Asianet Suvarna News Asianet Suvarna News

ಕೋವಿಡ್‌ ಬಳಿಕ ಮಕ್ಕಳಲ್ಲಿ ಹೆಚ್ಚಿದ ಮೊಬೈಲ್‌ ಗೀಳು!

ನಮ್ಮ ಮಗನಿಗೆ ಮೊಬೈಲ್‌ ಕೊಡದಿದ್ದರೆ ಊಟ ಬಿಡುತ್ತಾನೆ. ನಮ್ಮೊಂದಿಗೆ ಮಾತನಾಡುವುದನ್ನೂ ನಿಲ್ಲಿಸುತ್ತಾನೆ ಏನು ಮಾಡೋಣ..’ ‘ನಮ್ಮ ಮಗನೂ ಅಷ್ಟೆಯಾವಾಗಲೂ ಮೊಬೈಲ್‌ನಲ್ಲಿ ಮುಳುಗಿರುತ್ತಾನೆ.

Increased mobile addiction among children after covid19 at karnataka gvd
Author
First Published Nov 11, 2022, 11:49 AM IST

ಲಿಂಗರಾಜು ಕೋರಾ

ಬೆಂಗಳೂರು (ನ.11): ‘ನಮ್ಮ ಮಗನಿಗೆ ಮೊಬೈಲ್‌ ಕೊಡದಿದ್ದರೆ ಊಟ ಬಿಡುತ್ತಾನೆ. ನಮ್ಮೊಂದಿಗೆ ಮಾತನಾಡುವುದನ್ನೂ ನಿಲ್ಲಿಸುತ್ತಾನೆ ಏನು ಮಾಡೋಣ..’ ‘ನಮ್ಮ ಮಗನೂ ಅಷ್ಟೆ ಯಾವಾಗಲೂ ಮೊಬೈಲ್‌ನಲ್ಲಿ ಮುಳುಗಿರುತ್ತಾನೆ. ಮೊಬೈಲ್‌ ಬಿಟ್ಟು ಓದಿಕೋ ಎಂದರೆ ಸಿಟ್ಟು ಮಾಡಿಕೊಂಡು ಮನೆಯಿಂದ ಹೊರಗೆ ಹೋಗುತ್ತಾನೆ. ಎಷ್ಟು ಹೊತ್ತಾದರೂ ಬರದೆ ಗಾಬರಿ ಬೀಳಿಸುತ್ತಾನೆ. ಈ ಮೊಬೈಲ್‌ ಗೀಳನ್ನು ಬಿಡಿಸೋದು ಹೇಗೆ ದಯವಿಟ್ಟು ಸಲಹೆ ಕೊಡಿ...’

ಹೀಗಂತ, ಮಕ್ಕಳ ಸಹಾಯವಾಣಿ ಸಂಖ್ಯೆಗೆ ನಿತ್ಯ ಪೋಷಕರಿಂದ ಕರೆಗಳು ಬರುತ್ತಿರುವುದು ಹೆಚ್ಚಾಗುತ್ತಿದೆ. ಕೋವಿಡ್‌ ನಂತರ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಮೊಬೈಲ್‌ ಗೀಳು ಹೆಚ್ಚಾಗಿದ್ದು, ಇದನ್ನು ಬಿಡಿಸಲು ಪೋಷಕರು ಹರಸಾಹಸ ಪಡುತ್ತಿದ್ದಾರೆ. ಏನು ಮಾಡಿದರೂ ಸಾಧ್ಯವಾಗದವರು ಅನಿವಾರ್ಯವಾಗಿ ವಿವಿಧ ಮಕ್ಕಳ ಕೇಂದ್ರಗಳ ಮೊರೆ ಹೋಗಿ ಸಲಹೆ ಕೇಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ.

ಹಬ್ಬಿದ್ದು ಹೀಗೆ: ಈ ಸಂಬಂಧ ‘ಕನ್ನಡಪ್ರಭ’ಗೆ ಮಾಹಿತಿ ನೀಡಿರುವ ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ನ ನಿರ್ದೇಶಕ ನಾಗಸಿಂಹ ರಾವ್‌, ಕೋವಿಡ್‌ ಸಮಯದಲ್ಲಿ ಶಾಲೆಗಳು ಆರಂಭವಾಗದಿದ್ದಾಗ ಆನ್‌ಲೈನ್‌ನಲ್ಲೇ ಪಾಠ ಕೇಳುತ್ತಿದ್ದ ಮಕ್ಕಳು ಜತೆಗೆ ಗೇಮ್ಸ್‌, ಯೂಟ್ಯೂಬ್‌, ರೀಲ್ಸ್‌, ಫೇಸ್ಬುಕ್‌, ವಾಟ್ಸಾಪ್‌, ಇನ್ಸ್ಟಾಗ್ರಾಮ್‌ ಮತ್ತಿತರ ಸಾಮಾಜಿಕ ಜಾಲತಾಣಗಳ ಬಳಕೆ, ವೀಕ್ಷಣೆಯಲ್ಲಿ ಕಾಲ ಕಳೆಯುತ್ತಿದ್ದರು. ಮಕ್ಕಳು ಮನೆಯಲ್ಲೇ ಇದ್ದು ಇನ್ನೇನು ಮಾಡುತ್ತಾರೆ ಎಂದು ಪೋಷಕರೂ ಆಗ ಸುಮ್ಮನಾಗಿದ್ದರು. ಈಗ ಅದೇ ದೊಡ್ಡ ಸಮಸ್ಯೆಯಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 924 ಮಕ್ಕಳು

ನಾನಾ ಹಠ: ಶಾಲೆ ಆರಂಭವಾಗಿ ಭೌತಿಕ ತರಗತಿಗಳು ನಡೆಯುತ್ತಿದ್ದರೂ ಮಕ್ಕಳು ಆಟ, ಪಾಠದ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ. ಯಾವುಗಲೂ ಮೊಬೈಲ್‌ ಬಳಕೆ ಹೆಚ್ಚಿಸಿಕೊಂಡಿದ್ದಾರೆ. ಮೊಬೈಲ್‌ ಕೊಡದಿದ್ದರೆ ಕೋಪಿಸಿಕೊಂಡು ಕೂರುತ್ತಾರೆ, ಊಟ ಬಿಡುತ್ತಾರೆ, ನಮ್ಮೊಂದಿಗೂ ಮಾತನಾಡುವುದಿಲ್ಲ. ಮನೆಯಲ್ಲಿರದೆ ಸಿಟ್ಟು ಮಾಡಿಕೊಂಡು ಹೊರಗೆ ಹೋಗುವುದು. ಎಷ್ಟು ಹೊತ್ತಾದರೂ ಬರದೆ ಹುಡುಕಾಡುವಂತೆ ಮಾಡುವುದು ಸೇರಿ ಒಟ್ಟಿನಲ್ಲಿ ಗಾಬರಿ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಗೀಳು ಬಿಡಿಸಲು ತಜ್ಞರ ಸಲಹೆಗಳೇನು?
1. ಮೊಬೈಲ್‌ ಗೀಳು ಒಮ್ಮೆಗೆ ನಿಲ್ಲಿಸಲು ಹೋದರೆ ಸಮಸ್ಯೆಯಾಗಬಹುದು. ಹಾಗಾಗಿ ಪ್ರೀತಿಯಿಂದ ಮಕ್ಕಳೊಂದಿಗೆ ಮಾತನಾಡಿ ದಿನಕ್ಕೆ ಎರಡು ಗಂಟೆಗಳಷ್ಟೇ ಮೊಬೈಲ್‌ ನೋಡಬೇಕೆಂದು ನಿಯಮ ರೂಪಿಸಿ. ಆಗ ಮಕ್ಕಳು ಹೆಚ್ಚು ಆಟ, ಪಾಠ ಮತ್ತಿತರ ಚಟುಟಿಕೆಗಳ ಕಡೆ ತೊಡಗುತ್ತಾರೆ. ನಂತರ ಹಂತ ಹಂತವಾಗಿ ಮೊಬೈಲ್‌ ಬಳಕೆ ಅವಧಿಯನ್ನು ಇನ್ನಷ್ಟು ಕಡಿಮೆ ಮಾಡಲು ಪ್ರಯತ್ನಿಸಿ.

2. ಯಾವುದೇ ಕಾರಣಕ್ಕೂ ಮಕ್ಕಳ ಮೊಬೈಲ್‌ನಲ್ಲಿರುವ ಆಪ್‌, ಗೇಮ್ಸ್‌ಗಳನ್ನು ಮಕ್ಕಳಿಗೆ ಗೊತ್ತಿಲ್ಲದಂತೆ ಡಿಲೀಟ್‌ ಮಾಡಬೇಡಿ. ಮೊಬೈಲ್‌ ಕೊಡುವುದೇ ಇಲ್ಲ, ಬಳಸುವಂತೆಯೇ ಇಲ್ಲ ಎಂದು ಏಕಾಏಕಿ ನಿರ್ಧಾರ ಮಾಡಬೇಡಿ.

3. ಮಕ್ಕಳೊಂದಿಗೆ ಸಹನೆಯಿಂದ ವರ್ತಿಸಿ. ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್‌ ಹೊಂದರದ ಪೋಷಕರು ನಮಗೆ ಅದರ ಜ್ಞಾನ ಇಲ್ಲ ಅಥವಾ ಅಗತ್ಯವಿಲ್ಲ ಎಂದು ಸುಮ್ಮನಾಗಬೇಡಿ. ನೀವೂ ಮಕ್ಕಳ ಸಲಹೆಯಿಂದಲೇ ನಿಮ್ಮ ಅಕೌಂಟ್‌ ಸೃಷ್ಟಿಸಿ ಅವರ ಫ್ರೆಂಡ್ಸ್‌ ಗ್ರೂಪ್‌ ಸೇರಿಕೊಳ್ಳಿ. ಆಗ ಅವರು ಮಾಡುವ ರೀಲ್ಸ್‌, ಹಾಕುವ ಪೋಸ್ಟಿಂಗ್‌, ವಿಡಿಯೋ, ಕಾಮೆಂಟ್ಸ್‌, ಚರ್ಚೆಗಳನ್ನು ಗಮನಿಸಬಹುದು. ಪೋಷಕರು ನಮ್ಮ ಚಟುವಟಿಕೆ ಗಮನಿಸುತ್ತಾರೆ.

4. ಮಕ್ಕಳ ಖಾಸಗೀತನಕ್ಕೂ ನಾವು ಬೆಲೆ ನೀಡಬೇಕು, ಆದರೆ ಮಕ್ಕಳ ಹಿತ ದೃಷ್ಟಿಯಿಂದ ಸಾಮಾಜಿಕ ಜಾಲತಾಣಗಲ್ಲಿ ಮೇಲ್ವಿಚಾರಣೆ ಮಾಡಿ. ನಿಮ್ಮ ಮಕ್ಕಳ ಗೆಳೆಯರ ಪರಿಚಯ ಮಾಡಿಕೊಳ್ಳಿ , ಮಕ್ಕಳ ಗೆಳೆಯರೊಂದಿಗೆ ಸಂಪರ್ಕದಲ್ಲಿರಿ. ಹೆಚ್ಚಿನ ಸಮಯ ಮಕ್ಕಳೊಂದಿಗೆ ಇರಲು ಪ್ರಯತ್ನಿಸಿ, ಮಕ್ಕಳ ಮಾತನ್ನು ಕೇಳಿ, ಅವರು ತಮ್ಮ ಅನುಭವ ಹಂಚಿಕೊಳ್ಳಲು ಸಹಕರಿಸಿ.

ಮಕ್ಕಳಲ್ಲಿ ಈ ಅಭ್ಯಾಸ ಬೆಳೆಸಿ, ಅವೇ ರೂಢಿಯಾಗಿಬಿಡುತ್ತೆ!

ಈ ಎಲ್ಲ ಸಲಹೆಗಳ ಪ್ರಯೋಗ, ಪ್ರಯತ್ನದ ಬಳಿಕವೂ ನಿಮ್ಮ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಆಗಲಿಲ್ಲ. ಆಪ್ತಸಮಾಲೋಚನೆಯ ಅಗತ್ಯವಿದೆ ಎಂದು ಅನಿಸಿದರೆ 1098 ಚೈಲ್ಡ್‌ ಹೆಲ್ಪ್‌ ಲೈನ್‌ಗೆ ಕರೆಮಾಡಿ ಸಲಹೆ ಪಡೆಯಿರಿ.
-ನಾಗಸಿಂಹ ಜಿ.ರಾವ್‌, ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ನಿರ್ದೇಶಕ

Follow Us:
Download App:
  • android
  • ios