ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ.) ತುರ್ತು ನೋಟಿಸ್‌ ಜಾರಿ ಮಾಡಿದ್ದು, ಈಗಾಗಲೇ ನೀಡಿರುವ ಸಮನ್ಸ್‌ ಅನ್ವಯ ಶುಕ್ರವಾರವೇ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸ್ಪಷ್ಟ ಸೂಚನೆ ನೀಡಿದೆ.

ಬೆಂಗಳೂರು/ಮಂಡ್ಯ (ಅ.07): ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ.) ತುರ್ತು ನೋಟಿಸ್‌ ಜಾರಿ ಮಾಡಿದ್ದು, ಈಗಾಗಲೇ ನೀಡಿರುವ ಸಮನ್ಸ್‌ ಅನ್ವಯ ಶುಕ್ರವಾರವೇ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸ್ಪಷ್ಟ ಸೂಚನೆ ನೀಡಿದೆ. ತನ್ಮೂಲಕ ಭಾರತ ಐಕ್ಯತಾ ಯಾತ್ರೆ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ್ದ ಇಬ್ಬರ ಮನವಿಯನ್ನೂ ಜಾರಿ ನಿರ್ದೇಶನಾಲಯ ಸ್ಪಷ್ಟವಾಗಿ ತಿರಸ್ಕರಿಸಿದ್ದು, ಇಬ್ಬರೂ ಶುಕ್ರವಾರ ಬೆಳಗ್ಗೆ 10.30 ಗಂಟೆಗೆ ದೆಹಲಿಯ ಇ.ಡಿ. ಕಚೇರಿಯಲ್ಲಿ ವಿಚಾರಣೆ ಎದುರಿಸಲಿದ್ದಾರೆ. 

ಹೀಗಾಗಿ ಅಣ್ಣ- ತಮ್ಮ ಇದೇ ಮೊದಲಿಗೆ ಇ.ಡಿ. ಎದುರು ಒಟ್ಟಿಗೇ ವಿಚಾರಣೆ ಎದುರಿಸುವಂತಾಗಿದೆ. ಇ.ಡಿ. ನೋಟಿಸ್‌ ಬಗ್ಗೆ ಮಂಡ್ಯದ ಪಾದಯಾತ್ರೆ ನಡುವೆ ಪಕ್ಷದ ಹಿರಿಯ ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದ ಡಿ.ಕೆ.ಶಿವಕುಮಾರ್‌ ಅವರು, ನಾಯಕರ ಸಲಹೆ ಮೇರೆಗೆ ಶುಕ್ರವಾರವೇ ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಂಡ್ಯದ ಚೌಡಗೋನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರ ಸಲಹೆ ಮೇರೆಗೆ ಶುಕ್ರವಾರವೇ ಇ.ಡಿ. ವಿಚಾರಣೆಗೆ ಹಾಜರಾಗಲಿದ್ದೇವೆ. ಇ.ಡಿ. ಅಧಿಕಾರಿಗಳು ಈಗಾಗಲೇ ನಮ್ಮ ಮೇಲಿದ್ದ ಪ್ರಕರಣಗಳ ಜತೆಗೆ ಬೇರೆ ಪ್ರಕರಣಗಳ ವಿಚಾರವಾಗಿಯೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. 

ಸೋನಿಯಾ ಬರ್ತಾರೆ, ಒಟ್ಟಿಗೆ ನಡೆಯೋಣ ಬನ್ನಿ: ಡಿಕೆಶಿ

ಈ ಯಾತ್ರೆ ಮುಗಿದ ನಂತರ ವಿಚಾರಣೆಗೆ ಹಾಜರಾಗುವುದಾಗಿ ಕಾಲಾವಕಾಶ ಕೋರಿದ್ದೆವು. ಆದರೆ, ಇ.ಡಿ. ಅಧಿಕಾರಿಗಳು ಮತ್ತೆ ಸಮನ್ಸ್‌ ಜಾರಿ ಮಾಡಿ ಶುಕ್ರವಾರ ಬೆಳಗ್ಗೆ 10.30 ಗಂಟೆಗೆ ಕಚೇರಿಗೆ ಬಂದು ಹೇಳಿಕೆ ನೀಡುವಂತೆ ಸೂಚಿಸಿದ್ದಾರೆ. ಈ ಸಂಬಂಧ ನಾನು ಮತ್ತು ನನ್ನ ಸಹೋದರ ಡಿ.ಕೆ.ಸುರೇಶ್‌ ಅವರು ಪಕ್ಷದ ನಾಯಕರೊಂದಿಗೆ ಚರ್ಚಿಸಿದ್ದು, ಅವರ ಸಲಹೆಯಂತೆ ವಿಚಾರಣೆಗೆ ಹೋಗುತ್ತಿದ್ದೇವೆ. ನಾವು ಕಾನೂನು ರೂಪಿಸುವವರಾಗಿ ಕಾನೂನಿಗೆ ಯಾವಾಗಲೂ ಗೌರವ ಕೊಡುತ್ತೇವೆ. ಈ ಯಾತ್ರೆಯನ್ನು ಜನ ನಡೆಸುತ್ತಾರೆ ಎಂದು ಹೇಳಿದರು.

ಡಿ.ಕೆ. ಸಹೋದರರ ಮನವಿ ತಿರಸ್ಕೃತ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಸಂಬಂಧ ಸೆ.23 ರಂದು ಸಮನ್ಸ್‌ ನೀಡಿದ್ದ ಜಾರಿ ನಿರ್ದೇಶನಾಲಯವು ಅ.7ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಅ.7ರಂದು ಭಾರತ ಐಕ್ಯತಾ ಯಾತ್ರೆಯು ಆದಿಚುಂಚನಗಿರಿ ಮಠ ತಲುಪಲಿದೆ. ಹೀಗಾಗಿ ಈ ವೇಳೆಯಲ್ಲಿ ತಾವು ಅಲ್ಲಿರಬೇಕಾಗಿರುವುದು ಅನಿವಾರ್ಯವಾಗಿರುವುದರಿಂದ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುತ್ತೇನೆ. 

ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಜಾರಿ ನಿರ್ದೇಶನಾಲಯಕ್ಕೆ ಡಿ.ಕೆ. ಶಿವಕುಮಾರ್‌ ಸಹೋದರರು ಮನವಿ ಮಾಡಿದ್ದರು. ಆದರೆ, ಬುಧವಾರ ರಾತ್ರಿ 9.10 ಗಂಟೆಗೆ ಇ.ಡಿ. ಸಹಾಯಕ ನಿರ್ದೇಶಕ ಕುಲದೀಪ್‌ ಸಿಂಗ್‌ ಅವರು ಇ-ಮೇಲ್‌ ಕಳುಹಿಸಿದ್ದು, ನಿಮಗೆ ಸೆ.23ರಂದು ನೀಡಿದ್ದ ಸಮನ್ಸ್‌ ಅನ್ವಯ ಮತ್ತೊಮ್ಮೆ ನಿರ್ದೇಶನ ನೀಡಲಾಗುತ್ತಿದೆ. ಅ.7ರಂದು ಬೆಳಗ್ಗೆ 10.30 ಗಂಟೆಗೆ ನನ್ನ ಕಚೇರಿಗೆ ಖುದ್ದು ಆಗಮಿಸಿ ಹೇಳಿಕೆ ನೀಡಬೇಕು ಎಂದು ಇಬ್ಬರಿಗೂ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ಡಿ.ಕೆ. ಸಹೋದರರ ಮನವಿಯನ್ನು ತಿರಸ್ಕರಿಸಿದ್ದಾರೆ.

ಯಾತ್ರೆ ನಡುವೆ ಸಂಕಷ್ಟ: ಭಾರತ ಐಕ್ಯತಾ ಯಾತ್ರೆಯ ಸಿದ್ಧತೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಶಿವಕುಮಾರ್‌ ಹಾಗೂ ಸುರೇಶ್‌ ಅವರಿಗೆ ಇ.ಡಿ. ರೂಪದಲ್ಲಿ ಮತ್ತೊಂದು ಸಂಕಷ್ಟಎದುರಾಗಿದೆ. ಪ್ರಸ್ತುತ ರಾಹುಲ್‌ಗಾಂಧಿ ಹಮ್ಮಿಕೊಂಡಿರುವ ಭಾರತ ಐಕ್ಯತಾ ಯಾತ್ರೆಯ ಎಲ್ಲಾ ಸಿದ್ಧತೆಗಳನ್ನೂ ಶಿವಕುಮಾರ್‌ ಅವರೇ ಹತ್ತಿರ ಇದ್ದು ನೋಡಿಕೊಳ್ಳುತ್ತಿದ್ದಾರೆ. ಶುಕ್ರವಾರ ಯಾತ್ರೆ ಅಂಚೆಚಿಟ್ಟನಹಳ್ಳಿಗೆ ತಲುಪಲಿದ್ದು, ರಾಹುಲ್‌ಗಾಂಧಿ ಅವರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಲಿದ್ದಾರೆ. 

ನಾನು ಸಿದ್ದು ಒಂದಾಗಿದ್ದೇವೆ, ಬಿಜೆಪಿ ಆಟ 6 ತಿಂಗಳಷ್ಟೇ: ಡಿಕೆಶಿ

ಸ್ವತಃ ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ಕೆ. ಶಿವಕುಮಾರ್‌ ಅವರಿಗೆ ಈ ವೇಳೆ ಯಾತ್ರೆಯ ಜತೆ ಇರಬೇಕಾಗಿದ್ದು ತುಂಬಾ ಅನಿವಾರ್ಯವಿತ್ತು. ಹೀಗಾಗಿಯೇ ಬೇರೊಂದು ದಿನ ವಿಚಾರಣೆಗೆ ಹಾಜರಾಗುವುದಾಗಿ ಮನವಿ ಮಾಡಿಕೊಂಡಿದ್ದರು. ಮನವಿ ತಿರಸ್ಕರಿಸಿರುವುದರಿಂದ ಐಕ್ಯತಾ ಯಾತ್ರೆ ವೇಳೆಯಲ್ಲೇ ಕೆಪಿಸಿಸಿ ಅಧ್ಯಕ್ಷರಿಗೆ ಸಂಕಷ್ಟ ಎದುರಾದಂತಾಗಿದೆ. ಪ್ರಕರಣದಲ್ಲಿ ಈಗಾಗಲೇ ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಚಾರಣೆಗೆ ಒಳಪಡಿಸಿದೆ.