ಭಾರತದ ಕನ್ವರ್ ಯಾತ್ರೆ ವಿವಾದದ ಬಗ್ಗೆ ಅಮೆರಿಕಾ ವಕ್ತಾರರ ಬಳಿ ಪ್ರಶ್ನಿಸಿದ ಪಾಕ್ ವರದಿಗಾರ
ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿ ಇರುವ ಹೊಟೇಲ್‌ಗಳು ಹಾಗೂ ಆಹಾರ ಮಳಿಗೆ ಮಾಲೀಕರು ಹೊಟೇಲ್‌ಗಳ ಬೋರ್ಡ್‌ಗಳ ಮೇಲೆ ಕಡ್ಡಾಯವಾಗಿ ಮಾಲೀಕರ ಹೆಸರು ಹಾಕಬೇಕು ಎಂಬ ಆದೇಶಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವರದಿಗಾರನೋರ್ವ ಅಮೆರಿಕಾ ರಾಜ್ಯ ವಿಭಾಗದ ವಕ್ತಾರರನ್ನು ಪ್ರಶ್ನಿಸಿದ್ದಾರೆ.
ನವದೆಹಲಿ: ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿ ಇರುವ ಹೊಟೇಲ್‌ಗಳು ಹಾಗೂ ಆಹಾರ ಮಳಿಗೆ ಮಾಲೀಕರು ಹೊಟೇಲ್‌ಗಳ ಬೋರ್ಡ್‌ಗಳ ಮೇಳೆ ಕಡ್ಡಾಯವಾಗಿ ಮಾಲೀಕರ ಹೆಸರು ಹಾಕಬೇಕು ಎಂಬ ಉತ್ತರ ಪ್ರದೇಶ ಪೊಲೀಸರ ಆದೇಶಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವರದಿಗಾರನೋರ್ವ ಅಮೆರಿಕಾ ರಾಜ್ಯ ವಿಭಾಗದ ವಕ್ತಾರರನ್ನು (US State Department Spokesperson) ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಮೆರಿಕಾ ವಕ್ತಾರ, ಮ್ಯಾಥೀವ್ ಮಿಲ್ಲರ್, ಭಾರತದ ಸುಪ್ರೀಂಕೋರ್ಟ್ ಈ ಆದೇಶಕ್ಕೆ ತಡೆ ನೀಡಿರುವುದನ್ನು ವರದಿಗಾರನ ಗಮನಕ್ಕೆ ತಂದಿದ್ದಾರೆ. ಕನ್ವರ್ ಯಾತ್ರೆಯ ನೇಮ್‌ಪ್ಲೇಟ್ ವಿವಿದಕ್ಕೆ ಸಂಬಂಧಿಸಿದಂತೆ ಮುಜಾಫರ್‌ನಗರ ಪೊಲೀಸರ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಹೀಗಾಗಿ ಈ ಆದೇಶ ಜಾರಿಗೆ ಬರುವುದಿಲ್ಲ, ಎಂದು ಅವರು ಹೇಳಿದ್ದಾರೆ.
ಕನ್ವರ್ ಯಾತ್ರೆಗೆ ಸಂಬಂಧಿಸಿದ ಕಡ್ಡಾಯ ನಾಮಫಲಕಕ್ಕೆ ಸಂಬಂಧಿಸಿದ ವರದಿಗಳನ್ನು ಗಮನಿಸಿದ್ದೇನೆ, ಅದರ ಜೊತೆಗೆ ಸುಪ್ರೀಂಕೋರ್ಟ್ ಜುಲೈ 22 ರಂದು ಈ ಆದೇಶಕ್ಕೆ ಮಧ್ಯಂತರ ತಡೆ ನೀಡಿದ್ದನ್ನು ಕೂಡ ಗಮನಿಸಿದ್ದೇನೆ. ಹೀಗಾಗಿ ಆ ಆದೇಶ ಪರಿಣಾಮ ಬೀರುವುದಿಲ್ಲ ಎಂದು ಮಿಲ್ಲರ್ ಹೇಳಿದ್ದಾರೆ. ಅಲ್ಲದೇ ಎಲ್ಲಾ ಸಮುದಾಯದ ಜನರನ್ನು ಒಂದೇ ರೀತಿ ನೋಡುವುದರ ಅಗತ್ಯದ ಬಗ್ಗೆ ತಮ್ಮ ಭಾರತೀಯ ಪಾಲುದಾರರ ಜೊತೆ ಚರ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆಹಾರ ಮಳಿಗೆಯ ಬೋರ್ಡ್‌ಗಳಲ್ಲಿ ಮಾಲೀಕರ ಹೆಸರು ಕಡ್ಡಾಯಕ್ಕೆ ಸುಪ್ರೀಂ ಮಧ್ಯಂತರ ತಡೆ
ಸಾಮಾನ್ಯವಾಗಿ ಹೇಳುವುದಾದರೆ, ಪ್ರಪಂಚದ ಎಲ್ಲೆಡೆ ಎಲ್ಲರಿಗೂ ಅವರವರ ಧರ್ಮ ಮತ್ತು ನಂಬಿಕೆಯನ್ನ ಉಳಿಸಿಕೊಳ್ಳುವ ಸ್ವಾತಂತ್ರ್ಯದ ಹಕ್ಕು, ಗೌರವವನ್ನು ಉತ್ತೇಜಿಸಲು ಮತ್ತು ರಕ್ಷಿಸಲು ನಾವು ಯಾವಾಗಲೂ ಬದ್ಧರಾಗಿದ್ದೇವೆ. ಮತ್ತು ನಾವು ನಮ್ಮ ಭಾರತೀಯ ಪಾಲುದಾರರ ಜೊತೆ ಎಲ್ಲಾ ಧರ್ಮಗಳ ಸದಸ್ಯರಿಗೆ ಸಮಾನವಾದ ಉಪಚಾರದ ಪ್ರಾಮುಖ್ಯತೆಯ ಕುರಿತು ಹೇಳಿದ್ದೇವೆ ಎಂದು ಮ್ಯಾಥೀವ್ ಮಿಲ್ಲರ್ ಪ್ರತಿಕ್ರಿಯಿಸಿದ್ದಾರೆ. ಕನ್ವರ್ ಯಾತ್ರೆ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಜಾಫರ್‌ನಗರ ಪೊಲೀಸರ ಸುಪ್ರೀಂಕೋರ್ಟ್ ಕಳೆದ ಸೋಮವಾರ ಮಧ್ಯಂತರ ತಡೆ ನೀಡಿತ್ತು.
ಈ ಆದೇಶದ ಪರಿಣಾಮವೂ ವಿವಿಧ ರಾಜ್ಯಗಳಿಗೆ ಹಬ್ಬಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶ ಸರ್ಕಾರವೂ ಕೂಡ ಸೂಚನೆ ನೀಡಲಿ ಅಲ್ಲಿಯವರೆಗೆ ಈ ಆದೇಶವನ್ನು ಕಾರ್ಯರೂಪಕ್ಕೆ ತರುವಂತಿಲ್ಲ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳಲ್ಲಿ ಸಿಗುವಂಥ ಆಹಾರಗಳ ವಿವರಗಳನ್ನು ಪ್ರದರ್ಶನ ಮಾಡಿದರೆ ಸಾಕು, ಮಾಲೀಕರ ಹೆಸರನ್ನು ಪೋಸ್ಟರ್‌ನಲ್ಲಿ ಹಾಕುವ ಅಗತ್ಯವವಿಲ್ಲ ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು.
ಕನ್ವರ್ ಯಾತ್ರೆ ನೇಮ್‌ಪ್ಲೇಟ್ ಆರ್ಡರ್, ಮೂರು ರಾಜ್ಯಗಳಿಗೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್!
ಕಳೆದ ವಾರ, ಮುಜಫರ್‌ನಗರ ಪೊಲೀಸರು ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಎಲ್ಲಾ ತಿನಿಸುಗಳಿಗೆ ತಮ್ಮ ಮಾಲೀಕರ ಹೆಸರನ್ನು ಪ್ರದರ್ಶಿಸಲು ಸೂಚನೆ ನೀಡಿದ್ದರು. ನಂತರ, ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ರಾಜ್ಯಾದ್ಯಂತ ಆದೇಶವನ್ನು ವಿಸ್ತರಿಸಿತು. ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರಗಳೂ ಇದನ್ನೇ ಅನುಸರಿಸಿದವು. ಇದಕ್ಕೆ ಮುಸ್ಲಿಂ ಸಮುದಾಯದ ವ್ಯಾಪಾರಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಉತ್ತರ ಭಾರತದಲ್ಲಿ ಶ್ರಾವಣ ಮಾಸದಲ್ಲಿ ಭಕ್ತರು ಪವಿತ್ರ ಕನ್ವರ್ ಯಾತ್ರೆ ತೆರಳುತ್ತಾರೆ. ಈ ಯಾತ್ರೆ ಸಾಗುವ 250 ಕಿಲೋ ಮೀಟರ್ ಉದ್ದಕ್ಕೂ ಬೀದಿ ಬದಿ ತಿಂಡಿ ವ್ಯಾಪಾರಿಗಳು ತಮ್ಮ ತಳ್ಳುವ ಗಾಡಿ/ ಅಂಗಡಿಯೆದುರು ಮಾಲೀಕರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶದ ಮುಜಪ್ಟರ್‌ನಗರ ಪೊಲೀಸರು ಆದೇಶ ಹೊರಡಿಸಿದ್ದರು. 'ಯಾತ್ರೆಯ ವೇಳೆ ಕಾವಾಡಿಗಳು ರಸ್ತೆ ಬದಿಯಲ್ಲಿ ತಿಂಡಿ-ತಿನಿಸುಗಳನ್ನು ಖರೀದಿಸುವ ಕಾರಣ ಉಂಟಾಗಬಹುದಾದ ಗೊಂದಲಗಳಿಗೆ ಆಸ್ಪದ ಕೊಡದೆ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಆದೇಶ ಹೊರಡಿಸಲಾಗಿದೆ ಎಂದು ಮುಜಪ್ಟರ್‌ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್ ಹೇಳಿದ್ದರು.
ಅದೇನೆ ಇರಲಿ ಪಾಕಿಸ್ತಾನದಲ್ಲೇ ಸಾವಿರಾರು ಸಮಸ್ಯೆಗಳಿವೆ. ಪಾಕಿಸ್ತಾನದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೇರಿದೆ. ಹೀಗಿರುವಾಗ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಭಾರತದೊಳಗಿನ ವಿವಾದದ ಬಗ್ಗೆ ಪ್ರಶ್ನೆ ಕೇಳಿರುವ ಪಾಕಿಸ್ತಾನದ ವರದಿಗಾರನ ಉದ್ಧಟತನಕ್ಕೆ ಏನೇನಬೇಕು?