Asianet Suvarna News Asianet Suvarna News

ನನ್ನ ತಾಯಿಯೇ ನನ್ನ ಜೀವನದ ದೊಡ್ಡ ಶಿಕ್ಷಕಿ: ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾಯಿ ಹೀರಾಬೆನ್‌ ಎಂದರೆ ಪಂಚಪ್ರಾಣ. ವಿನಮ್ರ ಕುಟುಂಬದ ಹಿನ್ನೆಲೆಯಿಂದ ಬಂದಿರುವ ತಮ್ಮನ್ನು ಭಾರತದ ಪ್ರಧಾನಿ ಮಾಡುವ ನಿಟ್ಟಿನಲ್ಲಿ ತಾಯಿ ಹೀರಾಬೆನ್‌ ನೀಡಿದ ಕೊಡುಗೆಯನ್ನು ಆಗಾಗ್ಗೆ ಎತ್ತಿ ತೋರಿಸಿದ್ದರು.

My mother is the greatest teacher of my life says pm narendra modi gvd
Author
First Published Dec 31, 2022, 2:20 AM IST

ನವದೆಹಲಿ (ಡಿ.31): ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾಯಿ ಹೀರಾಬೆನ್‌ ಎಂದರೆ ಪಂಚಪ್ರಾಣ. ವಿನಮ್ರ ಕುಟುಂಬದ ಹಿನ್ನೆಲೆಯಿಂದ ಬಂದಿರುವ ತಮ್ಮನ್ನು ಭಾರತದ ಪ್ರಧಾನಿ ಮಾಡುವ ನಿಟ್ಟಿನಲ್ಲಿ ತಾಯಿ ಹೀರಾಬೆನ್‌ ನೀಡಿದ ಕೊಡುಗೆಯನ್ನು ಆಗಾಗ್ಗೆ ಎತ್ತಿ ತೋರಿಸಿದ್ದರು.

ಶುಕ್ರವಾರ ನಿಧನರಾದ ಹೀರಾಬೆನ್‌ ಅವರು ಈ ವರ್ಷ ಜೂನ್‌ 18ರಂದು 99 ವರ್ಷ ಪೂರೈಸಿ ತಮ್ಮ ಜೀವನದ 100ನೇ ವರ್ಷಕ್ಕೆ ಕಾಲಿಟ್ಟಿದ್ದರು. ಆಗ ಮೋದಿ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮ ತಾಯಿಯ ಬಗ್ಗೆ ಅತ್ಯಂತ ವಿವರವಾದ ಅನಿಸಿಕೆಗಳನ್ನು ಬ್ಲಾಗ್‌ನಲ್ಲಿ ಬರೆದಿದ್ದರು. ತಾಯಿಯ ತ್ಯಾಗ ಮತ್ತು ಅವರ ಜೀವನದ ವಿವಿಧ ಅಂಶಗಳನ್ನು ಎತ್ತಿ ತೋರಿಸಿದ್ದರು. ತಾಯಿಯ ಜೀವನ ಶೈಲಿಯೇ ತಮ್ಮ ವ್ಯಕ್ತಿತ್ವ ಹಾಗೂ ಆತ್ಮವಿಶ್ವಾಸಕ್ಕೆ ಕಾರಣವಾಗಿದೆ ಎಂದಿದ್ದರು.

ಪ್ರಧಾನಿ ಮೋದಿ ತಾಯಿ ಹೀರಾಬೆನ್ ನಿಧನ: ಮೋದಿ ನೀಡಿದ ಸಂದೇಶ ಏನು?

ತಾಯಿ ಕಲಿಸಿದ ಪಾಠಗಳು: ಔಪಚಾರಿಕವಾಗಿ ಶಿಕ್ಷಣ ಪಡೆಯದೆ ಜೀವನದಲ್ಲಿ ಸಾಕಷ್ಟುಕಲಿಯಲು ಸಾಧ್ಯ ಎಂದು ನನ್ನ ತಾಯಿ ತೋರಿಸಿದ್ದರು. ಅದು ಅಮ್ಮ ಕಲಿಸಿದ ಜೀವನ ಪಾಠವಾಗಿತ್ತು. ಎಲ್ಲಾ ತಾಯಂದಿರಂತೆಯೇ ನನ್ನ ತಾಯಿ ಎಷ್ಟುಅಸಾಧಾರಣಳೋ ಅಷ್ಟೇ ಸರಳ ಎಂದು ಅವರು ತಮ್ಮ ಬ್ಲಾಗ್‌ನಲ್ಲಿ ಹೇಳಿದ್ದರು. ತಮ್ಮ ಸರ್ಕಾರದ ಹಲವಾರು ಕಲ್ಯಾಣ ಯೋಜನೆಗಳ ಪೈಕಿ ಗರೀಬ್‌ ಕಲ್ಯಾಣ… (ಬಡವರ ಕಲ್ಯಾಣ) ಮೇಲೆ ಅತೀವ ಗಮನ ಹರಿಸಲು ನನ್ನ ತಾಯಿಯೇ ಪ್ರೇರಣೆ ಎಂದಿದ್ದರು.

‘ನಾನು 2001ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವವನಿದ್ದೆ. ಆಗ ನನ್ನ ತಾಯಿಯು, ‘ನೀನು ಸರ್ಕಾರದಲ್ಲಿ ಏಕೆ ಕೆಲಸ ಮಾಡುತ್ತಿದ್ದೀಯಾ ಎಂದು ಎಂದು ನನಗೆ ತಿಳಿದಿಲ್ಲ ಆದರೆ ನೀನು ಎಂದಿಗೂ ಲಂಚ ತೆಗೆದುಕೊಳ್ಳಬಾರದು ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದರು. ಹೀಗಾಗಿ ನನ್ನ ತಾಯಿ ನನ್ನ ಜೀವನದಲ್ಲಿ ದೊಡ್ಡ ಶಿಕ್ಷಕಿ ಇದ್ದ ಹಾಗೆ. ಇತರ ಶಾಲಾ ಶಿಕ್ಷಕಿಯರ ಜತೆ ಅಮ್ಮನನ್ನೂ ಗೌರವಿಸಲು ಬಯಸಿದ್ದೆ’ ಎಂದು ಹೇಳಿದ್ದರು.

ಆದರೆ, ನನ್ನ ತಾಯಿಗೆ ಪ್ರಧಾನಿಯ ಅಮ್ಮ ಎಂಬ ಅಹಂ ಇರಲಿಲ್ಲ. ತಾನು ಸಾಮಾನ್ಯ ವ್ಯಕ್ತಿ ಎನ್ನುತ್ತಿದ್ದರು. ‘ನಾನು ನಿನಗೆ ಜನ್ಮ ನೀಡಿರಬಹುದು ಆದರೆ ನೀನು ಸರ್ವಶಕ್ತರಿಂದ (ದೇವರಿಂದ) ಪಾಠ ಕಲಿತಿರುವೆ ಮತ್ತು ಬೆಳೆದಿರುವ ಎಂದು ಹೇಳುತ್ತಿದ್ದರು. ಆಕೆಯ ಆಲೋಚನಾ ಕ್ರಮ ಮತ್ತು ದೂರದೃಷ್ಟಿಯ ಚಿಂತನೆಯು ನನಗೆ ಯಾವಾಗಲೂ ಆಶ್ಚರ್ಯವನ್ನುಂಟು ಮಾಡಿತ್ತು ಎಂದು ಮೋದಿ ಬರೆದಿದ್ದರು.

ತನ್ನ ತಾಯಿಯನ್ನು ಸ್ಥೈರ್ಯದ ಸಂಕೇತ ಎಂದು ಬಣ್ಣಿಸಿದ್ದ ಅವರು, ಚಿಕ್ಕ ವಯಸ್ಸಿನಲ್ಲಿಯೇ ಹೀರಾಬೆನ್‌ ಕಷ್ಟಪಟ್ಟು ಮುಂದೆ ಬಂದಿದ್ದರು. ನಮ್ಮ ಕುಟುಂಬವು ವಡ್‌ನಗರದ ಒಂದು ಸಣ್ಣ ಮಣ್ಣಿನ ಮನೆಯಲ್ಲಿ ವಾಸಿಸುತ್ತಿತ್ತು. ಮಣ್ಣಿನ ಹೆಂಚುಗಳ ಛಾವಣಿಗಳನ್ನು ಹೊಂದಿತ್ತು. ಮಳೆಗಾಲದಲ್ಲಿ ಮನೆಯ ಮೇಲ್ಛಾವಣಿ ಸೋರುತ್ತಿದ್ದು, ಮನೆಗೆ ನೀರು ನುಗ್ಗುತ್ತಿತ್ತು. ಮಳೆನೀರನ್ನು ಸಂಗ್ರಹಿಸಲು ತಾಯಿ ಬಕೆಟ್‌ ಮತ್ತು ಪಾತ್ರೆಗಳನ್ನು ಸೋರಿಕೆಯ ಕೆಳಗೆ ಇಡುತ್ತಿದ್ದರು. ಈ ಪ್ರತಿಕೂಲ ಪರಿಸ್ಥಿತಿಯಲ್ಲೂ ತಾಯಿ ಸ್ಥೈರ್ಯದ ಪ್ರತೀಕವಾಗಿದ್ದಳು’ ಎಂದು ಸ್ಮರಿಸಿದ್ದರು.

‘ತಮ್ಮ ತಾಯಿ ಮನೆಯ ಎಲ್ಲ ಕೆಲಸಗಳನ್ನು ಸ್ವತಃ ಮಾಡುವುದಲ್ಲದೆ ಮನೆಯ ಅಲ್ಪ ಆದಾಯಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದರು. ಆಕೆ ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದಳು ಮತ್ತು ಮನೆಯ ಖರ್ಚುಗಳನ್ನು ಪೂರೈಸಲು ಸಹಾಯ ಚರಕ ನೂಲುತ್ತಿದ್ದರು. ಸ್ವಚ್ಛತೆ ಬಗ್ಗೆ ಅಪಾರ ಗಮನ ಹರಿಸುತ್ತಿದ್ದರು. ವಡ್‌ನಗರದಲ್ಲಿರುವ ತಮ್ಮ ಮನೆಯ ಪಕ್ಕದ ಚರಂಡಿಯನ್ನು ಸ್ವಚ್ಛಗೊಳಿಸಲು ಯಾರಾದರೂ ಬಂದರೆ, ಅವರನ್ನು ನಮ್ಮ ಮನೆಗೆ ಕರೆದು ಚಹಾ ಕುಡಿಯದೇ ಹೋಗಲು ಬಿಡುತ್ತಿರಲಿಲ್ಲ. ನಮ್ಮ ತಾಯಿ ಇತರರ ಸಂತೋಷದಲ್ಲಿ ಸಂತೋಷವನ್ನು ಕಂಡುಕೊಂಡಿದ್ದಾರೆ ಮತ್ತು ಅತ್ಯಂತ ವಿಶಾಲ ಹೃದಯಿ ಆಗಿದ್ದರು’ ಎಂದು ಕೊಂಡಾಡಿದ್ದರು.

ಹೀರಾಬೆನ್ ಮರಳು ಶಿಲ್ಪ ಚಿತ್ರಿಸಿ ಹಿರಿಯ ಚೇತನಕ್ಕೆ ಕಲಾವಿದನ ಭಾವಪೂರ್ಣ ವಿದಾಯ

‘ನನ್ನ ತಾಯಿಯ ಜೀವನ ಕಥೆಯಲ್ಲಿ, ನಾನು ಭಾರತದ ಮಾತೃಶಕ್ತಿಯ ತಪಸ್ಸು, ತ್ಯಾಗ ಮತ್ತು ಕೊಡುಗೆಯನ್ನು ನೋಡುತ್ತೇನೆ. ನಾನು ತಾಯಿ ಮತ್ತು ಅವರಂತಹ ಕೋಟಿಗಟ್ಟಲೆ ಮಹಿಳೆಯರನ್ನು ನೋಡಿದಾಗ, ಭಾರತೀಯ ಮಹಿಳೆಯರಿಗೆ ಸಾಧಿಸಲಾಗದ್ದು ಯಾವುದೂ ಇಲ್ಲ ಎಂದು ಕಂಡುಕೊಂಡಿದ್ದೇನೆ’ ಎಂದು ಮೋದಿ ಬರೆದಿದ್ದರು.

Follow Us:
Download App:
  • android
  • ios