ಅದು ತಾಯಿ, ಮಗ ಹಾಗೂ ಸೇನಾ ಅಕಾಡೆಮಿಗೂ ಒಂದು ಅಪರೂಪದ ಕ್ಷಣವಾಗಿತ್ತು. ಅಮ್ಮ ತರಬೇತಿ ಮುಗಿಸಿ ಹೊರಬಂದ 27 ವರ್ಷಗಳ ಬಳಿಕ ಪುತ್ರನೋರ್ವ ಅಮ್ಮನ ಹಾದಿ ಹಿಡಿದು ಅದೇ ಸೇನಾ ಅಕಾಡೆಮಿಯಿಂದ ತರಬೇತಿ ಮುಗಿಸಿ ತೇರ್ಗಡೆಯಾಗಿದ್ದ
ಚೆನ್ನೈ: ಅದು ತಾಯಿ, ಮಗ ಹಾಗೂ ಸೇನಾ ಅಕಾಡೆಮಿಗೂ ಒಂದು ಅಪರೂಪದ ಕ್ಷಣವಾಗಿತ್ತು. ಅಮ್ಮ ತರಬೇತಿ ಮುಗಿಸಿ ಹೊರಬಂದ 27 ವರ್ಷಗಳ ಬಳಿಕ ಪುತ್ರನೋರ್ವ ಅಮ್ಮನ ಹಾದಿ ಹಿಡಿದು ಅದೇ ಸೇನಾ ಅಕಾಡೆಮಿಯಿಂದ ತರಬೇತಿ ಮುಗಿಸಿ ತೇರ್ಗಡೆಯಾಗಿದ್ದ. ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಚೆನ್ನೈನ ಸೇನಾ ಅಕಾಡೆಮಿ. ಪ್ರಸ್ತುತ ನಿವೃತ್ತ ಸೇನಾ ಅಧಿಕಾರಿಯಾಗಿರುವ ಸ್ಮಿತಾ ಚತುರ್ವೇದಿಯವರು ಸುಮಾರು 27 ವರ್ಷಗಳ ಹಿಂದೆ ಇದೇ ಸೇನಾ ಅಕಾಡೆಮಿಯಿಂದ ತೇರ್ಗಡೆಯಾಗಿದ್ದರು. ಈಗ ಅವರ ಪುತ್ರ ಅದೇ ಅಕಾಡೆಮಿಯಿಂದ ತೇರ್ಗಡೆಯಾಗಿದ್ದು, ತಾಯಿ ಸ್ಮಿತಾ ಚತುರ್ವೇದಿಯವರಿಗೆ ಇದು ಅತ್ಯಂತ ಭಾವುಕ ಹಾಗೂ ಹೆಮ್ಮೆಯ ಕ್ಷಣವಾಗಿತ್ತು. ಸೇನಾ ಅಕಾಡೆಮಿಯಿಂದ ಪಾಸಾದ ತಮ್ಮ ಪುತ್ರನೊಂದಿಗೆ ತಾಯಿ ಹೆಮ್ಮೆಯಿಂದ ಕ್ಯಾಮರಾಗಳಿಗೆ ಪೋಸ್ ನೀಡಿದರು.
ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ ಚೆನ್ನೈನ ಸಾರ್ವಜನಿಕ ಸಂಪರ್ಕ ಅಧಿಕಾರಿಯ ಅಧಿಕೃತ ಟ್ವಿಟರ್ ಖಾತೆಯಿಂದ ಈ ತಾಯಿ ಮಗನ ಬಗ್ಗೆ ಪೋಸ್ಟ್ ಮಾಡಲಾಗಿದೆ. ಇದು ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ್ದು ಅನೇಕರು ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಪೋಸ್ಟ್‌ನಲ್ಲಿ ನಿವೃತ್ತ ಮೇಜರ್ ಸ್ಮಿತಾ ಚತುರ್ವೇದಿ ಅದೇ ಅಕಾಡೆಮಿಯಿಂದ ಪಾಸಾದ ತನ್ನ ಮಗನೊಂದಿಗೆ ಹೆಮ್ಮೆಯಿಂದ ಪೋಸ್ ನೀಡುತ್ತಿರುವುದನ್ನು ತೋರಿಸುತ್ತದೆ. ಚತುರ್ವೇದಿಯವರ ಮುಖದಲ್ಲಿ ಹೆಮ್ಮೆ ಹಾಗೂ ಸಂತೋಷ ಸ್ಪಷ್ಟವಾಗಿ ಕಾಣಿಸುತ್ತಿದೆ. ಮಹಿಳಾ ಅಧಿಕಾರಿಗೆ ಅಪರೂಪದ ಸಂಭ್ರಮದ ಕ್ಷಣ: ಮೇಜರ್ ಸ್ಮಿತಾ ಚತುರ್ವೇದಿ (ನಿವೃತ್ತ) 1995 ರಲ್ಲಿ 27 ವರ್ಷಗಳ ಮೊದಲು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ನೇಮಕಗೊಂಡರು, ಇಂದು ಅದೇ ಅಕಾಡೆಮಿಯಲ್ಲಿ ತನ್ನ ಮಗ ಅದೇ ರೀತಿಯಲ್ಲಿ ಕಮಿಷನ್ ಪಡೆಯುವುದನ್ನು ನೋಡಿದರು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ತುಂಟಿ ಮಗಳಿಗೊಂದು ಪತ್ರ: ಇಂದು ಮಗಳ ದಿನವಂತೆ!
ಚತುರ್ವೇದಿ ಸ್ವತಃ ತರಬೇತಿಯಲ್ಲಿ ಕೆಡೆಟ್ ಆಗಿದ್ದ ಆ ಕಾಲದ ಫೋಟೊವೊಂದನ್ನು ಕೂಡ ಜೊತೆಯಾಗಿ ಕೊಲಾಜ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಚತುರ್ವೇದಿಯವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅದರ ವಿಡಿಯೋವನ್ನು ಕೂಡ ಪೋಸ್ಟ್ ಮಾಡಲಾಗಿದೆ. ಕಳೆದಿರುವ ವರ್ಷಗಳಲ್ಲಿ ಅಕಾಡೆಮಿಯ ಭೂ ದೃಶ್ಯ ಯಾವ ರೀತಿ ಬದಲಾಗಿದೆ ಎಂಬುದನ್ನು ಅವರು ವಿವರಿಸಿದರು. ಅಲ್ಲದೇ ಸುಪ್ರಸಿದ್ಧ ಅಕಾಡೆಮಿಯಲ್ಲಿ ಕೆಡೆಟ್ ಆಗಿದ್ದ ತಮ್ಮ ಹಳೆಯ ದಿನಗಳನ್ನು ನೆನಪಿಸಿದ ಅವರು ಈಗ ತಮ್ಮ ಮಗ ತನ್ನಂತೆಯೇ ಸೈನ್ಯಕ್ಕೆ ಸೇರುವ ಅದ್ಭುತವಾದ ಕ್ಷಣ ಸೃಷ್ಟಿಯಾಗಿದ್ದಕ್ಕೆ ಭಾವುಕರಾದರು.
ಈ ತಾಯಿ ಮಗನ ಸೇನಾ ಜೋಡಿ ಇಂಟನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಒಬ್ಬ ತಾಯಿ ತನ್ನ ಮಗ ಈ ರೀತಿಯ ಸಾಧನೆಯನ್ನು ಮಾಡುವುದನ್ನು ನೋಡುವುದು ಎಷ್ಟು ಅದ್ಭುತವಾಗಿದೆ ಎಂದು ಹಲವರು ಹೇಳಿದ್ದಾರೆ. ಹೆಮ್ಮೆಯ ಕ್ಷಣ. ಲೇಡಿ ಆಫೀಸರ್ ಮತ್ತು ಅವರ ಮಗ, ಹೊಸದಾಗಿ ನೇಮಕಗೊಂಡ ಅಧಿಕಾರಿ ಇಬ್ಬರಿಗೂ ಹೆಮ್ಮೆಯ ಕ್ಷಣ ಅಂತ ಟ್ವಿಟರ್ ಬಳಕೆದಾರರು ಬರೆದಿದ್ದಾರೆ. ಹೃದಯಪೂರ್ವಕ ಅಭಿನಂದನೆಗಳು ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.