ಧಾರವಾಡದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ನಂಬಲಾಗಿದ್ದ NWKSRTC ಚಾಲಕ ಬಾಬಾಜಾನ್ ಚಿನ್ನೂರು ಅವರ ಸಾವಿನಲ್ಲಿ ಹೊಸ ತಿರುವು ಸಿಕ್ಕಿದೆ. ಸೆಯ ವಿರುದ್ಧವೇ ದೂರು ನೀಡಿದ್ದು, ಸತ್ಯಾಸತ್ಯತೆ ತಿಳಿಯಲು ಹೂತಿಟ್ಟ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಧಾರವಾಡ (ಜ.21): ತಿಂಗಳುಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಭಾವಿಸಿ ಮಣ್ಣು ಮಾಡಿದ್ದ ವ್ಯಕ್ತಿಯೊಬ್ಬನ ಸಾವು ಈಗ ಹೊಸ ತಿರುವು ಪಡೆದುಕೊಂಡಿದೆ. ಪೋಷಕರ ದೂರಿನ ಹಿನ್ನೆಲೆಯಲ್ಲಿ ಈಗ ಹೂತಿರುವ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಬಾಬಾಜಾನ್ ನಿಗೂಢ ಸಾವು
ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಗ್ರಾಮದ ಬಾಬಾಜಾನ್ ಚಿನ್ನೂರು (51) ಎಂಬುವವರು ಕಳೆದ ನವೆಂಬರ್ 11 ರಂದು ಸಾವನ್ನಪ್ಪಿದ್ದರು. ವೃತ್ತಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKSRTC) ಚಾಲಕರಾಗಿದ್ದ ಬಾಬಾಜಾನ್, ಧಾರವಾಡದಲ್ಲಿ ಪತ್ನಿ ವಹಿದಾಬಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ನವೆಂಬರ್‌ನಲ್ಲಿ ಬಾಬಾಜಾನ್ ದಿಢೀರ್ ಮೃತಪಟ್ಟಾಗ, ಅದು ಹೃದಯಾಘಾತ ಎಂದು ನಂಬಲಾಗಿತ್ತು.
ತರಾತುರಿಯಲ್ಲಿ ನಡೆದ ಅಂತ್ಯಸಂಸ್ಕಾರ
ಬಾಬಾಜಾನ್ ಸಾವನ್ನಪ್ಪಿದ ನಂತರ, ಕುಟುಂಬಸ್ಥರು ಮೃತದೇಹವನ್ನು ಅವರ ಸ್ವಗ್ರಾಮವಾದ ಭದ್ರಾಪುರಕ್ಕೆ ತಂದಿದ್ದರು. ಯಾವುದೇ ವೈದ್ಯಕೀಯ ತಪಾಸಣೆ ಅಥವಾ ಮರಣೋತ್ತರ ಪರೀಕ್ಷೆ ನಡೆಸದೆ, ಅತ್ಯಂತ ತರಾತುರಿಯಲ್ಲಿ ಗ್ರಾಮದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಆಗ ಮಗನ ಸಾವಿನ ನೋವಿನಲ್ಲಿದ್ದ ಪೋಷಕರಿಗೆ ಈ ಆತುರದ ಬಗ್ಗೆ ಸಂಶಯ ಮೂಡಿರಲಿಲ್ಲ.
ಸೊಸೆಯ ಮೇಲೆ ಪೋಷಕರ ಗಂಭೀರ ಆರೋಪ
ದಿನ ಕಳೆದಂತೆ ಮಗನ ಸಾವಿನ ಬಗ್ಗೆ ಪೋಷಕರಿಗೆ ಅನುಮಾನಗಳು ಕಾಡತೊಡಗಿವೆ. ಸೊಸೆ ವಹಿದಾಬಿ ಯಾವುದೋ ದುರುದ್ದೇಶದಿಂದಲೇ ತನ್ನ ಮಗನನ್ನು ಹತ್ಯೆ ಮಾಡಿದ್ದಾಳೆ ಎಂದು ಪೋಷಕರು ಈಗ ಗಂಭೀರ ಆರೋಪ ಮಾಡಿದ್ದಾರೆ. ಮಗನ ಸಾವಿನ ಸಮಯದಲ್ಲಿ ಅನುಮಾನಾಸ್ಪದ ನಡವಳಿಕೆಗಳು ಕಂಡುಬಂದಿದ್ದವು ಎಂದು ಆರೋಪಿಸಿರುವ ಅವರು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ದೂರು ನೀಡಿದ್ದಾರೆ.
ತಹಶೀಲ್ದಾರ್ ನೇತೃತ್ವದಲ್ಲಿ ಶವ ಪರೀಕ್ಷೆ
ಪೋಷಕರ ದೂರಿನ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ಮತ್ತು ಜಿಲ್ಲಾಡಳಿತ, ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಮುಂದಾಗಿದೆ. ಇಂದು ತಹಶೀಲ್ದಾರ್ ಸಮ್ಮುಖದಲ್ಲಿ ಭದ್ರಾಪುರದ ಸ್ಮಶಾನದಲ್ಲಿ ಹೂತು ಹಾಕಲಾಗಿದ್ದ ಬಾಬಾಜಾನ್ ಅವರ ಶವವನ್ನು ಹೊರತೆಗೆಯಲಾಗುತ್ತಿದೆ. ಸ್ಥಳದಲ್ಲೇ ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಿ, ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಣ್ಣಿಗೇರಿ ಪೊಲೀಸರಿಂದ ತನಿಖೆ ಚುರುಕು
ಈ ಘಟನೆಯು ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಬಾಬಾಜಾನ್ ಅವರದ್ದು ನೈಸರ್ಗಿಕ ಸಾವೋ ಅಥವಾ ಹತ್ಯೆಯೋ ಎಂಬುದು ಸ್ಪಷ್ಟವಾಗಲಿದೆ. ಸದ್ಯಕ್ಕೆ ಪೊಲೀಸರು ಸೊಸೆಯ ಹೇಳಿಕೆ ಹಾಗೂ ಪೋಷಕರ ದೂರಿನ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.

