ಮದುರೈನ ತಿರುಪ್ಪರಂಕುಂಡ್ರಂ ಬೆಟ್ಟದ ವಿವಾದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ದೀಪ ಹಚ್ಚಲು ಅವಕಾಶ, ಭದ್ರತೆಗಾಗಿ ಸಿಆರ್ಪಿಎಫ್ ನಿಯೋಜನೆ ಮತ್ತು ಅಧಿಕಾರಿಗಳಿಗೆ ನೋಟಿಸ್ ಸೇರಿದಂತೆ 8 ಪ್ರಮುಖ ಅಂಶಗಳು ಹೊರಬಿದ್ದಿವೆ.
ನವದೆಹಲಿ (ನ.27): ತಿರುಪ್ಪರಂಕುಂಡ್ರಂ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ನೀಡಿರುವ ಮಹತ್ವದ ಆದೇಶದ 8 ಪ್ರಮುಖ ಅಂಶಗಳು ಹೊರಬಿದ್ದಿವೆ. ನಾಳೆ 'ದೀಪತೂನ್' (Deepathoon) ಮೇಲೆ ದೀಪ ಬೆಳಗಲು ನಿರ್ದೇಶನ ನೀಡುವುದರ ಜೊತೆಗೆ, ಸಿಕಂದರ್ ದರ್ಗಾದಿಂದ ಕನಿಷ್ಠ 50 ಮೀಟರ್ ದೂರದಲ್ಲಿ ಪ್ರತಿಯೊಬ್ಬ ಭಕ್ತರಿಗೂ ದೀಪ ಹಚ್ಚಲು ಅವಕಾಶ ನೀಡಲಾಗಿದೆ. ಮದುರೈನ ತಿರುಪ್ಪರಂಕುಂಡ್ರಂ ಬೆಟ್ಟದ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿದೆ. ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರಮುಖ 8 ಅಂಶಗಳು ಈ ಕೆಳಗಿನಂತಿವೆ.
1. ನಾಳೆ 'ದೀಪತೂಣ್' ಮೇಲೆ ದೀಪ ಬೆಳಗಲು ನಿರ್ದೇಶನ: ಬೆಟ್ಟದ ಮೇಲಿರುವ 'ದೀಪತೂಣ್' (Deepathoon) ಸ್ಥಳದಲ್ಲಿ ನಾಳೆ ದೀಪ ಬೆಳಗುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
2. ಸಿಕಂದರ್ ದರ್ಗಾದಿಂದ ಕನಿಷ್ಠ 50 ಮೀಟರ್ ದೂರದಲ್ಲಿ ದೀಪ ಹಚ್ಚಲು ಅವಕಾಶ: ಬೆಟ್ಟದ ತುದಿಯಲ್ಲಿರುವ ಸಿಕಂದರ್ ದರ್ಗಾದಿಂದ (Sikandar Dargah) ಕನಿಷ್ಠ 50 ಮೀಟರ್ ದೂರದಲ್ಲಿ ಪ್ರತಿಯೊಬ್ಬ ಭಕ್ತರಿಗೂ ದೀಪ ಬೆಳಗಲು ಅವಕಾಶ ಕಲ್ಪಿಸಲಾಗಿದೆ.
3. ದೇವಸ್ಥಾನ ಮತ್ತು ದರ್ಗಾ ಭದ್ರತೆಗೆ ಸಿಆರ್ಪಿಎಫ್ (CRPF) ನಿಯೋಜನೆ: ದೇವಸ್ಥಾನ ಮತ್ತು ದರ್ಗಾದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (CRPF) ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
4. ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಮಾನತು; ರಿಸೀವರ್ಗಳ ನೇಮಕ: ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ (Subramaniaswamy Temple) ಧರ್ಮದರ್ಶಿ ಮಂಡಳಿಯನ್ನು (Board of Trustees) ಅಮಾನತುಗೊಳಿಸಲಾಗಿದ್ದು, ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ವಿ. ಪಾರ್ಥಿಬನ್ ಅವರನ್ನು ರಿಸೀವರ್ಗಳನ್ನಾಗಿ (Receivers) ನೇಮಿಸಲಾಗಿದೆ.
5. ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ನೀಡಿದ್ದ ತಡೆ ತೆರವು: ಮದ್ರಾಸ್ ಹೈಕೋರ್ಟ್ (Madras HC) ಆದೇಶದ ಮೇಲೆ ಇದ್ದ ತಡೆಯನ್ನು (Stay) ತೆರವುಗೊಳಿಸಲಾಗಿದೆ.
6. ಹಿರಿಯ ಅಧಿಕಾರಿಗಳು ಮತ್ತು ಮಂಡಳಿ ಸದಸ್ಯರಿಗೆ ನ್ಯಾಯಾಂಗ ನಿಂದನೆ ನೋಟಿಸ್: ತಮಿಳುನಾಡು ಮುಖ್ಯ ಕಾರ್ಯದರ್ಶಿ (TN Chief Secretary), ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ (HR&CE) ಉಪ ಕಾರ್ಯದರ್ಶಿ, ತಮಿಳುನಾಡು ಪೊಲೀಸ್ ಮಹಾನಿರ್ದೇಶಕರು (DGP), HR&CE ಆಯುಕ್ತರು, ಮದುರೈ ಜಿಲ್ಲಾಧಿಕಾರಿ, ಮದುರೈ ಪೊಲೀಸ್ ವರಿಷ್ಠಾಧಿಕಾರಿ (SP), ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ (CEO) ಹಾಗೂ ದೇವಸ್ಥಾನ ಮಂಡಳಿ ಸದಸ್ಯರಿಗೆ ನ್ಯಾಯಾಂಗ ನಿಂದನೆ (Contempt) ನೋಟಿಸ್ ಜಾರಿ ಮಾಡಲಾಗಿದೆ.
7. ‘ಆಡಳಿತಾತ್ಮಕ ಅರಾಜಕತೆ’ ಮತ್ತು ರಾಜಕೀಯ ಸೂಚನೆಗಳ ಕುರಿತು ಸುಪ್ರೀಂ ಕೋರ್ಟ್ ಆಕ್ಷೇಪ: ತಮಿಳುನಾಡಿನಲ್ಲಿ, ಅದರಲ್ಲೂ ಕನಿಷ್ಠ ಮದುರೈ ಜಿಲ್ಲೆಯಲ್ಲಾದರೂ 'ಆಡಳಿತಾತ್ಮಕ ಅರಾಜಕತೆ' (Administrative chaos) ಇರುವಂತೆ ಕಂಡುಬರುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಾರ್ಯನಿರ್ವಾಹಕ ಅಧಿಕಾರಿಗಳು (Executive officers) ತಮ್ಮ ರಾಜಕೀಯ ಬಾಸ್ಗಳ (Political bosses) ಸೂಚನೆಗಳಂತೆ ನಡೆದುಕೊಂಡಂತಿದೆ ಎಂದೂ ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
8. ಡಿಸೆಂಬರ್ 15ರಂದು ಖುದ್ದು ಹಾಜರಾಗಲು ಅಧಿಕಾರಿಗಳಿಗೆ ಸೂಚನೆ: ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಡಿಸೆಂಬರ್ 15ರಂದು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ.














