- ಕತಾರ್‌ನ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಘಟಕದ ಮೇಲೆ ಇರಾನ್‌ ದಾಳಿ । ಇದರಿಂದ ವಿಶ್ವಕ್ಕೆ ಕತಾರ್‌ನ ಶೇ.17ರಷ್ಟು ಅನಿಲ ಪೂರೈಕೆ ವ್ಯತ್ಯಯ- ಈ ಎಲ್‌ಎನ್‌ಜಿ ಘಟಕದ ದುರಸ್ತಿಗೆ ಬೇಕು ಭರ್ತಿ 5 ವರ್ಷ । ಭಾರತಕ್ಕೆ ಶೇ.47ರಷ್ಟು ನೈಸರ್ಗಿಕ ಅನಿಲ ಆಮದು ಕತಾರ್‌ನಿಂದಲೇ ಆಗುತ್ತಿತ್ತು- ಈ ಅನಿಲ ಪೂರೈಕೆ ಇನ್ನು ಸ್ತಬ್ಧ ಸಂಭವ । ಯುದ್ಧದಿಂದ ಎಲ್‌ಪಿಜಿ ಸಮಸ್ಯೆಗೀಡಾದ ಭಾರತಕ್ಕೆ ಮತ್ತಷ್ಟು ಸಂಕಟ । ಪರ್ಯಾಯ ವ್ಯವಸ್ಥೆ ಬೇಕೇಬೇಕು

ದೋಹಾ/ರಿಯಾದ್: ಪ್ರಪಂಚದಲ್ಲಿ ತೈಲ ಹಾಗೂ ಅನಿಲ ಬಿಕ್ಕಟ್ಟಿಗೆ ಕಾರಣವಾಗಿರುವ ಅಮೆರಿಕ-ಇಸ್ರೇಲ್‌ ಮೈತ್ರಿಕೂಟ ಹಾಗೂ ಇರಾನ್‌ ನಡುವಿನ ಕದನವು ವಿಶ್ವಕ್ಕೇ ಅನಿಲ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ವಿಶ್ವದಲ್ಲೇ ಅತಿದೊಡ್ಡ ನೈಸರ್ಗಿಕ ಅನಿಲ ಘಟಕವಾದ (ಎಲ್‌ಎನ್‌ಜಿ) ಕತಾರ್‌ನ ರಾಸ್‌ ಲಫ್ಫಾನ್ ಅನಿಲ ಘಟಕದ ಮೇಲೆ ಇರಾನ್‌ ನಡೆಸಿದ ಕ್ಷಿಪಣಿ ದಾಳಿ, ಮುಂದಿನ ದಿನಗಳಲ್ಲಿ ಭಾರತಕ್ಕೆ ನೈಸರ್ಗಿಕ ಅನಿಲ ಪೂರೈಕೆ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಮೂಡಿಸಿದೆ.

Add Asianetnews Kannada as a Preferred SourcegooglePreferred

ದಾಳಿಗೊಳಗಾದ ಕತಾರ್ ಅನಿಲ ಘಟಕ ವಿಶ್ವದ ಪಾಲಿನ ಶೇ.17ರಷ್ಟು ಅನಿಲವನ್ನು ಪೂರೈಸುತ್ತಿತ್ತು. ಭಾರತದ ಬೇಡಿಕೆಯ ಶೇ.47ರಷ್ಟು ನೈಸರ್ಗಿಕ ಅನಿಲ ಆಮದು ಕತಾರ್‌ನಿಂದಲೇ ಆಗುತ್ತಿತ್ತು. ಇದೀಗ ಈ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ಈಗಾಗಲೇ ಹೋರ್ಮಜ್‌ ಜಲಸಂಧಿ ಬಂದ್‌ ಆದ ಕಾರಣ ತೈಲ, ಅನಿಲಕ್ಕೆ ದೊಡ್ಡ ಪೆಟ್ಟು ಬಿದ್ದಿರುವ ಹೊತ್ತಿನಲ್ಲೇ ನಡೆದ ಬೆಳವಣಿಗೆ ಭಾರೀ ಆತಂಕಕ್ಕೆ ಕಾರಣವಾಗಿದೆ.

ಭಾರತಕ್ಕೇಕೆ ಅಪಾಯ?:

ಭಾರತ ತನ್ನ ಕಚ್ಚಾತೈಲ ಬೇಡಿಕೆಯಲ್ಲಿ ಶೇ.88, ಎಲ್‌ಪಿಜಿಯ ಶೇ.60 ಮತ್ತು ನೈಸರ್ಗಿಕ ಅನಿಲದ ಬೇಡಿಕೆಯಲ್ಲಿ ಶೇ.50ರಷ್ಟಕ್ಕೆ ವಿದೇಶಗಳನ್ನೇ ಅವಲಂಬಿಸಿದೆ. ಈ ಪೈಕಿ ಶೇ.90ರಷ್ಟು ಎಲ್‌ಪಿಜಿ ಮತ್ತು ಶೇ.60ರಷ್ಟು ಎಲ್‌ಎನ್‌ಜಿ ಹೋರ್ಮಜ್‌ ಜಲಸಂಧಿ ಮೂಲಕವೇ ಆಗುತ್ತಿತ್ತು. ಆದರೆ ಹೋರ್ಮಜ್‌ ಜಲಸಂಧಿ ಬಂದ್‌ ಆದ ಕಾರಣ ಭಾರತಕ್ಕೆ ಪೂರೈಕೆ ಆಗುವ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಭಾರೀ ಕೊರತೆ ಉಂಟಾಗಿತ್ತು.

ಆದರೆ ಇದೀಗ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಕತಾರ್‌ನಲ್ಲಿರುವ ಅನಿಲ ಘಟಕದ ಮೇಲೆ ಇರಾನ್‌ ದಾಳಿ ಭಾರತದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.

ಕಾರಣ, ಈ ಘಟಕ ವಾರ್ಷಿಕ 1.28 ಕೋಟಿ ಟನ್‌ ಅನಿಲ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು 2 ವರ್ಷಗಳ ಹಿಂದಷ್ಟೇ ಇದನ್ನು ಅಂದಾಜು 2.30 ಲಕ್ಷ ಕೋಟಿ ರು.ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇದೀಗ ದಾಳಿಯ ಪರಿಣಾಮ ಘಟಕಕ್ಕೆ 1.80 ಲಕ್ಷ ಕೋಟಿ ರು.ನಷ್ಟು ಹಾನಿಯಾಗಿದೆ. ಜೊತೆಗೆ ಶೇ.17 ಉತ್ಪಾದನಾ ಸಾಮರ್ಥ್ಯವನ್ನೇ ಹಾಳುಗೆಡವಿದೆ. ಇದರಿಂದ ವಾರ್ಷಿಕ 2 ಲಕ್ಷ ಕೋಟಿ ರು. ಆದಾಯ ಕೈತಪ್ಪಲಿದೆ. ಈ ಘಟಕ ಪೂರ್ಣ ಪ್ರಮಾಣದಲ್ಲಿ ಮತ್ತೆ ಸುಸ್ಥಿತಿಗೆ ತರಲು ಇನ್ನೂ ಕನಿಷ್ಠ 5 ವರ್ಷ ಬೇಕಾಗಬಹುದು. ಅಲ್ಲಿಯವರೆಗೆ ಮಧ್ಯಪ್ರಾಚ್ಯ, ಭಾರತ ಮತ್ತು ಸುತ್ತಮುತ್ತಲ ವಲಯಗಳಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕತಾರ್‌ ಹೇಳಿದೆ.

ಭಾರತಕ್ಕೇಕೆ ಆತಂಕ?:

ಭಾರತ ತನ್ನ ಬೇಡಿಕೆಯಲ್ಲಿ ಶೇ.41-47ರಷ್ಟನ್ನು ಕತಾರ್‌ನಿಂದಲೇ ಆಮದು ಮಾಡಿಕೊಳ್ಳುತ್ತಿತ್ತು. 2024-25ರಲ್ಲಿ ಭಾರತ ಒಟ್ಟು 27 ದಶಲಕ್ಷ ಟನ್‌ ನೈಸರ್ಗಿಕ ಅನಿಲ ಆಮದು ಮಾಡಿಕೊಂಡಿತ್ತು. ಈ ಪೈಕಿ 11.2 ದಶಲಕ್ಷ ಟನ್‌ ಕೇವಲ ಕತಾರ್‌ ಒಂದರಿಂದಲೇ ಪೂರೈಕೆ ಆಗಿತ್ತು. ಆದರೆ ಇದೀಗ ದಾಳಿಯ ಪರಿಣಾಮ ಉತ್ಪಾದನೆ ಸ್ಥಗಿತಗೊಂಡಿದೆ. ಜೊತೆಗೆ ದುರಸ್ತಿಗೆ 5 ವರ್ಷ ಬೇಕಾದ ಕಾರಣ ಭಾರತ ಸೇರಿದಂತೆ ಜಾಗತಿಕ ಪೂರೈಕೆಗೆ ದೊಡ್ಡ ಹೊಡೆತ ಬೀಳಲಿದೆ. ಹೀಗಾಗಿ ತನ್ನ ಅನಿಲ ಬೇಡಿಕೆ ಪೂರೈಸಿಕೊಳ್ಳಲು ಹೊಸ ಮಾರ್ಗ ಹುಡುಕಬೇಕಿದೆ.