ರಾಜಸ್ಥಾನದ ಜನಪ್ರಿಯ ಪ್ರವಚನಗಾರ್ತಿ ಸಾಧ್ವಿ ಪ್ರೇಮ್ ಬೈಸಾ ಅವರು ಜೋಧ್‌ಪುರದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ತಂದೆಯೊಂದಿಗಿನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ತಪ್ಪಾಗಿ ವೈರಲ್ ಆದ ನಂತರ ತೀವ್ರ ಸೈಬರ್ ಬುಲ್ಲಿಯಿಂಗ್‌ಗೆ ಒಳಗಾಗಿದ್ದ ಅವರ ಸಾವು ಅನುಮಾನಗಳನ್ನು ಹುಟ್ಟುಹಾಕಿದೆ.
ರಾಜಸ್ಥಾನದ ಜನಪ್ರಿಯ ಧಾರ್ಮಿಕ ಪ್ರಚಾರಕಿ ಮತ್ತು ಪ್ರವಚನಗಾರ್ತಿ ಸಾಧ್ವಿ ಪ್ರೇಮ್ ಬೈಸಾ ಅವರು ಜೋಧ್‌ಪುರದಲ್ಲಿ ಅತ್ಯಂತ ನಿಗೂಢವಾಗಿ, ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಭಕ್ತಿ ಮತ್ತು ಭಜನೆಗಳ ಮೂಲಕ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ಸಾಧ್ವಿ ಅವರ ಸಾವು ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದು ಸ್ವಾಭಾವಿಕ ಸಾವೋ, ಆತ್ಮ೧ಹತ್ಯೆಯೋ ಅಥವಾ ಇದರ ಹಿಂದೆ ಯಾವುದಾದರೂ ಕಾಣದ ಕೈಗಳ ಪಿತೂರಿ ಇದೆಯೇ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ.
ಯಾರು ಈ ಸಾಧ್ವಿ ಪ್ರೇಮ್ ಬೈಸಾ?
ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಪರೇವು ಗ್ರಾಮದವರಾದ ಸಾಧ್ವಿ ಪ್ರೇಮ್ ಬೈಸಾ, ಗ್ರಾಮೀಣ ಭಾಗದಲ್ಲಿ ಕಥೆ ಹೇಳುವಿಕೆ ಮತ್ತು ಭಜನೆ ಗಾಯನಕ್ಕೆ ಭಾರಿ ಹೆಸರು ಮಾಡಿದ್ದರು. ತನ್ನ ತಂದೆ ಮಹಾಂತ್ ವೀರನಾಥ್ ಅವರನ್ನೇ ಗುರುಗಳನ್ನಾಗಿ ಸ್ವೀಕರಿಸಿದ್ದ ಇವರು, ಸಮಾಜ ಸೇವೆ ಮತ್ತು ಧರ್ಮ ಪ್ರಚಾರಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಕುಟೀರ್ ಆಶ್ರಮದಲ್ಲಿ ವಾಸಿಸುತ್ತಿದ್ದ ಇವರು ಸಂತ ಸಮುದಾಯದ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದರು.
ವಿಡಿಯೋ ವೈರಲ್: ಮುಳುವಾದ ಸೋಷಿಯಲ್ ಮೀಡಿಯಾ!
ಸಾಧ್ವಿ ಅವರ ಜೀವನದಲ್ಲಿ ಒಂದು ವಿಡಿಯೋ ಬಿರುಗಾಳಿಯನ್ನೇ ಎಬ್ಬಿಸಿತ್ತು. ತಂದೆಯನ್ನು ಭಕ್ತಿಯಿಂದ ತಬ್ಬಿಕೊಂಡಿದ್ದ ವಿಡಿಯೋವೊಂದನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಬಿಂಬಿಸಿ ವೈರಲ್ ಮಾಡಿದ್ದರು. 'ಅದು ಮಗಳು ಮತ್ತು ತಂದೆಯ ನಡುವಿನ ಪವಿತ್ರ ಪ್ರೀತಿ' ಎಂದು ಅವರು ಎಷ್ಟೇ ಕಿರುಚಿಕೊಂಡರೂ, ಸಮಾಜದ ಒಂದು ವರ್ಗ ಅವರನ್ನು ಅತೀವವಾಗಿ ನಿಂದಿಸಲು ಶುರುಮಾಡಿತ್ತು. ಈ ಘಟನೆ ಅವರ ಮನಸ್ಸಿನ ಮೇಲೆ ತೀವ್ರವಾಗಿ ಘಾಸಿ ಮಾಡಿತ್ತು.
ಅಗ್ನಿ ಪರೀಕ್ಷೆಗೆ ಸಿದ್ಧವಾಗಿದ್ದ ಸಾಧ್ವಿ!
ಸೋಷಿಯಲ್ ಮೀಡಿಯಾ ಟ್ರೋಲ್‌ಗಳಿಂದ ರೋಸಿಹೋಗಿದ್ದ ಸಾಧ್ವಿ ಪ್ರೇಮ್ ಬೈಸಾ, ಕಾನೂನು ಸಮರಕ್ಕೂ ಇಳಿದಿದ್ದರು. 'ನನ್ನ ಮುಗ್ಧತೆಯನ್ನು ಸಾಬೀತುಪಡಿಸಲು ನಾನು ಸಾರ್ವಜನಿಕವಾಗಿ ಅಗ್ನಿ ಪರೀಕ್ಷೆ ಎದುರಿಸಲು ಸಿದ್ಧ' ಎಂದು ಅವರು ಸಾರಿದ್ದರು. ಆದರೆ, ನ್ಯಾಯ ಸಿಗುವ ಮೊದಲೇ ಅವರು ಸಾವಿನ ಹಾದಿ ಹಿಡಿದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸೈಬರ್ ಬುಲ್ಲಿಯಿಂಗ್ ಒಬ್ಬ ಧಾರ್ಮಿಕ ನಾಯಕಿಯ ಪ್ರಾಣವನ್ನೇ ಬಲಿಪಡೆದಿದೆ ಎಂಬ ಮಾತುಗಳು ಈಗ ಕೇಳಿಬರುತ್ತಿವೆ.


