ಯುಎಲ್‌ಪಿಜಿಎಂ ಕ್ಷಿಪಣಿ ಕಾರ್ಯಕ್ರಮದ ಮೂಲಕ ಮೂರು ಆವೃತ್ತಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೊದಲ ಆವೃತ್ತಿಯು ಮಾದರಿ ಕ್ಷಿಪಣಿಯಾಗಿದ್ದು, ಈ ಮೂರು ಆವೃತ್ತಿಗಳನ್ನು ವಿಭಿನ್ನ ಯುದ್ಧ ಸನ್ನಿವೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ.
ನವದೆಹಲಿ (ಜು.26): ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ದೇಶದ ಸೇನಾ ಬತ್ತಳಿಕೆಯನ್ನು ಬಲಪಡಿಸುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯ ಕಾರ್ಯಕ್ಕೆ ಇದೀಗ ಮತ್ತೊಂದು ಮಹತ್ವದ ಗೆಲುವು ಸಿಕ್ಕಿದೆ. ಡ್ರೋನ್ ಮೂಲಕ ಹಾರಿಸಬಲ್ಲ ಸ್ವದೇಶಿ ನಿರ್ಮಿತ ನಿಖರ ಗುರಿ ನಿರ್ದೇಶಿತ ಕ್ಷಿಪಣಿ(ಯುಎಲ್‌ಪಿಜಿಎಂ-ವಿ3)ಯ ಪರೀಕ್ಷಾರ್ಥ ಪ್ರಯೋಗದಲ್ಲಿ ಡಿಆರ್‌ಡಿಒ ಶುಕ್ರವಾರ ಯಶಸ್ಸು ಕಂಡಿದೆ.
ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಓಪನ್ ಏರಿಯಾ ರೇಂಜ್(ಎನ್‌ಒಎಆರ್)ನಲ್ಲಿ ಈ ಪ್ರಯೋಗ ನಡೆಸಲಾಗಿದ್ದು, ಈ ಮೂಲಕ ದೇಶದ ಸೇನಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲಬಂದಂತಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೊಂಡಿದ್ದಾರೆ. ಆಪರೇಷನ್ ಸಿಂದೂರದ ವೇಳೆ ಭಾರತ ಮೇಲಿನ ದಾಳಿಗೆ ಪಾಕಿಸ್ತಾನವು ದೊಡ್ಡಪ್ರಮಾಣದಲ್ಲಿ ಡ್ರೋನ್‌ಗಳನ್ನು ನಿಯೋಜಿಸಿದ್ದರಿಂದ ಎಚ್ಚೆತ್ತುಕೊಂಡ ಸರ್ಕಾರವು ಈ ರೀತಿಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸೇನೆಯ ಬತ್ತಳಿಕೆಗೆ ಸೇರಿಸಲು ಮುಂದಾಗಿದೆ.
ಮಾಧ್ಯಮ ವರದಿಗಳ ಪ್ರಕಾರ ಯುಎಲ್‌ಪಿಜಿಎಂ ಕ್ಷಿಪಣಿ ಕಾರ್ಯಕ್ರಮದ ಮೂಲಕ ಮೂರು ಆವೃತ್ತಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೊದಲ ಆವೃತ್ತಿಯು ಮಾದರಿ ಕ್ಷಿಪಣಿಯಾಗಿದ್ದು, ಈ ಮೂರು ಆವೃತ್ತಿಗಳನ್ನು ವಿಭಿನ್ನ ಯುದ್ಧ ಸನ್ನಿವೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಯುಎಲ್‌ಪಿಜಿಎಂ-ವಿ3 ಅತ್ಯಾಧುನಿಕ ಕ್ಷಿಪಣಿಯಾಗಿದ್ದು, ಉನ್ನತಮಟ್ಟದ ನಿಖರ ಗುರಿ ನಿರ್ದೇಶನದ ದಾಳಿಗಾಗಿ ವಿನ್ಯಾಸ ಮಾಡಲಾಗಿದೆ.
ಏನಿದು ಯುಎಲ್‌ಪಿಜಿಎಂ?: ಯುಎಲ್‌ಪಿಜಿಎಂ-ವಿ3 ಅನ್ನು ಡಿಆರ್‌ಡಿಒದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೆಟರಿ(ಟಿಬಿಆರ್‌ಎಲ್) ಅಭಿವೃದ್ಧಿಪಡಿಸಿದೆ. ಹಲವು ಸಿಡಿತಲೆಗಳನ್ನು ಹೊಂದಿರುವ ಈ ಕಡಿಮೆ ತೂಕದ ಕ್ಷಿಪಣಿಯನ್ನು ಯುದ್ಧದ ಸಂದರ್ಭದಲ್ಲಿ ಸುಲಭವಾಗಿ ಸಾಗಿಸಬಹುದಾಗಿದೆ. ಇದು ಸಂಪೂರ್ಣ ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿದ್ದು, ಇದರಲ್ಲಿರುವ ಗುರಿ ನಿರ್ದೇಶನ ವ್ಯವಸ್ಥೆಗಳು, ಪ್ರೊಪಲ್ಷನ್ ಮತ್ತು ಸಿಡಿತಲೆ ವ್ಯವಸ್ಥೆ ಸೇರಿ ಕ್ಷಿಪಣಿಯನ್ನು ವಿನ್ಯಾಸ ಮತ್ತು ಉತ್ಪಾದನೆ ಎಲ್ಲವೂ ಭಾರತದಲ್ಲೇ ನಿರ್ಮಿಸಲಾಗಿದೆ.
ಈ ಕ್ಷಿಪಣಿ ಅಭಿವೃದ್ಧಿ ಹಿಂದಿನ ಉದ್ದೇಶವೇನು?: ಯುಎಲ್‌ಪಿಜಿಎಂ-ವಿ3 ಕ್ಷಿಪಣಿಯನ್ನು ಆಧುನಿಕ ಟ್ಯಾಂಕ್‌ಗಳು, ಯುದ್ಧವಾಹನಗಳು ಮತ್ತು ಬಂಕರ್‌ಗಳನ್ನು ನಾಶ ಮಾಡುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದೆ. ಗುಡ್ಡಗಾಡುಗಳಲ್ಲಿ ನಡೆಯುವ ಕದನದ ವೇಳೆ ಇವು ಶತ್ರುಗಳ ಸಂಹಾರಕ್ಕೆ ನೆರವು ನೀಡುತ್ತವೆ. ಲಡಾಕ್‌ನಂಥ ಕಡಿದಾದ ಗಡಿಯಲ್ಲಿ ಈ ಕ್ಷಿಪಣಿಗಳಿಂದ ಸೇನೆಗೆ ಹೆಚ್ಚಿನ ಅನುಕೂಲ ಆಗಲಿದೆ.
ಈ ಕ್ಷಿಪಣಿ ವಿಶೇಷ ಏನು?
- ಇದು ಲೇಸರ್ ನಿರ್ದೇಶಿತ ಇನ್ಫ್ರಾರೆಡ್ ಇಮೇಜಿಂಗ್ ತಂತ್ರಜ್ಞಾನ ಹೊಂದಿರುವ ಈ ಕ್ಷಿಪಣಿ ಹಗಲು ಮತ್ತು ರಾತ್ರಿಯಲ್ಲೂ ನಿಖರವಾಗಿ ನಿಗದಿತ ಗುರಿ ಭೇದಿಸುವ ಸಾಮರ್ಥ್ಯ ಹೊಂದಿದೆ.
- ಆಕಾಶದಿಂದ ನೆಲಕ್ಕೆ ಹಾರುವ ಈ ಕ್ಷಿಪಣಿ ತೂಕ 12.5 ಕೆಜಿ. ಹಗಲು ಹೊತ್ತಲ್ಲಿ ಸುಮಾರು 4 ಕಿ.ಮೀ, ರಾತ್ರಿ ಹೊತ್ತಲ್ಲಿ 2.5 ಕಿ.ಮೀ. ದೂರದ ಗುರಿ ಭೇದಿಸುವ ಸಾಮರ್ಥ್ಯ ಹೊಂದಿದೆ.
- ಹಲವು ಸಿಡಿತಲೆಗಳನ್ನು ಹೊಂದಿರುವ ಈ ಕ್ಷಿಪಣಿ ಚಲಿಸುತ್ತಿರುವ ಗುರಿಗಳ ಮೇಲೂ ದಾಳಿ ನಡೆಸಬಲ್ಲುದು. ಒಮ್ಮೆ ಹಾರಿಸಿದರೆ ಮರೆತುಬಿಡಬಹುದಾದ ಶ್ರೇಣಿಯ ಕ್ಷಿಪಣಿ ಇದಾಗಿದ್ದು, ತನಗೆ ತೋರಿಸಿದ ಗುರಿಯನ್ನು ಭೇದಿಸದೆ ಬಿಡಲ್ಲ.
