25 ವರ್ಷಗಳಿಂದ ತಾಯಿಯಿಂದ ದೂರವಾಗಿದ್ದ ಮಗನನ್ನು ಸೇರಿಕೊಂಡ ಘಟನೆ ಕೇರಳದಲ್ಲಿ ನಡೆದಿದೆ. ಗುಜರಾತ್‌ನಲ್ಲಿದ್ದ ಮಗ ತಾಯಿಯನ್ನು ಹುಡುಕಿಕೊಂಡು ಕೆರಳಕ್ಕೆ ಬಂದಿದ್ದು, ಕೊನೆಗೂ ತಾಯಿಯನ್ನು ಸೇರಿಕೊಂಡಿದ್ದಾನೆ. 

ಒಂದೂರೆ ವರ್ಷ ವಯಸ್ಸಿನಲ್ಲೇ ತಾಯಿಯಿಂದ ಬೇರ್ಪಟ್ಟ ಮಗ 25 ವರ್ಷಗಳ ನಂತರ ಆಕೆಯನ್ನು ಹುಡುಕಿಕೊಂಡು ಗುಜರಾತ್‌ನಿಂದ ಕೇರಳಕ್ಕೆ ಬಂದಿದ್ದಾನೆ. ಕೊಟ್ಟಾಯಂನ ಕರುಕಾಚಲ್‌ನಲ್ಲಿ ಪೊಲೀಸ್ ಅಧಿಕಾರಿಗಳಿಂದ ಸಹಾಯವನ್ನು ಕೋರಿದ ನಂತರ, ಯುವಕ ತನ್ನ ತಾಯಿಯನ್ನು ಭೇಟಿಯಾಗಿದ್ದಾನೆ. ಇನ್ನು, ಕಳೆದುಹೋಗಿದ್ದ ಮಗನನ್ನು ಕಂಡ ತಾಯಿಗೆ ಮಾತೇ ಬರದಂತಾಗಿತ್ತು ಹಾಗೂ ಸಂತೋಷದಿಂದ ಕಣ್ಣೀರು ಹಾಕಿದ್ದಾರೆ ಎಂದು ವರದಿಯಾಗಿದೆ.

30 ವರ್ಷಗಳ ಹಿಂದೆ ತನ್ನ ಕೆಲಸದ ಭಾಗವಾಗಿ ಗುಜರಾತ್‌ಗೆ ತೆರಳಿದ್ದ ಗೀತಾ, ರಾಮ್ ಭಾಯಿಯನ್ನು ಪ್ರೀತಿಸುತ್ತಿದ್ರು. ನಂತರ ಅವರು ಮದುವೆಯಾದರು ಮತ್ತು ಗೋವಿಂದ್ ಹುಟ್ಟಿದ ನಂತರ ಕೇರಳಕ್ಕೆ ಮರಳಿದರು. ಆದರೆ, ಗೀತಾ ತನ್ನ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾಗ, ರಾಮ್ ಭಾಯ್ ತನ್ನೊಂದಿಗೆ ಗೋವಿಂದನನ್ನು ಕರೆದುಕೊಂಡು ಗುಜರಾತ್‌ಗೆ ತೆರಳಿದರು. ನಂತರ, ನನ್ನನ್ನು ಸಂಪರ್ಕಿಸಬೇಡಿ ಎಂಬ ಪತ್ರವನ್ನು ಬರೆದಿಟ್ಟ ಆಟೋ ಡ್ರೈವರ್‌ ಆಗಿರುವ ಪತಿಯಿಂದ ಹಾಗೂ ಮೊದಲನೇ ಪುತ್ರನಿಂದ ಗೀತಾ ದೂರವಾಗಿದ್ದಾರೆ. 

ಇದನ್ನು ಓದಿ: ಕೇರಳ ಲೋಕಸೇವಾ ಆಯೋಗದ ಪರೀಕ್ಷೆಯನ್ನು ಒಟ್ಟಿಗೆ ಪಾಸಾದ ತಾಯಿ - ಮಗ

ಇನ್ನು, ರಾಮ್ ಭಾಯಿ ಅವರು ಬೇರೊಬ್ಬ ಮಹಿಳೆಯನ್ನು ಮದುವೆಯಾದ ನಂತರ ಗೊವಿಂದ್‌, ರಾಮ್‌ ಭಾಯಿಯವರ ಸಂಬಂಧಿಕರ ಜತೆ ಬೆಳೆದರು. ಈ ಸಂಬಂಧ ಏಷ್ಯಾನೆಟ್‌ ನ್ಯೂಸ್ ಜೊತೆ ಮಾತನಾಡಿದ ಗೋವಿಂದ್, ಅಮ್ಮನನ್ನು ಹುಡುಕಬೇಕು ಎಂದು ಚಿಕ್ಕಮ್ಮ ಆಗಾಗ್ಗೆ ಹೇಳುತ್ತಿದ್ದರು ಎಂದು ಹೇಳಿದ್ದಾನೆ. ಕೊನೆಗೂ ಕೇರಳಕ್ಕೆ ಬಂದ ಮಗ ಪೊಲೀಸ್‌ ಅಧಿಕಾರಿಗಳ ಸಹಾಯದಿಂದ ತನ್ನ ತಾಯಿಯನ್ನು ಪತ್ತೆ ಹಚ್ಚಿದ್ದಾರೆ. ಪಂಚಾಯತ್ ಸದಸ್ಯರಿಂದ ಕರೆ ಸ್ವೀಕರಿಸಿದ ಗೀತಾ, ಅದು ತನ್ನ ಮನೆಗೆ ಭತ್ಯೆಯ ಕರೆ ಎಂದು ನಿರೀಕ್ಷಿಸಿದ್ದರು. ಆದರೆ, ತನ್ನ ಮಗ ಪೊಲೀಸ್ ಠಾಣೆಯಲ್ಲಿ ತನಗಾಗಿ ಕಾಯುತ್ತಾನೆ ಎಂದೂ ತಾಯಿ ಎಂದಿಗೂ ನಿರೀಕ್ಷಿಸಿರಲಿಲ್ಲ. 

ಆದರೆ, ಸಾಯುವ ಮುನ್ನ ಆತನನ್ನು ಭೇಟಿಯಾಗಲು ಪ್ರತಿದಿನ ಪ್ರಾರ್ಥನೆ ಮಾಡುತ್ತಿದ್ದೆ ಎಂದು ಮಹಿಳೆ ಸುದ್ದಿ ವಾಹಿನಿಗೆ ಹೇಳಿಕೊಂಡಿದ್ದಾರೆ. "ಅವನು ನನ್ನ ಕನಸುಗಳನ್ನು ನನಸಾಗಿಸಿದನು. ಏನು ಹೇಳಬೇಕೆಂದು ನನಗೆ ಗೊತ್ತಿಲ್ಲ. ನನಗೆ ಓಣಂ ಬಂಪರ್ ಸಿಕ್ಕಿದಂತಿದೆ’’ ಎಂದು ತಾಯಿ ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು, ಈ ಮಾತುಗಳನ್ನು ಹೇಳುವಾಗಲೂ ತಾಯಿಯ ಕೆನ್ನೆಯ ಮೇಲೆ ಕಣ್ಣೀರು ಬೀಳುತ್ತಿತ್ತು ಹಾಗೂ ಧ್ವನಿಯೇ ಬರದಂತಾಗಿತ್ತು ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: ತಾಯಿಯ ಹಾದಿ ಹಿಡಿದ ಹೆಮ್ಮೆಯ ಮಗ: ಅಮ್ಮನಂತೆ ಸೇನಾ ಅಕಾಡೆಮಿಯಿಂದ ತೇರ್ಗಡೆಯಾದ ಪುತ್ರ

ಗುಜರಾತಿನಲ್ಲೇ ಬೆಳೆದು, ಅಲ್ಲೇ ವಾಸಿಸುತ್ತಿದ್ದ ಗೋವಿಂದ್‌ಗೆ ಗುಜರಾತಿ ಮತ್ತು ಹಿಂದಿ ಬಾಷೆ ಮಾತ್ರ ತಿಳಿದಿದೆ. ಈ ಹಿನ್ನೆಲೆ, ತಾಯಿ ಗೀತಾ ತನ್ನ ಬಹುಕಾಲದಿಂದ ಕಳೆದುಹೋದ ಮತ್ತು ಈಗ ಸಿಕ್ಕಿರುವ ಮಗನೊಂದಿಗೆ ಅರ್ಧಂಬರ್ಧ ಹಿಂದಿಯಲ್ಲಿ ಮಾತನಾಡುತ್ತಾರೆ. ಹಾಗೂ, ಗೋವಿಂದ್ ಇನ್ನು ಮುಂದೆ ತನ್ನ ತಾಯಿಯೊಂದಿಗೆ ಇರಲು ಯೋಜಿಸಿದ್ದಾನೆ ಎಂದು ತಿಳಿದುಬಂದಿದೆ.