ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಧ್ಯಪ್ರವೇಶಿಸಿದ ನಂತರವೂ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀಡಬೇಕಾದ ಕಾವೇರಿ ನೀರನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ.
ಚೆನ್ನೈ (ಜುಲೈ 21, 2023): ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೆ ಕೆಆರ್‌ಎಸ್‌ನಲ್ಲಿ ಹೆಚ್ಚು ನೀರು ಸಂಗ್ರಹವೇ ಆಗ್ತಿಲ್ಲ. ಬೆಂಗಳುರು ಸೇರಿ ಸುತ್ತಮುತ್ತಲಿನ ಜಿಲ್ಲೆಯವರಿಗೆ ನೀರಿನ ತೊಂದರೆಯಾಗುವ ಭೀತಿಯಿದೆ. ಆದರೆ, ಈ ನಡುವೆ ಕಾವೇರಿ ನದಿ ನೀರು ಬಿಡುವಂತೆ ತಮಿಳುನಾಡು ಮತ್ತೆ ಕ್ಯಾತೆ ಆರಂಭಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಧ್ಯಪ್ರವೇಶಿಸಿದ ನಂತರವೂ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀಡಬೇಕಾದ ಕಾವೇರಿ ನೀರನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗುರುವಾರ ಆರೋಪಿಸಿದ್ದಾರೆ.
ಈ ಸಂಬಂಧ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮಧ್ಯಪ್ರವೇಶಿಸಿ ನೀರು ಬಿಡುವಂತೆ ಮತ್ತು ಕೊರತೆ ನೀಗಿಸಲು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಪ್ರಾಧಿಕಾರಕ್ಕೆ ಒತ್ತಾಯಿಸಬೇಕು ಎಂದೂ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಒತ್ತಾಯಿಸಿದರು.
ಇದನ್ನು ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವೇ ಇಲ್ಲ: ಡಿಕೆಶಿ ಸ್ಪಷ್ಟನೆ; ಪ್ರಾಧಿಕಾರ ರಚನೆಗೆ ಸುಪ್ರೀಂ ಡೆಡ್‌ಲೈನ್!
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ನಾಟಕ ಕೂಡಲೇ ನೀರು ಬಿಟ್ಟರೆ ಮಾತ್ರ ಬೆಳೆದು ನಿಂತಿರುವ ಕುರುವಾಯಿ (ಅಲ್ಪಾವಧಿ ಭತ್ತ) ಬೆಳೆಯನ್ನು ಉಳಿಸಬಹುದು ಎಂದು ಸ್ಟಾಲಿನ್ ಹೇಳಿದ್ದಾರೆ. ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್ ಅವರು ದೆಹಲಿಯಲ್ಲಿ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿದ್ದು, ಅಲ್ಲಿನ ಸಿಎಂ ಸ್ಟಾಲಿನ್ ಬರೆದ ಪತ್ರವನ್ನು ಹಸ್ತಾಂತರಿಸಲಾಗಿದೆ. ರಾಜ್ಯ ಸರ್ಕಾರವು ಜೂನ್ 12 ರಂದು ಕುರುವಾಯಿ ಕೃಷಿಗಾಗಿ ಮೆಟ್ಟೂರು ಜಲಾಶಯದ ಹೂಳುಗಳನ್ನು ತೆಗೆದಿದೆ.
ಅಂತರರಾಜ್ಯ ಗಡಿಯಾದ ಬಿಳಿಗುಂಡ್ಲುವಿನಲ್ಲಿ ಜೂನ್ 1 ರಿಂದ 17 ರ ನಡುವೆ 26.32 ಟಿಎಂಸಿ ನೀರು ಬಿಡಬೇಕಿತ್ತು. ಆದರೆ, 3.78 ಟಿಎಂಸಿ ನೀರು ಮಾತ್ರ ಹರಿದಿದೆ. "ಇದರಿಂದ 22.54 ಟಿಎಂಸಿ ಅಡಿಗಳಷ್ಟು ದೊಡ್ಡ ಕೊರತೆಯಾಗಿದೆ. ಇನ್ನು, ಬಿಳಿಗುಂಡ್ಲುವಿಗೆ ಬಂದ ಈ 3.78 ಟಿಎಂಸಿ ನೀರಿನ ಅಲ್ಪ ಹರಿವು ಕೂಡ ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳ ಕೆಳಗಿರುವ ಜಲಾನಯನ ಪ್ರದೇಶಗಳಿಂದ ಹರಿದಿರುವ ಅನಿಯಂತ್ರಿತ ನೀರು’’ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: ಕೆಆರ್‌ಎಸ್‌ನಲ್ಲಿ ನೀರಿದ್ದಾಗ ಪರ್ಯಾಯ ಸಂಗ್ರಹಣೆ ಆಲೋಚನೆಗಳಿಲ್ಲವೇಕೆ?
ಈ ಕೊರತೆಯನ್ನು ಸರಿದೂಗಿಸಲು ಕರ್ನಾಟಕಕ್ಕೆ ಸೂಚನೆ ನೀಡುವಂತೆ ದುರೈಮುರುಗನ್ ಅವರು ಜುಲೈ 5 ರಂದು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮಾಡಿದ ಹಿಂದಿನ ಮನವಿಯನ್ನೂ ಸ್ಟಾಲಿನ್ ಉಲ್ಲೇಖಿಸಿದ್ದಾರೆ. ಹಾಗೂ, ತಮಿಳುನಾಡು ರಾಜ್ಯವು ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಬಳಿಯೂ ಈ ಸಮಸ್ಯೆಯನ್ನು ತೆಗೆದುಕೊಂಡಿದೆ.
ಜುಲೈ 4 ರಂದು ತನ್ನ ಪತ್ರದಲ್ಲಿ, ಪ್ರಾಧಿಕಾರವು ಕಾವೇರಿ ಜಲವಿವಾದಗಳ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಪ್ರಕಾರ ಮತ್ತು ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ ಬಿಳಿಗುಂಡ್ಲುವಿನ ಹರಿವನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕಕ್ಕೆ ಸಲಹೆ ನೀಡಿತ್ತು. ಪ್ರಾಧಿಕಾರದ ಮಧ್ಯಪ್ರವೇಶದ ನಂತರವೂ ಕರ್ನಾಟಕವು ಸುಪ್ರೀಂ ಕೋರ್ಟ್ ಸೂಚಿಸಿದ ಮಾಸಿಕ ವೇಳಾಪಟ್ಟಿಯನ್ನು ಅನುಸರಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ತಮಿಳುನಾಡು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: ಕಾವೇರಿ ನಮ್ಮ ಜೀವ, ಮೇಕೆದಾಟು ಡ್ಯಾಮ್ ಕಟ್ಟೋಕೆ ಬಿಡೋದಿಲ್ಲ: ತಮಿಳುನಾಡು ಸಚಿವ ದುರೈಮುರುಗನ್
ತಮಿಳುನಾಡಿನಲ್ಲಿ ನೈಋತ್ಯ ಮುಂಗಾರಿನಿಂದ ಪ್ರಚೋದಿತವಾದ ಮಳೆಯ ಪ್ರಮಾಣವು ಕಡಿಮೆಯಾಗಿರುವುದರಿಂದ, ಕುರುವಾಯಿ ಬೆಳೆಯು ಮೆಟ್ಟೂರಿನ ನೀರಿನ ಹರಿವಿನ ಮೇಲೆ ಮಾತ್ರ ಅವಲಂಬಿತವಾಗಿದೆ. ಆರಂಭದಲ್ಲಿ ಕುರುವಾಯಿ ಬೆಳೆಗೆ ಮೆಟ್ಟೂರಿನಿಂದ 12 ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು, ಜಲಾಶಯದಲ್ಲಿ ನೀರಿನ ಕೊರತೆಯ ಹಿನ್ನೆಲೆಯಲ್ಲಿ 10 ಸಾವಿರ ಕ್ಯೂಸೆಕ್‌ಗೆ ಇಳಿಸಲಾಗಿತ್ತು. "ನಾವು ನ್ಯಾಯಯುತವಾದ ನೀರಿನ ನಿರ್ವಹಣೆಯೊಂದಿಗೆ ಬಿಕ್ಕಟ್ಟನ್ನು ನಿರ್ವಹಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದರೆ ಬೇಡಿಕೆ-ಪೂರೈಕೆ ಅಂತರವು ಬಹಳ ಮಹತ್ವದ್ದಾಗಿದೆ ಮತ್ತು ಅದನ್ನು ಕರ್ನಾಟಕದಿಂದ ಬಿಡುಗಡೆ ಮಾಡುವ ಮೂಲಕ ಮಾತ್ರ ಪೂರೈಸಬಹುದು" ಎಂದೂ ತಮಿಳುನಾಡು ಸಿಎಂ ಹೇಳಿದರು.
ತಮಿಳುನಾಡಿನ ಮೆಟ್ಟೂರಿನಲ್ಲಿ ಸಂಗ್ರಹಣೆಯು ವೇಗವಾಗಿ ಕ್ಷೀಣಿಸುತ್ತಿದೆ ಮತ್ತು ಪ್ರಸ್ತುತ ನೀರಾವರಿಯ ಸಂಗ್ರಹಣೆಯು ಕೇವಲ 20 ದಿನಗಳವರೆಗೆ ಮಾತ್ರ ಉಳಿದಿದೆ ಎಂದು ತಿಳಿದುಬಂದಿದೆ.
