* ‘ಅಬೈಡ್‌ ವಿತ್‌ ಮಿ’ಗೆ ತಿಲಾಂಜಲಿ * ಗಣರಾಜ್ಯೋತ್ಸವ: ಬ್ರಿಟಿಷರ ಕಾಲದ ಹಾಡಿಗೆ ಕೊಕ್‌* ‘ಏ ಮೇರೆ ವತನ್‌’, ‘ಸಾರೇ ಜಹಾಂಸೇ ಅಚ್ಛಾ’ಗೆ ಮಣೆ

ನವದೆಹಲಿ(ಜ.23): ಗಣರಾಜ್ಯೋತ್ಸವ ಕಾರ್ಯಕ್ರಮದ ಮುಕ್ತಾಯದ ಭಾಗವಾಗಿ ಜ.29ರಂದು ದೆಹಲಿಯ ವಿಜಯ್‌ಚೌಕ್‌ನಲ್ಲಿ ನಡೆಯುವ ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮದಿಂದ ಈ ಬಾರಿ ವಸಾಹತುಶಾಹಿ (ಬ್ರಿಟಿಷರ) ಕಾಲದ ಹಾಗೂ ವಿಶ್ವಯುದ್ಧದ ಕಾಲದ ಗೀತೆಯಾಗಿದ್ದ ‘ಅಬೈಡ್‌ ವಿತ್‌ ಮಿ’ ಅನ್ನು ಕೈಬಿಡಲಾಗಿದೆ.

ಈ ಗೀತೆಯ ಬದಲಾಗಿ ಇನ್ನು ಅಪ್ಪಟ ಭಾರತೀಯ ದೇಶಭಕ್ತಿ ಗೀತೆಗಳು ಮೊಳಗಲಿವೆ. ‘ಅಬೈಡ್‌ ವಿತ್‌ ಮಿ’ ಹಾಡಿನ ಬದಲು ‘ಏ ಮೇರೆ ವತನ್‌ ಕೇ ಲೋಗೋಂ’ ಸೇರ್ಪಡೆ ಆಗಿದೆ. ಬೀಟಿಂಗ್‌ ರಿಟ್ರೀಟ್‌ ಅಂತ್ಯದ ವೇಳೆ ‘ಸಾರೇ ಜಹಾಂಸೇ ಅಚ್ಛಾ’ ಗೀತೆಯನ್ನು ನುಡಿಸಲಾಗುತ್ತದೆ.

ಶತಮಾನಗಳಿಂದಲೂ ಸೇನಾ ಸಂಪ್ರದಾಯದಂತೆ ನಿತ್ಯದ ಯುದ್ಧ ಚಟುವಟಿಕೆಗಳು ಮುಗಿದ ಬಳಿಕ 1847ರಲ್ಲಿ ಸ್ಕಾಟಿಷ್‌ ಕವಿ ಹೆನ್ರಿ ಫ್ರಾನ್ಸಿಸ್‌ ಬರೆದ ಅಬೈಡ್‌ ವಿತ್‌ ಮಿ ಹಾಡನ್ನು ವಾದ್ಯಗಳ ಮೂಲಕ ನುಡಿಸುವ ಸಂಪ್ರದಾಯ ಜಗತ್ತಿನ ಎಲ್ಲ ಕಡೆ ಇದೆ. ವಸಾಹತುಶಾಹಿ ಕಾಲದಿಂದಲೂ ಇದನ್ನು ಹಾಡಲಾಗುತ್ತದೆ. ಮಹಾತ್ಮಾ ಗಾಂಧಿ ಅವರಿಗೂ ಮೆಚ್ಚಾಗಿದ್ದ ಈ ಹಾಡನ್ನು ಬೀಟಿಂಗ್‌ ರಿಟ್ರೀಟ್‌ ಮುಕ್ತಾಯದ ಭಾಗವಾಗಿ ಹಿಂದಿನಿಂದಲೂ ವಾದ್ಯಗಳ ಮೂಲಕ ನುಡಿಸಲಾಗುತ್ತಿತ್ತು. ಆದರೆ ಈ ಬಾರಿ ಅದನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.

ಬೀಟಿಂಗ್‌ ರಿಟ್ರೀಟ್‌ನ ಭಾಗವಾಗಿದ್ದ ಹಲವಾರು ವಿದೇಶಿ ಹಾಡುಗಳನ್ನು ಕಾಲಕಾಲಕ್ಕೆ ಕೈಬಿಟ್ಟು ಅದರ ಬದಲಾಗಿ ಆಧುನಿಕ ಭಾರತೀಯ ಹಾಡುಗಳನ್ನು ಬಳಸಲಾಗುತ್ತಿದೆ. ಅದಕ್ಕೆ ಇದೀಗ ಅಬೈಡ್‌ ವಿತ್‌ ಮಿ ಕೂಡಾ ಸೇರಿಕೊಂಡಿದೆ.