ವಿಮಾನಕ್ಕಿಂತಲೂ ಲಕ್ಷುರಿ, ವಂದೇ ಭಾರತ್ ಸ್ಲೀಪರ್ ರೈಲು ಹೇಗಿದೆ? ವಿಡಿಯೋ ಹಂಚಿಕೊಂಡ ಸಚಿವ ಅಶ್ವಿನಿ ವೈಷ್ಣವ್. ಅತ್ಯಾಧುನಿಕ ಸೌಲಭ್ಯ, ಆರಾಮದಾಯಕ ಪ್ರಯಾಣ ನೀಡಲಿರುವ ವಂದೇ ಭಾರತ್ ಸ್ಲೀಪರ್ ರೈಲಿನ ವಿಡಿಯೋ ಇಲ್ಲಿದೆ.
ನವದೆಹಲಿ (ಜ.04) ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಉದ್ಘಾಟನೆಗೆ ಸಿದ್ದಾಗಿದೆ. ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್ ಸ್ಲೀಪರ್ ರೈಲು ಉದ್ಘಾಟನೆ ಮಾಡಲಿದ್ದಾರೆ. ಭಾರತೀಯ ರೈಲ್ವೇ ಮೇಲ್ದರ್ಜಗೆ ಏರಿಸಲಾಗಿದೆ. ಇದೀಗ ಅಂತಾರಾಷ್ಟ್ರೀಯ ಗುಣಮಟ್ಟದ ಐಷಾರಾಮಿ ತನ, ಅತ್ಯಾಧುನಿಕತೆಯನ್ನು ಒಳಗೊಂಡಿರುವ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಗೊಳ್ಳುತ್ತಿದೆ. ಹೊಸ ವಂದೇ ಭಾರತ್ ಸ್ಲೀಪರ್ ರೈಲು ಹೇಗಿದೆ? ಈ ಕುರಿತ ವಿಡಿಯೋ ಒಂದನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡಿದ್ದಾರೆ.
ವಂದೇ ಭಾರತ್ ಸ್ಲೀಪರ್ ರೈಲಿನ ವಿಶೇಷತೆ
ರಾತ್ರಿ ಪ್ರಯಾಣ, ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದ ರೈಲು. ಅತ್ಯಾಧುನಿಕ ಸೀಟು, ಶೌಚಾಲಯ ಸೇರಿದಂತೆ ಹಲವು ಹೊಸತನಗಳು ಈ ಸ್ಲೀಪರ್ ರೈಲಿನಲ್ಲಿದೆ. ಸೆಮಿ ಆಟೋಮ್ಯಾಟಿಕ್ ಕಪ್ಲರ್ಸ್, ಸಿಸಿಟಿವಿ ಕ್ಯಾಮೆರಾ, ವಾಶ್‌ರೂಂ, ಆನ್ ಡ್ಯೂಟಿ ಸ್ಟಾಫ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣಕರಿಗೆ ಸೇವೆ ನೀಡಲಿದೆ.
ಜನವರಿ 2ನೇ ಅಥವಾ ಮೂರನೇ ವಾರದಲ್ಲಿ ಉದ್ಘಾಟನೆ
ಇದೇ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್ ಸ್ಲೀಪರ್ ರೈಲು ಉದ್ಘಾಟನೆ ಮಾಡಲಿದ್ದಾರೆ. ಸಂಪೂರ್ಣ ಏರ್ ಕಂಡೀಷನ್ ವ್ಯವಸ್ಥೆಯ ಈ ರೈಲು ವಿದೇಶಗಳಲ್ಲಿರುವ ಅತ್ಯಾಧುನಿಕ ರೈಲಿಗೆ ಪೈಪೋಟಿ ನೀಡಲಿದೆ. 180ರ ವೇಗದಲ್ಲಿ ಸಂಚರಿಸಲಿರುವ ಈ ವಂದೇ ಭಾರತ್ ರೈಲು ಭಾರತೀಯ ರೈಲ್ವೇ ಸೇವೆಯಲ್ಲಿ ಹೊಸ ಮೈಲಿಗಲ್ಲಾಗಿದೆ.
ಹೊಸ ವಂದೇ ಭಾರತ್ ಸ್ಲೀಪರ್ ರೈಲನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಪರಿಶೀಲಿಸಿದ್ದಾರೆ. ಹೊಸ ಸಸ್ಪೆಶನ್, ಸೀಟು ಸೇರಿದಂತೆ ಸಂಪೂರ್ಣ ರೈಲಿನಲ್ಲಿ ಓಡಾಡಿ ಪರಿಶೀಲನೆ ನಡೆಸಿದ್ದಾರೆ. 1,200 ರಿಂದ 1500 ಕಿಲೋಮೀಟರ್ ದೂರದ ಪ್ರಯಾಣಕ್ಕಾಗಿ ಈ ವಂದೇ ಭಾರತ್ ಸ್ಲೀಪರ್ ರೈಲು ವಿನ್ಯಾಸಗೊಳಿಸಲಾಗಿದೆ. ಹೊಸ ವಂದೇ ಭಾರತ್ ಸ್ಲೀಪರ್ ರೈಲು 823 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ.
ಗುವ್ಹಾಟಿ ಕೋಲ್ಕತಾ ನಡುವೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ನೀಡಲಿದೆ. ಮುಂದಿನ 6 ತಿಂಗಳಲ್ಲಿ 8 ವಂದೇ ಭಾರತ್ ರೈಲು ಸೇವೆ ಆರಂಭಿಸಲಿದೆ. ವಿವಿಧ ಮಾರ್ಗಗಳಲ್ಲಿ ಈ ಸ್ಲೀಪರ್ ರೈಲು ಸೇವೆ ನೀಡಲಿದೆ. ವಂದೇ ಭಾರತ್ ಸ್ಲೀಪರ್ ರೈಲಿನ ಟಿಕೆಟ್ ಬೆಲೆ 2,300 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಎಸಿ 3ಟೈರ್ ಟಿಕೆಟ್ ಬೆಲೆ 2,300 ರೂಪಾಯಿ. ಎಸಿ 2 ಟೈರ್ 3,000 ರೂಪಾಯಿ ಹಾಗೂ ಎಸಿ ಫಸ್ಟ್ ಕ್ಲಾಸ್ 3,600 ರೂಪಾಯಿ.


