ಕೇರಳಕ್ಕೆ ನೈಋತ್ಯ ಮಾನ್ಸೂನ್ ಮಳೆ ಮೇ.27ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ವಾಡಿಕೆಯಂತೆ ಜೂ.1ರಂದು ಮಳೆ ಕೇರಳಕ್ಕೆ ಕಾಲಿಡುತ್ತದೆ.
ನವದೆಹಲಿ (ಮೇ.11): ಕೇರಳಕ್ಕೆ ನೈಋತ್ಯ ಮಾನ್ಸೂನ್ ಮಳೆ ಮೇ.27ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ವಾಡಿಕೆಯಂತೆ ಜೂ.1ರಂದು ಮಳೆ ಕೇರಳಕ್ಕೆ ಕಾಲಿಡುತ್ತದೆ. ಆದರೆ ಈ ಬಾರಿ 5 ದಿನ ಮುಂಚಿತವಾಗಿ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ, 2009ರಲ್ಲಿ ಮೇ 23ರಂದು ಮಳೆ ಪ್ರಾರಂಭವಾಗಿತ್ತು. ಈ ವರ್ಷ ನಿರೀಕ್ಷೆಯಂತೆ ಮೇ.27ರಂದು ಕೇರಳಕ್ಕೆ ಮಾನ್ಸೂನ್ ಆಗಮಿಸಿದರೆ, 16 ವರ್ಷಗಳ ಬಳಿಕ ಮೊದಲ ಬಾರಿಗೆ ಭಾರತದ ಮುಖ್ಯ ಭೂಭಾಗದಲ್ಲಿ ಮುಂಗಾರು ಮಾರುತಗಳು ಬೇಗನೇ ಪ್ರವೇಶ ಮಾಡಿದಂತಾಗುತ್ತದೆ.
ಮಳೆ ಕೇರಳವನ್ನು ಪ್ರವೇಶಿಸಿದ ನಂತರ ಭಾರತದ ಮುಖ್ಯ ಭೂಭಾಗದ ಮೇಲೆ ಮಳೆಯ ಆಗಮನವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ. ಸಾಮಾನ್ಯವಾಗಿ, ನೈಋತ್ಯ ಮಾನ್ಸೂನ್ ಜೂ.1ರ ವೇಳೆಗೆ ಕೇರಳಕ್ಕೆ ಕಾಲಿಟ್ಟು, ಜು.8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಇದು ಸೆ.17ರ ಸುಮಾರಿಗೆ ವಾಯುವ್ಯ ಭಾರತದಿಂದ ಹಿಮ್ಮೆಟ್ಟಲು ಪ್ರಾರಂಭಿಸಿ, ಅ.15ರ ವೇಳೆಗೆ ಸಂಪೂರ್ಣವಾಗಿ ಹಿಮ್ಮೆಟ್ಟುತ್ತದೆ. ಭಾರತದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವೆರೆಗೆ ಸಾಮಾನ್ಯಕ್ಕಿಂದ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂಗಾರು ಪೂರ್ವ ಮಳೆ: ಹೊನ್ನಾಳಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಗುಡುಗು ಮಿಂಚು ಆಲಿಕಲ್ಲು ಸಹಿತ ಪೂರ್ವ ಮುಂಗಾರು ಮಳೆಯಾಗಿದೆ. ಹೊನ್ನಾಳಿ ತಾಲೂಕಿನಲ್ಲಿ 80.9 ಮಿ.ಮೀ. ಮತ್ತು ನ್ಯಾಮತಿ ತಾಲೂಕಿನಲ್ಲಿ 47.9 ಮಿ.ಮೀ. ಮಳೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಬಿ.ಎನ್. ವಿಶ್ವನಾಥ್ ತಿಳಿಸಿದ್ದಾರೆ. ಮುಂಗಾರು ಹಂಗಾಮಿನ ಕೃಷಿ ಬೆಳೆಗೆ ನಿಗದಿತ ಸಮಯಕ್ಕೆ ಸರಿಯಾಗಿ ವಾಡಿಕೆಯ ಮಳೆಗಿಂತ ಹೆಚ್ಚಿನ ಮಳೆ ಬರುವ ಬಗ್ಗೆ ಹವಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ. ತಾಲೂಕಿನ 50850 ಹೆಕ್ಟೇರ್ ಕೃಷಿ ಯೋಗ್ಯ ಭೂಮಿ ಇದೆ. ತಾಲೂಕಿನ ಕೆಲವು ಭಾಗಗಳಲ್ಲಿ ರೈತರು ಜಮೀನಿನಲ್ಲಿ ಬಿತ್ತನೆ ದೃಷ್ಟಿಯಿಂದ ಭೂಮಿ ಹದಗೊಳಿಸುವ ಸಿದ್ಧತೆಗಳಲ್ಲಿ ನಿರತರಾಗಿದ್ದಾರೆ. ತಾಲೂಕಿನ ಹೆಚ್ಚಿನ ಭಾಗದ ರೈತರು ಅಂದಾಜು 20 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲು ಸಿದ್ಧತೆ ನಡೆಸಿದ್ದಾರೆ.
ಸಿಂಧು ನದಿ ಒಪ್ಪಂದಕ್ಕೆ ತಡೆ ರದ್ದಿಲ್ಲ: ಪಾಕ್ ಉಗ್ರವಾದ ನಿಲ್ಲಿಸುವವರೆಗೆ ಮುಂದುವರಿಕೆ
ರೈತರು ಬಿತ್ತನೆ ಮಾಡಲು ಬಯಸುವಂತಹ ಬಿತ್ತನೆ ಬೀಜಗಳಾದ ಮೆಕ್ಕೆಜೋಳ, ಸೋಯಾಬಿನ್, ಹೆಸರು, ತೊಗರಿ ಈ ಬೀಜಗಳ ಸಂಗ್ರಹವು ತಾಲೂಕಿನ ಆರು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇದೆ. ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಎಂದಿದ್ದಾರೆ. 2025-26ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ತಾಲೂಕಿನಾದ್ಯಂತ ಪ್ರಚಾರ ಮತ್ತು ಮಾಹಿತಿ ನೀಡಲಾಗುತ್ತಿದೆ. ಈ ತಾಲೂಕಿನ ವ್ಯಾಪ್ತಿಯ ಈ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದ್ದಾರೆ.


