ಪುಣೆಯಲ್ಲಿ ಮಳೆಯಿಂದಾಗಿ ಅಡಚಣೆಗೊಳಗಾದ ಹಿಂದೂ ಮದುವೆಯೊಂದಕ್ಕೆ ಮುಸ್ಲಿಂ ಕುಟುಂಬ ತಮ್ಮ ಮದುವೆ ಮಂಟಪವನ್ನು ಬಿಟ್ಟುಕೊಟ್ಟು ಮಾನವೀಯತೆ ಮೆರೆದಿದೆ. ಎರಡೂ ಕುಟುಂಬಗಳು ಒಟ್ಟಾಗಿ ಸಂಭ್ರಮಿಸಿದ್ದು, ಧರ್ಮಕ್ಕಿಂತ ಮಿಗಿಲಾದ ಮನುಷ್ಯತ್ವದ ಸಂದೇಶ ಸಾರಿದೆ.
ಮದುವೆ ಎಂದರೆ ಕೇವಲ ಎರಡು ಜೀವಗಳು ಒಂದಾಗುವುದಲ್ಲ ಎರಡು ಕುಟುಂಬಗಳು, ಎರಡು ಹೃದಯಗಳು ಮತ್ತು ಕೆಲವೊಮ್ಮೆ ಎರಡು ಭಿನ್ನ ಪರಂಪರೆಗಳೂ ಒಂದಾಗುವ ಕ್ಷಣ. ಪುಣೆಯಲ್ಲೊಂದು ಅಪರೂಪದ ಮದುವೆ ನಡೆದಿದ್ದು ಮಾನವೀಯತೆಗೆ ಸಾಕ್ಷಿಯಾಗಿದೆ. ಈ ಮದುವೆ ಮನುಷ್ಯತ್ವದ ಮೆರುಗು, ಸಹಾನುಭೂತಿ, ಭಾವನೆ ಮತ್ತು ಸಹಬಾಳ್ವೆಯ ಶ್ರೇಷ್ಠತೆಯನ್ನೇ ತೋರಿಸಿದೆ.
ಮಳೆಯಿಂದ ಸ್ಥಗಿತಗೊಂಡ ಹಿಂದೂ ಮದುವೆ
ಪುಣೆಯ ಅಲಂಕಾರನ್ ಲಾನ್ಸ್ ಎಂಬ ಬಯಲು ಮೈದಾನದಲ್ಲಿ ಮಂಗಳವಾರ ಸಂಜೆ 6.56ಕ್ಕೆ ನಡೆಯಬೇಕಿದ್ದ ಸಂಕ್ರತಿ ಕವಡೆ ಮತ್ತು ನರೇಂದ್ರ ಗಲಾಂಡೆ ಅವರ ವಿವಾಹ ಸಂಭ್ರಮಕ್ಕೆ ಎಲ್ಲ ಸಿದ್ಧತೆಗಳು ನಡೆದಿತ್ತು. ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲು ವೇದಿಕೆ ಸಜ್ಜಾಗಿತ್ತು, ಮಂತ್ರಗಳು ಘೋಷಗಳಷ್ಟೆ ಬಾಕಿ ಇತ್ತು. ಮದುವೆಗೆ ಬಂದ ಅತಿಥಿಗಳು ಕೂಡ ಮದುವೆ ಮನೆಯಲ್ಲಿ ಸಂತಸದಿಂದ ಇದ್ದರು. ಅಷ್ಟರಲ್ಲಿ, ಸಹಜವಾಗಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಭಾರೀ ಬಂತು. ಮಳೆಯಿಂದ ಮಂಟಪದಲ್ಲಿ ಗೊಂದಲ ಉಂಟಾಯಿತು. ಹೀಗಾಗಿ ಮದುವೆ ಸಂಪ್ರದಾಯಗಳಿಗೆ ಮಳೆ ಅಡ್ಡಿಯಾಯ್ತು. ಸಂಪ್ರದಾಯವೂ ನಿಂತಿತು, ಸಂಭ್ರಮವೂ ನಿಂತಿತು.
ಒಂದೇ ಮಂಟಪದಲ್ಲಿ ನಡೆದ ಹಿಂದೂ ಮುಸ್ಲಿಂ ಸಮಾರಂಭ
ಅದಾಗಲೇ ಪಕ್ಕದ ದೊಡ್ಡ ಹಾಲ್‌ನಲ್ಲಿ ಮುಸ್ಲಿಂ ಕುಟುಂಬವೊಂದರ ‘ವಲೀಮಾ’ ನಡೆಯುತ್ತಿತ್ತು. ಅವರು ಮೊಹ್ಸಿನ್ ಮತ್ತು ಮಾಹೀನ್ ಎಂಬ ದಂಪತಿಯ ವಿವಾಹೋತ್ಸವದ ಒಂದು ಅಂಗವಾಗಿ ಬೃಹತ್ ಬೋಜನ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಈ ಕುಟುಂಬದ ಪ್ರಮುಖರಾದ ನಿವೃತ್ತ ಪೊಲೀಸ್ ಅಧಿಕಾರಿ ಫಾರೂಕ್ ಕಾಜಿ, ಮಳೆಯಿಂದ ತೊಂದರೆಗೊಳಗಾದ ಹಿಂದೂ ಕುಟುಂಬದ ಮದುವೆಗೆ ತೊಂದರೆಯಾಗದಂತೆ ನೋಡಿಕೊಂಡು ಉದಾರತೆ ಮೆರೆದರು.
ಮಂಟಪ ಹಂಚಿಕೊಂಡ ಕುಟುಂಬ
ಸಂಕ್ರತಿ ಕವಡೆ ಕುಟುಂಬದವರು ಮಳೆ ಕಾರಣಕ್ಕೆ ಕಂಗಾಲಾಗಿ ಹೋಗಿದ್ದರು. ನೆರೆಯ ಹಾಲ್‌ಗೆ ತೆರಳಿ ಕಾಜಿ ಅವರ ಸಹಾಯವನ್ನು ಕೇಳಿದರು.“ಮಂಗಳಸೂತ್ರ ಧಾರಣೆ ನಡೆಯಬೇಕಿದೆ. ನಾವು ಬೇರೆ ಏನನ್ನೂ ಕೇಳುವುದಿಲ್ಲ. ಕೆಲವೇ ನಿಮಿಷವೇ ಸಾಕು” ಎಂದು ಮನವಿ ಮಾಡಿದರು. ತಕ್ಷಣ ಕಾಜಿ ಅವರು ತಮ್ಮ ಕುಟುಂಬದ ಸದಸ್ಯರಿಗೆ “ಈ ಕ್ಷಣಕ್ಕೆ ಇವರೆಲ್ಲ ನಮ್ಮ ಅತಿಥಿಗಳು. ಮನುಷ್ಯತ್ವಕ್ಕೆ ಮಿತಿಯಿಲ್ಲ” ಎಂದರು. ತಕ್ಷಣವೇ ಮೊಹ್ಸಿನ್ ಅವರ 'ವಲೀಮಾ' ಕಾರ್ಯಕ್ರಮವನ್ನು ನಿಲ್ಲಿಸಿ, ವೇದಿಕೆಯನ್ನು ಹಿಂದೂ ಮದುವೆಗಾಗಿ ಬಿಟ್ಟುಕೊಟ್ಟರು.
ಪಕ್ಕದ ಹಾಲ್‌ನಲ್ಲಿ ನಡೆದ ಸಪ್ತಪದಿ!
ಹೀಗಾಗಿ, ಮಳೆಯಿಂದ ನಿಂತ ಮದುವೆ ಮನುಷ್ಯತ್ವದಿಂದ ಮುಂದುವರೆಯಿತು . ಮುಸ್ಲಿಂ ಮದುವೆ ನಡೆಯುತ್ತಿದ್ದ ವೇದಿಕೆಯಲ್ಲೇ, ಹಿಂದೂ ಸಂಪ್ರದಾಯದಂತೆ ಮಂತ್ರೋಚ್ಛಾರಣೆಯೊಂದಿಗೆ ವಧು-ವರ ಸಪ್ತಪದಿ ತುಳಿದರು. ಸಂಕೃತಿ ಮತ್ತು ನರೇಂದ್ರ ಪರಸ್ಪರ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಇದು ಕೇವಲ ಒಂದು ಮದುವೆಯ ಸಂಧರ್ಭವಲ್ಲ, ಇದು ಮಾನವೀಯತೆ ವಿಜಯ.
ಮದುವೆಗೂ ಮೀರಿದ ಬಂಧನ, ಒಂದೇ ಕುಟುಂಬದಂತೆ ಆಚರಣೆ
ಮದುವೆಯ ನಂತರ ಮೊಹ್ಸಿನ್ ಹಾಗೂ ಮಾಹೀನ್ ಅವರ ಮದುವೆಯ ಬಾಕಿ ಸಂಪ್ರದಾಯಗಳನ್ನು ಪುನಾರಂಭಿಸಲಾಯ್ತು. ಇದಾದ ಬಳಿಕ ಎರಡೂ ಧರ್ಮದ ಕುಟುಂಬಗಳು ಕೂಡ ಎಲ್ಲರೂ ಒಟ್ಟಾಗಿ ಊಟಕ್ಕೆ ಕುಳಿತರು. ಯಾರೂ ಅತಿಥಿಯೂ ಅಲ್ಲ, ಯಾರೂ ಬೇರೆ ಧರ್ಮದವರೂ ಅಲ್ಲ, ಎಲ್ಲರೂ ಒಂದೇ ಮನಸ್ಸಿನವರು, ಒಂದೇ ಮನುಷ್ಯರು. ಇಂತಹ ಆತ್ಮೀಯತೆಯ ಸಂಭ್ರಮವಿಲ್ಲದ ಮದುವೆ ಎಲ್ಲಿ ಇರುತ್ತದೆ?
ಮನುಷ್ಯತೆಯ ಸಂಪ್ರದಾಯವೇ ಶ್ರೇಷ್ಠ!
ಧರ್ಮ, ಸಂಪ್ರದಾಯ, ಆಚರಣೆಗಳು ಎಲ್ಲವೂ ಮನುಷ್ಯ ರಚಿಸಿಕೊಂಡಿರುವುದು. ಆದರೆ ಸಹಾನುಭೂತಿ, ಸೌಹಾರ್ದತೆ, ಆತ್ಮೀಯತೆ ಇವುವು ನಿಸರ್ಗದಿಂದ ಒದಗಿದ ನಿಜವಾದ ಮೌಲ್ಯಗಳು. ಪುಣೆಯ ಈ ಮದುವೆ ಸನ್ನಿವೇಶ ಯಾವುದೇ ಧರ್ಮದ ಅಧೀನದಲ್ಲಿರಲಿಲ್ಲ. ಅದು ಮನುಷ್ಯತ್ವದ ಸಂಪ್ರದಾಯದ ಆಶ್ರಯದಲ್ಲಿತ್ತು. ಧರ್ಮಕ್ಕಿಂತ ಮಾನವೀಯತೆ ಮುಖ್ಯ ಎಂಬುದನ್ನು ಇಂತಹ ಘಟನೆಗಳು ನಮಗೆ ಆಗಾಗ ನೆನಪಿಸಿಕೊಡುತ್ತವೆ.
