₹100 ಕೋಟಿ ಮೌಲ್ಯದ ಆಸ್ತಿ 2 ಕೋಟಿಗೆ ಸೇಲ್, ಪಳನಿ ದೇಗುಲದಲ್ಲೂ ಅಕ್ರಮದ ಆರೋಪ
ತಮಿಳುನಾಡಿನ ಪಳನಿ ಶ್ರೀ ದಂಡಾಯುಧ ಪಾಣಿ ಸ್ವಾಮಿ ದೇಗುಲಕ್ಕೆ ಸೇರಿದ ₹100 ಕೋಟಿ ಮೌಲ್ಯದ ಜಮೀನನ್ನು ಕೇವಲ ₹2 ಕೋಟಿಗೆ ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬೃಹತ್ ಹಗರಣದ ಸಂಬಂಧ ಸಬ್ ರಿಜಿಸ್ಟ್ರಾರ್ ಸೇರಿದಂತೆ ಹಲವರ ಮೇಲೆ ಸಿಬಿ-ಸಿಐಡಿ ದಾಳಿ ನಡೆಸಿದೆ.

ಅಯೋಧ್ಯೆ ಸೇರಿ ಉತ್ತರ ಭಾರತದ ದೇಗುಲಗಳಲ್ಲಿ ಭಾರೀ ಪ್ರಮಾಣದ ಹುಂಡಿ ಕಳವು ಪ್ರಕರಣ ಬಯಲಾದ ಬೆನ್ನಲ್ಲೇ, ತಮಿಳುನಾಡಿನ ದಿಂಡಿಗಲ್ ಜಿಲ್ಲೆ ಪಳನಿಯ ಖ್ಯಾತ ಶ್ರೀ ದಂಡಾಯುಧ ಪಾಣಿ ಸ್ವಾಮಿ ದೇಗುಲದ ಜಮೀನನ್ನೇ ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
₹100 ಕೋಟಿ ಮೌಲ್ಯದ ಆಸ್ತಿಯನ್ನು ₹2 ಕೋಟಿ ಮೊತ್ತಕ್ಕೆ ರಿಜಿಸ್ಟ್ರೇಷನ್ ಮಾಡಿಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಬ್ ರಿಜಿಸ್ಟ್ರಾರ್ ಸೇರಿ ಹಲವು ಅಧಿಕಾರಿಗಳು, ಬ್ರೋಕರ್‌ಗಳ ಮನೆ ಮೇಲೆ ಶನಿವಾರ ಸಿಬಿ-ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಅಕ್ರಮ ಕುರಿತು ತೀವ್ರ ರಾಜಕೀಯ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪ್ರಕರಣದ ತನಿಖೆಯನ್ನು ಸರ್ಕಾರ ಇತ್ತೀಚೆಗೆ ಸಿಬಿ-ಸಿಐಡಿಗೆ ವರ್ಗಾಯಿಸಿ ಡಿಜಿಪಿ ಆದೇಶ ಹೊರಡಿಸಿತ್ತು.
ಡಿಎಂಕೆ ಅವಧಿಯಲ್ಲಿ ಇಂಥ ಹಲವು ಅಕ್ರಮಗಳು ಸಂಭವಿಸಿವೆ. ಈ ಕುರಿತು ನಾವು ಈಗಾಗಲೇ ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದ್ದೇವೆ. ಕಳೆದ ಐದು ವರ್ಷಗಳಲ್ಲಿ ದೇವಸ್ಥಾನಗಳು, ಕೆರೆಗಳು ಹಾಗೂ ನೀರಿನ ಸಮೀಪದ ಜಮೀನುಗಳ ಅಕ್ರಮ ನೋಂದಣಿಗೆ ಸಂಬಂಧಿಸಿ ತನಿಖೆ ನಡೆಸುವ ಅಗತ್ಯವಿದೆ ಎಂದು ಕಾನೂನು ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್ ಹೇಳಿದರು.
ಜತೆಗೆ ಯಾರೆಲ್ಲ ಅಕ್ರಮವಾಗಿ ಭೂಮಿ ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೋ ಅವರೆಲ್ಲರನ್ನೂ ಉತ್ತರದಾಯಿಯನ್ನಾಗಿ ಮಾಡಲಾಗುವುದು ಎಂದೂ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

