ಗ್ರಾಪಂಗಳ ಅಧಿಕಾರ ಮೊಟಕುಗೊಳಿಸಿದ್ದು, 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮೂಲಕ ರಾಜ್ಯ ಸರ್ಕಾರದ ಮೇಲೆ ಹೊರೆ ಹಾಕಿದೆ. ಇದರ ವಿರುದ್ಧ ಇಂಡಿಯಾ ಮೈತ್ರಿಕೂಟ ದೇಶಾದ್ಯಂತ ಹೋರಾಟ ಮಾಡಲಿದೆ ಎಂದು ಸಚಿನ್‌ ಪೈಲಟ್ ಹೇಳಿದ್ದಾರೆ.

ಬೆಂಗಳೂರು (ಡಿ.23): ‘ಮಹಾತ್ಮಾಗಾಂಧಿ ನರೇಗಾ (ನರೇಗಾ) ಯೋಜನೆಯಲ್ಲಿ ಬದಲಾವಣೆ ತರುವ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣ ಆರ್ಥಿಕ ಭದ್ರತೆ ನಾಶ ಮಾಡಲು ಹೊರಟಿದೆ. ಗ್ರಾಪಂಗಳ ಅಧಿಕಾರ ಮೊಟಕುಗೊಳಿಸಿದ್ದು, 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮೂಲಕ ರಾಜ್ಯ ಸರ್ಕಾರದ ಮೇಲೆ ಹೊರೆ ಹಾಕಿದೆ. ಇದರ ವಿರುದ್ಧ ಇಂಡಿಯಾ ಮೈತ್ರಿಕೂಟ ದೇಶಾದ್ಯಂತ ಹೋರಾಟ ಮಾಡಲಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್‌ ಪೈಲಟ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೇಂದ್ರದ ಈ ನೀತಿ ವಿರುದ್ಧ ಇಂಡಿಯಾ ಮೈತ್ರಿಕೂಟ ಸೇರಿ ಇಡೀ ಭಾರತ ಒಟ್ಟಾಗಿ ವಿರೋಧ ಮಾಡಬೇಕಿದೆ.

ಈ ಬದಲಾವಣೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವವರೆಗೂ ಹೋರಾಟ ಮಾಡಿ ಒತ್ತಡ ಹಾಕಲಾಗುವುದು ಎಂದರು. ಕೇಂದ್ರ ಸರ್ಕಾರ ಐತಿಹಾಸಿಕ ಪ್ರಮಾದ ಎಸಗಿದ್ದು, ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹೆಸರಿನಲ್ಲಿದ್ದ ಯೋಜನೆ ಹೆಸರು ಬದಲಿಸಲಾಗಿದೆ. ಈ ಯೋಜನೆ ಆರ್ಥಿಕವಾಗಿ ತೀರಾ ಹಿಂದುಳಿದ ಜನರಿಗೆ ಸಾಂವಿಧಾನಿಕವಾಗಿ ಉದ್ಯೋಗ ಖಾತರಿ ಹಕ್ಕು ನೀಡಿತ್ತು. ವರ್ಷಕ್ಕೆ 100 ದಿನಗಳ ಉದ್ಯೋಗ ನೀಡುವ ಖಾತರಿ ಯೋಜನೆಯನ್ನು ಸಂಸತ್ತಿನಲ್ಲಿ ಚರ್ಚೆ ಮಾಡದೆ, ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆಯದೆ, ಸ್ಥಾಯಿ ಸಮಿತಿ ಪರಾಮರ್ಶೆಗೂ ಅವಕಾಶ ನೀಡದೆ ಅಧಿಕಾರ ದುರುಪಯೋಗ ಮಾಡಿಕೊಂಡು ಬದಲಾವಣೆ ಮಾಡಲಾಗಿದೆ ಎಂದು ಪೈಲಟ್ ದೂರಿದ್ದಾರೆ.

ಇಷ್ಟು ದಿನಗಳ ಕಾಲ ಯೋಜನೆಯಲ್ಲಿ 90% ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು, ಉಳಿದ 10% ಅನುದಾನವನ್ನು ರಾಜ್ಯ ಸರ್ಕಾರಗಳು ಒದಗಿಸಬೇಕಾಗಿತ್ತು. ಆದರೆ ಈಗ, ಯೋಜನೆಯಲ್ಲಿನ ಅನುದಾನದ ಪಾಲನ್ನು 60:40 ಅನುಪಾತಕ್ಕೆ ಪರಿವರ್ತಿಸಲಾಗಿದೆ. ರಾಜ್ಯ ಸರ್ಕಾರಗಳ ಮೇಲೆ ಹೆಚ್ಚು ಹೊರೆ ಹಾಕುತ್ತಿದೆ. ಮೋದಿ ಅವರಿಗೆ 11 ವರ್ಷಗಳ ಬಳಿಕವೂ ಈ ಯೋಜನೆ ನಿಲ್ಲಿಸಲು ಸಾಧ್ಯವಾಗಿಲ್ಲ. 100 ದಿನಗಳ ಬದಲು 125 ದಿನ ಮಾಡಲಾಗುತ್ತಿದೆ ಎಂದು ಹೇಳಿ ಯೋಜನೆಗೆ ಚ್ಯುತಿ ತರಲಾಗುತ್ತಿದೆ. ಬಿಹಾರದಲ್ಲಿ ನರೇಗಾ ಯೋಜನೆ ಮೇಲೆ ಹೆಚ್ಚು ಅವಲಂಬಿತರಾಗಿದ್ದರು. ಹೀಗಾಗಿಯೇ ಬಿಹಾರ ಚುನಾವಣೆ ಬಳಿಕ ಯೋಜನೆಯಲ್ಲಿ ಬದಲಾವಣೆ ತರಲಾಗಿದೆ ಎಂದರು.

‘ಹೆರಾಲ್ಡ್ ಪ್ರಕರಣದಲ್ಲಿ ದ್ವೇಷ ರಾಜಕಾರಣಕ್ಕೆ ಕೋರ್ಟ್ ಶಾಸ್ತಿ’

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಯಾವುದೇ ವ್ಯವಹಾರ ನಡೆಸಿಲ್ಲವಾದರೂ ಅವರನ್ನು ಆರೋಪದಲ್ಲಿ ಸಿಲುಕಿಸುವ ಷಡ್ಯಂತ್ರ ನಡೆಸಲಾಗಿತ್ತು. ಕೋರ್ಟ್ ಈ ಪ್ರಕರಣವನ್ನು ವಜಾಗೊಳಿಸುವ ಮೂಲಕ ಕೇಂದ್ರದ ದ್ವೇಷ ರಾಜಕಾರಣಕ್ಕೆ ಶಾಸ್ತಿ ಮಾಡಿದೆ ಎಂದು ಸಚಿನ್‌ ಪೈಲಟ್ ಹೇಳಿದ್ದಾರೆ. ಇ.ಡಿ. ದಾಖಲಿಸಿರುವ ಪ್ರಕರಣ ರಾಜಕೀಯ ಪ್ರೇರಿತವಾಗಿರುವ ಕಾರಣ ನ್ಯಾಯಾಲಯ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಪ್ರಯತ್ನವನ್ನು ಇ.ಡಿ.ಯಂಥ ಸಂಸ್ಥೆಗಳ ಮೂಲಕ ಕೇಂದ್ರ ಮಾಡುತ್ತಿದೆ ಎಂದು ಕಿಡಿಕಾರಿದರು.