ಮಹಾರಾಷ್ಟ್ರದ ನಾಸಿಕ್‌ನಲ್ಲಿ, ತನ್ನ ಮಾಜಿ ಪ್ರೇಯಸಿಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯವಾದ ಕಾರಣಕ್ಕೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ, ಯುವಕನೊಬ್ಬ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ. ಕೊಲೆಯಾಗುವ ಮುನ್ನ ಯುವತಿ ತನ್ನ ಭಾವಿ ಪತಿಗೆ ಫೋನ್ ಮಾಡಿದ್ದು, ಆತ ಇಡೀ ವಾಗ್ವಾದವನ್ನು ಫೋನ್‌ನಲ್ಲಿ ಕೇಳಿಸಿಕೊಂಡಿದ್ದಾನೆ.
ಮಹಾರಾಷ್ಟ್ರ: ಪ್ರೀತಿಯ ಹೆಸರಿನಲ್ಲಿ ನಡೆಯುವ ಉನ್ಮಾದಕ್ಕೆ ಮತ್ತೊಂದು ಬಲಿಯಾಗಿದೆ. ತನ್ನ ಮಾಜಿ ಪ್ರೇಯಸಿ ಬೇರೊಬ್ಬನ ಜೊತೆ ಮದುವೆಯಾಗುತ್ತಿದ್ದಾಳೆ ಎಂಬ ದ್ವೇಷಕ್ಕೆ ಯುವಕನೊಬ್ಬ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿ, ತಾನೂ ಆತ್ಮ*ತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ.
ಏನಿದು ಘಟನೆ?
ಮೃತ ಯುವತಿಯನ್ನು ಅಮರಾವತಿ ಜಿಲ್ಲೆಯ ವೈಷ್ಣವಿ ಎಂದು ಗುರುತಿಸಲಾಗಿದೆ. ಆಕೆಯ ಮಾಜಿ ಪ್ರಿಯತಮ ಸಾಹಿಲ್ ಲವ್ಹಾರೆ ಈ ಕೃತ್ಯ ಎಸಗಿದ ಆರೋಪಿ. ವೈಷ್ಣವಿಗೆ ಬೇರೊಬ್ಬ ಯುವಕನ ಜೊತೆ ಇತ್ತೀಚೆಗೆ ನಿಶ್ಚಿತಾರ್ಥವಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಸಾಹಿಲ್, ಶುಕ್ರವಾರ ರಾತ್ರಿ ನಾಸಿಕ್‌ನ ಇಂದಿರಾನಗರದ ವನಸಂಪದ ಗಾರ್ಡನ್ ಬಳಿ ವೈಷ್ಣವಿಯನ್ನು ಭೇಟಿಯಾಗಿದ್ದನು.
ಅತ್ಯಂತ ಆಘಾತಕಾರಿ ವಿಷಯವೆಂದರೆ ವೈಷ್ಣವಿ ಕೊಲೆಯಾಗುವ ಮುನ್ನ ತನ್ನ ಭಾವಿ ಪತಿಗೆ ಫೋನ್ ಮಾಡಿದ್ದಳು. ಸಾಹಿಲ್ ಇಲ್ಲಿದ್ದಾನೆ, ಬೇಗ ಬಾ ಎಂದು ಆತಂಕದಿಂದ ತಿಳಿಸಿದ್ದಳು. ವಿಷಯ ತಿಳಿದು ಆಕೆಯ ಭಾವಿ ಪತಿ ಕೆಲಸ ಬಿಟ್ಟು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಘೋರ ಕೃತ್ಯ ನಡೆದುಹೋಗಿತ್ತು. ಸುಮಾರು 22 ನಿಮಿಷಗಳ ಕಾಲ ಫೋನ್ ಕಾಲ್ ಚಾಲ್ತಿಯಲ್ಲೇ ಇತ್ತು. ಸಾಹಿಲ್ ಮತ್ತು ವೈಷ್ಣವಿ ನಡುವೆ ನಡೆಯುತ್ತಿದ್ದ ಭೀಕರ ವಾಗ್ವಾದವನ್ನು ಭಾವಿ ಪತಿ ಫೋನ್‌ನಲ್ಲಿ ಕೇಳಿಸಿಕೊಳ್ಳುತ್ತಲೇ ಸ್ಥಳಕ್ಕೆ ಧಾವಿಸುತ್ತಿದ್ದರು. ಆದರೆ, ಅಷ್ಟರಲ್ಲೇ ಸಾಹಿಲ್ ವೈಷ್ಣವಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದ.
ವೈಶು ಕಥೆ ಮುಗಿಯಿತು..
ವೈಷ್ಣವಿಯನ್ನು ಕೊಂದ ನಂತರ, ಸಾಹಿಲ್ ಆಕೆಯ ಭಾವಿ ಪತಿಯ ಬಳಿಯೇ ಫೋನ್‌ನಲ್ಲಿ ಮಾತನಾಡಿದ್ದಾನೆ. ವೈಶು ಈಸ್ ಫಿನಿಶ್ಡ್ (ವೈಶು ಕಥೆ ಮುಗಿಯಿತು) ಎಂದು ತಣ್ಣಗೆ ಹೇಳಿ ಫೋನ್ ಕಟ್ ಮಾಡಿದ್ದಾನೆ. ಸ್ಥಳಕ್ಕೆ ಭಾವಿ ಪತಿ ತಲುಪುವಷ್ಟರಲ್ಲಿ ವೈಷ್ಣವಿ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಳು. ವೈಷ್ಣವಿಯನ್ನು ಕೊಂದ ಕೆಲವು ಗಂಟೆಗಳ ನಂತರ, ಘಟನಾ ಸ್ಥಳದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿ ಸಾಹಿಲ್ ಮೃತದೇಹ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿದ ನಂತರ ಸಾಹಿಲ್ ಕೂಡ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಷ್ಣವಿಗೆ ಮದುವೆ ನಿಶ್ಚಯವಾಗಿರುವ ವಿಚಾರ ಸಾಹಿಲ್‌ಗೆ ತಿಳಿದಿದ್ದು ಹೇಗೆ? ಈ ಬಗ್ಗೆ ಆತನಿಗೆ ಮಾಹಿತಿ ನೀಡಿದವರು ಯಾರು? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ, ಈ ಅತಿರೇಕದ ಪ್ರೀತಿ (Obsessive Love) ಎರಡು ಜೀವಗಳನ್ನು ಬಲಿ ಪಡೆದಿದ್ದು, ನಾಸಿಕ್ ಜನತೆಯನ್ನು ಬೆಚ್ಚಿಬೀಳಿಸಿದೆ.


