರೆ ಸ್ವಾತಂತ್ರ್ಯಕ್ಕಾಗಿ ಸುಭಾಷರಲ್ಲಿದ್ದ ಉತ್ಕಟೇಚ್ಛೆ ಜಪಾನಿಗರ ಮನಮುಟ್ಟಿತ್ತು. ಸುಭಾಷರು ಸರ್ಕಾರವನ್ನು ಹೇಗೆ ವ್ಯವಸ್ಥಿತವಾಗಿ ಸಜ್ಜುಗೊಳಿಸಿದ್ದರೆಂದರೆ, ಮುಂದಿನ ದಿನಗಳಲ್ಲಿ ಅಂಡಮಾನ್ ಮುಂತಾದ ಒಂದೊಂದೇ ಪ್ರದೇಶಗಳ ವಶವಾದಂತೆಲ್ಲಾ ಅಲ್ಲಿಗೆ ಕಮಿಷನರ್‌ಗಳ ನೇಮಕ, ವಿವಿಧ ಸರ್ಕಾರಿ ಖಾತೆಗಳ ಹಾಗೂ ಗ್ರಾಮಮಟ್ಟದವರೆಗಿನ ಆಡಳಿತದ ಕಲ್ಪನೆಯ ನೀಲನಕ್ಷೆ ರೂಪಿಸಿಬಿಡುತ್ತಿದ್ದರು.
ಹೊಸ ಸರ್ಕಾರದ ಪರವಾಗಿ ಹೊಸ ಕರೆನ್ಸಿ, ಅಂಚೆಚೀಟಿಗಳನ್ನು ರೂಪಿಸಿದರಲ್ಲದೇ ‘ಆಜಾದ್ ಹಿಂದ್’ ಬ್ಯಾಂಕನ್ನು ಸ್ಥಾಪಿಸಿ ಹಣಕಾಸು ವ್ಯವಹಾರವನ್ನು ನಡೆಸಿದರು. ಬೇರೆ-ಬೇರೆ ಕಡೆಯಿಂದ ಯುದ್ಧದಲ್ಲಿ ಅಪೂರ್ವ ಸಾಮರ್ಥ್ಯವನ್ನು ತೋರಿದ್ದ ಐಎನ್‌ಎ ವೀರರಿಗೆ ವಿವಿಧ ಸ್ತರಗಳ ಮೆಡಲ್ ಗೌರವಗಳನ್ನು ನೀಡುವ ವ್ಯವಸ್ಥೆ ಮಾಡಿಕೊಂಡಿದ್ದರು. ಅಂದರೆ ಸುಭಾಷ್‌ಬಾಬು ಸ್ವತಂತ್ರ ಭಾರತಕ್ಕೆ ಬೇಕಾಗಬಹುದಾಗಿದ್ದ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಂಡೇ ಕಾರ್ಯರಂಗಕ್ಕೆ ಧುಮುಕಿದ್ದರು. ಸರ್ಕಾರ ಸ್ಥಾಪನೆಯಾದ ಎರಡೇ ದಿನಗಳಲ್ಲಿ ಜಪಾನ್ ಅಧಿಕೃತ ಮಾನ್ಯತೆ ನೀಡಿತು. ಅದರ ಹಿಂದೆಯೇ ಎಂಟ್ಹತ್ತು ರಾಷ್ಟ್ರಗಳು ಈ ಸರ್ಕಾರವನ್ನು ಮಾನ್ಯ ಮಾಡಿದವು. ಹೀಗೆ ಈ ರಾಷ್ಟ್ರಗಳೆಲ್ಲಾ ಮಾನ್ಯಮಾಡಿದ ಸರ್ಕಾರವಾದುದರಿಂದಲೇ ಅವರನ್ನು ಮೊದಲ ಪ್ರಧಾನಿ ಎಂದು ಹಾಲಿ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಸಂಬೋಧಿಸಿದಾಗ ಯಾರೂ ವಿರೋಧಿಸುವಂತಿರಲಿಲ್ಲ.
ಸ್ವಾಭಿಮಾನಿ ದೇಶಪ್ರೇಮಿ: ಅನೇಕ ರಾಷ್ಟ್ರಗಳು ಸುಭಾಷರಿಗೆ ಸಹಕಾರ ಕೊಡಲು ಮುಂದೆ ಧಾವಿಸಿದ್ದು ನಿಜವಾದರೂ ಸುಭಾಷರು ಮಾತ್ರ ಸರ್ಕಾರ ನಡೆಸಲು ಬೇಕಾದ ಹಣವನ್ನು ಅಲ್ಲಿನ ಭಾರತೀಯರಿಂದಲೇ ಸಂಗ್ರಹಿಸುವ ಪಣತೊಟ್ಟಿದ್ದರು. ವೆಚ್ಚ ಏರುತ್ತಲೇ ಇದ್ದಾಗ್ಯೂ ಆ ಮನುಷ್ಯ ಸಂಕಲ್ಪವನ್ನು ಬಿಡಲಿಲ್ಲ. ಆರಂಭದಲ್ಲಿ ಹಣ ಸಂಗ್ರಹವಾಗುತ್ತಿತ್ತು ನಿಜ. ಬರುಬರುತ್ತಾ ತೊಂದರೆಯಾಗಲಾರಂಭಿಸಿದಾಗ ಸಿರಿವಂತ ಭಾರತೀಯರಿಗೆ ಧಮ್ಕಿ ಹಾಕಿಯಾದರೂ ಹಣ ವಸೂಲಿ ಮಾಡುತ್ತಿದ್ದರು ಸುಭಾಷರು. ಇತರೆ ರಾಷ್ಟ್ರಗಳು ಮಾಡಿದ ಧನಸಹಾಯವನ್ನು ಭಾರತ ಸರ್ಕಾರಕ್ಕೆ ಕೊಟ್ಟ ಸಾಲವೆಂದು ಭಾವಿಸುವಂತೆ ಹೇಳಿದ ಅವರ ಸ್ವಾಭಿಮಾನದ ನುಡಿಗಳು ನಿಜಕ್ಕೂ ನೆನಪಿಸಿಕೊಳ್ಳಬೇಕಾದಂಥದ್ದು!
ಚಕ್ರವರ್ತಿ ಸೂಲಿಬೆಲೆ ಖ್ಯಾತ ಬರಹಗಾರ, ಚಿಂತಕ