ನಾಳೆ ನೀಟ್ ಮರು ಪರೀಕ್ಷೆಗೆ ನಡೆಯಲಿದ್ದು,NTA ಮತ್ತೊಂದು ಎಡವಟ್ಟು ಮಾಡಿದೆ. ನಾಗ್ಪುರದ ವಿದ್ಯಾರ್ಥಿಯೊಬ್ಬರಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಿದ್ದು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ದೂರು ನೀಡಿದ ನಂತರ, ಎನ್‌ಟಿಎ ಸಂಜೆಯೊಳಗೆ ಬದಲಾಯಿಸುವುದಾಗಿ ಭರವಸೆ ನೀಡಿದೆ.

ದೆಹಲಿ (ಜೂ.20) ನಾಳೆ ಭಾನುವಾರ(ಜೂ.21) ದೇಶಾದ್ಯಂತ ನೀಟ್ ಮರು ಪರೀಕ್ಷೆ ನಡೆಯಲಿದ್ದು, ಎಲ್ಲ ಬಿಗಿ ಭದ್ರತಾ ಕ್ರಮ ಜಾರಿಗೊಳಿಸಲಾಗಿದೆ. ಮರು ಪರೀಕ್ಷೆಯಲ್ಲಿ ಸುಮಾರು 2.2 ಮಿಲಿಯನ್ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲಿದ್ದಾರೆ. ಎಲ್ಲ ಅಚ್ಚುಕಟ್ಟಾಗಿ ನಡೆಯುವ ಹೊತ್ತಲ್ಲಿ ಎನ್‌ಟಿಎ ಮತ್ತೊಂದು ಎಡವಟ್ಟು ಮಾಡಿಕೊಂಡಿರುವುದು ಬಹಿರಂಗವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಷ್ಟ್ರೀಯ ಪರೀಕ್ಷಾ ಕೇಂದ್ರ(NTA) ಮತ್ತೆ ನಿರ್ಲಕ್ಷ್ಯ?

ಹಿಂದೆ ನಡೆದ ನೀಟ್‌ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಲೀಕ್ ಆಗಿ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದಾಗಿ ಕೇಂದ್ರ ಸರ್ಕಾರ ತೀವ್ರ ಮುಜುಗರಕ್ಕೀಡಾಗಿತ್ತು. ವಿರೋಧ ಪಕ್ಷಗಳು ಕಟುವಾಗಿ ವಾಗ್ದಾಳಿ ನಡೆಸಿದ್ದವು. ನೀಟ್ ಪರೀಕ್ಷೆ ರದ್ದುಗೊಳಿಸಿ ಮರುಪರೀಕ್ಷೆಗೆ ಎಲ್ಲ ಬಿಗಿ ಭದ್ರತಾ ಕ್ರಮಗಳ ನಡುವೆ ನಾಳೆ ನಡೆಯುವ ಮುನ್ನವೇ ಎನ್‌ಟಿಎ ಮತ್ತೆ ನಿರ್ಲಕ್ಷ್ಯ ಮಾಡಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: NEET-UG Re-Exam 2026: ನಾಳೆ ರಾಜ್ಯಾದ್ಯಂತ ನೀಟ್ ಮರು ಪರೀಕ್ಷೆ, ಈ ನಿಯಮ ಉಲ್ಲಂಘಿಸಿದರೆ ಪ್ರವೇಶವಿಲ್ಲ!

ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿಯಲ್ಲಿ ಕೇಂದ್ರ!

ಭಾನುವಾರ ನೀಟ್ ಮರು ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಮುನ್ನ ಹೊಸ ಪ್ರವೇಶ ಪತ್ರಗಳನ್ನು ನೀಡಲಾಗಿದೆ. ಹೀಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡ ನಾಗ್ಪುರದ ಅಬ್ದುಲ್ಲಾ ಎಂಬ ವಿದ್ಯಾರ್ಥಿಯೊಬ್ಬರು ಶಾಕ್ ಆಗಿದ್ದಾರೆ. ಆ ವಿದ್ಯಾರ್ಥಿ ಪರೀಕ್ಷೆ ಕೇಂದ್ರ ದೆಹಲಿಯಲ್ಲೋ ಮುಂಬೈಯಲ್ಲೋ ಇಲ್ಲ ಬದಲಾಗಿ ದೂರದ ದುಬೈನ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ ಸಿಕ್ಕಿದೆ! ದುಬೈನಲ್ಲಿ ಮಗನ ಎಕ್ಸಾಂ ಸೆಂಟರ್‌ ನೋಡಿ ಪೋಷಕರು ದಂಗಾಗಿದ್ದಾರೆ.

ವಿದ್ಯಾರ್ಥಿ ಅಬ್ದುಲ್ಲಾ ಅವರ ತಂದೆ ಡಾ. ಮೊಹಮ್ಮದ್ ತಾಲಿಬ್ ಪ್ರತಿಕ್ರಿಯಿಸಿದ್ದು ಕಳೆದ ತಿಂಗಳು ಮೇ 3 ರಂದು ನಾಗ್ಪುರದಲ್ಲಿ ಮೂಲ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಯನ್ನು ಜೂನ್ 21 ರಂದು ನಡೆಯಲಿರುವ ಮರು ಪರೀಕ್ಷೆಯಲ್ಲಿ ಎಕ್ಸಾಂ ಸೆಂಟರ್‌ ಅಬುಧಾಬಿಗೆ ಬಂದಿದ್ದು ಹೇಗೆ? ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಎನ್‌ಟಿಎ ನಿರ್ಲಕ್ಷ್ಯದಿಂದ ಮಗನಿಗೆ ಮತ್ತೆ ಒಂದು ವರ್ಷ ನಷ್ಟವಾಗುವ ಆತಂಕ ವ್ಯಕ್ತಪಡಿಸಿದ್ದಾರೆ.

ಜೂ. 14 ರಿಂದಲೇ ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಪದೇ ಪದೇ ಪ್ರಯತ್ನಿಸಿದರೂ ಅದು ಡೌನ್‌ಲೋಡ್ ಆಗಲಿಲ್ಲ ಮತ್ತೆ ನಿನ್ನೆ ಶುಕ್ರವಾರ (ಜೂನ್ 19) ಪ್ರವೇಶ ಪತ್ರಕ್ಕೆ ಪ್ರಯತ್ನಿಸಿದಾಗ ಡೌನ್‌ಲೋಡ್ಆಯ್ತು. ಆದರೆ ಪರೀಕ್ಷಾ ಕೇಂದ್ರವು ಅಬುಧಾಬಿಯಲ್ಲಿರೋದು ಕಂಡು ಶಾಕ್ ಆಯ್ತು. ತಕ್ಷಣವೇ NTA ಸಹಾಯವಾಣಿಯನ್ನು ಸಂಪರ್ಕಿಸಲಾಯಿತು. NTA ಅಧಿಕಾರಿಗಳ ಸೂಚನೆಯಂತೆ, ಪರೀಕ್ಷಾ ಕೇಂದ್ರವನ್ನು ಬದಲಾಯಿಸುವಂತೆ ವಿನಂತಿಸಿ ಇಮೇಲ್ ಕಳಿಸಿದೆವು ಎಂದು ವಿದ್ಯಾರ್ಥಿಯ ತಂದೆ ನಡೆದ ಘಟನೆ ಮಾಧ್ಯಮಗಳಿಗೆ ವಿವರಿಸಿದರು.

ಇದನ್ನೂ ಓದಿ: Telegram Ban: 'ಮುಂದಿನ ನಿಷೇಧ ಯಾರ ಮೇಲೆ? ವಾಟ್ಸಾಪ್ ಮೇಲಾ?' ಟೆಲಿಗ್ರಾಂ ಬ್ಯಾನ್ ಮಾಡಿದ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ

ಇಂದು ಸಂಜೆಯೊಳಗೆ ಪರೀಕ್ಷಾ ಕೇಂದ್ರ ಬದಲಾವಣೆ:

ಇಂದು ಶನಿವಾರ (ಜೂನ್ 20) ಸಂಜೆ 4 ಗಂಟೆಯೊಳಗೆ ಪರೀಕ್ಷಾ ಕೇಂದ್ರವನ್ನು ನಾಗ್ಪುರಕ್ಕೆ ಬದಲಾಯಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದ್ದರಿಂದ, NTA ತನ್ನ ಭರವಸೆಯನ್ನು ಉಳಿಸಿಕೊಳ್ಳುತ್ತದೆ ವಿದ್ಯಾರ್ಥಿಯ ತಂದೆ ಡಾ.ತಾಲಿಬ್ ಭರವಸೆ ವ್ಯಕ್ತಪಡಿಸಿದ್ದಾರೆ. ಇನ್ನು ಅಶ್ಚರ್ಯವೆಂದರೆ ವಿದ್ಯಾರ್ಥಿ ಅಬ್ದುಲ್ಲಾ ಬಳಿ ಪ್ರಸ್ತುತ ಯಾವುದೇ ಪಾಸ್‌ಪೋರ್ಟ್ ಕೂಡ ಇಲ್ಲ. ಆದ್ದರಿಂದ, NTA ತನ್ನ ಪರೀಕ್ಷಾ ಕೇಂದ್ರವನ್ನು ಬದಲಾಯಿಸದಿದ್ದರೆ, ಅವರು ಪರೀಕ್ಷೆಗೆ ಹಾಜರಾಗಲು ಹೇಗೆ ಸಾಧ್ಯವಿತ್ತು? ತಂದೆ ಡಾ. ತಾಲಿಬ್ ಪ್ರಶ್ನಿಸಿದ್ದಾರೆ.

ಈ ವಿಷಯದ ಬಗ್ಗೆ NTA ಹೇಳಿದ್ದೇನು?

ವಿಷಯ ಬೆಳಕಿಗೆ ಬಂದ ನಂತರ, NTA ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿದ್ದು, ಆದ ಪ್ರಮಾದವನ್ನು ಪರಿಶೀಲಿಸಿ ಮುಂದಿನ ಕೆಲವು ಗಂಟೆಯೊಳಗೆ ಅಭ್ಯರ್ಥಿಗೆ ನಾಗ್ಪುರದಲ್ಲಿ ಪರೀಕ್ಷೆ ಕೇಂದ್ರ ವ್ಯವಸ್ಥೆ ಮಾಡುವುವದಾಗಿ ಹೇಳಿದೆ.