Asianet Suvarna News Asianet Suvarna News

Netaji statue ಸುಭಾಷ್‌ ಚಂದ್ರಬೋಸ್‌ ಹಾಲೋಗ್ರಾಂ ಪುತ್ಥಳಿ ಸಂಜೆ 6ಕ್ಕೆ ಅನಾವರಣ, ಐತಿಹಾಸಿಕ, ಪಾರಂಪರಿಕ ಸ್ಥಳದಲ್ಲಿ ಪ್ರತಿಮೆ!

  • ಕೆಚ್ಚೆದೆಯ ಸ್ವಾತಂತ್ರ್ಯ ವೀರನಿಗೆ ಭಾರತದ ವಿಶಿಷ್ಟಗೌರವ
  • ಇಂಡಿಯಾ ಗೇಟಲ್ಲೇ ಸುಭಾಷ್‌ ಚಂದ್ರಬೋಸ್‌ ಪ್ರತಿಮೆ ಯಾಕೆ?
  • ಬ್ರಿಟಿಷ್‌ ರಾಜನ ಜಾಗಕ್ಕೆ ಸ್ವಾತಂತ್ರ್ಯವೀರ
Subhash Chandra Bose 125th birth anniversary PM Modi unveil hologram statue of Netaji on January 23 ckm
Author
Bengaluru, First Published Jan 23, 2022, 5:16 AM IST

ನವದೆಹಲಿ(ಜ.23):  ಅಪ್ರತಿಮ ದೇಶಪ್ರೇಮಿ, ಕೆಚ್ಚೆದೆಯ ಸ್ವಾತಂತ್ರ್ಯ ಸೇನಾನಿ ಸುಭಾಷ್‌ ಚಂದ್ರಬೋಸ್‌(Subhash Chandra Bose) ಅವರ 125ನೇ ಜನ್ಮದಿನ ಸ್ಮರಣಾರ್ಥ(birth anniversary) ರಾಷ್ಟ್ರ ರಾಜಧಾನಿ ದೆಹಲಿಯ ಹೃದಯ ಭಾಗದ ಇಂಡಿಯಾ ಗೇಟ್‌ ಹಿಂದೆ ಇರುವ ಮಂಟಪದಲ್ಲಿ ಬೋಸರ ಭವ್ಯ ಹಾಗೂ ಬೃಹತ್‌ ಪುತ್ಥಳಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಪ್ರತಿಮೆ ಕಾಮಗಾರಿ ಮುಗಿಯುವವರೆಗೆ ಅದೇ ಸ್ಥಳದಲ್ಲಿ ನೇತಾಜಿಯ ಹಾಲೋಗ್ರಾಂ ಪುತ್ಥಳಿಯನ್ನು ಭಾನುವಾರ ಅನಾವರಣ ಮಾಡಲಾಗುತ್ತಿದೆ. 

ಹಾಲೋಗ್ರಾಂ ಪ್ರತಿಮೆಗೆ ಇಂದು ಚಾಲನೆ
ನೇತಾಜಿ ಅವರ ಭವ್ಯ ಶಿಲಾ ಪ್ರತಿಮೆ ಸಿದ್ಧವಾಗುವವರೆಗೆ ಇಂಡಿಯಾ ಗೇಟ್‌ ಹಿಂದಿನ ಮಂಟಪದಲ್ಲಿ ಹಾಲೋಗ್ರಾಮ್‌(hologram statue) (ಮೂರು ಆಯಾಮದ ಬೆಳಕಿನ ಚಿತ್ರ) ಪುತ್ಥಳಿಯನ್ನು ಭಾನುವಾರ ಅನಾವರಣ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ(PM Narendra Modi) ಹಾಲೋಗ್ರಾಂ ಪುತ್ಥಳಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಬಗ್ಗೆ ಶುಕ್ರವಾರ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ನೇತಾಜಿ ಅವರ ಮೇಲೆ ದೇಶ ಹೊಂದಿರುವ ಋುಣದ ಸಂಕೇತವಾಗಿ ಗ್ರಾನೈಟ್‌ ಪ್ರತಿಮೆ ಸ್ಥಾಪಿಸಲಾಗುತ್ತದೆ. ಇದೊಂದು ಅರ್ಥಪೂರ್ಣ, ಅದ್ಭುತ ನಿರ್ಧಾರ ಎಂದು ತಿಳಿಸಿದ್ದಾರೆ.

ಇನ್ಮುಂದೆ ಜನವರಿ 23 ರಿಂದ Republic Day Celebrations!

ಏನಿದು ಹಾಲೋಗ್ರಾಂ ಪ್ರತಿಮೆ?
ಹಾಲೋಗ್ರಾಂ ಪ್ರತಿಮೆ ಎಂದರೆ ಕಲ್ಲು ಅಥವಾ ಶಿಲೆಯಿಂದ ಕೆತ್ತಲಾದ ಪ್ರತಿಮೆ ಅಲ್ಲ. ಬೆಳಕಿನಿಂದ ರೂಪಿತವಾಗುವ ಆಕೃತಿ. ನಿಜವಾದ ಪ್ರತಿಮೆ ಸಿದ್ಧ ಆಗುವವರೆಗೆ ತಾತ್ಕಾಲಿಕ ವ್ಯವಸ್ಥೆ ಮಾತ್ರ ಆಗಿರುತ್ತದೆ. ಸರಳವಾಗಿ ಹೇಳುವುದಾದರೆ ಹಾಲೋಗ್ರಾಮ್‌ ಎಂಬುದು ಮೂರು ಆಯಾಮದ ಬೆಳಕಿನ ಚಿತ್ರ. ನೇತಾಜಿ ಅವರ ಹಾಲೋಗ್ರಾಮ್‌ ಪ್ರತಿಮೆಯು 4ಕೆ ಪ್ರೊಜೆಕ್ಟರ್‌ನಿಂದ ಚಾಲಿತವಾಗಲಿದ್ದು 30,000 ಲ್ಯುಮೆನ್ಸ್‌ನಷ್ಟುಪ್ರಕಾಶಮಾನವಾಗಿರುತ್ತದೆ. ಈ ಪ್ರೊಜೆಕ್ಟರ್‌ ಬೆಲೆ ದುಬಾರಿಯಾಗಿದ್ದು, ಒಂದು ಯೂನಿಟ್‌ಗೆ 15 ಲಕ್ಷಕ್ಕಿಂತ ಹೆಚ್ಚು ರು. ವೆಚ್ಚವಾಗುತ್ತದೆ. ಅದು ಗರಿಷ್ಠ 13*13 ಅಡಿಗಳ ಪ್ರೊಜೆಕ್ಷನ್‌ ಸಾಮರ್ಥ್ಯ ಹೊಂದಿರುತ್ತದೆ. ನೇತಾಜಿ ಅವರ ಹಾಲೋಗ್ರಾಂ ಪ್ರತಿಮೆಯು 28 ಅಡಿ ಎತ್ತರ ಮತ್ತು 6 ಅಡಿ ಅಗಲ ಇರಲಿದೆ. ನೋಡುವವರ ಕಣ್ಣಿಗೆ ಕಾಣದ ರೀತಿಯಲ್ಲಿ ಶೇ.90ರಷ್ಟುಪಾರದರ್ಶಕ ಹಾಲೋಗ್ರಫಿ ಪರದೆಯನ್ನು ಬಳಸಲಾಗುತ್ತದೆ. ಬೋಸ್‌ ಅವರ 3ಡಿ ಚಿತ್ರದ ಮೇಲೆ ಆ ಬೆಳಕನ್ನು ಪ್ರಕ್ಷೇಪಿಸಲಾಗುತ್ತದೆ. ಅದು ನೈಜ ಪ್ರತಿಮೆಯಂತೆ ಮತ್ತು ಎಲ್ಲಾ ದಿಕ್ಕುಗಳಿಂದ ಗೋಚರಿಸುತ್ತದೆ.

ನೇತಾಜಿ ಪ್ರತಿಮೆ ಎಲ್ಲಿ ಸ್ಥಾಪನೆ?
ಸ್ವಾತಂತ್ರ್ಯ ಸೇನಾನಿ(Freedom Fighter) ಸುಭಾಷ್‌ ಚಂದ್ರ ಬೋಸ್‌ ಅವರ ಭವ್ಯ ಪ್ರತಿಮೆಯು ದೆಹಲಿಯ ಹೃದಯ ಭಾಗದಲ್ಲಿರುವ ರಾಜಪಥದ ಇಂಡಿಯಾ ಗೇಟ್‌, ಹಿಂದೆ ಇದ್ದ ಅಮರ್‌ ಜವಾನ್‌ ಜ್ಯೋತಿ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕ ನಡುವಿನ ಮಂಟಪದಲ್ಲಿ ತಲೆ ಎತ್ತಲಿದೆ. ಇಂಡಿಯಾ ಗೇಟ್‌ನ(India Gate) ಎದುರಿನ ಈ ಭವ್ಯ ಮಂಟಪವು 150 ಮೀಟರ್‌ ಎತ್ತರವಿದೆ. ಇದರ ಮುಂದೆ ಕಳೆದ 50 ವರ್ಷಗಳಿಂದ ಉರಿಯುತ್ತಿದ್ದ ಅಮರ್‌ ಜವಾನ್‌(Amar Jawan Jyoti) ಜ್ಯೋತಿಯನ್ನು ಶುಕ್ರವಾರ, ರಾಷ್ಟ್ರೀಯ ಯುದ್ಧ ಸ್ಮಾರಕದೊಂದಿಗೆ ವಿಲೀನ ಮಾಡಲಾಗಿದೆ. 1931ರಲ್ಲಿ ಬ್ರಿಟಿಷ್‌ ವಾಸ್ತುಶಿಲ್ಪಿ ಸರ್‌ ಎಡ್ವಿನ್‌ ಲ್ಯುಟೆನ್ಸ್‌ ಇಂಡಿಯಾ ಗೇಟ್‌ ಸೇರಿ ದೆಹಲಿಯಲ್ಲಿ ಸ್ಮಾರಕಗಳನ್ನು ನಿರ್ಮಾಣ ಮಾಡುವ ವೇಳೆ ಈ ಮಂಟಪವನ್ನೂ ವಿನ್ಯಾಸ ಮಾಡಿದ್ದರು.

ನೇತಾಜಿ ಭಾವಚಿತ್ರ ವಿವಾದ; ಅಸಲಿಯಲ್ಲ ಎಂದವರು ಟ್ವೀಟ್ ಡಿಲೀಟ್ ಮಾಡಿ ಸುಮ್ಮನಾದರು!

ಹೇಗಿರುತ್ತೆ ನೇತಾಜಿ ಪ್ರತಿಮೆ?
ನೇತಾಜಿ ಬೋಸ್‌ ಅವರ ಗ್ರಾನೈಟ್‌ ಪ್ರತಿಮೆ 28ಅಡಿ ಎತ್ತರ, 6 ಅಡಿ ಅಗಲ ಇರಲಿದೆ. ಅಪ್ರತಿಮ ವೀರ ನೇತಾಜಿ ಅವರ ಉದ್ದೇಶಿತ ಭವ್ಯ ಪ್ರತಿಮೆ ರಾಷ್ಟ್ರೀಯ ಮಾಡರ್ನ್‌ ಆರ್ಟ್‌ ಗ್ಯಾಲರಿಯ ಮಹಾನಿರ್ದೇಶಕ, ಶಿಲ್ಪಿ ಅದ್ವೈತ ಗಡನಾಯಕ್‌ ನೇತೃತ್ವದಲ್ಲಿ ಕೆತ್ತನೆಯಾಗಲಿದೆ. ನೇತಾಜಿ ಅವರ ಪ್ರತಿಮೆ ಕೆತ್ತನೆಗೆ ಅಗತ್ಯವಿರುವ ಕಪ್ಪು ವರ್ಣದ ಗ್ರಾನೈಟ್‌ ಕಲ್ಲನ್ನು ತೆಲಂಗಾಣದಿಂದ ತರಲಾಗುತ್ತದೆ. ಪ್ರತಿಮೆಯ ವಿನ್ಯಾಸವನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಈಗಾಗಲೇ ಸಿದ್ಧಪಡಿಸಿದೆ. ಅದು ನೇತಾಜಿಯವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸಲಿದೆ ಎನ್ನಲಾಗಿದೆ.

ಇಂಡಿಯಾ ಗೇಟಲ್ಲೇ ಯಾಕೆ?
ನೇತಾಜಿ ಪ್ರತಿಮೆ ಸ್ಥಾಪನೆಯಾಗಿರುವ ನೇರದಲ್ಲಿ ಇಂಡಿಯಾ ಗೇಟ್‌ ಇರಲಿದೆ. ನವದೆಹಲಿಯಲ್ಲಿರುವ ಇಂಡಿಯಾ ಗೇಟ್‌, ರಾಜಪಥ, ರಾಷ್ಟ್ರೀಯ ಯುದ್ಧ ಸ್ಮಾರಕ ಮುಂತಾದ ಸ್ಥಳಗಳಿಗೆ ಐತಿಹಾಸಿಕ ಮತ್ತು ಪಾರಂಪರಿಕ ಮಹತ್ವ ಇದೆ. ಇಂಡಿಯಾ ಗೇಟ್‌ ನವದೆಹಲಿಯ ರಾಜಪಥದಲ್ಲಿರುವ 42 ಮೀಟರ್‌ ಎತ್ತರದ ಯುದ್ಧ ಸ್ಮಾರಕ. ದೆಹಲಿಯ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಇದನ್ನು ಮೊದಲಿಗೆ ಕಿಂಗ್ಸ್‌ ವೇ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು. 1931ರಲ್ಲಿ ಸರ್‌ ಎಡ್ವಿನ್‌ ಲ್ಯುಟೆನ್ಸ್‌ ಇದನ್ನು ವಿನ್ಯಾಸಗೊಳಿಸಿದ್ದಾರೆ. ಈ ಸ್ಮಾರಕವು ಪ್ಯಾರಿಸ್‌ನಲ್ಲಿರುವ ಆರ್ಕ್ ಡಿ ಟ್ರಯೋಂಫ್‌ನಿಂದ ಪ್ರೇರಿತವಾಗಿದೆ. ಮೊದಲನೇ ಮಹಾಯುದ್ಧ ಮತ್ತು 3ನೇ ಆಂಗ್ಲೋ-ಆಫ್ಘನ್‌ ಯುದ್ಧದಲ್ಲಿ ಸುಮಾರು 70,000 ಬ್ರಿಟಿಷ್‌ ಭಾರತೀಯ ಸೈನಿಕರು ಮಡಿದಿದ್ದರು. ಅವರ ಸ್ಮರಣಾರ್ಥ ಇದನ್ನು ನಿರ್ಮಿಸಲಾಗಿದೆ. ಜೊತೆಗೆ ಈ ಪ್ರದೇಶವು ರಾಷ್ಟ್ರಪತಿ ಭವನ, ಸಂಸತ್ತು, ಸೆಂಟ್ರಲ್‌ ವಿಸ್ತಾ ಮತ್ತಿತರೆ ಹೆಗ್ಗುರುತು ಇರುವ ಐತಿಹಾಸಿಕ ಪ್ರದೇಶವಾಗಿದೆ. ನೇತಾಜಿಯಂಥ ಅಪ್ರತಿಮ ಸೇನಾನಿಗೆ ಗೌರವ ಸಲ್ಲಿಸಲು ಪ್ರದೇಶದ ಹಿರಿಮೆಯೂ ದೊಡ್ಡದಾಗಿರಬೇಕು ಎಂಬ ಉದ್ದೇಶದಿಂದ ಇಲ್ಲಿ ಪ್ರತಿಮೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ನೇತಾಜಿ ಪ್ರತಿಮೆ 2 ಕಿ.ಮೀ.ಗೂ ಅಧಿಕ ದೂರದವರೆಗೆ ಕಾಣುತ್ತದೆ.

ನೇತಾಜಿ ಜಯಂತಿಯಲ್ಲಿ ಜೈ ಶ್ರೀರಾಮ್ ಘೋಷಣೆ; ಮೋದಿ ಇದ್ದ ವೇದಿಕೆಯಲ್ಲಿ ಭಾಷಣ ಬಹಿಷ್ಕರಿಸಿದ ದೀದಿ!

ದೇಶಕ್ಕೆ ಮತ್ತೊಂದು ಹೆಗ್ಗುರುತು
ದೇಶದ ಏಕತೆಗೆ ಶ್ರಮಿಸಿದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಸ್ಮರಣಾರ್ಥ 2018ರಲ್ಲಿ ಗುಜರಾತಿನಲ್ಲಿ ಸರ್ದಾರ್‌ ಅವರ ಭವ್ಯ ಪುತ್ಥಳಿಯನ್ನು ಕೇಂದ್ರ ಸರ್ಕಾರ ಅನಾವರಣ ಮಾಡಿದೆ. 182 ಮೀಟರ್‌ ಎತ್ತರದ ಈ ಪ್ರತಿಮೆಯು ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸರ್ದಾರ್‌ ಪುತ್ಥಳಿ ಬಳಿಕ ಬೋಸ್‌ ಪ್ರತಿಮೆ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕೇಂದ್ರ ಸರ್ಕಾರ ದೇಶಕ್ಕೆ ಮತ್ತೊಂದು ಮಹತ್ವದ ಕೊಡುಗೆ ನೀಡುತ್ತಿದೆ.

ಬ್ರಿಟಿಷ್‌ ರಾಜನ ಜಾಗಕ್ಕೆ ಸ್ವಾತಂತ್ರ್ಯವೀರ
ಇಂಡಿಯಾ ಗೇಟ್‌ ಹಿಂದಿನ ಮಂಟಪದಲ್ಲಿ ಈ ಮುಂಚೆ ಇಂಗ್ಲೆಂಡಿನ ಮಾಜಿ ರಾಜ, ಭಾರತವನ್ನಾಳಿದ ಬ್ರಿಟಿಷ್‌ ದೊರೆ 5ನೇ ಜಾಜ್‌ರ್‍ ಪ್ರತಿಮೆಯನ್ನು ಇಡಲಾಗಿತ್ತು. 1968ರಲ್ಲಿ 5ನೇ ಜಾಜ್‌ರ್‍ ಪ್ರತಿಮೆಯನ್ನು ದೆಹಲಿಯ ಕೊರೊನೇಷನ್‌ ಪಾರ್ಕ್ಗೆ ಸ್ಥಳಾಂತರ ಮಾಡಲಾಗಿತ್ತು. ಅನಂತರದಲ್ಲಿ ಈ ಮಂಟಪ ಖಾಲಿ ಉಳಿದಿತ್ತು. ಈಗ ನೇತಾಜಿ ಪುತ್ಥಳಿ ನಿರ್ಮಾಣಕ್ಕೆ ಚಾಲನೆ ನೀಡುವುದರೊಂದಿಗೆ 54 ವರ್ಷಗಳ ನಂತರ ಮಂಟಪಕ್ಕೆ ಹೊಸದೊಂದು ಕಳೆ ಬಂದಂತಾಗಿದೆ.

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ 125ನೇ ಜನ್ಮದಿನವನ್ನು ಇಡೀ ದೇಶವೇ ಆಚರಿಸುತ್ತಿರುವಾಗ, ಗ್ರಾನೈಟ್‌ನಿಂದ ತಯಾರಾದ ಅವರ ಭವ್ಯವಾದ ಪ್ರತಿಮೆಯನ್ನು ಇಂಡಿಯಾ ಗೇಟ್‌ ಬಳಿ ಅಳವಡಿಕೆ ಮಾಡಲು ನಿರ್ಧರಿಸಿರುವ ವಿಷಯವನ್ನು ತಿಳಿಸಲು ಹೆಮ್ಮೆಯಾಗುತ್ತಿದೆ. ಭಾರತ ನೇತಾಜಿ ಅವರ ಮೇಲೆ ಹೊಂದಿರುವ ಋುಣದ ಸಂಕೇತ ಇದಾಗಿರಲಿದೆ.
- ನರೇಂದ್ರ ಮೋದಿ, ಪ್ರಧಾನಿ

Follow Us:
Download App:
  • android
  • ios