Bengaluru businessman arrested: ಬೆಂಗಳೂರಿನಲ್ಲಿ ಮಹಿಳಾ ಕಸ್ಟಮ್ಸ್ ಅಧಿಕಾರಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ, ಸುಮಾರು ಏಳು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಉದ್ಯಮಿ ಕೃಪಲಾನಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. 

ಮಹಿಳಾ ಕಸ್ಟಮ್ಸ್ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಅತ್ಯಾ*ಚಾರ:

ಬೆಂಗಳೂರು: ಮಹಿಳಾ ಕಸ್ಟಮ್ಸ್ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಮಾಡಿ, ಆಕೆಯ ಮೇಲೆ ಅತ್ಯಾ*ಚಾರ ಎಸಗಿದ ಆರೋಪದ ಮೇರೆಗೆ ಉದ್ಯಮಿಯೊಬ್ಬನನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಸಂಬಂಧ ಇಂದಿರಾ ನಗರ ನಿವಾಸಿ ಕೃಪಲಾನಿ (36) ಎಂಬುವರನ್ನು ಬಂಧಿಸಲಾಗಿದೆ. ಆರೋಪಿ ಕೃಪಲಾನಿ ಮಹಿಳಾ ಕಸ್ಟಮ್ಸ್ ಅಧಿಕಾರಿಗೆ ಬ್ಲ್ಯಾಕ್ ಮೇಲ್ ಮಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಸುಮಾರು ಆರೇಳು ವರ್ಷಗಳಿಂದ ಅಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಮಹಿಳೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಲೆಕ್ಟ್ರಾನಿಕ್ ವಸ್ತುಗಳನ್ನು ವಿದೇಶ ಹಾಗೂ ನೆರೆ ರಾಜ್ಯಗಳಿಗೆ ಆಮದು ಮತ್ತು ರಫ್ತು ವ್ಯವಹಾರ ನಡೆಸುತ್ತಿದ್ದ ಆರೋಪಿ ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಸಾಕಷ್ಟು ಅಕ್ರಮ ಎಸಗಿದ್ದಾನೆ ಎಂಬುದು ಗೊತ್ತಾಗಿದೆ. ಕಸ್ಟಮ್ಸ್ ವಿಭಾಗದಲ್ಲಿ ಕೆಲಸ ಮಾಡು ತ್ತಿದ್ದ ಸಂತ್ರಸ್ತೆಯ ಕೆಲವೊಂದು ನ್ಯೂನತೆಗಳನ್ನು ಬಂಡವಾಳ ಮಾಡಿಕೊಂಡು ಆರೇಳು ವರ್ಷಗಳಿಂದ ಬ್ಲ್ಯಾಕ್‌ಮೇಲ್ ಮಾಡಿ, ಆಕೆಯಿಂದ ಅವರ ಸಹೋದ್ಯೋಗಿಗಳ ಮಾಹಿತಿ ಸಂಗ್ರಹಿಸಿ ಕೊಂಡಿದ್ದಾನೆ. ಬಳಿಕ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದಾನೆ.

ಪ್ರೀತಿಸುವ ನಾಟಕ: ಸಂತ್ರಸ್ತೆಯನ್ನು ಪ್ರೀತಿಸುವ ನಾಟಕವಾಡಿ ಆಕೆಯನ್ನು ಲೈಂಗಿಕವಾಗಿ ಕೂಡ ಬಳಸಿಕೊಂಡಿದ್ದಾನೆ. ತಾನು ಹೇಳಿದಂತೆ ಕೇಳದಿದ್ದರೆ ನಿನ್ನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸುಮಾರು ಆರೇಳು ವರ್ಷ ಆರೋಪಿಯ ದೌರ್ಜನ್ಯ ಸಹಿಸಿಕೊಂಡಿದ್ದ ಸಂತ್ರಸ್ತೆ ಇದೀಗ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಘಟನೆ ನಡೆದ ಸ್ಥಳದ ಆಧಾರದ ಮೇರೆಗೆ ಇಂದಿರಾನಗರ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿದ್ದಾರೆ. ಆರೋಪಿಯ ಬಂಧನಕ್ಕೆ ಪುಲಕೇಶಿನಗರ ಉಪವಿಭಾಗದ ಎಸಿಪಿ ಮತ್ತು ಇಂದಿರಾನಗರ ಠಾಣಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಸುಳ್ಳು ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿಸಿದ್ದ ಆರೋಪಿ!

ಈ ಹಿಂದೆ ಆರೋಪಿ ಕೃಪಲಾನಿ ನೆರೆ ಮನೆಯವರು ಗಾಂಜಾ ಬೆಳೆದು, ತಡರಾತ್ರಿ ಪಾರ್ಟಿ ಮಾಡುತ್ತಾರೆ ಎಂದು ಆರೋಪಿಸಿ ಇಂದಿರಾನಗರ ಠಾಣೆಗೆ ದೂರು ನೀಡಿದ್ದ. ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ, ಎನ್‌ಸಿಆರ್ ದಾಖಲಿಸಿಕೊಂಡಿದ್ದರು. ಇದರಿಂದ ಕೋಪಗೊಂಡಿದ್ದ ಈತ, ಇಂದಿರಾನಗರ ಠಾಣೆ ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳಲು, ತನ್ನ ತಾಯಿ ಮಹೇಶ್ವರಿ ಅವರ ಮೂಲಕ 2025 ರ ಜೂನ್ ತಿಂಗಳಿನಲ್ಲಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿಸಿ ತಮಿಳುನಾಡಿನ ಚೆನ್ನೈನಲ್ಲಿ ಹೋಟೆಲ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ. ಬಳಿಕ ಹೈಕೋರ್ಟ್ ಸೂಚನೆ ಮೇರೆಗೆ ಆರೋಪಿಯನ್ನು ಪತ್ತೆ ಹಚ್ಚಿ ಕೋರ್ಟಿಗೆ ಒಪ್ಪಿಸಲಾಗಿತ್ತು. ತನಿಖೆಯ ವೇಳೆ ಆರೋಪಿಯನ್ನು ಯಾರೂ ಬಂಧಿಸಿರಲಿಲ್ಲ, ಜತೆಗೆ ಆತ ನಾಪತ್ತೆ ಕೂಡ ಆಗಿರಲಿಲ್ಲ. ಬದಲಾಗಿ ಉದ್ದೇಶಪೂರ್ವಕವಾಗಿಯೇ ಚೆನ್ನೈನ ಹೋಟೆಲ್‌ವೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ ಎಂಬುದು ಗೊತ್ತಾಗಿತ್ತು. ಹೀಗಾಗಿ ಹೈಕೋರ್ಟ್ ಈತನ ತಾಯಿಗೆ 2 ಲಕ್ಷ ರು. ದಂಡ ವಿಧಿಸಿತ್ತು.