ನೇತಾಜಿ ಸ್ತಬ್ಧಚಿತ್ರ, ಕೇರಳ ಬಳಿಕ ಈಗ ಬಂಗಾಳ ಟ್ಯಾಬ್ಲೋ ತಿರಸ್ಕಾರ: ವಿವಾದ!
* ನೇತಾಜಿ ಸ್ತಬ್ಧಚಿತ್ರ ತಿರಸ್ಕರಿಸಿದ್ದಕ್ಕೆ ಮಮತಾ ಕಿಡಿ
* ಕೇರಳ ಬಳಿಕ ಈಗ ಬಂಗಾಳ ಟ್ಯಾಬ್ಲೋ ತಿರಸ್ಕಾರ: ವಿವಾದ
* ಕಾರಣ ಕೊಡದೆ ಕಡೆಗಣಿಸಿದ್ದಾರೆ: ರಾಜ್ಯ ಸರ್ಕಾರ
ಕೋಲ್ಕತಾ(ಜ.17): ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಮೆರವಣಿಗೆಗೆ ಕೇರಳ ಸರ್ಕಾರ ಕಳುಹಿಸಿದ್ದ ನಾರಾಯಣ ಗುರುಗಳ ಟ್ಯಾಬ್ಲೋವನ್ನು ತಿರಸ್ಕರಿಸಿದ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಸ್ತಬ್ಧಚಿತ್ರವೊಂದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ಸಲಹೆ- ಸೂಚನೆಗಳನ್ನು ಅಡಕ ಮಾಡಿಕೊಂಡೇ ನೇತಾಜಿ ಸುಭಾಷ್ ಚಂದ್ರಬೋಸ್ ಅವರ 125ನೇ ಜನ್ಮದಿನಾಚರಣೆ ನಿಮಿತ್ತ ಸ್ತಬ್ಧ ಚಿತ್ರದ ಮಾದರಿ ಸಿದ್ಧಪಡಿಸಲಾಗಿತ್ತು. ಆದರೆ ಸರ್ಕಾರ ಅದನ್ನು ತಿರಸ್ಕರಿಸಿದೆ. ಯಾವುದೇ ಕಾರಣ ಕೂಡ ಕೊಟ್ಟಿಲ್ಲ ಎಂದು ಬಂಗಾಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರದ ಈ ಮನೋಭಾವದಿಂದ ಬಂಗಾಳಿ ಜನರಿಗೆ ಅತೀವ ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ನೇತಾಜಿ ಅವರ ಟ್ಯಾಬ್ಲೋ ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ನೇತಾಜಿ ಅವರ ಹೋರಾಟವನ್ನು ಕಡೆಗಣಿಸಿದೆ ಎಂದು ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭೆಯ ಸಚೇತಕ ಸುಖೇಂದು ಶೇಖರ್ ರಾಯ್ ಕಿಡಿಕಾರಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಸಂಸದ ಸೌಗತಾ ರಾಯ್ ಹೇಳಿದ್ದಾರೆ.