ಮಹಿಳಾ ಅಧಿಕಾರಿಯೊಬ್ಬರಿಗೆ ಹೂತು ಹಾಕುವುದಾಗಿ ಸಚಿವರೊಬ್ಬರ ಸೋದರ ಬೆದರಿಕೆ ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವಿಚಿತ್ರ ಎಂದರೆ ಈ ರೀತಿ ಬೆದರಿಕೆ ಹಾಕಿದ ಆರೋಪಿಗೆ ಬಂಧನವಾದ ಕೆಲ ಗಂಟೆಗಳಲ್ಲೇ ಬೇಲ್ ಸಿಕ್ಕಿದೆ.

ಮಹಿಳಾ ಅಧಿಕಾರಿಗೆ ಜೀವಂತವಾಗಿ ಹೂತು ಹಾಕುವೆ ಎಂದ ಸಚಿವನ ಪುತ್ರ

ಭೋಪಾಲ್: ಮಹಿಳಾ ಅಧಿಕಾರಿಯೊಬ್ಬರಿಗೆ ಹೂತು ಹಾಕುವುದಾಗಿ ಸಚಿವರೊಬ್ಬರ ಸೋದರ ಬೆದರಿಕೆ ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಇಲ್ಲಿನ ಪಿಚೊರೆ ಕ್ಷೇತ್ರದ ಬಿಜೆಪಿ ಶಾಸಕನಾಗಿರುವ ಪ್ರೀತಮ್ ಲೋಧಿ ಹಿರಿಯ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿ ಸುದ್ದಿಯಾಗಿದ್ದರು. ಈ ಘಟನೆ ಮಾಸುವ ಮೊದಲೇ ಈಗ ಇದೇ ರಾಜ್ಯದಲ್ಲಿ ಮತ್ತೊಂದು ಇಂತಹದ್ದೇ ಘಟನೆ ನಡೆದಿದೆ.

ಮಧ್ಯಪ್ರದೇಶ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಹಿಳಾ ಸಬಲೀಕರಣದ ಕುರಿತು ಚರ್ಚಿಸಲು ಸಜ್ಜಾಗಿದ್ದ ದಿನವೇ, ಮಹಿಳಾ ಅಧಿಕಾರಿಯೊಬ್ಬರಿಗೆ ಕ್ಯಾಬಿನೆಟ್ ಸಚಿವ ನಗರ್ ಸಿಂಗ್ ಚೌಹಾಣ್ ಅವರ ಸಹೋದರ ಇಂದರ್ ಸಿಂಗ್ ಚೌಹಾಣ್, ಅವರು, ತಮ್ಮನ್ನು ಜೀವಂತವಾಗಿ ಸಮಾಧಿ ಮಾಡಲಾಗುವುದು ಹಾಗೂ ನಿಮ್ಮ ಮುರಿದು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಏಪ್ರಿಲ್ 22ರಂದು ಅಲಿರಾಜ್‌ಪುರದ ಜಾನ್ಪದ್ ಪಂಚಾಯತ್ ಕಚೇರಿಯಲ್ಲಿ ಈ ಘಟನೆ ನಡೆದಿದೆ.

ಅನರ್ಹ ಅರ್ಜಿಗಳನ್ನು ತಿರಸ್ಕರಿಸಿದ್ದಕ್ಕೆ ಕೊಲೆ ಬೆದರಿಕೆ

ಕನ್ಯಾ ವಿವಾಹ್ ಯೋಜನೆಯಡಿಯಲ್ಲಿ ಅನರ್ಹ ಅರ್ಜಿಗಳನ್ನು ತಿರಸ್ಕರಿಸಿದ್ದಕ್ಕಾಗಿ ಕೋಪಗೊಂಡು ಚೌಹಾಣ್ ಕಚೇರಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಮತ್ತು ಸಿಇಒ ಪ್ರಿಯಾ ಕಾಗ್ ಸಲ್ಲಿಸಿದ ದೂರಿನ ಪ್ರಕಾರ, ಸಚಿವ ನಗರ್ ಸಿಂಗ್ ಸಹೋದರ ಇಂದರ್ ಸಿಂಗ್ ಚೌಹಾಣ್ ಸಿಇಒ ಪ್ರಿಯಾ ಕಾಗ್ ಅವರಿಗೆ ನಿಂದಿಸಿದ್ದಾರೆ. ಜೊತೆಗೆ ದೈಹಿಕವಾಗಿ ಹಲ್ಲೆ ನಡೆಸಿ, ಅವರ ದಾರಿಗೆ ಅಡ್ಡಲಾಗಿ ನಿಂತು, ನಾನು ನಿನ್ನ ಹಲ್ಲು ಮುರಿಯುತ್ತೇನೆ ನಿನ್ನನ್ನು ಜೀವಂತವಾಗಿ ಹೂತು ಹಾಕುತ್ತೇನೆ. ಇಲ್ಲಿ ಎಲ್ಲವೂ ನನ್ನ ಇಚ್ಛೆಯಂತೆ ನಡೆಯುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬಂಧನವಾದ ಕೆಲವೇ ಗಂಟೆಗಳಲ್ಲಿ ಸಿಕ್ತು ಜಾಮೀನು

ಸಿಇಒ ಪ್ರಿಯಾ ಕಾಗ್ ನೀಡಿದ ದೂರಿನಂತೆ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಜಾಮೀನು ರಹಿತ ವಾರೆಂಟ್ ನೀಡಲಾಗಿತ್ತು. ಆದರೆ ಏಪ್ರಿಲ್ 24ರಂದು ಅವರ ಬಂಧನವಾಗಿದ್ದು, ಅವರ ಬಂಧನವಾದ ಕೆಲವೇ ಗಂಟೆಗಳಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. ಅನಾರೋಗ್ಯ ಹಾಗೂ ಅಧಿಕ ರಕ್ತದೊತ್ತಡದ ಕಾರಣ ನೀಡಿ ಅವರು ಜಾಮೀನು ಪಡೆದು ಹೊರ ನಡೆದಿದ್ದಾರೆ.

ಆರೋಪಿಯ ವಿರುದ್ಧ ಕ್ರಿಮಿನಲ್ ಬೆದರಿಕೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಲಾಗಿದೆ ಎಂದು ಅಲಿರಾಜ್‌ಪುರ ಪೊಲೀಸ್ ವರಿಷ್ಠಾಧಿಕಾರಿ ರಘುವಂಶ್ ಸಿಂಗ್ ಭಡೋರಿಯಾ ತಿಳಿಸಿದ್ದಾರೆ. ಆರೋಪಿ ಇಂದರ್ ಸಿಂಗ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆದರೆ ಅಲ್ಲಿ ಅವರಿಗೆ ಜಾಮೀನು ಸಿಕ್ಕಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆರೋಗ್ಯ ನಿರ್ಲಕ್ಷಿಸಿ ನಿರಂತರ ಕೆಲಸ: ಹಾಸನದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಹಠಾತ್ ಸಾವು

ಆದರೆ ಆರೋಪಿಯ ಅಪರಾಧ ಹಿನ್ನೆಲೆಯನ್ನು ಗಮನಿಸಿದಾಗ ಮತ್ತಷ್ಟು ಆಘಾತಕಾರಿ ವಿಚಾರಗಳು ಹೊರಬಂದಿವೆ. ಆರೋಪಿ ಇಂದರ್ ಸಿಂಗ್ ವಿರುದ್ದ ಕಳೆದ 32 ವರ್ಷಗಳಲ್ಲಿ 25ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ. ಗಂಭೀರ ಅಪರಾಧಗಳಲ್ಲಿ ಆತ ಖುಲಾಸೆಗೊಂಡಿದ್ದು, ಆತನಿಗೆ ಒಂದೇ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ.

ಈ ದಾಳಿ ಘಟನೆಯಿಂದಾಗಿ ಮಹಿಳಾ ಅಧಿಕಾರಿ ಪ್ರಿಯಾ ಕಾಗ್ ಆಘಾತಕ್ಕೀಡಾಗಿದ್ದು, ಅವರು ತಮ್ಮ ಕ್ಷೇತ್ರದಲ್ಲಿ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಲ್ಲಿಸಿದ್ದಾರೆ. ಅವರು ಕಚೇರಿ ಕೆಲಸಕ್ಕೆ ಸೀಮಿತರಾಗಿದ್ದು, ಅವರಿಗೆ ಈಗ ಪೊಲೀಸರು ಶಸ್ತ್ರಾಸ್ತ್ರ ರಕ್ಷಣೆ ನೀಡಿದ್ದಾರೆ. ನನ್ನ ಕೆಲಸದ ಸ್ಥಳದಲ್ಲಿ ನನಗೆ ಅಸುರಕ್ಷಿತ ಭಾವನೆ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೀದಿ ಬದಿ ಪಾನಿಪುರಿ ಸೇವಿಸಿದ್ದ 8 ವರ್ಷದ ಬಾಲಕ ಸಾವು: 18ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

ಆದರೆ ಸಚಿವ ನಗರ್ ಸಿಂಗ್ ಅವರು ತಮ್ಮ ಸೋದರನ ಕೃತ್ಯದಿಂದ ಅಂತರ ಕಾಯ್ದುಕೊಂಡಿದ್ದಾರೆ. ಆತ ಪ್ರತ್ಯೇಕವಾಗಿ ವಾಸಿಸುತ್ತಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಈ ಘಟನೆ ಬಗ್ಗೆ ವಿರೋಧ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ ಈ ಬಗ್ಗೆ ಮಾತನಾಡಿ, ಆಡಳಿತ ಪಕ್ಷವು ಅಪರಾಧಿಗಳನ್ನು ರಕ್ಷಿಸುತ್ತಿದೆ. ಇದು ವ್ಯವಸ್ಥೆಯನ್ನು ತುಳಿದು ಹಾಕುತ್ತಿರುವ ಅಧಿಕಾರದ ದುರಹಂಕಾರ ಎಂದು ಕರೆದಿದ್ದಾರೆ.