- ಬಿಜೆಪಿ ಶಾಸಕಾಂಗ ಸಭೆ ನಿರ್ಧಾರ- ಸತತ 2ನೇ ಬಾರಿ ಮುಖ್ಯಮಂತ್ರಿ ಹುದ್ದೆ- ಮಣಿಪುರದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರ ತಂದ ಯಶಸ್ಸು 

ಇಂಫಾಲ್‌(ಮಾ.21): ಎನ್‌. ಬೀರೇನ್‌ ಸಿಂಗ್‌ 2ನೇ ಬಾರಿ ಮಣಿಪುರದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಭಾನುವಾರ ಘೋಷಿಸಿದೆ. ಮಣಿಪುರದ ಬಿಜೆಪಿಯ ಕೇಂದ್ರೀಯ ವೀಕ್ಷಕರಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಕಿರಣ್‌ ರಿಜಿಜು ಈ ಘೋಷಣೆ ಮಾಡಿದ್ದಾರೆ.

ಮಣಿಪುರದ ಚುನಾವಣಾ ವೇಳೆಯಲ್ಲಿ ಬಿಜೆಪಿ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಿರಲಿಲ್ಲ. ಹೀಗಾಗಿ ಬೀರೇನ್‌ ಸಿಂಗ್‌ಗಿಂತಲೂ ಮೊದಲಿನಿಂದ ಬಿಜೆಪಿಯಲ್ಲಿರುವ ಬಿಸ್ವಜೀತ್‌ ಸಿಂಗ್‌, ಆರ್‌ಎಸ್‌ಎಸ್‌ ಬೆಂಬಲಿತ ನಾಯಕ ಯುಮ್ನಾಮ್‌ ಖೇಮಚಂದ ಸಿಂಗ್‌ ಕೂಡಾ ಬೀರೇನ್‌ ಸಿಂಗ್‌ ಜೊತೆಗೆ ಮುಖ್ಯಮಂತ್ರಿ ಸಂಭಾವ್ಯ ಪಟ್ಟಿಯಲ್ಲಿದರು. ಈ ಹಿನ್ನೆಲೆಯಲ್ಲಿ ಮೂವರು ನಾಯಕರು ಶನಿವಾರ ದೆಹಲಿಗೆ ತೆರಳಿದ್ದರು. ಆದರೆ ಭಾನುವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದು, ಸರ್ವಾನುಮತದಿಂದ ಬೀರೇನ್‌ ಸಿಂಗ್‌ಗೆ ಮತ್ತೊಮ್ಮೆ ಮಣೆ ಹಾಕಿದೆ.

Election Result 5 ರಾಜ್ಯಗಳಲ್ಲಿ ಸರ್ಕಾರ ರಚನೆ ಕಸರತ್ತು ಶುರು

ಬಿರೇನ್‌ ಸಿಂಗ್‌ (61) ಈ ಹಿಂದೆ ಫುಟ್‌ಬಾಲ್‌ ಆಟಗಾರ, ಬಿಎಸ್‌ಎಫ್‌ ಯೋಧ ಹಾಗೂ ಪರ್ತಕರ್ತರಾಗಿ ಸೇವೆ ಸಲ್ಲಿಸಿದ್ದರು. 2017ರಲ್ಲಿ ಇವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದರು.

ಬಿಜೆಪಿಗೆ ಮತ್ತೆ ಅಧಿಕಾರದ ‘ಮಣಿ’
ಈಶಾನ್ಯ ರಾಜ್ಯ ಮಣಿಪುರದಲ್ಲಿ ಆಡಳಿತಾರೂಢ ಬಿಜೆಪಿ ಸರಳ ಬಹುಮತ ಪಡೆದಿದೆ. ಮ್ಯಾಜಿಕ್‌ ಸಂಖ್ಯೆಯಾದ 31ರ ಗಡಿಯನ್ನು ಪಕ್ಷ ದಾಟಿದ್ದು, ಬೀರೇನ್‌ ಸಿಂಗ್‌ ಮತ್ತೆ ಮುಖ್ಯಮಂತ್ರಿ ಆಗುವುದು ಖಚಿತವಾಗಿದೆ. ಗಮನಾರ್ಹವೆಂದರೆ ಜೆಡಿಯು ಮೊದಲ ಬಾರಿ ರಾಜ್ಯ ಪ್ರವೇಶಿಸಿ 6 ಸ್ಥಾನಗಳಲ್ಲಿ ಜಯಗಳಿಸಿದೆ. ಇದರ ಹೊರತಾಗಿ ಎನ್‌ಪಿಪಿ 7 ಸ್ಥಾನ ಗೆದ್ದಿದೆ. ಆದರೆ ಕಳೆದ ಸಲ 28 ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ ಪಕ್ಷ ಈ ಸಲ ಕೇವಲ 5 ಸ್ಥಾನ ಗಳಿಸಿದ್ದು, ಹೀನಾಯ ಪರಾಜಯ ಅನುಭವಿಸಿದೆ.

ಮೊದಲ ಬಾರಿ ಬಂದ ರೈಲಿಗೆ ನೃತ್ಯದ ಮೂಲಕ ಸ್ವಾಗತ

2017ರಲ್ಲಿ ಬಿಜೆಪಿ 21 ಸ್ಥಾನ ಗೆದ್ದಿದ್ದರೂ, 28 ಸ್ಥಾನ ಗಳಿಸಿದ್ದ ಕಾಂಗ್ರೆಸ್ಸನ್ನು ಹಿಂದಿಕ್ಕಿ ಸಣ್ಣಪುಟ್ಟಪಕ್ಷಗಳ ಸಹಾಯ ಪಡೆದು ಅಧಿಕಾರಕ್ಕೆ ಬಂದಿತ್ತು. ಹೀಗಾಗಿ ಇದರ ಸೇಡು ತೀರಿಸಿಕೊಳ್ಳಲು ಈ ಸಲ ಕಾಂಗ್ರೆಸ್‌ ಯತ್ನ ನಡೆಸಿದ್ದರೂ ಭಾರೀ ಹಿನ್ನಡೆ ಕಂಡಿದೆ. ಒಂದು ಗಮನಾರ್ಹ ವಿಚಾರವೆಂದರೆ ಕಳೆದ ಸಲದಂತೆ ರಾಜ್ಯ ಅತಂತ್ರ ವಿಧಾನಸಭೆ ಕಂಡಿಲ್ಲ. ಬದಲಾಗಿ ಬಿಜೆಪಿ ಏಕಾಂಗಿಯಾಗಿ ಅಧಿಕಾರಕ್ಕೆ ಬರುವ ಮೂಲಕ ಸುಸ್ಥಿರ ಸರ್ಕಾರದ ವಿಶ್ವಾಸ ಮೂಡಿದೆ. ತಮ್ಮ ಜಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರ ನಾಯಕತ್ವವೇ ಕಾರಣ ಎಂದು ಮುಖ್ಯಮಂತ್ರಿ ಬೀರೇನ್‌ ಸಿಂಗ್‌ ಹೇಳಿದ್ದಾರೆ.

 ಮೋದಿ ಜತೆ ಗೋವಾ, ಮಣಿಪುರದ ಸಿಎಂಗಳ ಭೇಟಿ
ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್‌ ಹಾಗೂ ಮಣಿಪುರದ ಮುಖ್ಯಮಂತ್ರಿ ಎನ್‌. ಬೀರೇನ್‌ ಸಿಂಗ್‌ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದರು. ಈ ವೇಳೆ ಇದು ಈ ಇಬ್ಬರು ನಾಯಕರಿಗೆ ಮತ್ತೆ ಮುಖ್ಯಮಂತ್ರಿ ಹುದ್ದೆ ಒಲಿದು ಬರಲಿದೆ ಎಂಬುದರ ಸುಳಿವು ಸಿಕ್ಕಿತ್ತು. ಇಬ್ಬರನ್ನೂ ಭೇಟಿಯಾದ ನಂತರ ಪ್ರಧಾನಿ ಮೋದಿ ಟ್ವೀಟ್‌ ಮಾಡಿ, ‘ಬೀರೇನ್‌ ಸಿಂಗ್‌ ಜನರ ಆಶೋತ್ತರಗಳನ್ನು ಪೂರೈಸಲು ಬಹಳಷ್ಟುಶ್ರಮಿಸಿದ್ದರ ಫಲವಾಗಿ ಮಣಿಪುರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅದೇ ಗೋವಾದಲ್ಲೂ ಮತ್ತೊಮ್ಮೆ ಬಿಜೆಪಿ ಜಯ ಸಾಧಿಸಿದ್ದು, ಗೋವಾದ ಅಭಿವೃದ್ಧಿಗಾಗಿ ನಾವು ಮುಂಬರುವ ದಿನಗಳಲ್ಲಿ ಮತ್ತಷ್ಟುಕಾರ್ಯ ಕೈಗೊಳ್ಳಲಿದ್ದೇವೆ’ ಎಂದಿದ್ದಾರೆ. ಈ ಟ್ವೀಟ್‌ಗಳು ಸಾವಂತ್‌, ಬೀರೇನ್‌ ಮರುನೇಮಕದ ಸುಳಿವು ನೀಡಿದ್ದರು.

ಬಿಜೆಪಿ ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಶೀಘ್ರ ಅಧಿಕಾರ ಸ್ವೀಕರಿಸಲಿದ್ದಾರೆ. ಅದೇ ರೀತಿ ಗೋವಾ ಹಾಗೂ ಮಣಿಪುರದಲ್ಲಿಯೂ ಈ ಮೊದಲು ಸಿಎಂ ಆಗಿದ್ದ ಸಾವಂತ್‌ ಹಾಗೂ ಸಿಂಗ್‌ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.