ತಮಿಳುನಾಡಿಗೆ ಬರಬೇಕಾದ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚನೆ ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಧಾನಿಗೆ ಪತ್ರ ಬರೆದಿರುವ ಕುರಿತು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.
ನವದೆಹಲಿ (ಆಗಸ್ಟ್ 4, 2023): ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಶುಕ್ರವಾರ I.N.D.I.A ಮೈತ್ರಿಕೂಟದ ಸದಸ್ಯರಾದ ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತ್ತು ತಮ್ಮ ನಡುವಿನ ಸಮಸ್ಯೆಯನ್ನು ವ್ಯವಹರಿಸಿಕೊಳ್ಳುವ ಬದಲು ತಮ್ಮ ವಿವಾದಗಳನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿಯವರ ಸಹಾಯವನ್ನು ಕೋರಿದ್ದಕ್ಕೆ ಕೇಂದ್ರ ಸಚಿವರು ಲೇವಡಿ ಮಾಡಿದ್ದಾರೆ.
ತಮಿಳುನಾಡಿಗೆ ಬರಬೇಕಾದ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚನೆ ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಧಾನಿಗೆ ಪತ್ರ ಬರೆದಿರುವ ಕುರಿತು ಟ್ವಿಟ್ಟರ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ರಾಜೀವ್ ಚಂದ್ರಶೇಖರ್, ‘’ಎರಡು ಕುಟುಂಬ ಪಕ್ಷಗಳಾದ ಕಾಂಗ್ರೆಸ್ ಮತ್ತು ಡಿಎಂಕೆ, I.N.D.I.A ಅಕಾ UPA ಯ ಮೈತ್ರಿಕೂಟದಲ್ಲಿ ಒಂದಾಗಿರುವುದು ಪ್ರಧಾನಿ ನರೇಂದ್ರ ಮೋದಿಯನ್ನು ದ್ವೇಷಿಸುವುದರಿಂದ ಮತ್ತು ತಮ್ಮ ಕುಟುಂಬವನ್ನು ರಕ್ಷಿಸಲು ಬಯಸುವುದರಿಂದ ಅಷ್ಟೇ. ತಮ್ಮ ನಡುವಿನ ವಿವಾದವನ್ನು ಪರಿಹರಿಸಲು ಅವರ ಸಹಾಯವನ್ನು ಕೇಳಲು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ಜೋಕರ್‌ಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಲೂ ಸಾಧ್ಯವಾಗದಿದ್ದಾಗ ಜನರ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಮತದಾರರು ಭಾವಿಸಬೇಕೆಂದು ಬಯಸುತ್ತಾರೆ?" ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿ: ಕಾವೇರಿ ವಿಚಾರದಲ್ಲಿ ಮತ್ತೆ ತಮಿಳುನಾಡು ಕ್ಯಾತೆ: ಕರ್ನಾಟಕ ಸರ್ಕಾರಕ್ಕೆ ಲಗಾಮು ಹಾಕಲು ಕೇಂದ್ರದ ನೆರವು ಕೋರಿದ ಸ್ಟಾಲಿನ್
ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ಕಾಂಗ್ರೆಸ್ ಎಂಬುದು ಗಮನಿಸಬೇಕಾದ ಸಂಗತಿ. ಮಳೆಯ ಕೊರತೆಯಿಂದ ನೀರಿನ ಕೊರತೆ ಉಂಟಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರ ಈ ಹಿಂದೆ ಕಾವೇರಿ ನೀರನ್ನು ನೆರೆಯ ರಾಜ್ಯದೊಂದಿಗೆ ಹಂಚಿಕೊಳ್ಳಲು ನಿರಾಕರಿಸಿತ್ತು. ಇತ್ತೀಚೆಗೆ ಕರ್ನಾಟಕದ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಅವರು ರಾಜ್ಯದಲ್ಲಿನ ನೀರಿನ ಸಮಸ್ಯೆಯ ಬಗ್ಗೆ ಗಮನಸೆಳೆದಿದ್ದರು ಮತ್ತು ಅಂತಹ ಕೊರತೆಯ ನಡುವೆ ತಮಿಳುನಾಡಿಗೆ ನೀರು ಬಿಡುವ ಸಾಧ್ಯತೆಯನ್ನು ಪ್ರಶ್ನಿದ್ದರು.
ಈ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ನೈಋತ್ಯ ಮಾನ್ಸೂನ್ ಸಮಯದಲ್ಲಿ ತಮ್ಮ ರಾಜ್ಯದಲ್ಲಿ ಅಸಮರ್ಪಕ ಮಳೆಯ ಬಗ್ಗೆ ಗಮನ ಸೆಳೆದಿದ್ದಾರೆ. ತಮಿಳುನಾಡು ಮೆಟ್ಟೂರು ಜಲಾಶಯದಿಂದ ನೀರನ್ನು ಬಿಡುಗಡೆ ಮಾಡುವುದರ ಮೇಲೆ ಹೆಚ್ಚು ಅವಲಂಬಿತವಾಗಿದೆ, ಇದು ಕರ್ನಾಟಕದ ನೀರಿನ ಹರಿವಿನ ಮೇಲೆ ಅವಲಂಬಿತವಾಗಿರುತ್ತದೆ ಎಂಬುದೂ ಮುಖ್ಯ ವಿಚಾರ.
ಇದನ್ನೂ ಓದಿ: ಕೆಆರ್‌ಎಸ್‌ನಲ್ಲಿ ನೀರಿದ್ದಾಗ ಪರ್ಯಾಯ ಸಂಗ್ರಹಣೆ ಆಲೋಚನೆಗಳಿಲ್ಲವೇಕೆ?
ಇನ್ನು, ತಿಂಗಳಿಗೆ ಇಷ್ಟು ನೀರು ಬಿಡಬೇಕು ಎಂದು ತಮಿಳುನಾಡಿಗೆ ಸುಪ್ರೀಂ ಕೋರ್ಟ್ ಹಂಚಿಕೆ ಮಾಡಿ ಆದೇಶ ನೀಡಿದ್ದರೂ, ಈ ಆದೇಶವನ್ನು ಕರ್ನಾಟಕ ಗೌರವಿಸುತ್ತಿಲ್ಲ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಆತಂಕ ವ್ಯಕ್ತಪಡಿಸಿದರು.
ಪ್ರಸಕ್ತ 2023-2024 ರಲ್ಲಿ ಕರ್ನಾಟಕವು ಜೂನ್ 1 ರಿಂದ ಜುಲೈ 31, 2023 ರವರೆಗೆ 40.4 ಟಿಎಂಸಿ ನೀರನ್ನು ತಮಿಳುನಾಡಿಗೆ ನೀಡಬೇಕಾಗಿತ್ತು. ಆದರೆ, ಕೇವಲ 11.6 ಟಿಎಂಸಿ ನೀರನ್ನು ಬಿಡುಗಡೆ ಮಾಡಿರುವ ಹಿನ್ನೆಲೆ 28.8 ಟಿಎಂಸಿ ಕೊರತೆಯು ತಮಿಳುನಾಡಿನ ನೀರಿನ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ಕರ್ನಾಟಕವು ತನ್ನ ಜಲಾಶಯಗಳಲ್ಲಿ ಗಣನೀಯ ಪ್ರಮಾಣದ ಸಂಗ್ರಹವನ್ನು ಹೊಂದಿದ್ದರೂ ಸಹ ಪೂರೈಕೆ ಮಾಡುತ್ತಿಲ್ಲ ಎಂದೂ ತಮಿಳುನಾಡು ಸಿಎಂ ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಾವೇರಿ ನಮ್ಮ ಜೀವ, ಮೇಕೆದಾಟು ಡ್ಯಾಮ್ ಕಟ್ಟೋಕೆ ಬಿಡೋದಿಲ್ಲ: ತಮಿಳುನಾಡು ಸಚಿವ ದುರೈಮುರುಗನ್
ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ನೀರಿನ ಸಂಗ್ರಹವು ತೀವ್ರವಾಗಿ ಕಡಿಮೆಯಾಗಿದೆ. ಆಗಸ್ಟ್ 2, 2023 ಕ್ಕೆ ಕೇವಲ 26.6 ಟಿಎಂಸಿ ಮಾತ್ರ ಉಳಿದಿದೆ. ಈ ಸೀಮಿತ ನೀರಿನ ಲಭ್ಯತೆಯು ನಿಂತಿರುವ ಕುರುವಾಯಿ ಬೆಳೆಯನ್ನು ಕೇವಲ 15 ದಿನಗಳವರೆಗೆ ಉಳಿಸಿಕೊಳ್ಳಬಹುದು, ಆದರೆ ಇನ್ನೂ 45 ದಿನಗಳವರೆಗೆ ನೀರು ಬೇಕಾಗುತ್ತದೆ ಎಂದೂ ತಿಳಿಸಿದ್ದಾರೆ. ಹಾಗೂ, ತಮಿಳುನಾಡು ಈಗಾಗಲೇ ಜುಲೈ 5 ಮತ್ತು ಜುಲೈ 19 ರಂದು ಕೇಂದ್ರ ಜಲಶಕ್ತಿ ಸಚಿವರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದೆ ಎಂದು ಸ್ಟಾಲಿನ್ ಹೇಳಿದರು. ಆದ್ದರಿಂದ, ವೇಳಾಪಟ್ಟಿಯ ಪ್ರಕಾರ ನೀರು ಬಿಡಲು ಮತ್ತು ಜೂನ್ ಹಾಗೂ ಜುಲೈನಲ್ಲಿ ಕೊರತೆಯನ್ನು ಸರಿದೂಗಿಸಲು ಕರ್ನಾಟಕಕ್ಕೆ ಸಲಹೆ ನೀಡಬೇಕು ಎಂದು ಅವರು ಪ್ರಧಾನಿಗೆ ಮನವಿ ಮಾಡಿದರು.
