ಟೂರ್ನಿ ಮುಗಿಸಿ ರೈಲಿನಲ್ಲಿ ಮರಳುವಾಗ ದುರಂತ, 8 ಚಿನ್ನದ ಪದಕ ಗೆದ್ದ ರಾಷ್ಟ್ರೀಯ ಆರ್ಚರ್ ಪಟು ಸಾವು, ಇತರರು ರೈಲು ನಿಲ್ಲುವ ಮೊದಲೇ ತುರ್ತಾಗಿ ಇಳಿಯಲು ಪ್ರಯತ್ನಿಸಿದ ಕಾರಣ ನೂಕು ನುಗ್ಗಲಿನಲ್ಲಿ ಕ್ರೀಡಾಪಟು ರೈಲಿನಿಂದ ಬಿದ್ದು ಮೃತಪಟ್ಟ ದುರಂತ ಘಟನೆ ನಡೆದಿದೆ.
ಜೈಪುರ(ನ.02) ರಾಷ್ಟ್ರೀಯ ಆರ್ಚರ್ ಪಟುವಾಗಿ ಮಿಂಚಿ, ಪದಕದ ಭರವಸೆ ಮೂಡಿಸಿದ್ದ ಕ್ರೀಡಾಪಟು ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ರಾಜಸ್ಥಾನದ ಕೋಟಾ ಜಂಕ್ಷನ್‌ನಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ 20 ವರ್ಷದ ಆರ್ಚರ್ ಪಟು ಅರ್ಜುನ್ ಸೊನವಾಲೆ ಮೃತ ದುರ್ದೈವಿ. ಪಂಜಾಬ್‌ನಲ್ಲಿ ಆರ್ಚರ್ ಟೂರ್ನಿ ಮುಗಿಸಿ ಕೋಚ್ ಹಾಗೂ ಇತರ ಕ್ರೀಡಾಪಟುಗಳ ಜೊತೆ ರೈಲಿನ ಮೂಲಕ ಮರಳುತ್ತಿದ್ದಾಗ ಘಟನೆ ನಡೆದಿದೆ. ರಾಜಸ್ಥಾನದ ಕೋಟಾ ಜಂಕ್ಷನ್ ನಿಲ್ದಾಣದಲ್ಲಿ ರೈಲು ನಿಲುಗಡೆಗೂ ಮೊದಲೇ ಕೆಲವರು ತುರ್ತಾಗಿ ಇಳಿಯಲು ಪ್ರಯತ್ನಿಸಿದ್ದಾರೆ. ಬಾಗಿಲ ಬಳಿ ಇದ್ದ ಅರ್ಜುನ್ ನೂಕಾಟದಲ್ಲಿ ರೈಲಿನಿಂದ ಬಿದ್ದಿದ್ದಾರೆ. ರೈಲು ಪ್ಲಾಟ್‌ಫಾರ್ಮ್ ಹಾಗೂ ರೈಲಿನಡಿಗೆ ಸಿಲುಕಿ ಅರ್ಜುನ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ
ಬಿ4 ಕೋಚ್‌ನ ಬಾಗಿಲಿಗಿಂತ ಕೆಲ ದೂರದಲ್ಲಿದ್ದ ಅರ್ಜುನ್ ಸೊನವಾಲೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸಂಭ್ರಮದಲ್ಲಿದ್ದರು. ಆದರೆ ಕೋಟಾ ಜಂಕ್ಷನ್‌ನಲ್ಲಿ ರೈಲು ಕೆಲವೇ ಕ್ಷಣ ತಂಗಲಿರುವ ಕಾರಣ ಇತರ ಪ್ರಯಾಣಿಕರು ತುರ್ತಾಗಿ ಇಳಿದು ಬೇರೆ ಬೋಗಿ ಹತ್ತುವ ಪ್ರಯತ್ನದಲ್ಲಿದ್ದರು. ಆಹಾರಕ್ಕಾಗಿ ಈ ಪ್ರಯತ್ನದಲ್ಲಿದ್ದ ಇತರ ಪ್ರಯಾಣಿಕರು ರೈಲು ನಿಲ್ಲುವ ಮೊದಲೇ ಇಳಿಯಲು ಮುಂದಾಗಿದ್ದಾರೆ. ಇ ವೇಳೆ ಅರ್ಚರ್ ಪಟುವನ್ನು ತಳ್ಳಿ ಮುಂದೆ ಸಾಗಿದ್ದಾರೆ. ತಳ್ಳಿದ ರಭಸಕ್ಕೆ ಅರ್ಜುನ್ ರೈಲು ಹಾಗೂ ಪ್ಲಾಟ್‌ಫಾರ್ಮ್ ಅಡಿಗೆ ಬಿದ್ದಿದ್ದಾರೆ. ರೈಲು ನಿಲ್ಲುತ್ತಿದ್ದಂತ ರೈಲ್ವೇ ಪೊಲೀಸರು ಅರ್ಜುನ್ ಸೊನವಾಲೆಯನ್ನು ರೈಲಿನಡಿಯಿಂದ ಎತ್ತಿ ತಕ್ಷಣವೆ ಎಂಬಿಎಸ್ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡ ಅರ್ಜುನ್‌ನ್ನು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಗಾಯದ ಪ್ರಮಾಣ ಹೆಚ್ಚಾಗಿದ್ದ ಕಾರಣ ಅರ್ಜುನ್ ಮೃತಪಟ್ಟಿದ್ದಾನೆ.
8 ಚಿನ್ನದ ಪದಕ ಗೆದ್ದಿದ್ದ ಅರ್ಜುನ್
ಆರ್ಚರ್ ಕ್ರೀಡೆಯಲ್ಲಿ ಅದ್ಭುತ ಸಾಧನೆ ಮಾಡಿದ್ದ ಅರ್ಜುನ್ ಒಟ್ಟು 8 ಚಿನ್ನದ ಪದಕ ಗೆದ್ದಿದ್ದರು. ರಾಷ್ಟ್ರೀಯ ಮಟ್ಟದ ಆರ್ಚರ್ ಕ್ರೀಡಾಕೂಟದಲ್ಲಿ ಅರ್ಜುನ್ 8 ಚಿನ್ನದ ಪದಕ ಗೆದ್ದಿದ್ದರು. ಪದವಿ ವ್ಯಾಸಾಂಗ ಮಾಡುತ್ತಾ ಆರ್ಚರಿಯಲ್ಲೂ ಸಾಧನೆ ಮಾಡಿದ್ದ ಅರ್ಜುನ್ ದುರಂತ ಅಂತ್ಯ ಕಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.ಘಟನೆಯಿಂದ ಕೋಚ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಕೋಚ್ ಕೂಡ ಇದೇ ರೈಲಿನಲ್ಲಿದ್ದರು. ಇತರ ಕ್ರೀಡಾಪಟುಗಳು ಕಣ್ಣ ಮುಂದೆ ಈ ದುರಂತ ನಡೆದಿದೆ.
