ಭಾರತೀಯ ಸೇನಾ ಸಿಬ್ಬಂದಿ ಮಾಲ್ಡೀವ್ಸ್‌ನಲ್ಲಿ ಇರುವಂತಿಲ್ಲ.ಇದು ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಜು ಮತ್ತು ಈ ಆಡಳಿತದ ನೀತಿಯಾಗಿದೆ ಎಂದು ಅಧ್ಯಕ್ಷರ ಕಚೇರಿಯ ಸಾರ್ವಜನಿಕ ನೀತಿ ಕಾರ್ಯದರ್ಶಿ ಅಬ್ದುಲ್ಲಾ ನಜೀಮ್ ಇಬ್ರಾಹಿಂ ಭಾನುವಾರ ಹೇಳಿದ್ದಾರೆ.

ದೆಹಲಿ (ಜನವರಿ 15, 2024): ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಮಾರ್ಚ್ 15 ರೊಳಗೆ ಭಾರತದ ಮಿಲಿಟರಿ ಸಿಬ್ಬಂದಿಯನ್ನು ತಮ್ಮ ದೇಶದಿಂದ ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಡೆಡ್‌ಲೈನ್‌ ನೀಡಿದ್ದಾರೆ. ಹೀಗಾಗಲೇ 2 ತಿಂಗಳ ಹಿಂದೆಯೇ ಭಾರತೀಯ ಸೈನಿಕರನ್ನು ವಾಪಸ್‌ ಸ್ವದೇಶಕ್ಕೆ ಕರೆದೊಯ್ಯುವಂತೆ ಹೇಳಿದ ಬಳಿಕ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಈ ಡೆಡ್‌ಲೈನ್‌ ನೀಡಿದ್ದಾರೆ.

ಭಾರತೀಯ ಸೇನಾ ಸಿಬ್ಬಂದಿ ಮಾಲ್ಡೀವ್ಸ್‌ನಲ್ಲಿ ಇರುವಂತಿಲ್ಲ.ಇದು ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಜು ಮತ್ತು ಈ ಆಡಳಿತದ ನೀತಿಯಾಗಿದೆ ಎಂದು ಅಧ್ಯಕ್ಷರ ಕಚೇರಿಯ ಸಾರ್ವಜನಿಕ ನೀತಿ ಕಾರ್ಯದರ್ಶಿ ಅಬ್ದುಲ್ಲಾ ನಜೀಮ್ ಇಬ್ರಾಹಿಂ ಭಾನುವಾರ ಹೇಳಿದ್ದಾರೆ. ಮಾಲ್ಡೀವ್ಸ್ ಮತ್ತು ಭಾರತವು ಸೈನ್ಯವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಲು ಉನ್ನತ ಮಟ್ಟದ ತಂಡವನ್ನು ಸ್ಥಾಪಿಸಿದೆ. 

ಇದನ್ನು ಓದಿ: ಮಾಲ್ಡೀವ್ಸ್‌ ಬುಕ್ಕಿಂಗ್ ಕ್ಯಾನ್ಸಲ್‌ ಬಳಿಕ ‘ದೇಶ ಮೊದಲು ವ್ಯಾಪಾರ ನಂತರ’ ಎಂಬ ಸಂದೇಶ ಕಳಿಸಿದ Ease My Trip

ಭಾನುವಾರ ಬೆಳಗ್ಗೆ ಮಾಲೆಯಲ್ಲಿರುವ ವಿದೇಶಾಂಗ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ಗುಂಪು ತನ್ನ ಮೊದಲ ಸಭೆಯನ್ನು ನಡೆಸಿತು. ಸಭೆಯಲ್ಲಿ ಭಾರತೀಯ ಹೈಕಮಿಷನರ್ ಮುನು ಮಹಾವರ್ ಕೂಡ ಭಾಗವಹಿಸಿದ್ದರು ಎಂದು ಮಾಲ್ಡೀವ್ಸ್‌ ಮಾಧ್ಯಮ ವರದಿಗಳು ತಿಳಿಸಿವೆ. 

ಮಾಲ್ಡೀವ್ಸ್‌ನಲ್ಲಿ ಎಷ್ಟು ಭಾರತೀಯ ಸೈನಿಕರಿದ್ದಾರೆ?
ಮಾಲ್ಡೀವ್ಸ್‌ನಲ್ಲಿನ 'ಇಂಡಿಯಾ ಔಟ್' ಪ್ರಚಾರದಲ್ಲಿ ಹೇಳಿದಂತೆ, ಭಾರತೀಯ ಸೈನಿಕರ ಯಾವುದೇ ದೊಡ್ಡ ತುಕಡಿ ದ್ವೀಪಸಮೂಹದಲ್ಲಿ ಇಲ್ಲ. ಇತ್ತೀಚಿನ ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ಮಾಲ್ಡೀವ್ಸ್‌ನಲ್ಲಿ 88 ಭಾರತೀಯ ಸೇನಾ ಸಿಬ್ಬಂದಿ ಇದ್ದಾರೆ. 

ಮಾಲ್ಡೀವ್ಸ್‌ ಬಗ್ಗೆ ಹಸ್ತಕ್ಷೇಪ ಸಲ್ಲ: ಮುಯಿಜು ಭೇಟಿ ಬೆನ್ನಲ್ಲೇ ಭಾರತಕ್ಕೆ ಚೀನಾ ಪರೋಕ್ಷ ಟಾಂಗ್

ಮಾಲ್ಡೀವ್ಸ್ ಸೈನಿಕರಿಗೆ ಯುದ್ಧ ಮತ್ತು ವಿಚಕ್ಷಣ ಹಾಗೂ ಪಾರುಗಾಣಿಕಾ ಸಹಾಯ ಕಾರ್ಯಾಚರಣೆಯಲ್ಲಿ ತರಬೇತಿ ನೀಡಲು ಭಾರತೀಯ ಸೈನಿಕರನ್ನು ವಿವಿಧ ಹಂತಗಳಲ್ಲಿ ಮಾಲ್ಡೀವ್ಸ್‌ಗೆ ಕಳುಹಿಸಲಾಗಿತ್ತು. ಆದರೂ, ಕೆಲವು ಮಾಲ್ಡೀವ್ಸ್‌ ಪ್ರಜೆಗಳು, ರಾಜಕಾರಣಿಗಳು ಹಾಗೂ ಹಲವರು ಭಾರತದ ಯಾವುದೇ ಸೈನಿಕರು ಇರಬಾರದೆಂದು ಪ್ರತಿಭಟಿಸಿದ್ದಾರೆ. 

ಅಲ್ಲದೆ, 'ಇಂಡಿಯಾ ಔಟ್' ಪ್ರಚಾರದಲ್ಲಿ ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೈನಿಕರು ದೇಶದ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಬಿಂಬಿಸಿದೆ ಎಂದು ಮಾಲ್ಡೀವ್ಸ್ ಮತ್ತು ಭಾರತದ ವಿಶ್ಲೇಷಕರು ಹೇಳಿದ್ದಾರೆ. ಇನ್ನು, ಮಾಲ್ಡೀವ್ಸ್‌ನಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ 
ಈ ಭಾರತ-ವಿರೋಧಿ ಭಾವನೆಗಳು ಮತ್ತಷ್ಟು ಉಲ್ಬಣಗೊಂಡಿವೆ.

ಅಲ್ಲಿ ವಿಶೇಷವಾಗಿ ಭಾರತದ ವಿರುದ್ಧ ತಪ್ಪು ಮಾಹಿತಿಯು ಅತಿರೇಕವಾಗಿತ್ತು. ಇಬ್ರಾಹಿಂ ಮೊಹಮ್ಮದ್ ಸೋಲಿಹ್ ನೇತೃತ್ವದ ಮಾಲ್ಡೀವ್ಸ್‌ ಡೆಮಾಕ್ರಟಿಕ್ ಪಕ್ಷವು ಭಾರತದಿಂದ ಪ್ರಭಾವಿತವಾದ ರಾಜಕೀಯ ಪಕ್ಷವಾಗಿದೆ ಎಂಬ ಆರೋಪ ಸೇರಿದಂತೆ ಹಲವು ತಪ್ಪು ಮಾಹಿತಿ ಹರಡಲಾಗಿದೆ. ಇನ್ನೊಂದೆಡೆ, ಪೀಪಲ್ಸ್ ನ್ಯಾಶನಲ್ ಕಾಂಗ್ರೆಸ್ ಮತ್ತು ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ ಪಕ್ಷದ ಒಕ್ಕೂಟವು 2023 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದು, ಈ ದೇಶದ ಅಧ್ಯಕ್ಷ ಮೊಹಮ್ಮದ್‌ ಮುಯಿಝು ಚೀನಾದ ಪರವಾಗಿದ್ದಾರೆ ಎಂದು ಪರಿಗಣಿಸಲಾಗಿದೆ.

ಭಾರತದ ಸೈನಿಕರು ಮಾಲ್ಡೀವ್ಸ್‌ನಲ್ಲಿ ಏಕೆ ಇದ್ದಾರೆ?
ಭಾರತ ಮತ್ತು ಮಾಲ್ಡೀವ್ಸ್ ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಸುದೀರ್ಘ ಇತಿಹಾಸವನ್ನು ಹೊಂದಿವೆ. ಭಾರತದ ಸೈನಿಕರು ಮಿಲಿಟರಿ ಕಾರ್ಯಾಚರಣೆಗಾಗಿ ನವೆಂಬರ್ 1988ರಲ್ಲಿ ದ್ವೀಪವನ್ನು ಪ್ರವೇಶಿಸಿದ್ದರು. ಆಗಿನ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಅವರ ಸರ್ಕಾರದ ಕೋರಿಕೆಯ ಮೇರೆಗೆ ದಂಗೆಯನ್ನು ವಿಫಲಗೊಳಿಸಲು ಭಾರತೀಯ ಸೇನೆ ಮಾಲ್ಡೀವ್ಸ್‌ ಪ್ರವೇಶಿಸಿತ್ತು.

ಬಳಿಕ, ತ್ವರಿತ ಕಾರ್ಯಾಚರಣೆಯಲ್ಲಿ, ಭಾರತೀಯ ಪಡೆಗಳು ಅಧ್ಯಕ್ಷರನ್ನು ರಕ್ಷಿಸಲು ಮತ್ತು ಬಂಡುಕೋರರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದವು. ನಂತರ ಈ ಘಟನೆ ನಡೆದು ಮೂರು ದಶಕಗಳಾದ್ರೂ, ಮಾಲ್ಡೀವ್ಸ್‌ ಭಾರತದ ಸೈನ್ಯದ ಪಾತ್ರವನ್ನು ಮೆಚ್ಚಿದೆ.

ಮಾಲ್ಡೀವ್ಸ್‌ಗೆ ಭಾರತೀಯರ ಸಂಖ್ಯೆ ಇಳಿಕೆ: ಮುಂದೆ ಇನ್ನಷ್ಟು ಕಡಿತ; ಭಾರತದ ಬಗ್ಗೆ ಸುಳ್ಳು ಹೇಳಿದ್ದ ಮುಯಿಜ್

ಇನ್ನು, 'ಇಂಡಿಯಾ ಔಟ್' ಅನ್ನೋ ಪ್ರಚಾರ 2020 ರಲ್ಲಿ ಪ್ರಾರಂಭವಾಯಿತು. ಹಾಗೂ, ಚೀನಾ ಪರ ಒಲವನ್ನು ಹೊಂದಿರುವ ಪ್ರಗತಿಶೀಲ ಪಕ್ಷದ (ಪಿಪಿಎಂ) ಅಬ್ದುಲ್ಲಾ ಯಮೀನ್ ಅಬ್ದುಲ್ ಗಯೂಮ್ 2013 ರಲ್ಲಿ ಅಧ್ಯಕ್ಷರಾದಾಗಿನಿಂದ ಭಾರತದ ವಿರುದ್ಧದ ಅಸಮಾಧಾನ ನಿರ್ಮಾಣವಾಗಿತ್ತು.