ನ್ಯಾಷನಲ್‌ ಹೆರಾಲ್ಡ್‌ ಪತ್ರಿಕಾ ಸಂಸ್ಥೆಯನ್ನು ಸ್ವಾಧೀನ ಮಾಡಿಕೊಂಡು ವಿವಾದಕ್ಕೆ ಸಿಲುಕಿರುವ ಯಂಗ್‌ ಇಂಡಿಯಾ ಟ್ರಸ್ಟ್‌ಗೆ ದೇಣಿಗೆ ನೀಡಿದ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಅವರ ಸೋದರರೂ ಆಗಿರುವ ಸಂಸದ ಡಿ.ಕೆ.ಸುರೇಶ್‌ ಅವರು ಶುಕ್ರವಾರ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳ ಮುಂದೆ ಸುಮಾರು ಮೂರೂವರೆ ತಾಸು ವಿಚಾರಣೆಗೆ ಒಳಗಾದರು.

ನವದೆಹಲಿ (ಅ.08): ನ್ಯಾಷನಲ್‌ ಹೆರಾಲ್ಡ್‌ ಪತ್ರಿಕಾ ಸಂಸ್ಥೆಯನ್ನು ಸ್ವಾಧೀನ ಮಾಡಿಕೊಂಡು ವಿವಾದಕ್ಕೆ ಸಿಲುಕಿರುವ ಯಂಗ್‌ ಇಂಡಿಯಾ ಟ್ರಸ್ಟ್‌ಗೆ ದೇಣಿಗೆ ನೀಡಿದ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಅವರ ಸೋದರರೂ ಆಗಿರುವ ಸಂಸದ ಡಿ.ಕೆ.ಸುರೇಶ್‌ ಅವರು ಶುಕ್ರವಾರ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳ ಮುಂದೆ ಸುಮಾರು ಮೂರೂವರೆ ತಾಸು ವಿಚಾರಣೆಗೆ ಒಳಗಾದರು.

ಮಂಡ್ಯದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪಾದಯಾತ್ರೆ ನಡೆಯುತ್ತಿರುವಾಗಲೇ ಇ.ಡಿ.ಯಿಂದ ಬಂದ ನೋಟಿಸ್‌ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ಸೋದರರು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾದರು. ಸುದೀರ್ಘ ವಿಚಾರಣೆ ಬಳಿಕ ಅಪರಾಹ್ನ 3 ಗಂಟೆಯ ನಂತರ ಕಚೇರಿಯಿಂದ ಹೊರಬಂದರು. ಮಧ್ಯಾಹ್ನದ ಊಟದ ವಿರಾಮ ಹೊರತುಪಡಿಸಿ ಒಟ್ಟು ಮೂರು ತಾಸು ಡಿ.ಕೆ.ಶಿವಕುಮಾರ್‌ ಸೋದರರನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದರು. ಈ ವೇಳೆ ಯಂಗ್‌ ಇಂಡಿಯಾ ಟ್ರಸ್ಟ್‌ಗೆ ಎಷ್ಟುಬಾರಿ ದೇಣಿಗೆ ನೀಡಿದ್ದೀರಿ ಎಂಬುದು ಸೇರಿ ವಿವಿಧ ವಿಚಾರಗಳನ್ನು ಪ್ರಶ್ನಿಸಿದ್ದಾರೆ.

National Herald Case: ಡಿಕೆ ಬ್ರದರ್ಸ್‌ಗೆ ಇಂದು ಇ.ಡಿ. ವಿಚಾರಣೆ ಬಿಸಿ

ಇ.ಡಿ, ಬಿಜೆಪಿ ವಿರುದ್ಧ ಕಿಡಿ: ವಿಚಾರಣೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ‘ರಾಜಕೀಯವನ್ನು ಮೈದಾನದಲ್ಲಿ ಮಾಡಬೇಕೇ ಹೊರತು ಕಚೇರಿಗಳಲ್ಲಿ ಅಲ್ಲ’ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ವಿಚಾರಣೆ ವೇಳೆ ಕೆಲ ಹಣಕಾಸು ಪಾವತಿಗಳ ಕುರಿತು ಮಾಹಿತಿ ಕೇಳಿದ್ದಾರೆ. ಆ ಕುರಿತು ತಿಳಿಸುವುದಾಗಿ ಹೇಳಿದ್ದೇನೆ. ಎಲ್ಲಾ ದಾಖಲೆಗಳನ್ನು ನಾನು ತೆಗೆದುಕೊಂಡು ಹೋಗಿರಲಿಲ್ಲ. ಅವರ ಬಳಿಯೂ ಕೆಲ ದಾಖಲೆಗಳು ಇತ್ತು. ಅದಕ್ಕೆ ನಾನು ಸಮ್ಮತಿಸಿದ್ದೇನೆ. ನಮ್ಮ ಸಂಸ್ಥೆಗಳು, ಕುಟುಂಬದ ಬಗ್ಗೆ ಇನ್ನೂ ಕೆಲ ಮಾಹಿತಿ ಕೇಳಿದ್ದಾರೆ. ನಾನು ಇ-ಮೇಲ್‌ ಮೂಲಕ ಕಳುಹಿಸುವುದಾಗಿ ತಿಳಿಸಿದ್ದೇನೆ. ಯಂಗ್‌ ಇಂಡಿಯಾಗೆ ದೇಣಿಗೆ ನೀಡಿದ ಬಗ್ಗೆ ಹೆಚ್ಚಾಗಿ ಪ್ರಶ್ನೆಗಳನ್ನು ಕೇಳಿದರು. ನಾನು ಎಲ್ಲಾ ಮಾಹಿತಿ ನೀಡಿದ್ದೇನೆ ಎಂದರು.

25 ಲಕ್ಷ ದೇಣಿಗೆ: ಇ.ಡಿ.ಅಧಿಕಾರಿಗಳಿಂದ ಪ್ರತ್ಯೇಕವಾಗಿ ವಿಚಾರಣೆಗೊಳಗಾದ ಸಂಸದ ಡಿ.ಕೆ.ಸುರೇಶ್‌ ಅವರು, ನಾನು ಟ್ರಸ್ಟ್‌ಗೆ 25 ಲಕ್ಷ ದೇಣಿಗೆ ನೀಡಿದ್ದೇನೆ. ನಾನು ಮತ್ತು ಸೋದರ ಪ್ರತ್ಯೇಕವಾಗಿ ದೇಣಿಗೆ ನೀಡಿದ್ದೇವೆ ಎಂದು ತಿಳಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ‘ನಾನು ವೈಯಕ್ತಿಕವಾಗಿ .25 ಲಕ್ಷ ದೇಣಿಗೆ ನೀಡಿದ್ದೇನೆ. ಏಪ್ರಿಲ್‌ 2022ರಲ್ಲಿ ಈ ದೇಣಿಗೆ ನೀಡಿದ್ದೇನೆ. ಈ ಬಗ್ಗೆ ನನ್ನ ಹಾಗೂ ಸಹೋದರ ಡಿ.ಕೆ.ಶಿವಕುಮಾರ್‌ ಅವರನ್ನು ಪ್ರತ್ಯೇಕವಾಗಿ ಇ.ಡಿ. ಅಧಿಕಾರಿಗಳು ಪ್ರಶ್ನಿಸಿದರು. ಅವರು ಕೇಳಿದ ಹಲವು ಮಾಹಿತಿಗಳನ್ನು ನೀಡಿದ್ದೇವೆ. 10 ವರ್ಷಗಳ ಅವಧಿಯ ಮಾಹಿತಿಗಳನ್ನು ಕೇಳಿದ್ದಾರೆ. 

ಸೋಲಾರ್‌ ಪಾರ್ಕ್‌ನಲ್ಲಿ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ: ಡಿ.ಕೆ.ಶಿವಕುಮಾರ್‌

ಹೆಚ್ಚುವರಿ ಮಾಹಿತಿಯನ್ನು ಇ-ಮೇಲ್‌ ಮೂಲಕ ಸಲ್ಲಿಸಲು ಸಮಯಾವಕಾಶವನ್ನೂ ನೀಡಿದ್ದಾರೆ’ ಎಂದು ಇದೇ ವೇಳೆ ಡಿ.ಕೆ.ಸುರೇಶ್‌ ತಿಳಿಸಿದರು. ಯಂಗ್‌ ಇಂಡಿಯಾ ಸಂಸ್ಥೆಗೆ ದೇಣಿಗೆ ರದ್ದತಿ ಮಾಡಿರುವ ಬಗ್ಗೆ ನಿಮಗೆ ಮಾಹಿತಿ ಇದೆಯಾ ಎಂದು ಕೇಳಿದರು. ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಒಂದೊಮ್ಮೆ ತೆರಿಗೆ ಕಟ್ಟಲು ಸೂಚಿಸಿದರೆ ಕಟ್ಟಲೂ ಸಿದ್ಧ ಎಂದು ಉತ್ತರಿಸಿದ್ದೇನೆ. ನಾವು ಕರೆದಾಗ ಮತ್ತೆ ಬರಬೇಕು ಎಂದು ಇ.ಡಿ. ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಡಿ.ಕೆ.ಸುರೇಶ್‌ ಪ್ರತಿಕ್ರಿಯಿಸಿದರು.