Murder in Moving Train :ಚಲಿಸುತ್ತಿದ್ದ ರೈಲಿನಲ್ಲಿ ಯೋಧ ಜಿಗರ್ ಚೌಧರಿ ಅವರನ್ನು ಕೋಚ್ ಅಟೆಂಡೆಂಟ್ ಜಬೈರ್ ಮೆಮನ್ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನಿಖೆಗೆ ಆದೇಶಿಸಿದೆ.
ರಾಜಸ್ಥಾನದಲ್ಲಿ ಚಲಿಸುವ ರೈಲಲ್ಲಿ ಯೋಧನ ಕೊಲೆ:
ರೈಲಿನಲ್ಲಿ ಬೆಡ್‌ಶೀಟ್ ನೀಡುವಂತೆ ಮನವಿ ಮಾಡಿದ ಯೋಧನನ್ನು ರೈಲ್ವೆಯ ಕೋಚ್ ಅಟೆಂಡರ್ ಓರ್ವ ಹೊಡೆದು ಸಾಯಿಸಿದಂತಹ ಆಘಾತಕಾರಿ ಘಟನೆ ನಡೆದಿದೆ. ಜಮ್ಮು ತಾವಿ ಸಬರ್‌ಮತಿ ಎಕ್ಸ್‌ಪ್ರೆಸ್ ರೈಲ್ಲಿನಲ್ಲಿ ಈ ಅವಘಡ ಸಂಭವಿಸಿದ್ದು, ಘಟನೆ ನಡೆದ ವೇಳೆ ರೈಲು ರಾಜಸ್ಥಾನದಲ್ಲಿ ಚಲಿಸುತ್ತಿತ್ತು. 19224 ಸಂಖ್ಯೆಯ ಈ ರೈಲಿಗೆ ಯೋಧ ಜಿಗರ್ ಚೌಧರಿ ಎಂಬುವವರು ಪಂಜಾಬ್‌ನ ಫಿರೋಜ್‌ಪುರ ರೈಲು ನಿಲ್ದಾಣದಲ್ಲಿ ಹತ್ತಿಕೊಂಡಿದ್ದರು. ಬೆಡ್‌ಶೀಟ್ ನೀಡುವಂತೆ ಕೇಳಿದಾಗ ಗಲಾಟೆ ನಡೆದಿದ್ದು, ವಾಗ್ವಾದ ವಿಕೋಪಕ್ಕೆ ತಿರುಗಿ ರೈಲ್ವೆ ಕೋಚ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದ ಜುಬೇರ್ ಮೆಮನ್ ಎಂಬಾತ ಯೋಧನ ಮೇಲೆ ಚೂರಿಯಿಂದ ಹಲ್ಲೆ ಮಾಡಿ ಕೊಂದಿದ್ದಾನೆ.
ಬೆಡ್‌ಶೀಟ್ ಕಂಬಳಿ ಕೇಳಿದ್ದಕ್ಕೆ ಚೂರಿಯಿಂದ ಇರಿದ ಕೋಚ್ ಅಟೆಂಡರ್
ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಒತ್ತಾಯಿಸಿದೆ. ಆರೋಪಿ ರೈಲ್ವೆ ಸಿಬ್ಬಂದಿ ಜುಬೇರ್ ಮೆಮನ್ ವಿರುದ್ಧ ತ್ವರಿತ ಕ್ರಮ ಕೈಗೊಂಡು ಯೋಧನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮಾನವ ಹಕ್ಕುಗಳ ಆಯೋಗ ಒತ್ತಾಯಿಸಿದೆ. ಘಟನೆಯ ಬಗ್ಗೆ ರೈಲ್ವೆಯೂ ನೀಡಿದ ಮಾಹಿತಿ ಪ್ರಕಾರ ಕೋಚ್ ಅಟೆಂಡೆಂಟ್ ಆಗಿದ್ದ ಜುಬೇರ್ ಹಾಗೂ ಯೋಧ ಜಿಗರ್ ಚೌಧರಿ ಮಧ್ಯೆ ಬೆಡ್‌ಶೀಟ್ ವಿಚಾರಕ್ಕೆ ವಾಗ್ವಾದ ಶುರುವಾಗಿ ಕೊಲೆ ನಡೆದಿದೆ.
ಕೆಲದಿನಗಳ ರಜೆ ಪಡೆದು ಗುಜರಾತ್‌ನಲ್ಲಿರುವ ಮನೆಗೆ ಬರ್ತಿದ್ದಾಗ ದುರಂತ
ಭಾರತೀಯ ಸೇನಾ ಸಿಬ್ಬಂದಿ ಜಿಗರ್ ಚೌಧರಿ ಕೆಲವು ದಿನಗಳ ರಜೆ ತೆಗೆದುಕೊಂಡು ಗುಜರಾತ್‌ನ ಸಬರಮತಿಯಲ್ಲಿರುವ ತಮ್ಮ ಮನೆಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ನಡೆದಿದೆ.. ನವೆಂಬರ್ 2 ರ ರಾತ್ರಿ ಅವರು ಪಂಜಾಬ್‌ನ ಫಿರೋಜ್‌ಪುರ ನಿಲ್ದಾಣದಿಂದ 19224 ರ ಜಮ್ಮು ತಾವಿ - ಸಬರಮತಿ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್ ಹತ್ತಿದರು. ಪ್ರಯಾಣದ ಸಮಯದಲ್ಲಿ, ಅವರು ಬಿ4 ಎಸಿ ಕೋಚ್‌ನ ಸಹಾಯಕರ ಬಳಿ ಕಂಬಳಿ ಹಾಗೂ ಬೆಡ್‌ಶೀಟ್ ಕೇಳಿದ್ದಾರೆ.
ಈ ವೇಳೆ ರೂಲ್ಸ್ ಪ್ರಕಾರ ಇವುಗಳಲ್ಲಿ ಒಂದನ್ನು ನೀಡುವುದಕ್ಕೆ ಅಟೆಂಡೆಂಟ್ ನಿರಾಕರಿಸಿದ್ದಾನೆ. ಇದು ಇಬ್ಬರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ. ಇಬ್ಬರ ನಡುವಿನ ಮಾತಿನ ಚಕಮಕಿ ಕ್ಷಣದಲ್ಲಿ ಹೊಯ್ ಕೈಗೆ ತಿರುಗಿದ್ದು, ಈ ಅಟೆಂಡರ್ ಯೋಧನ ಕಾಲಿಗೆ ಚೂರಿಯಿಂದ ಇರಿದಿದ್ದಾನೆ. ಇದರಿಂದ ಅವರ ರಕ್ತನಾಳವೊಂದು ತುಂಡಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೈಲು ರಾಜಸ್ಥಾನದಿಂದ ಬಿಕನೇರ್ ತಲುಪಿದ ನಂತರ ರೈಲಿನ ಟಿಟಿಇ ದೂರಿನ ಮೇರೆಗೆ ರೈಲ್ವೆ ಪೊಲೀಸರು ಘಟನೆಯ ಬಗ್ಗೆ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿ ಜುಬೇರ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103(1) ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.
ಘಟನೆಯ ಬಳಿಕ ಆರೋಪಿ ಜುಬೈರ್ ಮೆಮನ್ ಈ ಕೊಲೆಗೆ ಬಳಸಿದ ಚಾಕು ಸಹಿತ ಆತನನ್ನು ಪೊಲೀಸರು ಬಂಧಿಸಿದ್ದಾರೆ. ರೈಲ್ವೆಯ ಪ್ರಕಾರ, ಜುಬೈರ್‌ನನ್ನು ಗುತ್ತಿಗೆದಾರರ ಮೂಲಕ ನೇಮಿಸಿಕೊಳ್ಳಲಾಗಿದ್ದು, ಆತನನ್ನು ಸೇವೆಯಿಂದ ತೆಗೆದುಹಾಕಲಾಗಿದ್ದು, ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಆರೋಪಿ ಕೋಚ್ ಅಟೆಂಡೆಂಟ್ ನೇಮಕಾತಿ ಪ್ರಕ್ರಿಯೆ, ಅರ್ಹತೆ ಬಗ್ಗೆ ವಿವರ ಕೇಳಿದ ಮಾನವ ಹಕ್ಕುಗಳ ಆಯೋಗ
ಘಟನೆಗೆ ಸಂಬಂಧಿಸಿದಂತೆ ಸರ್ಕಾರೇತರ ಸಂಸ್ಥೆಯಾದ ಸಹ್ಯಾದ್ರಿ ರೈಟ್ಸ್ ಫೋರಂನ ದೂರಿನ ಮೇರೆಗೆ, ಎನ್‌ಹೆಚ್‌ಆರ್‌ಸಿ ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ರೈಲ್ವೆ ರಕ್ಷಣಾ ಪಡೆ(RPF) ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ದೂರಿನಲ್ಲಿರುವ ಆರೋಪಗಳು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯನ್ನು ಸೂಚಿಸುತ್ತವೆ ಎಂದು ಆಯೋಗ ಹೇಳಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಿಯಾಂಕ್ ಕನೂಂಗೊ ನೇತೃತ್ವದ ನ್ಯಾಯ ಪೀಠವು ಪ್ರಕರಣದ ವಿಚಾರಣೆ ನಡೆಸಿ, ಆರೋಪಿ ಕೋಚ್ ಅಟೆಂಡೆಂಟ್ ನೇಮಕಾತಿ ಪ್ರಕ್ರಿಯೆ, ಅರ್ಹತೆಗಳು, ತರಬೇತಿ ಮತ್ತು ಪೊಲೀಸ್ ಪರಿಶೀಲನೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ರೈಲ್ವೆ ಇಲಾಖೆಯಿಂದ ಕೋರಿದೆ. ಹಾಗೂ ರೈಲ್ವೆ ಮಂಡಳಿ ಮತ್ತು ಆರ್‌ಪಿಎಫ್‌ಗೆ ಎರಡು ವಾರಗಳಲ್ಲಿ ಕ್ರಮ ಕೈಗೊಂಡ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.
ಇದನ್ನೂ ಓದಿ: ಮೆಕ್ಸಿಕೋ ಅಧ್ಯಕ್ಷೆಗೇ ಲೈಂಗಿಕ ಕಿರುಕುಳ: ಎಳೆದಾಡಿ ಮುತ್ತಿಕ್ಕಲು ಮುಂದಾದ ಯುವಕ
ಇದನ್ನೂ ಓದಿ: ಕ್ರಿಕೆಟರ್ ಸುರೇಶ್ ರೈನಾ ಶಿಖರ್ ಧವನ್‌ಗೆ ಇಡಿ ಶಾಕ್: ಬೆಟ್ಟಿಂಗ್ ಆಪ್ ಕೇಸಲ್ಲಿ 11.14 ಕೋಟಿ ಆಸ್ತಿ ಮುಟ್ಟುಗೋಲು
