ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಕಾಂಗ್ರೆಸ್ ಸರ್ಕಾರದ ಆಂತರಿಕ ಜಗಳದಿಂದ ರಾಜ್ಯದ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದ್ದಾರೆ. ಆಡಳಿತ ನಡೆಸಲು ಸಾಧ್ಯವಾಗದಿದ್ದರೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರಾಜೀನಾಮೆ ನೀಡಿ ಚುನಾವಣೆಗೆ ಬರಲಿ ಎಂದು ಅವರು ಸವಾಲು ಹಾಕಿದ್ದಾರೆ.
ಬೆಳಗಾವಿ (ನ.29): ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಒಳಜಗಳಗಳ ಕುರಿತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಆಂತರಿಕ ಜಗಳದಿಂದಾಗಿ ರಾಜ್ಯದ ಆಡಳಿತ ಸಂಪೂರ್ಣವಾಗಿ ಅದೋಗತಿಗೆ ಇಳಿದಿದೆ ಎಂದು ಆರೋಪಿಸಿದರು.
'ಜಗಳ ಇದೆ' ಕಾಂಗ್ರೆಸ್ ಒಪ್ಪಿಕೊಂಡಿದೆ:
ಇಂದು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬ್ರೇಕ್ ಪಾಸ್ಟ್ ಮೀಟಿಂಗ್ ಮಾಡಿದ್ದಾರೆ. 'ಹೈಕಮಾಂಡ್ ಹೇಳಿದ ಹಾಗೇ ಕೇಳ್ತೆವಿ' ಎಂದಿದ್ದಾರೆ. ಅಂದರೆ, ಅವರೊಳಗೆ ಜಗಳ ಇದೆ ಎಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ ಎಂದು ಜೋಶಿ ವ್ಯಂಗ್ಯವಾಡಿದರು.
ನಿಮ್ಮ ಜಗಳ ಬಗೆಹರಿಸಿಕೊಳ್ಳಿ, ಇಲ್ಲವೇ ರಾಜೀನಾಮೆ ನೀಡಿ:
ನಿಮ್ಮ ಜಗಳವನ್ನು ಬಗೆಹರಿಸಿಕೊಳ್ಳಿ, ಬೀದಿ ರಂಪ ಮತ್ತು ಹಾದಿ ರಂಪ ಮಾಡಬೇಡಿ. ರಸ್ತೆಗಳ ಪರಿಸ್ಥಿತಿ ಗಂಭೀರವಾಗಿದೆ, ಆಸ್ಪತ್ರೆಗಳಲ್ಲಿ ಔಷಧಿ ಸಿಗುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಒಳಜಗಳದ ಪರಿಣಾಮ ಇದಕ್ಕಿಂತ ದೊಡ್ಡ ಉದಾಹರಣೆ ಬೇರೆ ಬೇಕಿಲ್ಲ. ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ: ರೈತರು ಹೋರಾಟ ಮಾಡುತ್ತಿದ್ದಾರೆ, ಜನ ಆಂದೋಲನ ಮಾಡುತ್ತಿದ್ದಾರೆ. ಸರಿಯಾಗಿ ಸರ್ಕಾರ ನಡೆಸಿ, ಇಲ್ಲದಿದ್ದರೆ ಬಿಟ್ಟು ಹೋಗಿ. ಈಗಾಗಲೇ ರಾಜಣ್ಣ ಅವರು ವಿಧಾನಸಭಾ ವಿಸರ್ಜನೆ ಮಾಡಿ ಚುನಾವಣೆಗೆ ಬನ್ನಿ ಎಂದಿದ್ದಾರೆ. ನಾವು ಕೂಡ ಒತ್ತಾಯ ಮಾಡುತ್ತೇವೆ; ಸರ್ಕಾರ ನಡೆಸಲು ಆಗದಿದ್ದರೆ ಚುನಾವಣೆಗೆ ಬನ್ನಿ ಎಂದು ಕೇಂದ್ರ ಸಚಿವರು ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದರು.
ನಕಲಿ ಗಾಂಧಿಗಳ ನಡುವೆ ಖರ್ಗೆ ಹೆಲ್ಪ್‌ಲೆಸ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸೈಲೆಂಟ್ ಮತ್ತು ಗೊಂದಲಮಯ ನಡವಳಿಕೆಯ ಬಗ್ಗೆಯೂ ಪ್ರಹ್ಲಾದ್ ಜೋಶಿ ಟೀಕಾ ಪ್ರಹಾರ ನಡೆಸಿದರು. ರಾಹುಲ್ ಗಾಂಧಿ ಅವರಿಗೆ ಯಾವುದೇ ಕಂಟ್ರೋಲ್ ಇಲ್ಲ. ಬಿಹಾರ ಚುನಾವಣೆ ಆದ ಮೇಲೆ ನಾಪತ್ತೆಯಾಗಿದ್ದರು, ಚುನಾವಣೆಗೂ ಮುನ್ನ ಎರಡು ದಿನ ನಾಪತ್ತೆಯಾಗಿದ್ದರು. ಎಲ್ಲಿ ಹೋಗಿದ್ದರು ಗೊತ್ತಿಲ್ಲ. ಅವರಿಗೆ ಏನು ಮಾಡಬೇಕು ಅಂತಾ ತೋಚುತ್ತಿಲ್ಲ, ರಾಹುಲ್ ಗಾಂಧಿ, ಖರ್ಗೆ ಇಬ್ಬರೂ ಹೆಲ್ಪ್‌ಲೆಸ್ ಆಗಿದ್ದಾರೆ. ಸಿದ್ದರಾಮಯ್ಯ ನನ್ನ ಮಾತು ಕೇಳ್ತಾರಾ ಅನ್ನೋ ಗೊಂದಲದಲ್ಲಿ ರಾಹುಲ್ ಇದ್ದಾರೆ, ಡಿ.ಕೆ. ಶಿವಕುಮಾರ್‌ಗೆ ಹೇಳೋಕೂ ಆಗ್ತಿಲ್ಲ ಎಂದು ವ್ಯಂಗ್ಯವಾಡಿದರು.
ಇಂದಿನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಅಂತಾ ಯಾಕೆ ಹೇಳಲಿಲ್ಲ? ನಾನು ಕೆಪಿಸಿಸಿ ಅಧ್ಯಕ್ಷ ಅಂತಾ ಡಿಕೆ ಶಿವಕುಮಾರ್ ಯಾಕೆ ಹೇಳಲಿಲ್ಲ? ಒಳಗೆ ಏನೋ ಇದೆ. ಹೀಗಾಗಿ ಹೈಕಮಾಂಡ್ ಹೇಳಿದ ಹಾಗೇ ಕೇಳ್ತೆವಿ ಅಂದಿದ್ದಾರೆ ಎಂದು ಆಂತರಿಕ ಜಗಳದ ಕುರಿತು ಮತ್ತಷ್ಟು ಅನುಮಾನಗಳನ್ನು ವ್ಯಕ್ತಪಡಿಸಿದರು.
'ಯಾವುದೇ ಕಾರಣಕ್ಕೂ ಕೈ ಜೋಡಿಸುವುದಿಲ್ಲ:
ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದರೆ ಸರ್ಕಾರ ರಚನೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, ಯಾವುದೇ ಕಾರಣಕ್ಕೂ ನಾವು ಕೈ ಜೋಡಿಸುವುದಿಲ್ಲ. ಹೋರಾಟ ಮಾಡುತ್ತೇವೆ, ಸರಿಯಾಗಿ ಆಡಳಿತ ನಡೆಸಿ ಅಂತಾ ಹೇಳ್ತಿವಿ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಯಾರು ಮುಂದುವರೆಯುತ್ತಾರೆ ಎಂಬ ಪ್ರಶ್ನೆಗೆ, ರಾಹುಲ್ ಗಾಂಧಿಯವರಿಗೆ ಗೊತ್ತಿಲ್ಲ, ನನಗೆ ಹೇಗೆ ಗೊತ್ತಿರಬೇಕು? ಎಂದು ವ್ಯಂಗ್ಯವಾಗಿ ಉತ್ತರಿಸಿದರು.


