13 ವರ್ಷಗಳಿಂದ ವೆಂಟಿಲೇಟರ್ ಸಹಾಯದಿಂದ ಕೃತಕ ಜೀವಾಧಾರಕ ವ್ಯವಸ್ಥೆಯಲ್ಲಿದ್ದ ಹರೀಶ್ ರಾಣಾ ಅವರಿಗೆ ದಯಾಮರಣ ನೀಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. 2018ರಲ್ಲಿ ದಯಾಮರಣ ಕಾನೂನುಬದ್ಧಗೊಂಡ ನಂತರ ದೇಶದಲ್ಲಿ ಅನುಮತಿ ಪಡೆದ ಮೊದಲ ಪ್ರಕರಣ ಇದಾಗಿದೆ.
13 ವರ್ಷಗಳ ನರಕಯಾತನೆಗೆ ಕೊನೆಗೂ ಸಿಕ್ತು ಮುಕ್ತಿ:
ದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ದಯಾಮರಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. 13 ವರ್ಷಗಳಿಂದ ವೆಂಟಿಲೇಟರ್ ಸಹಾಯದಿಂದ ಕೃತಕ ಜೀವಾಧಾರಕ ವ್ಯವಸ್ಥೆಯಲ್ಲಿರುವ ಹರೀಶ್ ರಾಣಾ ಎಂಬುವವರಿಗೆ ದಯಾಮರಣ ನೀಡುವುದಕ್ಕೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಹರೀಶ್ ರಾಣಾ ಅವರಿಗೆ ಅಳವಡಿಸಿದ ಕೃತಕ ಉಸಿರಾಟ ಯಂತ್ರವನ್ನು ತೆಗೆದು ಅವರಿಗೆ ನೈಸರ್ಗಿಕವಾಗಿ ಸಾಯಲು ಅವಕಾಶ ನೀಡಲಾಗುತ್ತಿದೆ. ಅವರ ವೃದ್ಧ ಪೋಷಕರ ಅರ್ಜಿಯ ಮೇರೆಗೆ ನ್ಯಾಯಾಲಯ ಈ ಅನುಮತಿ ನೀಡಿದೆ.
ಕೇವಲ ಯಂತ್ರದ ಬೆಂಬಲದಿಂದ ಜೀವನವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂಬ ವೈದ್ಯರ ಅಭಿಪ್ರಾಯವನ್ನೂ ಅದು ಪರಿಗಣಿಸಿದ ನ್ಯಾಯಾಲಯವು ಹರೀಶ್ ರಾಣಾ ಅವರಿಗೆ ನೀಡಲಾಗುತ್ತಿರುವ ವೆಂಟಿಲೇಟರ್ ಬೆಂಬಲವನ್ನು ಹಿಂಪಡೆಯಬಹುದು ಮತ್ತು ಚಿಕಿತ್ಸೆಯನ್ನು ಹಂತ ಹಂತವಾಗಿ ನಿಲ್ಲಿಸಬಹುದು ಎಂದು ಸ್ಪಷ್ಟಪಡಿಸಿದೆ.
ದೇಶದಲ್ಲಿ ದಯಾಮರಣವನ್ನು 2018ರಲ್ಲಿ ಸುಪ್ರೀಂಕೋರ್ಟ್ ಕಾನೂನುಬದ್ಧಗೊಳಿಸಿತ್ತು. ದಯಾಮರಣ ಕಾನೂನುಬದ್ಧ ಗೊಂಡ ನಂತರ ಮೊದಲ ದಯಾಮರಣ ಪ್ರಕರಣ ಇದಾಗಿದೆ. ದಯಾಮರಣಕ್ಕೆ ಒಳಗಾಗುತ್ತಿರುವ ಹರೀಶ್ ರಾಣೆ 2013 ರಲ್ಲಿ ಈ ಸ್ಥಿತಿಗೆ ತಲುಪಿದ್ದರು. ಚಂಡೀಗಢದ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣೆ ಕಟ್ಟಡದಿಂದ ಬಿದ್ದು ಅವರ ತಲೆಗೆ ಗಾಯವಾಗಿತ್ತು. ಪರಿಣಾಮ ಸುಮಾರು 13 ವರ್ಷಗಳಿಂದಲೂ ಹರೀಶ್ ರಾಣೆ ಅವರು ವೆಂಟಿಲೇಟರ್ ಸಹಾಯದಿಂದ ಬದುಕಿದ್ದಾರೆ.
ಕೆಲ ವರದಿಗಳ ಪ್ರಕಾರ ಪಂಜಾಬ್ ವಿಶ್ವವಿದ್ಯಾನಿಲಯದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣಾ, 2013 ರಲ್ಲಿ ತಾವು ವಾಸವಿದ್ದ ಪೇಯಿಂಗ್ ಗೆಸ್ಟ್ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಅವರ ತಲೆಗೆ ಗಂಭೀರ ಗಾಯವಾಗಿತ್ತು. ಈ ದುರಂತದ ನಂತರ ಅವರು ಸಸ್ಯಕ ಸ್ಥಿತಿಗೆ ತಲುಪಿದ್ದರು. ಸಸ್ಯಕ ಸ್ಥಿತಿ ( vegetative state) ಎಂದರೆ ಮಿದುಳಿನ ಹಾನಿಯಿಂದ ಉಂಟಾಗುವ ಪ್ರಜ್ಞೆಯ ಆಳವಾದ ಅಸ್ವಸ್ಥತೆಯಾಗಿದೆ. ಇದರಲ್ಲಿ ರೋಗಿಗಳು ಎಚ್ಚರವಾಗಿರುತ್ತಾರೆ (ಕಣ್ಣುಗಳು ತೆರೆದಿರುತ್ತವೆ, ನಿದ್ರೆ ಎಚ್ಚರ ಇವೆಲ್ಲಾ ದೈನಂದಿನ ಚಟುವಟಿಕೆಗಳು ಇರುತ್ತವೆ) ಆದರೆ ತಮ್ಮ ಬಗ್ಗೆ ಅಥವಾ ಅವರ ಪರಿಸರದ ಬಗ್ಗೆ ಸಂಪೂರ್ಣವಾಗಿ ಅರಿವಿರುವುದಿಲ್ಲ. ಉಸಿರಾಟ ಮತ್ತು ಹೃದಯ ಬಡಿತದಂತಹ ಸ್ವನಿಯಂತ್ರಿತ ಕಾರ್ಯಗಳು ಮುಂದುವರಿದರೂ, ಸುತ್ತಮುತ್ತಲಿನ ಪರಿಸರದ ಅರಿವು ಹಾಗೂ ಸ್ವಯಂಪ್ರೇರಿತ ಪ್ರತಿಕ್ರಿಯೆಗಳು ಇರುವುದಿಲ್ಲ.
ಇದನ್ನೂ ಓದಿ: ಅಯ್ಯೋ ವಿಧಿಯೇ ಈ ಸಾವು ನ್ಯಾಯವೇ: ಅಮ್ಮನ ಉಳಿಸಲು ಲಿವರ್ ಕೊಟ್ಟು ಮಗ ಸಾವು: ಆ ತಾಯಿ ಬದುಕೋದಾದರು ಹೇಗೆ?
ಅಂದಿನಿಂದಲೂ ಹರೀಶ್ ರಾಣಾ ಅವರಿಗೆ ಜೀವರಕ್ಷಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂದಿನಿಂದ, ಅವರಿಗೆ ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಆಹಾರಕ್ಕಾಗಿ ಗ್ಯಾಸ್ಟ್ರೋಜೆಜುನೊಸ್ಟೊಮಿ ಟ್ಯೂಬ್ ಅನ್ನು ಬಳಸಲಾಗುತ್ತಿದ್ದು, ಹಾಸಿಗೆಗೆ ಸೀಮಿತರಾಗಿದ್ದಾರೆ. ಘಟನೆ ನಡೆದ ವೇಳೆ ಹರೀಶ್ ರಾಣಾ ಅವರು ಕೇವಲ 20 ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು.
ಇದನ್ನೂ ಓದಿ: ಗೌಡ್ರ ಬಲವಂತಕ್ಕೆ ವಿತ್ತ ಸಚಿವನಾಗಿದ್ದೆ: ನಂಬಿಕಸ್ಥ ಬೇಕು ಅಂತ ವಿತ್ತ ಸಚಿವ ಮಾಡಿದ್ರು: ಸಿದ್ದು
ವೈದ್ಯರ ಕರ್ತವ್ಯ ರೋಗಿಗೆ ಚಿಕಿತ್ಸೆ ನೀಡುವುದಾಗಿದ್ದರೂ, ರೋಗಿಗೆ ಚೇತರಿಕೆಯ ಭರವಸೆ ಇಲ್ಲದಿದ್ದಾಗ ಆ ಕರ್ತವ್ಯ ಇನ್ನು ಮುಂದೆ ಉಳಿಯುವುದಿಲ್ಲ.ರಾಣಾ ಅವರ ಕುಟುಂಬ, ವಿಶೇಷವಾಗಿ ಅವರ ವೃದ್ಧ ಪೋಷಕರು, ಅವರನ್ನು ಹಲವು ವರ್ಷಗಳಿಂದ ನಿಸ್ವಾರ್ಥವಾಗಿ ನೋಡಿಕೊಂಡರು ಎಂದು ನ್ಯಾಯಾಲಯ ಗಮನಿಸಿದೆ. ಅವರ ಕುಟುಂಬ ಎಂದಿಗೂ ಅವರನ್ನು ಬಿಟ್ಟು ಹಾಕಿಲ್ಲ, ಯಾರನ್ನಾದರೂ ಪ್ರೀತಿಸುವುದು ಎಂದರೆ ಕತ್ತಲೆಯಾದ ಸಮಯದಲ್ಲೂ ಅವರನ್ನು ನೋಡಿಕೊಳ್ಳುವುದು. ಇಂದಿನ ನಮ್ಮ ನಿರ್ಧಾರವು ತಾರ್ಕಿಕ (ರೇಖೆಗಳಿಗೆ) ಸರಿಯಾಗಿ ಹೊಂದಿಕೆಯಾಗುವುದಿಲ್ಲ ಆದರೆ ಜೀವನ, ಪ್ರೀತಿ ನಷ್ಟಕ್ಕೆ ಹೊಂದಿಕೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ನಾವಿಲ್ಲಿ ಅರುಣಾ ಶಾನಭಾಗ್ ಪ್ರಕರಣವನ್ನು ನೆನಪು ಮಾಡಿಕೊಳ್ಳಬಹುದು. ಕರ್ನಾಟಕ ಮೂಲದವರಾಗಿದ್ದ ಅರುಣಾ ಶಾನಭಾಗ್ ಅವರು ಮುಂಬೈನಲ್ಲಿ ನರ್ಸ್ ಆಗಿದ್ದು, ಈ ಸಮಯದಲ್ಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಜೀವಂತ ಶವವಾಗಿದ್ದ ಅವರಿಗೆ ದಯಾಮರಣ ನೀಡಬೇಕು ಎಂದು ಆಗ್ರಹಗಳು ಕೇಳಿ ಬಂದಿದ್ದವು. ಆದರೆ ಅವರಿಗೆ ಅನುಮತಿ ಸಿಲುಕಿರಲಿಲ್ಲ. ಪರಿಣಾಮ ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಯೇ ಅವರನ್ನು ಮಗುವಿನಂತೆ ನೋಡಿಕೊಂಡು ಸಾಯುವವರೆಗೆ ಆರೈಕೆ ಮಾಡಿದ್ದರು. ನಂತರ 2015ರ ಮೇ 18ರಂದು ಅವರು ನಿಧನರಾದರು.


