ಜನ ವಿಶ್ವಾಸ ವಿಧೇಯಕ 2026ರ ಮೂಲಕ ಜನರ ವಿಶ್ವಾಸ ಇಮ್ಮಡಿಗೊಳಿಸಿದ ಮೋದಿ ಸರ್ಕಾರ, ಈಗಿನ ಕಾಲಘಟ್ಟಕ್ಕೆ ಹೊಂದಿಕೆಯಾಗದ ಕಾನೂನುಗಳ ತೆಗೆದು, ತ್ವರಿತವಾಗಿ ವಿಲೇವಾರಿ ಮಾಡಲು ಹಾಗೂ ನಾಗರೀಕರ ಸಬಲಗೊಳಿಸುವ, ಜನಪ ರ ಆಡಳಿತಕ್ಕೆ ಸಹಾಕಾರುವ ನಿಯಮಗಳ ಜಾರಿಗೆ ತರುವ ಈ ವಿಧೇಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. 

ನವದೆಹಲಿ (ಏ.04) ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ 2026 ಈಗಾಗಲೇ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ಪ್ರಮುಖ ಕೇಂದ್ರೀಯ ಕಾಯ್ದೆಗಳಿಗೆ ತಿದ್ದುಪಡಿ ತರುವ ಈ ಮಸೂದೆ ಜನರ ಜೀವನ ಸುಗಮಗಳಿಸುವುದು ಮಾತ್ರವಲ್ಲ, ಆಡಳಿತವನ್ನು ಬಲಪಡಿಸಲು ನೆರವಾಗಲಿದೆ. ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ್ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಮಸೂದೆ ಅಂಗೀಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಮಸೂದೆ ಅಂಗೀಕಾರಗೊಂಡಿರುವ ಅತೀವ ಸಂತಸದ ವಿಚಾರ ಎಂದಿದ್ದಾರೆ. ಇದೇ ವೇಳೆ ಈ ಮಸೂದೆ ಜನರ ಜೀವನ ಸುಗಮಗೊಳಿಸುವುದು ಮಾತ್ರವಲ್ಲ ಸರ್ಕಾರ ಹಾಗೂ ಜನರ ನಡುವಿನ ನಂಬಿಕೆ ಬಲಗೊಳ್ಳಲಿದೆ. ಪ್ರಸ್ತುತವಲ್ಲದ ನಿಯಮಗಳಿಗೆ ತಿದ್ದುಪಡಿ, ಹಲವು ಪ್ರಕರಣಗಳ ತ್ವರಿತ ವಿಲೇವಾರಿಗಳಿಗೆ ಈ ಮಸೂದೆ ಪುಷ್ಠಿ ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ. ಏನಿದು ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ ? ಇದರಿಂದ ಜನಸಾಮಾನ್ಯರಿಗೆ ಉಪಯೋಗವೇನು?

ಜನ ವಿಶ್ವಾಸ ಮಸೂದೆ ಉದ್ದೇಶ ಮತ್ತು ವ್ಯಾಪ್ತಿ

ಜನ ವಿಶ್ವಾಸ ವಿಧೇಯಕ, 2026ರ ಪ್ರಮುಖ ಗುರಿ ಅನೇಕ ಕಾನೂನುಗಳಿಂದ ಕ್ರಿಮಿನಲ್ ಶಿಕ್ಷೆಗಳನ್ನು ತೆಗೆದುಹಾಕುವುದು ಮತ್ತು ಅವುಗಳ ಬದಲಿಗೆ ಸಿವಿಲ್ ಶಿಕ್ಷೆಗಳನ್ನು ಜಾರಿಗೆ ತರುವುದು. ಆಡಳಿತವನ್ನು 'ನಂಬಿಕೆ ಆಧಾರಿತ' ಮತ್ತು ಜನಸ್ನೇಹಿಯನ್ನಾಗಿ ಮಾಡುವುದು ಇದರ ಆಶಯ. ಈ ವಿಧೇಯಕವು 80 ಕೇಂದ್ರ ಕಾಯಿದೆಗಳ ಅಡಿಯಲ್ಲಿನ 784 ನಿಬಂಧನೆಗಳನ್ನು ಬದಲಾಯಿಸುತ್ತದೆ. ಜಾರಿಗಾಗಿ ಏಕರೂಪದ ಆಡಳಿತಾತ್ಮಕ ವ್ಯವಸ್ಥೆಯನ್ನು ಪರಿಚಯಿಸುತ್ತದೆ. ಇದು ನಿಯಂತ್ರಕ ದಕ್ಷತೆ, ಜೀವನ ಸುಲಭೀಕರಣ (Ease of Living) ಮತ್ತು ವ್ಯವಹಾರಗಳ ಸುಲಭೀಕರಣವನ್ನು (Ease of Doing Business) ಸುಧಾರಿಸುವ ಗುರಿ ಹೊಂದಿದೆ.

ಈ ವಿಧೇಯೇಕದ ಕರಡು ರಚನೆ ಪ್ರಕ್ರಿಯ ಸುದೀರ್ಘ ಸಮಾಲೋಚನ ಮೂಲಕ ನಡೆದಿದೆ. ವಿವರವಾದ ಮತ್ತು ಸಾಕ್ಷ್ಯ ಆಧಾರಿತ ಸಮಾಲೋಚನಾ ಪ್ರಕ್ರಿಯೆಯ ಮೂಲಕ ಅಭಿವೃದ್ಧಿಪಡಿಸಲಾಗಿದೆ. 24 ಸದಸ್ಯರ ಆಯ್ಕೆ ಸಮಿತಿಯು ಒಟ್ಟು 49 ಸಭೆಗಳನ್ನು ನಡೆಸಿದೆ. ವಿವಿಧ ಸಚಿವಾಲಯಗಳು, ಉದ್ಯಮದ ಪಾಲುದಾರರು ಮತ್ತು ತಜ್ಞರಿಂದ ಸಲಹೆಗಳನ್ನು ಪಡೆಯಲಾಗಿದೆ. ಇದು ಅಪರಾಧ ಮುಕ್ತಗೊಳಿಸುವ (Decriminalisation) ಪ್ರಕ್ರಿಯೆಗೆ ಸಮತೋಲಿತ ಮತ್ತು ವಿಶ್ವಾಸಾರ್ಹ ವಿಧಾನವನ್ನು ಒದಗಿಸಿದೆ.

ಅಪರಾಧ ಮುಕ್ತಗೊಳಿಸುವಿಕೆಯ ಅಂಕಿಅಂಶಗಳು

ಹಿಂದೆ 42 ಕೇಂದ್ರ ಕಾಯಿದೆಗಳ 183 ನಿಬಂಧನೆಗಳಿಂದ ಕ್ರಿಮಿನಲ್ ದಂಡನೆಗಳನ್ನು ತೆಗೆದುಹಾಕಲಾಗಿತ್ತು. ಈಗಿನ ಹೊಸ ವಿಧೇಯಕವು 80 ಕೇಂದ್ರ ಕಾಯಿದೆಗಳ 784 ನಿಬಂಧನೆಗಳಿಗೆ ತಿದ್ದುಪಡಿ ಪ್ರಸ್ತಾಪಿಸಿದೆ. ಇವುಗಳಲ್ಲಿ 717 ನಿಬಂಧನೆಗಳನ್ನು ಸಂಪೂರ್ಣವಾಗಿ ಅಪರಾಧ ಮುಕ್ತಗೊಳಿಸಲಾಗುವುದು. ಉಳಿದ 67 ನಿಬಂಧನೆಗಳು ನಾಗರಿಕರ ಜೀವನ ಸುಲಭೀಕರಣವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.

ಔಷಧ ವಲಯಕ್ಕೆ ಪರಿಹಾರ

ಈ ವಿಧೇಯಕವು ಆರ್ಥಿಕತೆಯ ವಿವಿಧ ವಲಯಗಳಿಗೆ ದೊಡ್ಡ ಮಟ್ಟದ ಸಮಾಧಾನ ತಂದಿದೆ. ಔಷಧ ವಲಯದಲ್ಲಿ, 'ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯಿದೆ 1940' ಕ್ಕೆ ತಿದ್ದುಪಡಿ ತರಲಾಗಿದೆ. ರಿಟರ್ನ್ಸ್‌ ಅಥವಾ ಸ್ಟೇಟ್‌ಮೆಂಟ್‌ಗಳನ್ನು ಸಲ್ಲಿಸದಿರುವಂತಹ ಸಣ್ಣಪುಟ್ಟ ಕಾರ್ಯವಿಧಾನದ ತಪ್ಪುಗಳಿಗೆ ಕ್ರಿಮಿನಲ್ ಶಿಕ್ಷೆಯನ್ನು ತೆಗೆದುಹಾಕಲಾಗಿದೆ. ಇದು ಕಂಪನಿಗಳು ಕಾನೂನು ತೊಡಕುಗಳಿಲ್ಲದೆ ವೇಗವಾಗಿ ಕೆಲಸ ಮಾಡಲು ಸಹಕಾರಿಯಾಗಿದೆ. ಈ ಮೂಲಕ ಭಾರತದಲ್ಲಿ ಸಣ್ಣ ಹಾಗೂ ದೊಡ್ಡ ಮಟ್ಟದ ಉದ್ಯಮಗಳಿಗೆ ಪೂರಕ ವಾತಾವರಣ ಕಲ್ಪಿಸುವುದು ಹಾಗೂ ಉದ್ಯಮಿಗಳಿಗೆ ಉತ್ತೇಜನ ನೀಡುವ ಗುರಿ ಇಟ್ಟುಕೊಂಡಿದೆ.

ನಗರ ನಿವಾಸಿಗಳಿಗೆ ಅನುಕೂಲ

ದೆಹಲಿ ಅಭಿವೃದ್ಧಿ ಕಾಯಿದೆ, 1957 ಮತ್ತು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಕಾಯಿದೆ, 1994 ರ ಅಡಿಯಲ್ಲಿ ಸಣ್ಣಪುಟ್ಟ ನಾಗರಿಕ ನಿಯಮಗಳ ಉಲ್ಲಂಘನೆಗಾಗಿ ಇದ್ದ ಜೈಲು ಶಿಕ್ಷೆಯನ್ನು ಈ ವಿಧೇಯಕವು ತೆಗೆದುಹಾಕಿದೆ. ಇದರಿಂದ ನಗರ ನಿವಾಸಿಗಳು ಅನಗತ್ಯ ಕಾನೂನು ಭಯವಿಲ್ಲದೆ ನಿಯಮಗಳನ್ನು ಪಾಲಿಸುವುದು ಸುಲಭವಾಗುತ್ತದೆ. ಹಲವು ಬಾರಿ ಸಣ್ಣ ನಿಯಮ ಉಲ್ಲಂಘನೆಗಳ ಕಾನೂನು ಪ್ರಕ್ರಿಯ ಅತ್ಯಂತ ಜಟಿಲವಾಗಿತ್ತು. ಅಂದಿನ ಪರಿಸ್ಥಿತಿ ಹಾಗೂ ಕಾಲಘಟ್ಟಕ್ಕೆ ತಕ್ಕಂತೆ ಈ ನಿಯಮಗಳು ಜಾರಿಗೆ ಬಂದಿತ್ತು. ಆದರೆ ಪ್ರಸ್ತುಕ ಕಾಲಘಟ್ಟದಲ್ಲಿ ಈ ನಿಯಮಗಳ ಅಪ್ರಸ್ತುತವಾಗಿದ್ದು, ನಿಯಮಗಳ ಸಡಿಲೀಕರಣ ಹಾಗೂ ಸುಧಾರಣೆಗಳನ್ನು ತರಲಾಗಿದೆ.

ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಸುಧಾರಣೆ

ರಾಷ್ಟ್ರೀಯ ಹೆದ್ದಾರಿಗಳ ಕಾಯಿದೆ, 1956 ರ ಬದಲಾವಣೆಗಳು ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ವಲಯದಲ್ಲಿ ಶಿಕ್ಷೆಯನ್ನು ಸರಳೀಕರಿಸುತ್ತವೆ. ಈ ಸುಧಾರಣೆಗಳು ನ್ಯಾಯಾಲಯದ ಪ್ರಕರಣಗಳನ್ನು ಕಡಿಮೆ ಮಾಡುತ್ತವೆ. ಅನುಸರಣಾ ವೆಚ್ಚವನ್ನು ತಗ್ಗಿಸುವುದು ಮಾತ್ರವಲ್ಲ, ಪಾರದರ್ಶಕ ನಿಯಂತ್ರಕ ವ್ಯವಸ್ಥೆಯನ್ನು ರಚಿಸುತ್ತವೆ. ಇದು ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುತ್ತದೆ.

ಮೋಟಾರು ವಾಹನ ಕಾಯಿದೆ ತಿದ್ದುಪಡಿ

ಮೋಟಾರು ವಾಹನ ಕಾಯಿದೆ, 1988 ಕ್ಕೆ ತಿದ್ದುಪಡಿ ತರುವ ಮೂಲಕ ರಾಜ್ಯಾದ್ಯಂತ ವಾಹನ ನೋಂದಣಿಗೆ ಅವಕಾಶ ನೀಡುವಂತಹ ಸರಳೀಕೃತ ನಿಯಮಗಳನ್ನು ತರಲಾಗಿದೆ. ಇಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಗಂಭೀರ ರಸ್ತೆ ಸುರಕ್ಷತಾ ಅಪರಾಧಗಳಿಂದ ಪ್ರತ್ಯೇಕಿಸಲಾಗಿದೆ. ಕೇವಲ ಸಣ್ಣ ತಪ್ಪುಗಳಿಗೆ ಜೈಲು ಶಿಕ್ಷೆಯ ಬದಲಿಗೆ ಹಣದ ದಂಡ ವಿಧಿಸಲಾಗುತ್ತದೆ. ಆದರೆ, ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಧಕ್ಕೆ ತರುವ ಗಂಭೀರ ಅಪರಾಧಗಳಿಗೆ ಕ್ರಿಮಿನಲ್ ಶಿಕ್ಷೆ ಮುಂದುವರಿಯಲಿದೆ.

ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ

ಈ ವಿಧೇಯಕವು ಉದ್ಯಮಗಳ ಮೇಲಿನ ಹೊರೆ ತಗ್ಗಿಸುವ ಮೂಲಕ 'ಮೇಕ್ ಇನ್ ಇಂಡಿಯಾ' ಮತ್ತು 'ಸ್ಟಾರ್ಟ್‌ಅಪ್ ಇಂಡಿಯಾ' ಯೋಜನೆಗಳಿಗೆ ಬೆಂಬಲ ನೀಡುತ್ತದೆ. ಭಾರತದಲ್ಲಿ 2.12 ಲಕ್ಷಕ್ಕೂ ಹೆಚ್ಚು DPIIT ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳಿದ್ದು, ಸಣ್ಣ ತಪ್ಪುಗಳಿಗೆ ದೀರ್ಘ ಕಾನೂನು ಹೋರಾಟದ ಬದಲಿಗೆ ಅವುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುವ ಮೂಲಕ ಈ ಪರಿಸರ ವ್ಯವಸ್ಥೆಗೆ ಶಕ್ತಿ ತುಂಬಲಾಗಿದೆ. ಇದರಿಂದ ಭಾರತದ ಸ್ಟಾರ್ಟ್ಅಪ್ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರಕಲಿದೆ. ಭಾರತ ಸ್ಟಾರ್ಟ್ ಉದ್ಯಮಗಳ ಹಬ್ ಆಗಿ ಮಾರ್ಪಟ್ಟಿದೆ. ಈ ಮೂಲಕ ಭಾರತದ ಆರ್ಥಿಕತೆಗೂ ನೆರವಾಗುತ್ತಿದೆ.

ಲೀಗಲ್ ಮೆಟ್ರಾಲಜಿ ಕಾಯಿದೆ ಸುಧಾರಣೆ

ಲೀಗಲ್ ಮೆಟ್ರಾಲಜಿ ಕಾಯಿದೆಯಡಿ ಪ್ಯಾಕೇಜಿಂಗ್ ಅಥವಾ ಲೇಬಲಿಂಗ್‌ನಲ್ಲಿನ ಸಣ್ಣ ತಪ್ಪುಗಳಿಗೆ ಹಿಂದೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿತ್ತು. ಹೊಸ ವ್ಯವಸ್ಥೆಯಲ್ಲಿ ಇವುಗಳನ್ನು ಸಿವಿಲ್ ಉಲ್ಲಂಘನೆಗಳೆಂದು ಪರಿಗಣಿಸಲಾಗುತ್ತದೆ. ಉದ್ಯಮಿಗಳಿಗೆ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದು ಅನಗತ್ಯ ಕಾನೂನು ಭಯವಿಲ್ಲದೆ ನಾವೀನ್ಯತೆ ಮಾಡಲು ಸಹಾಯ ಮಾಡುತ್ತದೆ.

ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ

ಈ ವಿಧೇಯಕವು ಸರ್ಕಾರದ "ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ (Minimum Government, Maximum Governance) ದೃಷ್ಟಿಕೋನದತ್ತ ಇಟ್ಟ ಪ್ರಮುಖ ಹೆಜ್ಜೆಯಾಗಿದೆ. ತಾಂತ್ರಿಕ ಮತ್ತು ಸಣ್ಣಪುಟ್ಟ ನಿಯಮ ಉಲ್ಲಂಘನೆಗಳಿಗಾಗಿ ಉದ್ಯಮಿಗಳು ಅನುಭವಿಸುತ್ತಿದ್ದ ಕಿರುಕುಳ ಮತ್ತು ಅನಗತ್ಯ ಕಾನೂನು ವ್ಯಾಜ್ಯಗಳ ಭಯವನ್ನು ಇದು ಕಡಿಮೆ ಮಾಡುತ್ತದೆ. ಇದರಿಂದ ಸರ್ಕಾರ ಹಾಗೂ ಜನರ ಮೇಲಿನ ನಂಬಿಕೆ ಬಲಗೊಳ್ಳುತ್ತದೆ. ಆಡಳಿತ ಸುಗಮಗೊಳ್ಳುತ್ತದೆ. ಜನರು ಹೆಚ್ಚಿನ ಸಮಸಯವನ್ನು ಕಾನೂನು ತೊಡಕು ಪರಿಹರಿಸಲು ವಿನಿಯೋಗಿಸುವ ಬದಲು ಅರ್ಥಪೂರ್ಣವಾಗಿ ತಮ್ಮ ಉದ್ಯಮಗಳತ್ತ ಚಿತ್ತ ಹರಿಸಲು ಸಾಧ್ಯವಾಗುತ್ತದೆ. ಜೊತೆಗೆ ಕಾನೂನು ಪ್ರಕ್ರಿಯೆಗಳಿಗೆ ಹೆಚ್ಚಿನ ಹಣ ವ್ಯಯ ಮಾಡುವ ಪರಿಪಾಠವೂ ತಪ್ಪಲಿದೆ.

ಶಿಕ್ಷೆ ಆಧಾರಿತ ವ್ಯವಸ್ಥೆಯಿಂದ ನಂಬಿಕೆ ಆಧಾರಿತ ವ್ಯವಸ್ಥೆಗೆ

ಮೋದಿ ಸರ್ಕಾರವು ಭಾರತವನ್ನು ಶಿಕ್ಷೆ ಆಧಾರಿತ ವ್ಯವಸ್ಥೆಯಿಂದ ನಂಬಿಕೆ ಆಧಾರಿತ ಮತ್ತು ಪೂರಕ ಆಡಳಿತ ಮಾದರಿಗೆ ಕೊಂಡೊಯ್ಯುತ್ತಿದೆ. ಈ ಸುಧಾರಣೆಗಳು ಭಾರತದ ವ್ಯಾಪಾರ ಪರಿಸರವನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುತ್ತವೆ ಮತ್ತು ವ್ಯಾಪಾರ ಸುಲಭೀಕರಣದ ಶ್ರೇಯಾಂಕದಲ್ಲಿ ಭಾರತದ ಸ್ಥಾನವನ್ನು ಉತ್ತಮಪಡಿಸುತ್ತವೆ.

ಆರ್ಥಿಕ ಬೆಳವಣಿಗೆಯ ಪ್ರತಿಬಿಂಬ

ವಿಶ್ವಬ್ಯಾಂಕ್‌ನ ವ್ಯಾಪಾರ ಸುಲಭೀಕರಣ ಶ್ರೇಯಾಂಕದಲ್ಲಿ ಭಾರತ ಸುಧಾರಣೆ ಕಂಡಿದೆ . 2025-26ರ ಆರ್ಥಿಕ ವರ್ಷದಲ್ಲಿ 790.86 ಶತಕೋಟಿ ಡಾಲರ್‌ನಷ್ಟು ದಾಖಲೆಯ ರಫ್ತು ಸಾಧಿಸಿದೆ. ಇಂತಹ ಕಾನೂನು ಸುಧಾರಣೆಗಳು ಭಾರತದ ಬೆಳೆಯುತ್ತಿರುವ ಆರ್ಥಿಕ ಸಾಮರ್ಥ್ಯದ ಸಂಕೇತವಾಗಿವೆ. ಹೊಸ ಸುಧಾರಣೆಗಳಿಂದ ಭಾರತದ ಉದ್ಯಮ ಕ್ಷೇತ್ರಕ್ಕೆ ಪುಷ್ಠಿ ಸಿಗಲಿದೆ. ಇದು ರಫ್ತಿನಲ್ಲಿ ಗಣನೀಯ ಏರಿಕೆಗೂ ನೆರವು ನೀಡಲಿದೆ.

ನ್ಯಾಯಾಂಗದ ಮೇಲಿನ ಒತ್ತಡ ಇಳಿಕೆ

ಪ್ರಸ್ತುತ ನ್ಯಾಯಾಲಯಗಳಲ್ಲಿ 4.8 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಈ ವಿಧೇಯಕವು ಸಣ್ಣಪುಟ್ಟ ಉಲ್ಲಂಘನೆಗಳನ್ನು ನ್ಯಾಯಾಲಯಗಳ ಬದಲಿಗೆ 'ಅಡ್ಜೂಡಿಕೇಟಿಂಗ್ ಅಧಿಕಾರಿಗಳು' (Adjudicating Officers) ನಿರ್ವಹಿಸುವ ವ್ಯವಸ್ಥೆ ಮಾಡುತ್ತದೆ. ಇದರಿಂದ ನ್ಯಾಯಾಂಗದ ಕೆಲಸದ ಹೊರೆ ಶೇ. 25-30 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಅಡ್ಜೊಡಿಕೇಟಿಂಗ್ ವ್ಯವಸ್ಥೆಯಲ್ಲಿ ಪ್ರಕರಣಗಳು ತ್ವರಿತವಾಗಿ ಪರಿಹಾರವಾಗಲಿದೆ. ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುವುದು ಹಾಗೂ ಹಣ ಪೋಲಾಗುವುದು ತಪ್ಪಲಿದೆ.

ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ ಸುಧಾರಣೆ

700ಕ್ಕೂ ಹೆಚ್ಚು ಕ್ರಿಮಿನಲ್ ಅಪರಾಧಗಳನ್ನು ಈ ವಿಧೇಯಕವು ರದ್ದುಗೊಳಿಸುವುದರಿಂದ, ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ನಿಯಂತ್ರಕ ಸಂಸ್ಥೆಗಳು ಇಂತಹ ವಿಷಯಗಳನ್ನು ಆಡಳಿತಾತ್ಮಕ ಪ್ರಕ್ರಿಯೆಗಳ ಮೂಲಕವೇ ಪರಿಹರಿಸಲು ಸಾಧ್ಯವಾಗುತ್ತದೆ.

ಪರವಾನಗಿ-ಕೋಟಾ ರಾಜಕಾರಣ ಅಂತ್ಯ

ಹಿಂದಿನ ಕಾಂಗ್ರೆಸ್ ಸರ್ಕಾರಗಳು ಸಂಕೀರ್ಣ ನಿಯಮಗಳ 'ಲೈಸೆನ್ಸ್-ಕೋಟಾ' ವ್ಯವಸ್ಥೆಯನ್ನು ಅನುಸರಿಸುತ್ತಿದ್ದವು, ಇದು ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿಗೆ ಕಾರಣವಾಗಿತ್ತು. 2012ರ ರೆಟ್ರೋಸ್ಪೆಕ್ಟಿವ್ ಟ್ಯಾಕ್ಸ್ ನಂತಹ ನಿರ್ಧಾರಗಳು ವೊಡಾಫೋನ್ ಮತ್ತು ಕೈರ್ನ್ ಎನರ್ಜಿಯಂತಹ ಜಾಗತಿಕ ಕಂಪನಿಗಳ ಮೇಲೆ ಪರಿಣಾಮ ಬೀರಿದ್ದವು. ಮೋದಿ ಸರ್ಕಾರ ಇಂತಹ ಹಳೆಯ ಮತ್ತು ತೊಡಕಿನ ನಿಯಮಗಳನ್ನು ತೆಗೆದುಹಾಕಲು ಶ್ರಮಿಸುತ್ತಿದೆ. ಈ ವಿಧೇಯಕ ಇಂತಹ ಕ್ಲಿಷ್ಠ ಕಾನೂನು ತೊಡಕುಗಳನ್ನು ನಿವಾರಿಸಿ ಪಾರದರ್ಶಕತೆಗೆ ಒತ್ತು ನೀಡಲಿದೆ.

ಜನ ವಿಶ್ವಾಸ 2026ರ ಸುಧಾರಣೆಗಳು ನಿಯಂತ್ರಕ ಕಿರುಕುಳದ ಯುಗವನ್ನು ಕೊನೆಗೊಳಿಸುವ ಗುರಿ ಹೊಂದಿವೆ. ಸಣ್ಣ ತಪ್ಪುಗಳನ್ನು ಅಪರಾಧವೆಂದು ನೋಡುವ ಬದಲಿಗೆ, ಅವುಗಳನ್ನು ತಿದ್ದಿಕೊಳ್ಳುವ ಅವಕಾಶ ನೀಡುವ ನಂಬಿಕೆ ಆಧಾರಿತ ಆಡಳಿತ ಮಾದರಿಯನ್ನು ಇದು ಪ್ರತಿಪಾದಿಸುತ್ತದೆ. ಇದು ಪ್ರಾಮಾಣಿಕ ಉದ್ಯಮಿಗಳು ಮತ್ತು ನಾಗರಿಕರನ್ನು ಗೌರವಿಸುವ ವ್ಯವಸ್ಥೆಯಾಗಿದೆ. ಜನವಿಶ್ವಾಸ ವಿಧೇಯಕ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ಮೇಲೆ ಜನರ ಇಟ್ಟ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುತ್ತದೆ. ಸುಗಮ ಆಡಳಿತ, ಪ್ರಕರಣಗಳ ತ್ವರಿತ ವಿಲೇವಾರಿಯನ್ನು ಮಾಡಲಿದೆ. 2026ರಲ್ಲಿ ಪ್ರಮುಖ ಸುಧಾರಣೆಗಳನ್ನು ಮಾಡುತ್ತಿರುವ ಮೋದಿ ಸರ್ಕಾರ ಇದೀಗ ಜನವಿಶ್ವಾಸ ವಿಧೇಯಕ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ.