ನೀಟ್ ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ರಚಿಸಲಾದ ನಂದನ್ ನಿಲೇಕಣಿ ನೇತೃತ್ವದ ಸಮಿತಿಯ ಅವಧಿಯನ್ನು ಕೇಂದ್ರ ಸರ್ಕಾರ ಜನವರಿವರೆಗೆ ವಿಸ್ತರಿಸಿದೆ. ಅಂತಿಮ ವರದಿಗೂ ಮುನ್ನ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲು ಪಿಎಂಒ ಸೂಚಿಸಿದೆ. ಪರೀಕ್ಷೆಯನ್ನು ಹೈಬ್ರಿಡ್ ಮತ್ತು ಕಂಪ್ಯೂಟರ್ ಮಾದರಿಗೆ ಬದಲಾಯಿಸುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ.

ನವದೆಹಲಿ (ನ.02): ನೀಟ್‌ ಪರೀಕ್ಷೆಗಳಲ್ಲಿನ (NEET Exam) ಅಕ್ರಮ ಹಾಗೂ ಅದರ ವಿರುದ್ಧ ದೇಶದಲ್ಲಿ ಭುಗಿಲೆದ್ದ ಭಾರೀ ಆಕ್ರೋಶದ ಬೆನ್ನಲ್ಲೇ ಪರೀಕ್ಷಾ ವ್ಯವಸ್ಥೆಯಲ್ಲಿ ತರಬಹುದಾದ ಸುಧಾರಣೆಗಳನ್ನು ಸೂಚಿಸಲು ಇನ್ಫೋಸಿಸ್‌ನ ಸಹಸಂಸ್ಥಾಪಕ ನಂದನ್‌ ನಿಲೇಕಣಿ ಅವರ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯ ಅವಧಿಯನ್ನು ಕೇಂದ್ರ ಸರ್ಕಾರ ಮುಂದಿನ ವರ್ಷದ ಜನವರಿ ವರೆಗೆ ವಿಸ್ತರಿಸಿದೆ. ಈ ಮೊದಲು ಅಕ್ಟೋಬರ್‌ ಅಂತ್ಯದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಅತ್ತ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ರಾಜ್ಯಗಳ ಸಹಕಾರವೂ ಅಗತ್ಯವಾದ ಕಾರಣ, ತನ್ನ ಅಂತಿಮ ಶಿಫಾರಸುಗಳನ್ನು ಸಲ್ಲಿಸುವ ಮೊದಲು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸುವಂತೆ ನಿಲೇಕಣಿ ನೇತೃತ್ವದ ಸಮಿತಿಗೆ ಪ್ರಧಾನಮಂತ್ರಿಗಳ ಕಚೇರಿ ಸೂಚಿಸಿದೆ. ವಿವಿಧ ಕಡೆಗಳಲ್ಲಿ ಪರೀಕ್ಷಾ ಮೂಲಸೌಕರ್ಯ, ಸಂಪರ್ಕ ವ್ಯವಸ್ಥೆ ಮತ್ತು ಆಡಳಿತಾತ್ಮಕ ಸಿದ್ಧತೆಗಳಲ್ಲಿನ ಅಸಮಾನತೆಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ನಿರ್ದಿಷ್ಟ ರಾಜ್ಯಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ತಿಳಿಯುವುದು ಇದರ ಉದ್ದೇಶವಾಗಿದೆ.

2027ರಲ್ಲಿ ಹೈಬ್ರಿಡ್‌ ಮಾದರಿ ಪರೀಕ್ಷೆ

ನೀಟ್‌ ಯುಜಿ ವಿವಾದದ ಹಿನ್ನೆಲೆ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್‌ ಅವರ ತಲೆದಂಡವಾದ ಬೆನ್ನಲ್ಲೇ, ಜುಲೈನಲ್ಲಿ ನಿಲೇಕಣಿ ಅವರ ನೇತೃತ್ವದಲ್ಲಿ 6 ಸದಸ್ಯರ ಕಾರ್ಯಪಡೆಯೊಂದನ್ನು ರಚಿಸಲಾಗಿತ್ತು. ಈ ಕಾರ್ಯಪಡೆಯು ಸಾರ್ವಜನಿಕರಿಂದ ಸಲಹೆಗಳನ್ನು ಕೋರುವುದರ ಜೊತೆಗೆ, ಈಗಾಗಲೇ 18 ಆಂತರಿಕ ಸಭೆಗಳನ್ನು ಮತ್ತು ಸುಮಾರು 40 ಸಮಾಲೋಚನೆಗಳನ್ನು ನಡೆಸಿದೆ. ಈ ವೇಳೆ, ಪರೀಕ್ಷೆಯನ್ನು 2027ರಲ್ಲಿ ಹೈಬ್ರಿಡ್‌ ಮಾದರಿಯಲ್ಲಿ ಹಾಗೂ 2028ರಿಂದ ನೀಟ್‌ ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್‌ನಲ್ಲಿ ನಡೆಸುವಂತೆ ತಜ್ಞರು ಮತ್ತು ಪಾಲುದಾರರು ಸಲಹೆ ನೀಡಿದ್ದಾರೆ.