ಮುಂಬೈನ ಅಂಬರ್‌ನಾಥ್‌ನಲ್ಲಿ ಮದುವೆಯಾದ 48 ದಿನಗಳಲ್ಲಿ ನವವಧು ವಿಶಾಖಾ ತಿಲ್ಕರ್ ಆ*ತ್ಮ*ಹ*ತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆಗಾಗಿ ಪತಿ ನಿತಿನ್ ನೀಡುತ್ತಿದ್ದ ದೈಹಿಕ ಮತ್ತು ಮಾನಸಿಕ ಹಿಂಸೆ ಹಾಗೂ ಸಿಸಿಟಿವಿ ಕಣ್ಗಾವಲಿನಿಂದ ಬೇಸತ್ತು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪತಿಯನ್ನು ಬಂಧಿಸಲಾಗಿದೆ.

ಮುಂಬೈ: ಮದುವೆಯಾಗಿ ಎರಡು ತಿಂಗಳು ತುಂಬುವ ಮೊದಲೇ ನವವಧುವೊಬ್ಬಳು ಗಂಡನ ಮನೆಯಲ್ಲಿ ಪ್ರಾಣ ಬಿಟ್ಟಿದ್ದಾಳೆ. ಮುಂಬೈ ಸಮೀಪದ ಅಂಬರ್‌ನಾಥ್‌ನಲ್ಲಿ ಈ ಘಟನೆ ನಡೆದಿದೆ. ವರದಕ್ಷಿಣೆ ವಿಚಾರವಾಗಿ ಗಂಡ ನೀಡುತ್ತಿದ್ದ ಮಾನಸಿಕ ಮತ್ತು ದೈಹಿಕ ಹಿಂಸೆ ತಾಳಲಾರದೆ 26 ವರ್ಷದ ವಿಶಾಖಾ ತಿಲ್ಕರ್ ಆ*ತ್ಮ*ಹ*ತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ, ವಿಶಾಖಾ ಅವರ ಪತಿ ಡಾಕ್ಟರ್ ನಿತಿನ್ ತಿಲ್ಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರ ಮದುವೆಯಾಗಿ ಕೇವಲ 48 ದಿನಗಳಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಏಪ್ರಿಲ್ 30 ರಂದು ವಿಶಾಖಾ ಮತ್ತು ಡಾಕ್ಟರ್ ನಿತಿನ್ ತಿಲ್ಕರ್ ಅವರ ವಿವಾಹವಾಗಿತ್ತು. ಮದುವೆಗೂ ಮುನ್ನ ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ಮದುವೆಯಾದ ತಕ್ಷಣ ವಿಶಾಖಾಳ ಜೀವನ ನರಕವಾಗಿ ಬದಲಾಯಿತು ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ವರದಕ್ಷಿಣೆ ಕಿರುಕುಳಕ್ಕೆ ನವವಧು ಬಲಿ

ಮದುವೆ ಸಮಯದಲ್ಲಿ ತಾವು ನಿರೀಕ್ಷಿಸಿದಷ್ಟು ಉಡುಗೊರೆ ಮತ್ತು ಗೌರವ ಸಿಗಲಿಲ್ಲ ಎಂದು ಆರೋಪಿಸಿ ಗಂಡನ ಮನೆಯವರು ವಿಶಾಖಾಗೆ ಕಿರುಕುಳ ನೀಡಲು ಆರಂಭಿಸಿದ್ದರು. ತವರು ಮನೆಯಿಂದ ಹೆಚ್ಚು ಹಣ ಮತ್ತು ಚಿನ್ನ ತರುವಂತೆ ವಿಶಾಖಾ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ. ವಿಶಾಖಾ ಅನುಭವಿಸುತ್ತಿದ್ದ ಹಿಂಸೆ ಕೇವಲ ದೈಹಿಕ ಹಲ್ಲೆಗೆ ಸೀಮಿತವಾಗಿರಲಿಲ್ಲ. ಆಕೆಯ ಪ್ರತಿಯೊಂದು ಚಲನವಲನವನ್ನು ಗಮನಿಸಲು ಪತಿ ನಿತಿನ್, ಮನೆಯೊಳಗೆ ಮತ್ತು ಹೊರಗೆ ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ. ಇದರಿಂದ ವಿಶಾಖಾ ತನ್ನ ಸಂಪೂರ್ಣ ಖಾಸಗಿತನವನ್ನು ಕಳೆದುಕೊಂಡು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ಸಂಬಂಧಿಕರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ತಾಯಿ ಬಳಿ ನೋವು ತೋಡಿಕೊಂಡ ವಿಶಾಖಾ

ಮನೆಯಲ್ಲಿ ವಿಶಾಖಾ ಯಾರೊಂದಿಗೆ ಮಾತನಾಡುತ್ತಾರೆ, ಏನು ಮಾಡುತ್ತಾರೆ ಎಂಬುದನ್ನು ನಿತಿನ್ ಈ ಕ್ಯಾಮೆರಾಗಳ ಮೂಲಕ ನಿರಂತರವಾಗಿ ಗಮನಿಸುತ್ತಿದ್ದ. ಮನೆಯಿಂದ ಹೊರಗೆ ಹೋಗಿ ಯಾರೊಂದಿಗಾದರೂ ಮಾತನಾಡಿದರೆ ಸಾಕು, ವಿಶಾಖಾಗೆ ಕಾದಿರುತ್ತಿದ್ದುದು ಭೀಕರ ಹಲ್ಲೆ. ಆ*ತ್ಮ*ಹ*ತ್ಯೆ ಮಾಡಿಕೊಳ್ಳುವ ಎರಡು ದಿನಗಳ ಹಿಂದೆ, ಅಕ್ಕಪಕ್ಕದ ಮಹಿಳೆಯೊಬ್ಬರೊಂದಿಗೆ ಮಾತನಾಡಿದ್ದಕ್ಕೆ ಪತಿ ಬರ್ಬರವಾಗಿ ಥಳಿಸಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ತಾನು ಅನುಭವಿಸುತ್ತಿರುವ ಹಿಂಸೆಯ ಬಗ್ಗೆ ಆ*ತ್ಮ*ಹ*ತ್ಯೆ ಮಾಡಿಕೊಳ್ಳುವ ಸ್ವಲ್ಪ ಮೊದಲು ವಿಶಾಖಾ ತನ್ನ ತಾಯಿಗೆ ಫೋನ್ ಮಾಡಿ ಅಳುತ್ತಾ ಹೇಳಿಕೊಂಡಿದ್ದಳು. ಮಗಳ ಸಂಕಷ್ಟ ಅರಿತ ಪೋಷಕರು, ಆಕೆಯನ್ನು ಗಂಡನ ಮನೆಯಿಂದ ವಾಪಾಸ್ ಕರೆತರಲು ಸಿದ್ಧತೆ ನಡೆಸುತ್ತಿರುವಾಗಲೇ, ವಿಶಾಖಾ ನೇಣು ಬಿಗಿದುಕೊಂಡು ಆ*ತ್ಮ*ಹ*ತ್ಯೆ ಮಾಡಿಕೊಂಡ ಸುದ್ದಿ ಬಂದಿದೆ.

"ವಿಶಾಖಾ ಏನು ಮಾಡ್ತಾಳೆ, ಯಾರ ಜೊತೆ ಮಾತಾಡ್ತಾಳೆ ಅಂತ ನೋಡೋಕೆ ನಿತಿನ್ ಮನೆಯೊಳಗೆ, ಹೊರಗೆಲ್ಲಾ ಸಿಸಿಟಿವಿ ಹಾಕಿದ್ದ. ಅವಳು ಯಾರಾದ್ರೂ ಜೊತೆ ಮಾತಾಡಿದ್ರೆ ಮನೆಗೆ ಬಂದ್ಮೇಲೆ ಸಿಕ್ಕಾಪಟ್ಟೆ ಹೊಡೀತಿದ್ದ. ಇದೆಲ್ಲಾ ಸಹಿಸೋಕೆ ಆಗದೆ ಅವಳು ಪ್ರಾಣ ಬಿಟ್ಲು," ಎಂದು ವಿಶಾಖಾ ಅವರ ಕುಟುಂಬದ ಸದಸ್ಯರೊಬ್ಬರು ನೋವು ತೋಡಿಕೊಂಡಿದ್ದಾರೆ.

ಈ ಘಟನೆ ಸಂಬಂಧ ವಿಶಾಖಾ ಕುಟುಂಬದ ದೂರಿನ ಮೇರೆಗೆ ಅಂಬರ್‌ನಾಥ್ ಶಿವಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಾನಸಿಕ ಮತ್ತು ದೈಹಿಕ ಹಿಂಸೆ, ಆ*ತ್ಮ*ಹ*ತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪತಿ ನಿತಿನ್ ತಿಲ್ಕರ್, ಆತನ ತಾಯಿ ಛಾಯಾ ಮತ್ತು ಸಹೋದರ ನಿನಾದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸದ್ಯ ನಿತಿನ್ ತಿಲ್ಕರ್‌ನನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ತಾಯಿ ಮತ್ತು ಸಹೋದರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ನೆನಪಿಡಿ:ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ದುಡುಕಿನಿಂದ ಆ8ಹತ್ಯೆಯ ನಿರ್ಧಾರ ತೆಗೆದುಕೊಳ್ಳುವುದರಿಂದ ಸಮಸ್ಯೆಗೆ ಯಾವುದೇ ಪರಿಹಾರ ಸಿಗಲ್ಲ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ ಸ್ವಯಂಹಾನಿ ಮಾಡಿಕೊಳ್ಳುವ ಯೋಚನೆ/ಮನೋವ್ಯಥೆ ಅನುಭವಿಸುತ್ತಿದ್ದರೆ ಅಥವಾ ಸಂಕಷ್ಟದ ಸ್ಥಿತಿಯಲ್ಲಿದ್ದರೆ, ದಯವಿಟ್ಟು ಯಾರೊಂದಿಗಾದರೂ ಮಾತನಾಡಿ, ಅದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಕರ್ನಾಟಕದಲ್ಲಿ ಸಹಾಯ ಮತ್ತು ಸಮಾಲೋಚನೆಗಾಗಿ ಕೆಳಗಿನ ಸೇವೆಗಳು ಲಭ್ಯವಿವೆ: 24×7 ಮಾನಸಿಕ ಆರೋಗ್ಯ ಸಹಾಯವಾಣಿ ಟೆಲಿ-ಮಾನಸ್ (Tele-MANAS): 14416 ಅಥವಾ 1800-89-14416 (ರಾಷ್ಟ್ರೀಯ ಟೆಲಿ-ಮಾನಸಿಕ ಆರೋಗ್ಯ ಸೇವೆ).