ಲೋಕಸಭೆಯಲ್ಲಿ ಟಿಎಂಸಿಯ 20 ಸಂಸದರು ಎನ್‌ಡಿಎಗೆ ಬೆಂಬಲ ಘೋಷಿಸಿದ್ದು, ಪ್ರತ್ಯೇಕ ಬಣವಾಗಿ ಗುರುತಿಸಿಕೊಂಡಿದ್ದಾರೆ. ಇದೇ ವೇಳೆ, ಹಿರಿಯ ನಾಯಕ ಸುಖೇಂದು ಶೇಖರ್‌ ರಾಯ್‌ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಮಮತಾ ಬ್ಯಾನರ್ಜಿ ಅವರಿಗೆ ಇದು ಡಬಲ್ ಶಾಕ್ ನೀಡಿದೆ.

ಕೋಲ್ಕತಾ (ಜೂ.9): ದಿಢೀರ್‌ ಬೆಳವಣಿಗೆಯೊಂದರಲ್ಲಿ ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ (TMC) ಪಕ್ಷದ ಮುಖ್ಯ ಸಚೇತಕಿ ಕಕೋಲಿ ಘೋಷ್‌ ದಸ್ತಿದಾರ್‌(Kakoli Ghosh dastidar) ನೇತೃತ್ವದಲ್ಲಿ 20 ಲೋಕಸಭಾ ಸದಸ್ಯರು ಸೋಮವಾರ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ(NDA)ಕ್ಕೆ ಬೆಂಬಲ ಘೋಷಿಸಿದ್ದಾರೆ. ಇದೇ ವೇಳೆ ಪಕ್ಷದ ಹಿರಿಯ ನಾಯಕ ಸುಖೇಂದು ಶೇಖರ್‌ ರಾಯ್‌ ಕೂಡ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮೂಲಕ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ(Mamata banerjee) ಅವರು ಬಿಜೆಪಿ(BJP)ಗೆ ಪರ್ಯಾಯವಾಗಿ ರೂಪಿಸಲಾಗಿರುವ ಕಾಂಗ್ರೆಸ್‌ ನೇತೃತ್ವದ ಇಂಡಿ ಒಕ್ಕೂಟದ(INDI Bloc) ಮಹತ್ವದ ಸಭೆಯಲ್ಲಿ ಭಾಗಿಯಾಗಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿರುವುದು ದೀದಿಗೆ ಪಕ್ಷದ ಭಿನ್ನಮತೀಯ ಮುಖಂಡರು ಡಬಲ್ ಶಾಕ್‌ ನೀಡಿದಂತಾಗಿದೆ.

20 ಸಂಸದರು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸುವ ಸಂಬಂಧ ದಸ್ತಿದಾರ್‌ ಅವರು ಸ್ಪೀಕರ್‌ ಓಂ ಬಿರ್ಲಾಗೆ ಮಾಹಿತಿ ನೀಡಿದ್ದು, ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಈ ಬಣ ಲೋಕಸಭೆಯಲ್ಲಿ ಪ್ರತ್ಯೇಕ ಆಸನಕ್ಕಾಗಿ ಮನವಿ ಮಾಡಿದೆ. ಈಗಾಗಲೇ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಶಾಸಕರ ಭಿನ್ನಮತದಿಂದ ಟಿಎಂಸಿ ಎರಡು ಹೋಳಾಗಿದ್ದು, ಇದೀಗ ಸಂಸತ್ತಿನಲ್ಲೂ ಪಕ್ಷ ವಿಭಜನೆಯಾದಂತಾಗಿದೆ.

ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ದೀದಿ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಪಕ್ಷದ 80 ಶಾಸಕರಲ್ಲಿ 58 ಶಾಸಕರು ಬಂಡೆದ್ದು, ಉಚ್ಚಾಟಿತ ಶಾಸಕ ಋತಬ್ರತ ಬ್ಯಾನರ್ಜಿ ಅವರನ್ನು ಪ್ರತಿಪಕ್ಷ ನಾಯಕನನ್ನಾಗಿ ಘೋಷಿಸಿದ್ದರು.

ಬಿಜೆಪಿ ಸೇರುವ ಉದ್ದೇಶವಿಲ್ಲ:

ಮೂಲಗಳ ಪ್ರಕಾರ ಟಿಎಂಸಿ ಭಿನ್ನಮತೀಯ ಸಂಸದರು ತಕ್ಷಣ ಬಿಜೆಪಿ ಸೇರುವ ಯಾವುದೇ ಉದ್ದೇಶ ಹೊಂದಿಲ್ಲ. ಸದ್ಯ ಲೋಕಸಭೆಯಲ್ಲಿ ಟಿಎಂಸಿ ಸಂಖ್ಯಾಬಲ 28. ಅವರಲ್ಲಿ 20 ಸಂಸದರು. ಅಂದರೆ ಮೂರನೇ ಒಂದರಷ್ಟು ಮಂದಿ ಬಂಡಾಯ ಘೋಷಿಸಿರುವ ಹಿನ್ನೆಲೆಯಲ್ಲಿ ಪಕ್ಷಾಂತರ ವಿರೋಧಿ ಕಾಯ್ದೆಯಿಂದ ರಕ್ಷಣೆ ಸಿಗಲಿದೆ.

ರಾಯ್‌ ರಾಜೀನಾಮೆ:

ಈ ನಡುವೆ ಟಿಎಂಸಿ ನಾಯಕತ್ವದಿಂದ ಬೇಸತ್ತಿದ್ದ ಹಿರಿಯ ಮುಖಂಡ ಸುಖೇಂದು ಶೇಖರ್‌ ರಾಯ್‌ ಅವರು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ಸೋಮವಾರ ದಿಢೀರ್‌ ರಾಜೀನಾಮೆ ನೀಡಿದ್ದಾರೆ. ಟಿಎಂಸಿ ಸರ್ಕಾರ ಇದ್ದಾಗಿನ ಹಾಗೂ ಪಕ್ಷದೊಳಗಿನ ಭ್ರಷ್ಟಾಚಾರ ಹಾಗೂ ಸಾರ್ವಜನಿಕರಲ್ಲಿ ಪಕ್ಷದ ವಿರುದ್ಧ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವ ಆಕ್ರೋಶದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ರಾಯ್‌ ರಾಜೀನಾಮೆಯಿಂದ ರಾಜ್ಯಸಭೆಯಲ್ಲಿ ಟಿಎಂಸಿ ಸಂಖ್ಯಾಬಲ 12ಕ್ಕಿಳಿದಂತಾಗಿದೆ.

ಹಿರಿಯ ನಾಯಕರಾದ ರಾಯ್‌ ಕಳೆದೊಂದು ವರ್ಷದಿಂದ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ಆರ್‌.ಜಿ.ಕರ್‌ ಆಸ್ಪತ್ರೆ ಅತ್ಯಾಚಾರ-ಕೊಲೆ ಪ್ರಕರಣವನ್ನು ಪಕ್ಷ ನಿಭಾಯಿಸಿದ ರೀತಿಗೂ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಘಟನೆ ಖಂಡಿಸಿದ ಬಳಿಕ ಪಕ್ಷದಲ್ಲಿ ಮೂಲೆಗುಂಪಾಗಿದ್ದೇನೆ ಎಂದು ದೂರಿದ್ದಾರೆ.

- ಪ.ಬಂಗಾಳ ಚುನಾವಣೆ ಸೋಲಿನ ಬಳಿಕ ಮಮತಾ ಬ್ಯಾನರ್ಜಿಗೆ ಆಘಾತದ ಮೇಲೆ ಆಘಾತ

ಇತ್ತೀಚೆಗೆ ಬಂಡಾಯ ಎದ್ದು ಪ್ರತ್ಯೇಕ ಬಣ ಸ್ಥಾಪಿಸಿದ್ದ ಸುಮಾರು 60 ಟಿಎಂಸಿ ಶಾಸಕರು

ಇದಾದ ನಂತರ ಈಗ ಸಂಸದರಿಂದಲೂ ಬಂಡಾಯ. 20 ಸಂಸದರಿಂದ ಪ್ರತ್ಯೇಕ ಬಣ

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾಗೆ ಪತ್ರ. ಎನ್‌ಡಿಎಗೆ ಬೆಂಬಲ ನೀಡುವುದಾಗಿ ಘೋಷಣೆ

ಲೋಕಸಭೆಯಲ್ಲಿ ತಮಗೆ ಪ್ರತ್ಯೇಕ ಆಸನ ನೀಡಿ: ಬಂಡಾಯ ನಾಯಕಿ ದಸ್ತಿದಾರ್‌ ಪತ್ರ

ಇದರ ನಡುವೆ ಟಿಎಂಸಿಗೆ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್‌ ರಾಯ್‌ ರಾಜೀನಾಮೆ

ಇಂಡಿಯಾ ಕೂಟ ಕಟ್ಟಲು ದೀದಿ ದಿಲ್ಲಿಗೆ ಹೋದಾಗ ಬಂಗಾಳದಲ್ಲಿ ಪಕ್ಷ ಮತ್ತೆ ಹೋಳು