ಮೋಸ್ಟ್ ವಾಂಟೆಡ್ ಹೆದ್ದಾರಿ ದರೋಡೆಕೋರ ಸಂದೀಪ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಉತ್ತರಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು ಆತನನ್ನು ಹೊಡೆದುರುಳಿಸಿದ್ದಾರೆ. ಹಲವು ರಾಜ್ಯಗಳಲ್ಲಿ ಆತನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದವು.

ಮೋಸ್ಟ್ ವಾಂಟೆಡ್ ಹೆದ್ದಾರಿ ದರೋಡೆಕೋರ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾನೆ. ಹರಿಯಾಣದ ರೋಹ್ಟಕ್ ಮೂಲದ ಸಂದೀಪ್ ಎಂಬ ಮೋಸ್ಟ್ ವಾಂಟೆಡ್ ಹೆದ್ದಾರಿ ದರೋಡೆಕೋರನಾಗಿದ್ದು ಉತ್ತರಪ್ರದೇಶದ ಬಾಗ್ ಪತ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಹೆದ್ದಾರಿಗಳಲ್ಲಿ ಸರಕು ತುಂಬಿದ್ದ ಟ್ರಕ್‌ಗಳ ಚಾಲಕರನ್ನು ಹತ್ಯೆ ಮಾಡಿ, ಲೂಟಿ ನಡೆಸುತ್ತಿದ್ದ ಸಂದೀಪ್‌ ವಿರುದ್ಧ ಮಹಾರಾಷ್ಟ್ರ, ಹರಿಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಒಟ್ಟು 16 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಈತನ ಬಂಧನಕ್ಕೆ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು.

ಕಾನ್ಪುರದಲ್ಲಿ ನಡೆದ 4 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಸಂದೀಪ್ ಬೇಕಾಗಿದ್ದ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಬಾಗ್‌ಪತ್ ಪೊಲೀಸರು ಭಾನುವಾರ ವಿಶೇಷ ಕಾರ್ಯಾಚರಣೆ ನಡೆಸಿ ಗುಂಡಿಕ್ಕಿದ್ದಾರೆ. ಪೊಲೀಸರ ಕಾರ್ಯಾಚರಣೆಯಲ್ಲಿ ಸಂದೀಪ್ ಗಾಯಗೊಂಡಿದ್ದು, ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾನೆ. ಕಾನ್ಪುರದಲ್ಲಿ 4 ಕೋಟಿ ರೂ. ಮೌಲ್ಯದ ನಿಕಲ್ ಪ್ಲೇಟ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಲೂಟಿ ಮಾಡಿದ ಪ್ರಕರಣ ಸೇರಿದಂತೆ ಸಂದೀಪ್ ವಿರುದ್ಧದ ಹಲವು ಪ್ರಕರಣಗಳಿವೆ.

ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಅವನ ವಿರುದ್ಧ 16 ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ. ಹೆದ್ದಾರಿ ದರೋಡೆಗಳಲ್ಲಿ ಆತ ಹೆಸರುವಾಸಿಯಾಗಿದ್ದ. ದೊಡ್ಡ ದೊಡ್ಡ ಟ್ರಕ್‌ಗಳೇ ಅವನ ಟಾರ್ಗೆಟ್‌ ಆಗಿತ್ತು. ಟ್ರಕ್‌ ಡ್ರೈವರ್‌ಗಳನ್ನು ಕೊಂದು ಆತ ಅಮೂಲ್ಯ ವಸ್ತುಗಳನ್ನು ದೋಚುತ್ತಿದ್ದ. ಸಂದೀಪ್ ನನ್ನು ಬಂಧಿಸಲು ಯುಪಿ ಎಸ್‌ಟಿಎಫ್ ಶೋಧ ನಡೆಸುತ್ತಿತ್ತು. ಕೊನೆಗೂ ಪೊಲೀಸರ ಪ್ರಯತ್ನ ಸಫಲವಾಗಿದೆ. ಸಂದೀಪ್ ಸಕ್ರಿಯನಾಗಿದ್ದ ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಜನರಿಗೆ ಇದು ಸಮಾಧಾನ ತರುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.