Kerala consumer case: ಮಹಿಳಾ ಉದ್ಯಮಿಯೊಬ್ಬರು ಬ್ಯುಸಿನೆಸ್‌ಗೆಂದು 25 ಲಕ್ಷ ರೂಪಾಯಿ ಹೂಡಿಕೆ ಮಾಡಿ ಖರೀದಿಸಿದ ಯಂತ್ರ ಮೊದಲ ದಿನವೇ ಕೈಕೊಟ್ಟಾಗ ಎದೆಗುಂದದೆ ಕಾನೂನು ಹೋರಾಟ ನಡೆಸಿ ಗೆದ್ದಿದ್ದಾರೆ. ಕಂಪನಿಯ ಸೇವಾ ಲೋಪದ ವಿರುದ್ಧ ಜಯಗಳಿಸಿರುವ ಇವರಿಗೆ ಈಗ ಹೊಸ ಯಂತ್ರ ಹಾಗೂ 75,000 ರೂ. ಪರಿಹಾರ ಸಿಕ್ಕಿದೆ.
ಕೇರಳದ ಆಹಾರ ಉದ್ಯಮಿಯೊಬ್ಬರು ಬ್ಯುಸಿನೆಸ್ ಮಾಡಲೆಂದು 25 ಲಕ್ಷ ರೂಪಾಯಿ ಹೂಡಿಕೆ ಮಾಡಿ ಖರೀದಿಸಿದ ಸ್ವಯಂಚಾಲಿತ ಬಾಟ್ಲಿಂಗ್ ಯಂತ್ರ (Automatic bottling machine)ವು ಮೊದಲ ದಿನವೇ ಕೈಕೊಟ್ಟ ಘಟನೆ ನಡೆದಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಕೇರಳದ ಗ್ರಾಹಕ ಆಯೋಗವು, ತಯಾರಕ ಕಂಪನಿಯು ಹಳೆಯ ಯಂತ್ರವನ್ನು ಬದಲಾಯಿಸಿಕೊಡಬೇಕು ಮತ್ತು 75,000 ರೂಪಾಯಿ ಪರಿಹಾರ ನೀಡಬೇಕು ಎಂದು ಆದೇಶಿಸಿದೆ. ಯಂತ್ರದ ಸರಿಯಾದ ಅನುಸ್ಥಾಪನೆ (Installation) ಮತ್ತು ಮಾರಾಟದ ನಂತರದ ಸೇವೆಯ ಕೊರತೆಯೇ ಈ ವೈಫಲ್ಯಕ್ಕೆ ಕಾರಣ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ ಏನು?
ಪಾಲಕ್ಕಾಡ್‌ನ ಕಂಜಿಕೋಡ್ ಮೂಲದ 'SKS ಫುಡ್ಸ್' ಮಾಲೀಕರಾದ ಸಜಿತಾ ಇ.ಜಿ. ಅವರು ಎರ್ನಾಕುಲಂನ 'ಅಭಿಲಾಷ್ ಇಂಡಸ್ಟ್ರೀಸ್'ನಿಂದ ಜೂನ್ 2023 ರಲ್ಲಿ 25,01,600 ರೂಪಾಯಿ ವೆಚ್ಚದಲ್ಲಿ ಈ ಬಾಟ್ಲಿಂಗ್ ಮತ್ತು ಕ್ಯಾಪ್-ಸೀಲಿಂಗ್ ಯಂತ್ರವನ್ನು ಖರೀದಿಸಿದ್ದರು. ಕಾರ್ಮಿಕರ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಬ್ಯಾಂಕ್ ಸಾಲ ಪಡೆದು ಈ ಯಂತ್ರವನ್ನು ಅಳವಡಿಸಲಾಗಿತ್ತು.
ದೂರಿನ ವಿವರ ನೋಡುವುದಾದರೆ..
ಗಂಟೆಗೆ 1,000 ಲೀಟರ್ ಲಿಕ್ವಿಡ್ ಅನ್ನು ಈ ಯಂತ್ರ ತುಂಬಿಸುತ್ತದೆ ಮತ್ತು ಇದರಿಂದ ಐದು ಜನ ಕಾರ್ಮಿಕರ ಅವಶ್ಯಕತೆ ಕಡಿಮೆಯಾಗುತ್ತದೆ ಎಂದು ತಯಾರಕರು ಭರವಸೆ ನೀಡಿದ್ದರು. ಆದರೆ ಮೊದಲ ದಿನವೇ ಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಕೆಲವು ಬಾಟಲಿಗಳಲ್ಲಿ ದ್ರವ ಅತಿಯಾಗಿ ತುಂಬಿ ಹೊರಚೆಲ್ಲುತ್ತಿದ್ದರೆ (Overflow), ಇನ್ನು ಕೆಲವು ಬಾಟಲಿಗಳು ಅರ್ಧವೇ ತುಂಬುತ್ತಿದ್ದವು. ಅಲ್ಲದೆ, ಮುಚ್ಚಳಗಳು (Caps) ಸರಿಯಾಗಿ ಸೀಲ್ ಆಗುತ್ತಿರಲಿಲ್ಲ. ಇದರಿಂದ ಉದ್ಯಮಿಗೆ ಭಾರಿ ಹಣಕಾಸಿನ ನಷ್ಟ ಮತ್ತು ಮಾನಸಿಕ ಕಿರಿಕಿರಿ ಉಂಟಾಗಿತ್ತು.
ತಯಾರಕರ ವಾದ
ಆದರೆ ಅಭಿಲಾಷ್ ಇಂಡಸ್ಟ್ರೀಸ್ ಈ ಆರೋಪಗಳನ್ನು ನಿರಾಕರಿಸಿತು. ಯಂತ್ರವನ್ನು ವಾಣಿಜ್ಯ ಉದ್ದೇಶಕ್ಕಾಗಿ ಖರೀದಿಸಿರುವುದರಿಂದ ಇದು ಗ್ರಾಹಕ ಕಾಯ್ದೆಯಡಿ ಬರುವುದಿಲ್ಲ. ಅಷ್ಟೇ ಅಲ್ಲ, ದೂರುದಾರರ ಸಿಬ್ಬಂದಿಗೆ ಯಂತ್ರ ನಿರ್ವಹಿಸುವ ಕೌಶಲ್ಯವಿಲ್ಲದ ಕಾರಣ ಸಮಸ್ಯೆ ಉಂಟಾಗಿದೆ ಎಂದು ವಾದಿಸಿತು.
ತಜ್ಞರ ತಪಾಸಣೆ ಮತ್ತು ಆಯೋಗದ ತೀರ್ಪು
ಆಯೋಗವು ನೇಮಿಸಿದ ತಜ್ಞರು ಯಂತ್ರವನ್ನು ಪರೀಕ್ಷಿಸಿದಾಗ, 12 ಬಾಟಲಿಗಳಲ್ಲಿ ಕೇವಲ 3 ಬಾಟಲಿಗಳು ಮಾತ್ರ ಸರಿಯಾಗಿ ತುಂಬಿದ್ದವು. ಕ್ಯಾಪಿಂಗ್ ಮೆಕ್ಯಾನಿಸಂ ಕೂಡ ಪದೇ ಪದೇ ಸಿಲುಕಿಕೊಳ್ಳುತ್ತಿತ್ತು. ಯಂತ್ರದಲ್ಲಿ ಯಾವುದೇ ಉತ್ಪಾದನಾ ದೋಷವಿಲ್ಲದಿದ್ದರೂ, ಅದನ್ನು ಸರಿಯಾಗಿ ಪ್ರೋಗ್ರಾಂ ಮಾಡದಿರುವುದು ಮತ್ತು ಮಾರಾಟದ ನಂತರದ ಕಳಪೆ ಸೇವೆಯೇ ಇದಕ್ಕೆ ಕಾರಣ ಎಂದು ತಜ್ಞರು ವರದಿ ನೀಡಿದರು.
ಜುಲೈ 17 ರಂದು ತೀರ್ಪು ನೀಡಿದ ಪಾಲಕ್ಕಾಡ್ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಈ ಕೆಳಗಿನಂತೆ ಆದೇಶಿಸಿದೆ...
*ತಯಾರಕರು 45 ದಿನಗಳ ಒಳಗೆ ಹಳೆಯ ಯಂತ್ರದ ಬದಲಿಗೆ ಹೊಸ ಯಂತ್ರವನ್ನು ನೀಡಬೇಕು.
*ಸೇವೆಯ ಲೋಪಕ್ಕಾಗಿ 50,000 ರೂಪಾಯಿ ಪರಿಹಾರ ನೀಡಬೇಕು.
*ಕಾನೂನು ಹೋರಾಟದ ವೆಚ್ಚವಾಗಿ 25,000 ರೂಪಾಯಿ ಪಾವತಿಸಬೇಕು.
*ಒಂದು ವೇಳೆ 45 ದಿನಗಳಲ್ಲಿ ಆದೇಶ ಪಾಲಿಸದಿದ್ದರೆ, ನೆರವೇರಿಸುವವರೆಗೆ ಪ್ರತಿ ತಿಂಗಳು 1,000 ರೂಪಾಯಿ ಹೆಚ್ಚುವರಿ ದಂಡ ಪಾವತಿಸಬೇಕು.
ಗ್ರಾಹಕರಿಗೆ ಪಾಠ
ನಿಮ್ಮ ಜೀವನೋಪಾಯ ಅಥವಾ ಸಣ್ಣ ವ್ಯವಹಾರಕ್ಕಾಗಿ ಯಂತ್ರಗಳನ್ನು ಖರೀದಿಸುವುದು ನಿಮ್ಮ ಗ್ರಾಹಕ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ. ಯಂತ್ರದಲ್ಲಿ ಉತ್ಪಾದನಾ ದೋಷವಿಲ್ಲದಿದ್ದರೂ, ತಯಾರಕರು ಸರಿಯಾದ ಸರ್ವಿಸ್ ಅಥವಾ ಇನ್‌ಸ್ಟಾಲೇಶನ್ ನೀಡದಿದ್ದರೆ ನೀವು ಗ್ರಾಹಕ ನ್ಯಾಯಾಲಯದ ಮೊರೆ ಹೋಗಬಹುದು.
ಸಹಾಯಕ್ಕಾಗಿ
ಗ್ರಾಹಕ ದೂರುಗಳಿಗಾಗಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆ 1915 ಕ್ಕೆ ಕರೆ ಮಾಡಬಹುದು
