Asianet Suvarna News Asianet Suvarna News

ನಾಯಿಗಳ ವಿರುದ್ಧ ಕೋತಿಗಳ ಸೇಡು... 80 ನಾಯಿ ಮರಿಗಳನ್ನು ಕೊಂದ ಕಪಿ ಸೈನ್ಯ

 

  • 80 ನಾಯಿ ಮರಿಗಳನ್ನು ಕೊಂದ ಕಪಿಗಳು
  • ಮಹಾರಾಷ್ಟ್ರದಲ್ಲಿ ನಾಯಿಗಳು ಹಾಗೂ ವಾನರ ಸೈನ್ಯದ ಮಧ್ಯೆ ಕಾದಾಟ
  • ನಾಯಿಗಳ ಮೇಲಿನ ದ್ವೇಷಕ್ಕೆ ನಾಯಿ ಮರಿಗಳ ಕೊಂದ ಕೋತಿಗಳು
Monkeys Take Revenge Against Dogs kills 80 Puppies in Beed Maharshtra akb
Author
Bangalore, First Published Dec 19, 2021, 3:01 PM IST

ಬೀಡ್‌(ಡಿ.19): ಮಹಾರಾಷ್ಟ್ರದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ತಮ್ಮ ಮರಿಯೊಂದನ್ನು ನಾಯಿಗಳು ಕೊಂದಿವೆ ಎಂದು ಕ್ರೋಧಗೊಂಡ ಕೋತಿಗಳ ಗುಂಪು ಇಡೀ ನಾಯಿಗಳನ್ನೆಲ್ಲಾ ಅಟ್ಟಾಡಿಸಿ ಅವುಗಳ ಮರಿಗಳನ್ನು ಹುಡುಕಿ ಹುಡುಕಿ ಕೊಲ್ಲುತ್ತಿರುವ ವಿಚಿತ್ರಕಾರಿ ಘಟನೆ ನಡೆದಿದೆ. ಮಹಾರಾಷ್ಟ್ರ (Maharashtra) ರಾಜ್ಯದ ಬೀಡ್(Beed) ಜಿಲ್ಲೆಯ ಮಜಲಗಾನ್‌( Majalgaon) ಪ್ರದೇಶದ ಲಾವೂಲಾ (Lavool) ಗ್ರಾಮದಲ್ಲಿ ಘಟನೆ ನಡೆದಿದ್ದು, ನಾಯಿ ಮರಿಗಳನ್ನು ಮರದ ತುದಿ ಅಥವಾ ದೊಡ್ಡ ಕಟ್ಟಡಗಳ ತುದಿಯಷ್ಟು ಎತ್ತರಕ್ಕೆ ಹೊತ್ತೊಯ್ಯುವ ಕೋತಿಗಳು ಅಷ್ಟು ಎತ್ತರದಿಂದ ನಾಯಿ ಮರಿಗಳನ್ನು ಕೆಳಕ್ಕೆಸೆದು ಸಾಯಿಸುತ್ತಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 

ಇದನ್ನು ಕೋತಿಗಳು ಹಾಗೂ ನಾಯಿಗಳ ನಡುವಿನ ಗ್ಯಾಂಗ್‌ವಾರ್‌ ಎಂದು ಬಿಂಬಿಸಲಾಗುತ್ತಿದೆ. ಕೋತಿ ಮರಿಯೊಂದನ್ನು ನಾಯಿಗಳು ಮೇಲೆರಗಿ ಹತ್ಯೆ ಮಾಡಿದನ್ನು ನೋಡಿದ ಮಂಗಗಳು ನಂತರ ಈ ಕೃತ್ಯಕ್ಕೆ ಸೇಡು ತೀರಿಸಲು ಮುಂದಾಗಿದ್ದು ಈ ಪ್ರದೇಶದಲ್ಲಿ ಇರುವ ನಾಯಿಗಳ ಮರಿಗಳನ್ನು ಹೊತ್ತೊಯ್ದು ಹಲ್ಲೆ ಮಾಡಿ ಸಾಯಿಸುತ್ತಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 

 

 

ನಾಯಿಗಳು ಓಡಿಸುತ್ತಿದ್ದರೂ ಕೋತಿಗಳು ನಾಯಿಗಳ ಮರಿಗಳನ್ನು ಹೇಗಾದರೂ ಮಾಡಿ ಎಗರಿಸಿ ಹೊತ್ತೊಯ್ಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಂಚಲನ ಮೂಡಿಸಿವೆ. ನಾಯಿ ಮರಿಗಳ ಮಾರಣ ಹೋಮಕ್ಕೆ ಮುಂದಾಗಿರುವ ಈ ಕೋತಿಗಳು ಗ್ರಾಮದಲ್ಲಿರುವ ಒಂದೇ ಒಂದು ನಾಯಿ ಮರಿಯನ್ನು ಕೂಡ ಬಿಟ್ಟಿಲ್ಲ ಎಂದು ತಿಳಿದು ಬಂದಿದೆ.  ಇನ್ನು ಗ್ರಾಮದ ಹೊರ ಭಾಗದಿಂದ ಈ ಗ್ರಾಮಕ್ಕೆ ಬರುವ ಕೋತಿಗಳು ಇಲ್ಲಿ ನಾಯಿ ಮರಿಗಳನ್ನು ಹುಡುಕಾಡಿ ಕೊಲ್ಲುತ್ತಿವೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ನಂತರದಲ್ಲಿ ಈ ಕೋತಿಗಳ ಕಾಟದಿಂದ ಬೇಸತ್ತ ಗ್ರಾಮಸ್ಥರು  ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಈ ಸ್ಥಳದಲ್ಲಿರುವ ಕೋತಿಗಳನ್ನು ಹಿಡಿಯುವಂತೆ ಹೇಳಿದ್ದಾರೆ. ಅಲ್ಲದೇ ಕೋತಿಗಳನ್ನು ಹಿಡಿಯಲು ಕೂಡ ಗ್ರಾಮಸ್ಥರು ಪ್ರಯತ್ನಿಸಿದ್ದಾರೆ. ಆದರೆ ಗ್ರಾಮಸ್ಥರ ಈ ಪ್ರಯತ್ನ ಫಲಗೂಡಲಿಲ್ಲ. 

 

 

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಾಗಪುರ (Nagpur)ದ  ಅರಣ್ಯ ಇಲಾಖೆ ಸಿಬ್ಬಂದಿ, ಈ ಕೋತಿಗಳ ಫೋಟೋಗಳನ್ನು ತೆಗೆದಿದ್ದು, ಇವು ಲಾಂಗೂರ್‌ ಜಾತಿಗೆ ಸೇರಿದ ಮಂಗಗಳಾಗಿವೆ ಎಂದು ಬೀಡ್‌ ಜಿಲ್ಲೆಯ ಅರಣ್ಯ ಅಧಿಕಾರಿ ಸಚೀನ್‌ ಕಂದ್‌ (Sachin Kand) ಹೇಳಿದ್ದಾರೆ. ಇಲ್ಲಿಂದ ಎರಡು ಕೋತಿಗಳನ್ನು ಹಿಡಿಯಲಾಗಿದ್ದು, ಅವುಗಳನ್ನು ನಾಗಪುರದತ್ತ ಕೊಂಡೊಯ್ದು ಸಮೀಪದ ಕಾಡುಗಳಿಗೆ ಬಿಡಲಾಗಿದೆ. 

22 ಕಿಮೀ ದೂರ ಬಿಟ್ಟು ಬಂದರೂ ದ್ವೇಷ ತೀರಿಸಿಕೊಳ್ಳಲು ಬಂದ ವಾನರ..!

ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಜನರು ಚಿತ್ರ ವಿಚಿತ್ರ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಹೀಗೆ ದಾಂಧಲೆ ಮಾಡುತ್ತಿರುವ ಮಂಗಗಳನ್ನು  'ರೈಸ್‌ ಅಪ್‌ ದ ಪ್ಲಾನೆಟ್ ಅಪ್‌ ದ ಅಪ್ಸ್‌' (Rise of the planet of the apes) ಸಿನಿಮಾಕ್ಕೆ ಹೋಲಿಸಿದ್ದಾರೆ. ಇತ್ತ ಕೇವಲ 80 ನಾಯಿ ಮರಿಗಳಲ್ಲ 250ಕ್ಕೂ ಹೆಚ್ಚು ನಾಯಿ ಮರಿಗಳನ್ನು ಈ ಕೋತಿಗಳು ಕೊಂದಿವೆ ಎಂದು ತಿಳಿದು ಬಂದಿದೆ. ಅದಾಗ್ಯೂ ಮಂಗಗಳಿಂದ ಹತ್ಯೆಗೀಡಾದ ನಾಯಿ ಮರಿಗಳ ಸಂಖ್ಯೆಯನ್ನು ಅಧಿಕಾರಿಗಳು ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ. 

ನಾಯಿ ಮರಿ ಕಿಡ್ನಾಪ್ ಮಾಡಿದ ಕೋತಿ, 3 ದಿನದ ಸತತ ಕಾರ್ಯಾಚರಣೆ ಬಳಿಕ ರಕ್ಷಣೆ!

Follow Us:
Download App:
  • android
  • ios