ಎನ್‌ಡಿಎ ಅಂದ್ರೆ ನರೇಂದ್ರ ಡಿಸ್ಟ್ರಕ್ಟಿವ್ ಅಲಯನ್ಸ್: ಕಾಂಗ್ರೆಸ್‌ನ ಜೈರಾಮ್ ರಮೇಶ್ ಟೀಕೆ
ಸತತ 3ನೇ ಬಾರಿ ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಪಕ್ಷ 'ನರೇಂದ್ರ ಡಿಸ್ಟ್ರಕ್ಟಿವ್ ಅಲಯನ್ಸ್'ನ ನಾಯಕ ಎಂದು ಟೀಕಿಸಿದೆ. ಅರ್ಥಾತ್ ಅವರೊಬ್ಬ ವಿಧ್ವಂಸಕ ಮೈತ್ರಿಕೂಟದ ನಾಯಕ ಎಂದು ಕಿಡಿಕಾರಿದೆ.
ನವದೆಹಲಿ: ಸತತ 3ನೇ ಬಾರಿ ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಪಕ್ಷ 'ನರೇಂದ್ರ ಡಿಸ್ಟ್ರಕ್ಟಿವ್ ಅಲಯನ್ಸ್'ನ ನಾಯಕ ಎಂದು ಟೀಕಿಸಿದೆ. ಅರ್ಥಾತ್ ಅವರೊಬ್ಬ ವಿಧ್ವಂಸಕ ಮೈತ್ರಿಕೂಟದ ನಾಯಕ ಎಂದು ಕಿಡಿಕಾರಿದೆ. ಟ್ವಿಟ್ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, 'ಮೋದಿ ಈ ಹಿಂದೆ ಅನೇಕ ವಿವಾದಗಳನ್ನು ಸೃಷ್ಟಿಸಿದವರು. ಯಾವತ್ತು ಸೆಂಗೋಲ್ ಹಿಡಿದು ಹೊಸ ಸಂಸತ್ತು ಪ್ರವೇಶಿಸಿದರೋ ಸೆಂಗೋಲ್‌ಗೆ ಇದ್ದ ಇತಿಹಾಸ ತಿರುಚಲು ಯತ್ನಿಸಿದರು. ಸೆಂಗೋಲ್‌ನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ತಮಿಳರನ್ನು ಅವಮಾನಿಸಿದರು. ಇಂಥ ಸಂವಿಧಾನ ವಿರೋಧಿ ಕೆಲಸ ಮಾಡಿದ್ದಕ್ಕೇ ಇತ್ತೀಚಿನ ಚುನಾವಣೆಯಲ್ಲಿ ಭಾರಿ ವೈಯಕ್ತಿಕ, ನೈತಿಕ ಹಾಗೂ ರಾಜಕೀಯ ಸೋಲು ಕಂಡಿದ್ದಾರೆ.
ಜನರು ಅವರ ಆಡಂಬರ ತಿರಸ್ಕರಿಸಿದ್ದಾರೆ. ಈಗ ಸಂವಿಧಾನಕ್ಕೆ ಹಣೆಯೊತ್ತಿ ನಮಿಸುವ ನಾಟಕ ಆಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ತಾನು ಮೂರನೇ ಬಾರಿ ಪ್ರಧಾನಿ ಎಂದು ಹೇಳಿಕೊಳ್ಳುತ್ತಿದ್ದ ಮೋದಿಗೆ ವೈಯಕ್ತಿಕವಾಗಿ ಬಹುಮತವೂ ಬಂದಿಲ್ಲ. ಹೀಗಾಗಿ ಅವರು ಪ್ರಧಾನಿ ಆಗಲು ಕಾನೂನು ಬದ್ಧತೆಯ ಕೊರತೆ ಇದೆ ಎಂದು ಜೈರಾಂ ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ಧರ್ಮಾಧಾರಿತ ಮೀಸಲು ಕೊಟ್ಟಿಲ್ಲ: ಮೋದಿ ಆರೋಪ ತಳ್ಳಿಹಾಕಿದ ಕಾಂಗ್ರೆಸ್
ನವೀನ್ ಪಟ್ನಾಯಕ್ ಆಪ್ತ ಪಾಂಡಿಯನ್ ರಾಜಕೀಯದಿಂದಲೇ ನಿವೃತ್ತಿ
ಭುವನೇಶ್ವರ: ಒಡಿಶಾದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜು ಜನತಾದಳದ ಪರಮೋಚ್ಚ ನಾಯಕ ನವೀನ್ ಪಟ್ನಾಯಕ್ ಅವರ ಅತ್ಯಾಪ್ತ, ತಮಿಳುನಾಡು ಮೂಲದ ಮಾಜಿ ಐಎಎಸ್ ಅಧಿಕಾರಿ ವಿ.ಕೆ. ಪಾಂಡಿಯನ್ ಅವರು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅವರು, ನಾನು ಸಣ್ಣ ಗ್ರಾಮದ, ವಿನೀತ ಕುಟುಂಬದಿಂದ ಬಂದಿದ್ದೇನೆ. ಬಾಲ್ಯದಿಂದಲೂ ನನಗೆ ಐಎಎಸ್ ಸೇರಿ, ಜನರ ಸೇವೆ ಮಾಡಬೇಕೆಂಬ ಬಯಕೆ ಇತ್ತು. ಒಡಿಶಾ ಮಣ್ಣಿಗೆ ಕಾಲಿಟ್ಟ ದಿನದಿಂದಲೂ ಅಪಾರ ಪ್ರೀತಿಯನ್ನು ಪಡೆದಿದ್ದೇನೆ.
ಈಗ ಪ್ರಜ್ಞಾಪೂರ್ವಕವಾಗಿ ರಾಜಕೀಯದಿಂದ ದೂರ ಸರಿಯುತ್ತಿದ್ದೇನೆ. ಈ ಪ್ರಯಾಣದಲ್ಲಿ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನನ್ನಿಂದಾಗಿ ಬಿಜೆಡಿಗೆ ಸೋಲಾಗಿದ್ದರೆ ಅದಕ್ಕೂ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ. ಈ ಬಾರಿಯ ಒಡಿಶಾ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಇತಿಹಾಸದಲ್ಲೇ ಬಿಜೆಡಿ ಅತ್ಯಂತ ಕಳಪೆ ಸಾಧನೆ ಮಾಡಿತ್ತು. 24 ವರ್ಷಗಳ ಬಳಿಕ ವಿಧಾನಸಭೆಯಲ್ಲಿ ಅಧಿಕಾರ ಕಳೆದುಕೊಂಡಿದ್ದಲ್ಲದೆ, ಲೋಕಸಭೆಯಲ್ಲಿ ಶೂನ್ಯ ಸಂಪಾದನೆ ಮಾಡಿತ್ತು. ಇದಕ್ಕೆ ಪಾಂಡಿಯನ್ ಅವರೇ ಕಾರಣ ಎಂಬ ಟೀಕೆಗಳು ವ್ಯಕ್ತವಾಗಿದ್ದವು.
ಜೂ.4ರಂದು ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಪಾಂಡಿಯನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.ನವೀನ್ ಅವರ ನೆಚ್ಚಿನ ಅಧಿಕಾರಿಯಾಗಿದ್ದ ಪಾಂಡಿಯನ್ ಕಳೆದ ನವೆಂಬರ್‌ನಲ್ಲಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ, ಬಿಜೆಡಿ ಸೇರಿದ್ದರು. ಅವರನ್ನು ನವೀನ್ ಪಟ್ನಾಯಕ್ ಉತ್ತರಾಧಿಕಾರಿ ಮಾಡಬಹುದು ಎಂಬ ವದಂತಿಗಳು ಹಬ್ಬಿದ್ದವು. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪಟ್ನಾಯಕ್ ಜತೆಗೇ ಯಾವಾಗಲೂ ಪಾಂಡಿಯನ್ ಇರುತ್ತಿದ್ದರು. ಪಾಂಡಿಯನ್ ಬಗ್ಗೆ ಚುನಾವಣೆ ಪ್ರಚಾರದಲ್ಲೂ ಬಿಜೆಪಿ ಟೀಕೆ ಮಾಡಿ, ತಮಿಳುನಾಡು ಅಧಿಕಾರಿಗೆ ಪಟ್ನಾಯಕ್ ರಾಜ್ಯ ಬಿಡಲು ಹೊರಟಿದ್ದಾರೆ ಎಂದು ಕಿಡಿಕಾರಿತ್ತು.