ಯುರೋಪಿಯನ್ ಒಕ್ಕೂಟವು ಶೀಘ್ರದಲ್ಲೇ ಭಾರತದೊಂದಿಗೆ ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಲಿದೆ. ಈ ಒಪ್ಪಂದದ ಮೊತ್ತವು ಜಾಗತಿಕ ಜಿಡಿಪಿಯ ಶೇ.25ರಷ್ಟು ಅಥವಾ 200 ಕೋಟಿ ಜನರಿಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಲಿದೆ ಎಂದು ಯುರೋಪಿಯನ್ ಮಂಡಳಿಯ ಅಧ್ಯಕ್ಷೆ ಉರ್ಸುಲಾ ವೋನ್ ಡೋರ್ ಘೋಷಿಸಿದ್ದಾರೆ.
ದಾವೋಸ್: ಯುರೋಪಿಯನ್ ಒಕ್ಕೂಟವು ಶೀಘ್ರದಲ್ಲೇ ಭಾರತದೊಂದಿಗೆ ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಲಿದೆ. ಈ ಒಪ್ಪಂದದ ಮೊತ್ತವು ಜಾಗತಿಕ ಜಿಡಿಪಿಯ ಶೇ.25ರಷ್ಟು ಅಥವಾ 200 ಕೋಟಿ ಜನರಿಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಲಿದೆ ಎಂದು ಯುರೋಪಿಯನ್ ಮಂಡಳಿಯ ಅಧ್ಯಕ್ಷೆ ಉರ್ಸುಲಾ ವೋನ್ ಡೋರ್ ಘೋಷಿಸಿದ್ದಾರೆ.
ರಷ್ಯಾದೊಂದಿಗಿನ ತೈಲ ಖರೀದಿ ಮೊದಲಾದ ವಿಷಯ ಮುಂದಿಟ್ಟುಕೊಂಡು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಮೀನಾಮೇಷ ಎಣಿಸುತ್ತಿರುವ ಹೊತ್ತಿನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.
ಇಲ್ಲಿ ನಡೆಯುತ್ತಿರುವ ದಾವೋಸ್ ಶೃಂಗಸಭೆಯಲ್ಲಿ ಮಂಗಳವಾರ ಮಾತನಾಡಿದ ಉರ್ಸುಲಾ, ‘ಈ ಶೃಂಗ ಮುಗಿದ ಬೆನ್ನಲ್ಲೇ ನಾನು ಭಾರತಕ್ಕೆ ತೆರಳಲಿದ್ದೇನೆ. ನಾವು ಶೀಘ್ರವೇ ಮಹತ್ವದ ಒಪ್ಪಂದಕ್ಕೆ ಸಹಿಹಾಕಲಿದ್ದೇವೆ. ಇದನ್ನು ಕೆಲವರು ಮದರ್ ಆಫ್ ಆಲ್ ಡೀಲ್ ಎಂದು ಬಣ್ಣಿಸುತ್ತಿದ್ದಾರೆ. ಈ ಒಪ್ಪಂದ ಪೂರ್ಣಗೊಳ್ಳಲು ಇನ್ನು ಸ್ವಲ್ಪ ಸಮಯ ಬೇಕಾಗಬಹುದು. ಆದರೆ ಇದೊಂದು ಐತಿಹಾಸಿಕ ಬೆಳವಣಿಗೆಯಾಗಲಿದೆ. ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಮತ್ತು ಅತ್ಯಂತ ಸ್ಪಂದನಶೀಲ ದೇಶದೊಂದಿಗೆ ವ್ಯಾಪಾರ ವಹಿವಾಟು ನಡೆಸಲು ನಾವು ಆಸಕ್ತರಾಗಿದ್ದೇವೆ’ ಎಂದು ಹೇಳಿದ್ದಾರೆ.
ಅತಿದೊಡ್ಡ ಪಾಲುದಾರ
27 ದೇಶಗಳ ಕೂಟವಾದ ಯುರೋಪಿಯನ್ ಒಕ್ಕೂಟವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದ್ದು, 2023-24ರಲ್ಲಿ ಭಾರತ- ಯುರೋಪ್ ನಡುವೆ 12 ಲಕ್ಷ ಕೋಟಿ ರು. ಮೌಲ್ಯದ ವಹಿವಾಟು ನಡೆದಿದೆ. ಇದೀಗ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟರೆ ಇದು ಹಲವು ಪಟ್ಟು ಹೆಚ್ಚಳದ ನಿರೀಕ್ಷೆ ಇದೆ.
ಸುದೀರ್ಘ ಮಾತುಕತೆ
ಭಾರತ- ಯುರೋಪ್ ನಡುವೆ ಮುಕ್ತ ವ್ಯಾಪಾರ ಸಂಬಂಧ 2007ರಲ್ಲಿ ಮೊದಲಿಗೆ ಮಾತುಕತೆ ಆರಂಭವಾಗಿ 2013ರಲ್ಲಿ ಸ್ಥಗಿತಗೊಂಡಿತ್ತು. 2022ರಲ್ಲಿ ಪುನಃ ಅದು ಆರಂಭಗೊಂಡು ಇದೀಗ ಅಂತಿಮವಾಗುವ ಹೊತ್ತಿನಲ್ಲಿದೆ.
ಭಾರತಕ್ಕೆ ಏನು ಲಾಭ?
ವಿವಿಧ ವಿಷಯಗಳಲ್ಲಿ ಅಮೆರಿಕ, ಚೀನಾ, ರಷ್ಯಾದ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲಿದೆ. ಭಾರತದ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಲಭ್ಯವಾಗಲಿದೆ.


