Asianet Suvarna News Asianet Suvarna News

ಮಹಾರಾಷ್ಟ್ರದ ಬನ್ಸಿ ಹಳ್ಳಿಯಲ್ಲಿ ಮಕ್ಕಳಿಗೆ ಮೊಬೈಲ್‌ ಬ್ಯಾನ್‌!

ಮಕ್ಕಳ ಮೊಬೈಲ್‌ ಗೀಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಬನ್ಸಿಯಲ್ಲಿ ಗ್ರಾಮಸ್ಥರೇ ಉಪಾಯ ಕಂಡುಕೊಂಡಿದ್ದಾರೆ. 18 ವರ್ಷದ ಒಳಗಿನ ಮಕ್ಕಳಿಗೆ ಬನ್ಸಿ ಗ್ರಾಮದಲ್ಲಿ ಮೊಬೈಲ್‌ ನಿಷಿದ್ಧವಾಗಿದ್ದು, ಬಳಸಿದರೆ 200 ರೂಪಾಯಿ ದಂಡ ವಿಧಿಸಲಾಗುತ್ತದೆ.
 

Mobile ban for children in Maharashtra Bansi village san
Author
First Published Nov 18, 2022, 10:25 AM IST

ಯವತ್ಮಾಲ್‌ (ನ,18): ಮಕ್ಕಳಿಗೆ ಮೊಬೈಲ್‌ ಚಟ ಅಂಟದಂತೆ ಏನು ಮಾಡಬೇಕು ಎಂದು ಎಲ್ಲಾ ತಂದೆ ತಾಯಂದಿರೂ ಯೋಚಿಸುತ್ತಾರೆ. ಆದರೆ, ಮಹಾರಾಷ್ಟ್ರದ ಯವತ್ಮಾಲ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ಹಿರಿಯರೆಲ್ಲ ಸೇರಿ 18 ವರ್ಷದೊಳಗಿನ ಯಾವುದೇ ಮಕ್ಕಳು ಮೊಬೈಲ್‌ ಬಳಸುವಂತಿಲ್ಲ ಎಂದು ನಿಷೇಧವನ್ನೇ ಜಾರಿಗೊಳಿಸಿದ್ದಾರೆ. ಈ ವಯಸ್ಸಿನವರು ಮೊಬೈಲ್‌ ಬಳಸುವುದು ಕಂಡುಬಂದರೆ 200 ರು. ದಂಡ ವಿಧಿಸಲಾಗುತ್ತದೆ.  ಯವತ್ಮಾಲ್‌ ಜಿಲ್ಲೆಯ ಬನ್ಸಿ ಎಂಬ ಹಳ್ಳಿಯಲ್ಲಿ ಗ್ರಾಮಸಭೆಯಿಂದಲೇ ಈ ಆದೇಶ ಹೊರಡಿಸಲಾಗಿದೆ. ಗ್ರಾಮಸಭೆಯ ಎಲ್ಲಾ ಹಿರಿಯರು ಅವಿರೋಧವಾಗಿ ನ.11ರಂದು ಈ ನಿರ್ಧಾರ ಅಂಗೀಕರಿಸಿದ್ದಾರೆ. ಮಕ್ಕಳು ಮೊಬೈಲ್‌ಗೆ ಅಡಿಕ್ಟ್ ಆಗುವುದನ್ನು ತಪ್ಪಿಸಲು ಅವರಿಗೆ ಮೊಬೈಲ್‌ ಬಳಕೆ ನಿಷೇಧಿಸಲಾಗಿದೆ ಎಂದು ಗ್ರಾಮಸಭೆ ತನ್ನ ನಿರ್ಣಯದಲ್ಲಿ ಹೇಳಿದೆ. ಕೋವಿಡ್‌ ಸಮಯದಲ್ಲಿ ಮಕ್ಕಳು ಮೊಬೈಲ್‌ಗೆ ಅಡಿಕ್ಟ್ ಆಗಿದ್ದಾರೆ. ಈಗ ತಮ್ಮ ವಯಸ್ಸಿಗೆ ತಕ್ಕುದಲ್ಲದ ಮೊಬೈಲ್‌ ಗೇಮ್ಸ್‌ ಆಡುವುದು, ವೆಬ್‌ಸೈಟುಗಳನ್ನು ನೋಡುವುದು ಹೀಗೆ ನಾನಾ ಚಟುವಟಿಕೆಗಳಲ್ಲಿ ಮುಳುಗಿರುತ್ತಾರೆ. 

ಅವರಿಗೆ ಮೊಬೈಲ್‌ ನಿಷೇಧಿಸುವುದು ಕಷ್ಟಎಂಬುದು ನಮಗೆ ಗೊತ್ತು. ಆದರೆ ಆರಂಭದಲ್ಲಿ ಕೌನ್ಸೆಲಿಂಗ್‌ ಮೂಲಕ ಅವರ ಮನವೊಲಿಸುತ್ತೇವೆ ಎಂದು ಗ್ರಾಮಸಭೆಯ ಹಿರಿಯೊಬ್ಬರು ಹೇಳಿದ್ದಾರೆ. ಮಕ್ಕಳ ಪೋಷಕರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕೆಲ ಸಮಯದ ಹಿಂದೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಹಳ್ಳಿಯೊಂದು ಮಕ್ಕಳ ಮೊಬೈಲ್‌ ಚಟ ಬಿಡಿಸಲು ‘ಡಿಜಿಟಲ್‌ ಡೀಟಾಕ್ಸ್‌’ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಕೋವಿಡ್‌-19 ಸಮಯದಲ್ಲಿ ನಮ್ಮ ಗ್ರಾಮದ ಮಕ್ಕಳು ವಿಪರೀತ ಎನ್ನುವಷ್ಟು ಮೊಬೈಲ್‌ ಗೀಳು ಅಂಟಿಸಿಕೊಂಡಿದ್ದರು. ಮೊಬೈಲ್‌ನಲ್ಲಿಯೇ ಗೇಮ್‌ ಆಡುವುದು ಹಾಗೂ ಅವರ ವಯಸ್ಸಿಗೆ ಸೂಕ್ತವಲ್ಲದ ವೆಬ್‌ಸೈಟ್‌ಗಳನ್ನು ಬ್ರೌಸಿಂಗ್‌ ಮಾಡುತ್ತಿದ್ದರು. ಇವೆಲ್ಲವನ್ನು ನಿಯಂತ್ರಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬನ್ಸಿ ಗ್ರಾಮ ಪಂಚಾಯತ್‌ನ ಗಜಾನನ ಟಲೇ ಹೇಳಿದ್ದಾರೆ. "ಈ ನಿರ್ಧಾರದ ಅನುಷ್ಠಾನವು ಕಷ್ಟಕರವಾಗಿದೆ ಎಂದು ನಮಗೆ ತಿಳಿದಿದೆ ಆದರೆ ನಾವು ಆರಂಭದಲ್ಲಿ ಸಮಾಲೋಚನೆಯ ಮೂಲಕ ಸವಾಲುಗಳನ್ನು ಎದುರಿಸುತ್ತೇವೆ" ಎಂದು ಟೆಲೇ ಹೇಳಿದ್ದಾರೆ. "ಮೊಬೈಲ್ ಬಳಸುತ್ತಿರುವ ಯಾವುದೇ ಮಕ್ಕಳಿಗೆ ದಂಡವನ್ನು ವಿಧಿಸಲಾಗುತ್ತದೆ' ಎಂದಿದ್ದಾರೆ.

ಮೊಬೈಲ್‌ ಗೀಳು ಬಿಡದ ಮಕ್ಕಳು: ಇದಕ್ಕೆ ಪರಿಹಾರ ಏನು?

ಆದರೆ ಮೊಬೈಲ್‌ ಬ್ಯಾನ್‌ನ ಬಗ್ಗೆ ಮಕ್ಕಳು ಯಾವ ಅಭಿಪ್ರಾಯ ಹೊಂದಿದ್ದಾರೆ ಎನ್ನುವುದು ಇನ್ನೂ ತಿಳಿದಿಲ್ಲ. ಆದರೆ, ಗ್ರಾಮದ ಅಧಿಕಾರಿಗಳು ಮಾತ್ರ ಇಲ್ಲಿನ ಮಕ್ಕಳು ಮೊಬೈಲ್‌ ಬ್ಯಾನ್‌ ಮಾಡಿದ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದಿದ್ದಾರೆ.  "ವಿದ್ಯಾರ್ಥಿಗಳಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸಲು ಇದು ಅತ್ಯುತ್ತಮ ಹೆಜ್ಜೆಯಾಗಿದೆ" ಎಂದು ಯುವ ವಿದ್ಯಾರ್ಥಿ ಆಶಿಶ್ ದೇಶಮುಖ್ ತಿಳಿಸಿದ್ದಾರೆ. ಇನ್ನು ಮಕ್ಕಳ ಪಾಲಕರು ಕೂಡ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಇದರಿಂದಾಗಿ ಮಕ್ಕಳ ಮೇಲೆ ಗಮನ ನೀಡಲು ಅವರಿಗೂ ಕೂಡ ಸಾಧ್ಯವಾಗಲಿದೆ.

ಕೋವಿಡ್‌ ಬಳಿಕ ಮಕ್ಕಳಲ್ಲಿ ಹೆಚ್ಚಿದ ಮೊಬೈಲ್‌ ಗೀಳು!

ಸಾಂಗ್ಲಿಯಲ್ಲೂ ಇದೇ ಅಭ್ಯಾಸ:
  ವರ್ಷದ ಆರಂಭದಲ್ಲಿ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಒಂದು ಗ್ರಾಮವು ಮಕ್ಕಳನ್ನು ಅಧ್ಯಯನ ಮಾಡಲು ಮತ್ತು ವಯಸ್ಕರು ಸಮುದಾಯದ ಸದಸ್ಯರೊಂದಿಗೆ ಸಂವಹನ ನಡೆಸಲು ಅಥವಾ ಓದುವಂತಹ ಬೌದ್ಧಿಕ ಅನ್ವೇಷಣೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸಲು ದೈನಂದಿನ "ಡಿಜಿಟಲ್ ಡಿಟಾಕ್ಸ್" ಅನ್ನು ಪರಿಚಯಿಸಿತು. ಮೊಹಿತ್ಯಂಚೆ ವಡ್ಗಾಂವ್‌ನಲ್ಲಿ ಪ್ರತಿ ರಾತ್ರಿ 7 ಗಂಟೆಗೆ ಸೈರನ್ ಮೊಳಗುತ್ತದೆ. ಆ ಸಮಯದಿಂದ ರಾತ್ರಿ 8.30ರವರೆಗೆ ಅಲ್ಲಿನ ಮಕ್ಕಳು ಸ್ಥಳೀಯ ಗ್ರಾಮಸ್ಥರೊಂದಿಗೆ ಬೆರೆಯಬೇಕು. ಅವರೊಂದಿಗೆ ಮಾತನಾಡಬೇಕಿರುತ್ತದೆ. ಈ ಸಮಯದಲ್ಲಿ ಯಾರೂ ಕೂಡ ಎಲೆಕ್ಟ್ರಾನಿಕ್‌ ಡಿವೈಸ್‌ಗಳನ್ನು ಬಳಕೆ ಮಾಡುವಂತಿಲ್ಲ ಎಂದು ಸೂಚಿಸಲಾಗಿತ್ತು. ಗ್ರಾಮದ ಮುಖ್ಯಸ್ಥ ವಿಜಯ್ ಮೋಹಿತೆ ಅವರು ಈ ಕಲ್ಪನೆಯನ್ನು ಒಂದು ಬಾರಿಯ ಪ್ರಯೋಗವಾಗಿ ಆರಂಭ ಮಾಡಿದ್ದರು. ಆದರೆ ಆಶಾ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಹಳ್ಳಿಯ ಇತರರು ಇದಕ್ಕೆ ಅಪಾರವಾದ ಬೆಂಬಲ ನೀಡಿದ್ದರಿಂದ, ಇಂದು ಗ್ರಾಮದಲ್ಲಿ ವ್ಯಾಪಕವಾಗಿ ಇದನ್ನು ಆಚರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

Follow Us:
Download App:
  • android
  • ios