ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ನರೇಗಾ ಯೋಜನೆ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಯೋಜನೆಯಡಿ ಕೆಲಸದ ದಿನಗಳನ್ನು 100 ರಿಂದ 125 ಕ್ಕೆ ಹೆಚ್ಚಿಸಲಾಗಿದೆ ಮತ್ತು ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಿ ಪಾರದರ್ಶಕತೆ ತರಲಾಗಿದೆ ಎಂದರು.

ನವದೆಹಲಿ (ಡಿ.27): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MNREGA) ವಿಚಾರವಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನ ಇಂದಿನ ಬೊಬ್ಬೆ ಕೇವಲ ರಾಜಕೀಯ ಲಾಭಕ್ಕಾಗಿ ಹಾಗೂ ಇದೊಂದು ಉದ್ದೇಶವಿಲ್ಲದ ನೀತಿ ಎಂದು ಅವರು ಟೀಕಿಸಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಇದು ಮೊಸಳೆ ಕಣ್ಣೀರು

ಸಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಚೌಹಾಣ್, 'ಗಾಂಧೀಜಿಯವರ ಹೆಸರನ್ನು ಕೇವಲ ಮತಕ್ಕಾಗಿ ಬಳಸಿಕೊಂಡ ಕಾಂಗ್ರೆಸ್, ಅಧಿಕಾರದಲ್ಲಿದ್ದಾಗ ಇದೇ ಯೋಜನೆಯ ಬಜೆಟ್ ಅನ್ನು ಕಡಿತಗೊಳಿಸಿತ್ತು. ಕಾರ್ಮಿಕರ ವೇತನವನ್ನು ಸ್ಥಗಿತಗೊಳಿಸಿದ ಇತಿಹಾಸ ಕಾಂಗ್ರೆಸ್‌ಗೆ ಇದೆ. ಇಂದು ತಂತ್ರಜ್ಞಾನದಿಂದಾಗಿ ಹಣ ನೇರವಾಗಿ ಕಾರ್ಮಿಕರ ಖಾತೆಗೆ ತಲುಪುತ್ತಿರುವುದನ್ನು ಕಂಡು ಕಾಂಗ್ರೆಸ್ ನಾಯಕರು ಸಹಿಸಲಾರದೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಉದ್ಯೋಗ ದಿನಗಳ ಸಂಖ್ಯೆ 125ಕ್ಕೆ ಏರಿಕೆ: ದೊಡ್ಡ ಘೋಷಣೆ

ನರೇಗಾ ಯೋಜನೆಯಡಿ ಉದ್ಯೋಗ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದ ಸಚಿವರು, ಈ ಮೊದಲು ಇದ್ದ 100 ಕೆಲಸದ ದಿನಗಳನ್ನು ಈಗ 125 ಕ್ಕೆ ಹೆಚ್ಚಿಸಲಾಗಿದೆ. ನಿಗದಿತ ಸಮಯದಲ್ಲಿ ಕೆಲಸ ಸಿಗದಿದ್ದರೆ ನಿರುದ್ಯೋಗ ಭತ್ಯೆ ನೀಡಲು ಅವಕಾಶವಿದೆ. ಅಷ್ಟೇ ಅಲ್ಲ, ವೇತನ ಪಾವತಿ ವಿಳಂಬವಾದರೆ ಹೆಚ್ಚುವರಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಉದ್ಯೋಗ ಭದ್ರತೆ ಕಡಿಮೆಯಾಗುತ್ತಿಲ್ಲ, ಬದಲಾಗಿ ಹೆಚ್ಚುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಗ್ರಾಮ ಸಭೆಗಳಿಗೆ ಸಿಗಲಿದೆ ಹೆಚ್ಚಿನ ಪವರ್

ಈ ಯೋಜನೆಯಲ್ಲಿ ಇನ್ನು ಮುಂದೆ ದೆಹಲಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಬದಲಾಗಿ ಗ್ರಾಮ ಪಂಚಾಯಿತಿಗಳೇ ತಮಗೆ ಬೇಕಾದ ಯೋಜನೆಗಳನ್ನು ರೂಪಿಸಲಿವೆ. ಗ್ರಾಮ ಸಭೆಗಳು ಕೆಲಸದ ಆದ್ಯತೆಯನ್ನು ಗುರುತಿಸಲಿವೆ. ಅನುಷ್ಠಾನ, ಮೇಲ್ವಿಚಾರಣೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಯನ್ನು ಕಡ್ಡಾಯಗೊಳಿಸುವ ಮೂಲಕ ಪಾರದರ್ಶಕತೆ ತರಲಾಗಿದೆ. ಮಹಿಳೆಯರು ಮತ್ತು ಸ್ವಸಹಾಯ ಗುಂಪುಗಳ ಸಕ್ರಿಯ ಭಾಗವಹಿಸುವಿಕೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕಾರ್ಮಿಕರ ಹಕ್ಕು ದಾನವಲ್ಲ; ಇದು ಗೌರವಾನ್ವಿತ ಭದ್ರತೆ

ಹಿಂದುಳಿದ ಪಂಚಾಯತ್‌ಗಳಿಗೆ ಹೆಚ್ಚಿನ ಅನುದಾನ ತಲುಪುವಂತೆ ನಾವು ವ್ಯವಸ್ಥೆ ಮಾಡಿದ್ದೇವೆ. ಈ ಯೋಜನೆಯು ಕಾರ್ಮಿಕರ ಹಕ್ಕುಗಳನ್ನು ಯಾವುದೋ ದತ್ತಿ ಸಂಸ್ಥೆಯ ದಾನದಂತೆ ನೀಡುವುದಿಲ್ಲ, ಬದಲಾಗಿ ಗೌರವಾನ್ವಿತ ಭದ್ರತೆಯಾಗಿ ಖಾತ್ರಿಪಡಿಸುತ್ತದೆ. ಸ್ವಂತ ಗ್ರಾಮದಲ್ಲಿ ಸುರಕ್ಷಿತ ಕೆಲಸದ ಪರಿಸ್ಥಿತಿ ಮತ್ತು ಯೋಗ್ಯ ವೇತನ ನೀಡುವುದು ನಮ್ಮ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.

ಗ್ರಾಮ ಸ್ವರಾಜ್ಯ ಮತ್ತು ಸ್ವಾವಲಂಬನೆಯೇ ನಮ್ಮ ಗುರಿ

ಗ್ರಾಮೀಣ ಭಾರತದ ಭವಿಷ್ಯದ ಬಗ್ಗೆ ಮಾತನಾಡುತ್ತಾ, ನಮ್ಮ ಸಂಕಲ್ಪ ಗ್ರಾಮ ಸ್ವ-ಆಡಳಿತ ಮತ್ತು ಸ್ವಾವಲಂಬನೆಯಾಗಿದೆ. ಗ್ರಾಮ ಆಧಾರಿತ ಅಭಿವೃದ್ಧಿ ನಮ್ಮ ದೃಷ್ಟಿಕೋನವಾಗಿದ್ದು, ಕಾರ್ಮಿಕರಿಗೆ ಗೌರವ ನೀಡುವುದು ನಮ್ಮ ಮುಖ್ಯ ಉದ್ದೇಶ. ಸಬಲೀಕರಣಗೊಂಡ ಹಳ್ಳಿಗಳು ಮತ್ತು ಗೌರವಾನ್ವಿತ ಕೆಲಸಗಾರರನ್ನು ಹೊಂದುವುದೇ ನಮ್ಮ ಅಂತಿಮ ಗುರಿ ಎಂದು ಕೇಂದ್ರ ಸಚಿವರು ತಮ್ಮ ಪೋಸ್ಟ್‌ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.